ನದಿಯನ್ನಲ್ಲ, ಮನಸ್ಸನ್ನು ತಿರುಗಿಸೋಣ

ನದಿಯನ್ನಲ್ಲ, ಮನಸ್ಸನ್ನು ತಿರುಗಿಸೋಣ

"ನೇತ್ರಾವತಿ ನದಿ ತಿರುವು ಯೋಜನೆ"ಯು ಅನುಷ್ಠಾನ ಯೋಗ್ಯವಾಗಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಜನೆ ಕೈಗೊಂಡರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಹಾಸನದಲ್ಲಿ ೨೨ ಮಾರ್ಚ್ ೨೦೦೯ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅವರು ಪ್ರಶ್ನಿಸಿದರು: ನೇತ್ರಾವತಿ ನದಿಯಲ್ಲಿ ಮಳೆಗಾಲದಲ್ಲಿ ಹೊರತುಪಡಿಸಿ ಉಳಿದ ಅವಧಿಯಲ್ಲಿ ನೀರಿನ ಪ್ರಮಾಣ ಕಡಿಮೆ. ಏಪ್ರಿಲ್ ಮತ್ತು ಮೇಯಲ್ಲಿ ನೀರಿನ ಹರಿವು ಇರುವುದಿಲ್ಲ. ವಾಸ್ತವ ಹೀಗಿರುವಾಗ ನದಿ ತಿರುವು ಯೋಜನೆ ಎಷ್ಟರ ಮಟ್ಟಿಗೆ ಸರಿ?

     ಈ ಯೋಜನೆಗಾಗಿ ೨೦೦೪ರಲ್ಲಿ ಉಪಗ್ರಹ ಸರ್ವೆ ನಡೆಸಲಾಗಿತ್ತು (ರೂ.೧೫ ಕೋಟಿ ವೆಚ್ಚದಲ್ಲಿ). ಯೋಜನೆಯ ಲಾಭಗಳ ಬಗ್ಗೆ "ನದಿ ನೀರು ತಿರುಗಿಸುವ ಸಮಿತಿ"ಯ ಚೇರ್‍ಮನ್ ಆಗ ನೀಡಿದ್ದ ರಂಗುರಂಗಿನ ಚಿತ್ರಣ ಹೀಗಿದೆ: ನೇತ್ರಾವತಿಯನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿದರೆ ಕರ್ನಾಟಕದ ಬಳಕೆಗಾಗಿ ಸರಾಸರಿ ವರುಷಕ್ಕೆ ೪೬೪ ಟಿಎಂಸಿ ನೀರನ್ನು ಪಡೆಯಬಹುದು. ಇದರಿಂದ ೫೦ ಲಕ್ಷ ಎಕರೆಗಳನ್ನು ನೀರಾವರಿ ಜಮೀನಾಗಿ ಪರಿವರ್ತಿಸಬಹುದು. ರೂ.೧೨,೦೦೦ ಕೋಟಿ ವೆಚ್ಚದ ಯೋಜನೆಯಲ್ಲಿ ಹೂಹಾರದ ವಿನ್ಯಾಸದ ೭೦೦ ಕಿಮೀ ಉದ್ದದ ಕಾಲುವೆಗಳನ್ನು ನಿರ್ಮಿಸಿ ರಾಜ್ಯದ ೧೦ ಜಿಲ್ಲೆಗಳಿಗೆ ನೀರುಣಿಸಬಹುದು.

     ಇದಕ್ಕಾಗಿ ಕೋಟಿಗಟ್ಟಲೆ ರೂಪಾಯಿ ಕಬಳಿಸುವ ಈ ಯೋಜನೆಯ ಬದಲಾಗಿ ಬೇರೆ ದಾರಿಗಳಿಲ್ಲವೇ? ನೀರ ನೆಮ್ಮದಿಗೆ ನೂರಾರು ದಾರಿಗಳಿವೆ. ಅವನ್ನು ಒಪ್ಪುವ, ಕೃತಿಗಿಳಿಸುವ ಮನಸ್ಸು ಬೇಕು, ಅಷ್ಟೇ.

     ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೊಲಬಗೆರೆಯ ಜಿನಚಂದ್ರ ೧೯೯೮ರಿಂದ ಇಂತಹ ಕೆಲಸದಲ್ಲಿ ತೊಡಗಿದ್ದಾರೆ. ಇವರ ೩೫ ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ ಮತ್ತು ಮಾವಿನ ಮರಗಳಲ್ಲಿ ಕಣ್ ತುಂಬುವ ಹಸುರು. ೧೯೯೮ರಲ್ಲಿ ತನ್ನ ಜಮೀನಿನಲ್ಲಿ ೩ ದೊಡ್ಡ ಹೊಂಡಗಳನ್ನು ಮಾಡಿ ಮಳೆ ನೀರು ಸಂಗ್ರಹಿಸ ತೊಡಗಿದರು. ಇದರಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚತೊಡಗಿತು. ಅಲ್ಲಿರುವ ೩ ಅಡಿ ಅಗಲ, ೨ ಅಡಿ ಆಳದ ಕಂದಕಗಳ ಒಟ್ಟು ಉದ್ದ ೫,೨೦೦ ಅಡಿಗಳು. ಬಿರುಸಿನ ಮಳೆ ಬಂದರೂ ಮಳೆ ನೀರು ಜಮೀನಿನಿಂದ ಹೊರ ಹೋಗದಂತೆ ತಡೆಯುವ ಈ ಕಂದಕಗಳು ಅಂತರ್ಜಲ ಹೆಚ್ಚಿಸುವ ಸಾಧನಗಳಾಗಿವೆ. ಜಿನಚಂದ್ರರಿಗೆ ಇದಕ್ಕೆ ತಗಲಿದ ವೆಚ್ಚ ಕೇವಲ ೫೯,೦೦೦ ರೂಪಾಯಿಗಳು.
     ಬೈಫ್ ಗ್ರಾಮೀಣ ಅಭಿವೃದ್ಡಿ ಸಂಸ್ದೆಯ ಅರಸೀಕೆರೆ ತಾಲೂಕಿನ ಮೈಲನಹಳ್ಳಿಯ ಜಲಾನಯನ ಅಭಿವೃದ್ದಿ ಯೋಜನೆಯು ನಾಲ್ಕು ಹಳ್ಳಿಗಳ ಕೃಷಿ ನೀರಿನ ಸಮಸ್ಯೆ ಪರಿಹರಿಸಿದ ಯಶೋಗಾಥೆ. ಆ ಹಳ್ಳಿಗಳ ೭೦೦ ಹೆಕ್ಟೇರ್ ಪ್ರದೇಶದಲ್ಲಿ ೧೯೯೭ರ ಮಾರ್ಚಿನಲ್ಲಿ ಈ ಯೋಜನೆಯ ಆರಂಭ. ಇದರಲ್ಲಿ ೪೦೦ ಕುಟುಂಬಗಳು ಭಾಗವಹಿಸಿವೆ. ಅಂತರ್ಜಲ ಹೆಚ್ಚಿಸಲಿಕ್ಕಾಗಿ ರಚಿಸಲಾದ ೩೪೦ ಕೃಷಿ ಹೊಂಡಗಳಲ್ಲಿ ಒಮ್ಮೆ ಮಳೆ ಸುರಿದರೆ ೫ ಕೋಟಿ ಲೀಟರ್ ನೀರು ಸಂಗ್ರಹ. ವರುಷದಲ್ಲಿ ೪ - ೫ ಬಾರಿ ಹೊಂಡಗಳು ತುಂಬುವುದರಿಂದ ಬತ್ತಿ ಹೋಗುತ್ತಿದ್ದ ಬಾವಿಗಳಲ್ಲಿ ಈಗ ೧೫ರಿಂದ ೩೦ ಅಡಿ ನೀರಿರುವುದೇ ಯೋಜನೆಯ ಯಶಸ್ಸಿಗೆ ಪುರಾವೆ.

     ಮಹಾರಾಷ್ಟ್ರದ ರಾಳೆಗಾಂವ್ ಸಿದ್ಧಿ ಗ್ರಾಮದ ಜಲನಕ್ಷೆ ೧೯೭೫ರಿಂದೀಚೆಗೆ ಪೂರ್ತಿ ಬದಲಾಗಿದೆ. ಆಗ ಅಲ್ಲಿ ಕುಡಿಯುವ ನೀರಿಗೂ ತತ್ವಾರ. ಅಲ್ಲಿನ ಕೃಷಿ ಭೂಮಿ ನೀರಿನಾಸರೆಯಿಲ್ಲದೆ ಬಂಜರಾಗಿತ್ತು. ಆದರೆ ಈಗ ಅಲ್ಲಿನ ನೆಲದಲ್ಲಿ ಹಸುರು ಹಬ್ಬ. ಸುಮಾರು ೧,೧೦೦ ಎಕರೆ ಜಮೀನಿಗೆ ನೀರಾವರಿ ಲಭ್ಯ. ಗ್ರಾಮದಲ್ಲಿ ಸಮಗ್ರ ವಿಕಾಸ ಮತ್ತು ಅಲ್ಲಿನ ಜನರ ಜೀವನಮಟ್ಟ ಸುಧಾರಣೆಗೆ ನೀರಿನಾಸರೆಗಳ ಅಭಿವೃದ್ಧಿಯೇ ಮುಖ್ಯ ಕಾರಣ. ಅಲ್ಲಿ ಇಂತಹ ಪವಾಡ ಸಾಧಿಸಿದವರು ಅಣ್ಣಾ ಹಜಾರೆ.

     ಇವೆಲ್ಲ ಸತ್ಯ ಸಂಗತಿಗಳು ನಮ್ಮ ಕಣ್ಣೆದುರಿಗಿವೆ. ಅಲ್ಪ ವೆಚ್ಚದಲ್ಲಿ ಜನಸಹಭಾಗಿತ್ವದಿಂದ ನಮ್ಮ ಗ್ರಾಮಗಳ ಜಲನಕ್ಷೆಯನ್ನು ೨ - ೩ ವರುಷಗಳಲ್ಲೇ ಪೂರ್ತಿ ಬದಲಾಯಿಸಿ ಜಲ ಸಮೃದ್ದಿ ಸಾಧಿಸಲು ಸಾಧ್ಯವಿರುವಾಗ ನದಿ ತಿರುಗಿಸುವ ಮಾತೇಕೆ? ಈ ಯೋಜನೆ ಅನಾಹುತಕ್ಕೆ ಕಾರಣವಾದೀತು. ಯಾಕೆಂದರೆ ನೇತ್ರಾವತಿ ಮತ್ತು ಅದರ ಉಪನದಿಗಳು ದಕ್ಷಿಣ ಕನ್ನಡ ಜಿಲ್ಲೆಯ ೧೦ ಲಕ್ಷ ಕೃಷಿಕರ ೩.೫ ಲಕ್ಷ ಎಕರೆ ಜಮೀನಿಗೆ ನೀರುಣಿಸುತ್ತಿವೆ. ನದಿ ತಿರುಗಿಸಿ ಇವರ ಹೊಟ್ಟೆಗೆ ಹೊಡೆಯುವ ಯೋಜನೆ ಯಾರ ಲಾಭಕ್ಕಾಗಿ?

     ಬಯಲು ಸೀಮೆಯ ನೀರಿನ ಸಮಸ್ಯೆ ಪರಿಹಾರವಾಗಬೇಕಿದ್ದರೆ ನದಿಯನ್ನಲ್ಲ, ಜನರ ಮನಸ್ಸನ್ನು ತಿರುಗಿಸಬೇಕಾಗಿದೆ, ಅಲ್ಲವೇ?