ನದಿಯೊಂದು ನಿದ್ರಿಸಿದಾಗ

ನದಿಯೊಂದು ನಿದ್ರಿಸಿದಾಗ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಈಸ್ಟರೀನ್ ಕೀರೆ, ಕನ್ನಡಕ್ಕೆ: ರವಿ ಹಂಪಿ
ಪ್ರಕಾಶಕರು
ಪ್ರಭಾ ಕೈತಾನ್ ಪಬ್ಲಿಕೇಷನ್ಸ್, ಕೋಲ್ಕತ್ತಾ
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೨

ಒಬ್ಬ ಲೇಖಕಿಯ ಹಲವು ಬರಹಗಳ ಹಾಸುಹೊಕ್ಕಿನಲ್ಲಿಯೇ ಆಕೆಯ ಜೀವನದರ್ಶನ ಮಾಗುತ್ತದೆ, ಸಂಕೀರ್ಣವಾಗುತ್ತದೆ. ಇವರ ‘ಅ ಟೆರಿಬಲ್ ಮೇಟ್ರಿಯಾರ್ಕಿ’, ‘ಬಿಟರ್ ವುಮನಹುಡ್’ ಮುಂತಾದ ಕಾದಂಬರಿಗಳೂ ಕನ್ನಡಕ್ಕೆ ಬಂದರೆ ಹಲಬಗೆಯ, ಭಿನ್ನ, ಸಂಕೀರ್ಣ ಕಥನವಿನ್ಯಾಸವೊಂದು ಕನ್ನಡಕ್ಕೆ ದಕ್ಕುತ್ತದೆ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ಲೇಖಕಿ ಜ.ನಾ. ತೇಜಶ್ರೀ. ಅವರು ರವಿ ಹಂಪಿ ಅವರ ನದಿಯೊಂದು ನಿದ್ರಿಸಿದಾಗ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

“ಕನ್ನಡ ನೆಲದಲ್ಲಿ ಕಣ್ಣುಬಿಡುತ್ತಿರುವ ನಾಗಾಲ್ಯಾಂಡಿನ ಈಸ್ಟರೀನ್ ಕೀರೆಯವರ ಕಾದಂಬರಿ ‘ವೆನ್ ದ ರಿವರ್ ಸ್ಲೀಪ್ಸ್’ ಗೆ ಪ್ರೀತಿಪೂರ್ವಕ ಸ್ವಾಗತ. ಇದನ್ನು ಸುಂದರವಾಗಿ ಅನುವಾದಿಸಿರುವ ರವಿಕುಮಾರ್ ಹಂಪಿ ಮತ್ತು ಪ್ರಕಟಿಸುತ್ತಿರುವ ‘ವೈಷ್ಣವಿ ಪ್ರಕಾಶನ’ ಇಬ್ಬರೂ ಅಭಿನಂದನಾರ್ಹರು. ಅದೇ ರಾಜ್ಯದ ಇನ್ನೊಬ್ಬ ಲೇಖಕಿ ತೆಮ್ಸುಲಾ ಆವೋ ಅವರ ಕೆಲವು ಕಥೆಗಳನ್ನು ಎಚ್. ಎಂ. ಎಸ್. ಪ್ರಕಾಶ್ ಅವರು ‘ಈ ಬೆಟ್ಟಗಳೇ ನಮ್ಮ ಮನೆಗಳು’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಕನ್ನಡದ ಕೆಲವು ಪ್ರವಾಸ ಕಥನಗಳಲ್ಲಿ ನಾಗಾಲ್ಯಾಂಡ್ ಕಾಣಿಸಿಕೊಂಡಿದೆ. ಆದರೆ ಪ್ರಸ್ತುತ ಕಾದಂಬರಿಯ ಓದು ನಮಗೆ ಅಪರಿಚಿತವಾದ ಬದುಕಿನ ಬಗೆಯೊಂದನ್ನು ಅಷ್ಟೇ ವಿಶಿಷ್ಟವಾದ ಮೌಲ್ಯವ್ಯವಸ್ಥೆಯೊಂದಿಗೆ ಕಟ್ಟಿಕೊಡುವುದರಿಂದ ಇದಕ್ಕೆ ವಿಶೇಷ ಮಹತ್ವವಿದೆ. ಇಂತಹ ಸಮುದಾಯಗಳ ತಿಳಿವಳಿಕೆಯು ಆಧುನಿಕ ನಾಗರಿಕತೆಯ ಹಲವು ರೋಗಗಳಿಗೆ ಮದ್ದು ಎನಿಸುತ್ತದೆ.

ಇಂಥ ಕಾದಂಬರಿಯನ್ನು ಇಂಗ್ಲಿಷ್‌ನಲ್ಲಿ ಬರೆಯಬೇಕಾಗಿದೆ ಮತ್ತು ಇದನ್ನು ಬರೆದ ಲೇಖಕಿ ಅನೇಕ ವರ್ಷಗಳಿಂದ ಯೂರೋಪಿನ ಉತ್ತರತುದಿಯಲ್ಲಿರುವ ನಾರ್ವೆ ದೇಶದಲ್ಲಿ ಜೀವನ ನಡೆಸುತ್ತಿದ್ದಾರೆ ಎನ್ನುವುದು ನಮಗರಿಯದ ದುರಂತಗಳ ಸೂಚನೆಯೂ ಇರಬಹುದೇನೋ. ನಮ್ಮ ನಡುವಿನ ಧೀರ ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಲಾ ಅವರ ಪಡಿಪಾಟಲುಗಳು ಕೂಡಾ ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯದ ಏಳು ಸೋದರಿಯರ ಪರವಾಗಿ ನಡೆಸಿದ ಹೋರಾಟದ ಪ್ರತಿಫಲವಲ್ಲವೇ? ಈ ಬಗೆಯ ಸಮುದಾಯಗಳನ್ನು ಒಳಕುದಿಯುವ ಜ್ವಾಲಾಮುಖಿಗಳಾಗಿ ಮಾಡಿದ್ದು ನಾಗರಿಕತೆ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಭಾರತ ಭೂಪಟದ ಒಂದು ಅಂಚಿನಲ್ಲಿರುವ ನಾಗಾಲ್ಯಾಂಡ್ ಸಾಹಿತ್ಯ ವಿಷಯದಲ್ಲಿಯೂ ‘ಅಂಚಿ’ನಲ್ಲಿರುವ ಪ್ರದೇಶ. ಅಲ್ಲಿನ ಸಾಹಿತ್ಯ ಪರಂಪರೆಗೆ ದೀರ್ಘವಾದ ಇತಿಹಾಸವಿಲ್ಲ, ‘ನೂರಾರು ಸಾಹಿತಿಗಳು ಇಲ್ಲಿ ಆಗಿ ಹೋಗಿದ್ದಾರೆ’ ಎಂಬುದಿಲ್ಲ. ರವಿಕುಮಾರ್ ಹಂಪಿಯವರು ಅನುವಾದಿಸಿರುವ ಈ ಕೃತಿಯ ಲೇಖಕಿಯಾದ ಈಸ್ಟರೀನ್ ಕೀರೆಯವರು 1982ರಲ್ಲಿ ಪ್ರಕಟಿಸಿದ ಕವನಸಂಕಲನವೇ ನಾಗಾ ಕಾವ್ಯದ ಮೊದಲ ಪುಸ್ತಕ ಹಾಗೂ 2003 ರಲ್ಲಿ ಪ್ರಕಟಗೊಂಡ ಇವರ ಕಾದಂಬರಿಯು ಇಂಗ್ಲಿಷಿನಲ್ಲಿ ಪ್ರಕಟವಾದ ನಾಗಾ ಸಾಹಿತಿಯೊಬ್ಬರ ಮೊಟ್ಟಮೊದಲ ಕೃತಿ. ‘ನಾಗಾ ಸಾಹಿತ್ಯವನ್ನು ಬರಹ ರೂಪದಲ್ಲಿ ನಾವು ತರಬೇಕು ಅಂತ ನನಗನ್ನಿಸಿತು. ನಮ್ಮಲ್ಲಿ ಎಷ್ಟೊಂದು ಮೌಖಿಕ ಕಥನಗಳಿವೆ ಆದರೆ ಮೌಖಿಕ ಪರಂಪರೆಯು ಅಳಿಯುತ್ತ ಬಂದಿರುವುದರಿಂದ ಇವೆಲ್ಲ ನಾಶವಾಗಿಬಿಡುತ್ತವೆ’ ಎನ್ನುತ್ತಾರೆ ಕೀರೆ. ಅವರ ಮಾತಿನ ‘ನಾವು’ ಮತ್ತು ‘ನಮ್ಮಲ್ಲಿ’ ಎಂಬ ಒತ್ತು ನನ್ನವು ಯಾಕೆಂದರೆ ‘ನಾವು’ ಮತ್ತು ‘ನಮ್ಮಲ್ಲಿ’ ಎನ್ನುವ ಪ್ರಜ್ಞೆಯೇ ಕೀರೆ ಅವರ ಒಟ್ಟಾರೆ ಸಾಹಿತ್ಯದ ಜೀವತಂತು.

ನಾನು ನಾಗಾಲ್ಯಾಂಡನ್ನು ನೋಡಿಲ್ಲ. ಆದರೆ ಅದರ ಬಗ್ಗೆ ಓದಿ, ಕೇಳಿ ತಿಳಿದ ಹಿನ್ನೆಲೆಯಲ್ಲಿ, ‘ನಾಗಾಲ್ಯಾಂಡ್’ ಎಂದಾಕ್ಷಣ ಕಣ್ಣ ಮುಂದೆ ಎರಡು ಚಿತ್ರಗಳು ಮೂಡುತ್ತವೆ. ಮೊದಲನೆಯದು, ಹಸಿರು ಕಾಡು, ಬೆಟ್ಟ, ಭತ್ತದ ಗದ್ದೆ, ಅಪರೂಪದ ಉಡುಗೆತೊಡುಗೆ. ಎರಡನೆಯ ಚಿತ್ರ, ಭಾರತ ಮತ್ತು ನಾಗಾಲ್ಯಾಂಡ್ ನಡುವಣ ಸಂಘರ್ಷ; ಅಲ್ಲಿಗೆ ಜಪಾನಿಯರ ಒಳನುಸುಳುವಿಕೆಯ ಮೂಲಕ ಉಂಟಾದ ರಾಜಕೀಯ ವಿಪ್ಲವಗಳು. ‘ನನಗೆ ಈ ರಾಜಕೀಯ ಮಾತುಕತೆಗಳು ಸಾಕೆನಿಸಿವೆ... ಆಧ್ಯಾತ್ಮಿಕವಾಗಿ ಮತ್ತು ಅತಿಲೌಕಿಕವಾಗಿ ಅನ್ವೇಷಿಸುವುದು ಎಷ್ಟೊಂದಿದೆ, ಇವೆಲ್ಲ ನಮ್ಮ ಸಂಸ್ಕೃತಿಯೊಳಗೆ ಇದೆ... ವ್ಯಕ್ತಿ ತನ್ನಾಳಕ್ಕೆ ಇಳಿದು ನೋಡಬೇಕು, ಬಾಲ್ಯ, ತಾರುಣ್ಯದ ಆ ಅದ್ಭುತ ಕತೆಗಳನ್ನು ಹೊರಗೆಳೆದು ತರಬೇಕು... ನನ್ನ ಕೆಲವು ಬೇಟೆಗಾರ ಸ್ನೇಹಿತರು ಮತ್ತು ಅವರು ಹೇಳುವ ‘ಮಲಗಿದ ನದಿ’ಯ, ಮಾಂತ್ರಿಕ ಕಲ್ಲಿನ ಕತೆಗಳು ನನ್ನ ‘ವೆನ್ ದ ರಿವರ್ ಸ್ಲೀಪ್ಸ್’ ಕಾದಂಬರಿಯನ್ನು ಪ್ರೇರೇಪಿಸಿವೆ.’ ಎಂದು ಸಂದರ್ಶನವೊಂದರಲ್ಲಿ ಈಸ್ಟರೀನ್ ಕೀರೆಯವರು ಹೇಳುವ ಮಾತುಗಳು ನಾಗಾಲ್ಯಾಂಡ್ ಕುರಿತಾಗಿ ನನ್ನೊಳಗಿರುವ ಎರಡೂ ಚಿತ್ರಗಳನ್ನು ಗಾಢಗೊಳಿಸುತ್ತವೆ, ವಿಸ್ತಾರವಾಗಿಸುತ್ತವೆ ಮತ್ತು ಪ್ರಸ್ತುತ ಕಾದಂಬರಿಯ ಒಳಹೋಗುವ ಚೌಕಟ್ಟನ್ನೂ ನಿರ್ಮಿಸುತ್ತವೆ.

ಹೀಗೆ ಹೇಳುವಾಗಲೂ ಕೀರೆ ಅವರು ತಮ್ಮ ಇತರ ಕಾದಂಬರಿಗಳಲ್ಲಿ ರಾಜಕೀಯ, ಸಂಸ್ಕೃತಿ-ರಾಜಕೀಯ ಮತ್ತು ಲಿಂಗ-ರಾಜಕೀಯದ ವಿಭಿನ್ನ ಆಯಾಮಗಳನ್ನು ತಮಗೆ ವಿಶಿಷ್ಟವಾದ ರೀತಿಯಲ್ಲಿ ಹೇಳಿರುವರೆನ್ನುವುದನ್ನು ನಾನು ಮರೆತಿಲ್ಲ. ಒಬ್ಬ ಲೇಖಕಿಯ ಹಲವು ಬರಹಗಳ ಹಾಸುಹೊಕ್ಕಿನಲ್ಲಿಯೇ ಆಕೆಯ ಜೀವನದರ್ಶನ ಮಾಗುತ್ತದೆ, ಸಂಕೀರ್ಣವಾಗುತ್ತದೆ. ಇವರ ‘ಅ ಟೆರಿಬಲ್ ಮೇಟ್ರಿಯಾರ್ಕಿ’, ‘ಬಿಟರ್ ವುಮನಹುಡ್’ ಮುಂತಾದ ಕಾದಂಬರಿಗಳೂ ಕನ್ನಡಕ್ಕೆ ಬಂದರೆ ಹಲಬಗೆಯ, ಭಿನ್ನ, ಸಂಕೀರ್ಣ ಕಥನವಿನ್ಯಾಸವೊಂದು ಕನ್ನಡಕ್ಕೆ ದಕ್ಕುತ್ತದೆ ಎಂಬ ನಂಬಿಕೆ ನನ್ನದು.

ಅರಣ್ಯ ಇಲಾಖೆಯ ಕೆಲಸಗಾರನಾಗಿರುವ ವೀಲಿಯೆಗೆ ‘ಮಲಗಿದ ನದಿ’ಯ ವಿಷಯ ಕೇಳಿದಾಗಿನಿಂದ ಅದರದ್ದೇ ಕನಸು. ನಿದ್ರೆ-ಜಾಗರಗಳಲ್ಲಿ ಅವನಿಗೆ ಅದರ ಗೀಳು. ಕಾಡಿಗೆ ಬರುವ ಬೇಟೆಗಾರರ ಹತ್ತಿರವೂ ಅವನು ಇದೇ ಕತೆ ಹೇಳುತ್ತಾನೆ. ಯಾರೂ ಅವನ ಕತೆಯನ್ನು ನಂಬುವುದಿಲ್ಲ ಆದರೆ ಅವನು ಹೇಳುವುದನ್ನು ಕೇಳಿಸಿಕೊಳ್ಳುತ್ತಾರೆ. ಅದೇ ಕಾಡಿನಲ್ಲಿರುವ ಅವರ ಪರಿಚಯಸ್ಥ ಹುಡುಗ ರೋಕೋಲಿ ‘ವೀಲಿ ಮಾಮಾ, ನದಿ ಮಲಗಿದಾಗ ಹಿಡಿಯೋದು ಅಂದರೆ ಏನು?’ ಅಂತ ಕೇಳಿದಾಗ ವೀಲಿಯೆ ನೀಡುವ ಉತ್ತರವು ಈ ಕೃತಿಯ ನಾಡಿಮಿಡಿತವಾಗಿದೆ ಮತ್ತು ಕಾದಂಬರಿಯ ಹರಿವನ್ನು ಚೌಕಟ್ಟಿಗಿಳಿಸುವ ತಂತ್ರವಾಗಿಯೂ ಕಾಣುತ್ತದೆ. ‘ಎಚ್ಚರಿಕೆಯಿಂದ ಶಬ್ದಗಳನ್ನು ಜೋಡಿಸಿ’ ವೀಲಿಯೆ ರೋಕೋಲಿಗೆ ಹೇಳುತ್ತಾನೆ, ‘ನದಿ ಮಲಗಿದಾಗ ಅದು ಮುಂದೆ ಹರಿಯುವುದನ್ನು ಮರೆತು ನಿಂತಲ್ಲೇ ನಿಲ್ಲುತ್ತದೆ. ನೀರು ಹರಿಯುವುದನ್ನು ಮರೆತು ನಿಶ್ಚಲಗೊಂಡಾಗ ನದಿಯ ಅಪಾರ ಶಕ್ತಿ, ಅದರೊಳಗಿನ ಕಲ್ಲುಗಳಿಗೆ ಮಾಂತ್ರಿಕ ಶಕ್ತಿ ನೀಡುತ್ತದೆ. ನದಿ ನಿದ್ರಿಸುತ್ತಿರುವಾಗ ಅದರ ಹೃದಯದೊಳಗಿನ ಅಂಥ ಅಲೌಕಿಕ ಕಲ್ಲು ನಮಗೇನಾದರೂ ಸಿಕ್ಕರೆ, ಅದು ನಮಗೆ ಕೇಳಿದ್ದನ್ನು ಕೊಡುತ್ತದೆ. ಹಣ, ಒಡವೆ, ಆಕಳು ಎಲ್ಲ ಕೊಡುತ್ತದೆ. ಅದು ಸಿಕ್ಕರೆ ಎಂಥಾ ಯುದ್ಧವನ್ನಾದರೂ ಗೆಲ್ಲಬಹುದು. ಸುಂದರ ಹುಡುಗಿಯೂ ಸಿಗುವಳು. ಅದು ಮಂತ್ರದ ಕಲ್ಲಾಗಿದ್ದು, ಅದನ್ನು ‘ಹೃದಯದ ಕಲ್ಲು’ ಎಂದೂ ಕರೆಯುವರು’. ಶಬ್ದಗಳನ್ನು ಎಗ್ಗಿಲ್ಲದೆ ಬಳಸುತ್ತಿರುವ ನಮ್ಮ ಈ ಕಾಲದಲ್ಲಿ ‘ಎಚ್ಚರಿಕೆಯಿಂದ ಶಬ್ದಗಳನ್ನು ಜೋಡಿ’ಸುವ ಮಾತು ಕೀರೆಯವರ ಕಥನಕ್ರಮವನ್ನೂ ಸ್ಫುಟಗೊಳಿಸುತ್ತ ಸಾಗುತ್ತದೆ.

ಕನಸುಗಳಿಗೆ ಆದಿ, ಅಂತ್ಯವೆಂಬುದಿಲ್ಲ, ಹಾಗೇ ನದಿಗೂ. ಇಡೀ ಲೋಕವನ್ನೇ ತಮ್ಮೊಳಗೆ ಒಳಗೊಳ್ಳುವ ತವಕ ಎರಡಕ್ಕೂ. ಎರಡರ ಹರಿವೂ ಅನಂತತೆಯೆಡೆಗೆ. ಇವೆರಡೂ ಸಿದ್ಧ ಚೌಕಟ್ಟನ್ನು ಧಿಕ್ಕರಿಸುವ ಸೃಷ್ಟಿಯ ಶಕ್ತಿಗಳು. ಆದಿ-ಅಂತ್ಯಗಳಿಲ್ಲದ ಈ ಎರಡು ತಂತುಗಳನ್ನು ಈಸ್ಟರೀನ್ ಕೀರೆ ಹೆಣೆಯುವುದು ಕಾಡಿನ ಭಿತ್ತಿಯಲ್ಲಿ. ಅಪ್ರತಿಮ ಶಕ್ತಿ, ಸಂಪತ್ತು, ಅಪಾರ ಅಪಾಯಗಳನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿರುವ ಕಾಡನ್ನು ಕಾದಂಬರಿಕಾರ್ತಿಯು ತನ್ನ ಕಥನದಲ್ಲಿ ಬಳಸಿಕೊಂಡಿರುವ ಬಗೆಯಿಂದಾಗಿ, ‘ಕಾಡು’ ಒಂದು ಪಾತ್ರವಾಗಿ ನಮ್ಮೊಳಗೆ ಬೆಳೆಯತೊಡಗುತ್ತದೆ. ಕಾಡೆಂದರೆ ಊರಿನ ಆಚೆ, ಅಂಚಿನಲ್ಲಿರುವಂತಹದ್ದು ಎನ್ನುವ ನಮ್ಮ ಕಾಡಿನ ಪರಿಕಲ್ಪನೆಗೆ ತದ್ವಿರುದ್ಧವಾದ ಕಾಡೊಂದು ಈ ಕೃತಿಯಲ್ಲಿ ಅನಾವರಣಗೊಳ್ಳುತ್ತದೆ. ಇಲ್ಲಿ ಕಾಡೇ ಕೇಂದ್ರ ಮತ್ತು ಕಾಡೇ ಸರ್ವಸ್ವ.

ಪದೇಪದೇ ಬೀಳುವ ‘ಮಲಗಿದ ನದಿ’ಯ ಕನಸಿನಿಂದ ಭೀತಿಗೊಳಗಾಗುವ ವೀಲಿಯೆ ಒಂದು ದಿನ ಏಕಾಏಕಿ ಆ ನದಿಯ ಹುಡುಕಾಟದಲ್ಲಿ ಹೊರಟುಬಿಡುತ್ತಾನೆ. ತಾನು ಯಾವ ದಿಕ್ಕಿಗೆ ಹೋಗುತ್ತಿದ್ದೇನೆ, ಎಷ್ಟು ದಿನಗಳವರೆಗೆ ಯಾವುದೂ ಅವನಿಗೆ ನಿಖರವಾಗಿ ಗೊತ್ತಿಲ್ಲ. ತನ್ನೊಳಗಿನ ಅದಮ್ಯ ಕನಸನ್ನು ಅರಸುತ್ತ ಹೊರಟ ಒಬ್ಬ ಯಾತ್ರಿಕ ಅವನು. ಅವನ ತೀವ್ರ ಚಡಪಡಿಕೆ, ಭರವಸೆಯನ್ನು ಹಿಂಬಾಲಿಸುತ್ತ ಹೊರಡುವ ನಾವು ಅವನ ಸಹಯಾತ್ರಿಕರು! ಹಾಗಾಗಿ, ಈ ಕಾದಂಬರಿಯು ಒಂದು ಯಾನದ ಕಥನ: ವೀಲಿಯೆ ಹುಡುಕುವ ನದಿಯ, ಅವನು ಹಾಯುವ ಕಾಡಿನ, ಅಲ್ಲಿ ಅವನಿಗೆದುರಾಗುವ ಪ್ರಾಣಿಗಳ, ಅಸಂಖ್ಯ ಜನಗಳ, ಅವರ ಕತೆಗಳ, ಅವನು ಮುಖಾಮುಖಿಯಾಗುವ ‘ಮಲಗಿದ ನದಿ’ಯ ಕಥನ. ಇವೆಲ್ಲವೂ ಜರುಗುವುದು ಕಾಡಿನ ಒಳಗೆ. ಅದರಿಂದಾಗಿ ಈ ಕೃತಿಯು ಕಾಡಿನೊಳಗಿನ, ಅದರ ಸಾಂದ್ರತೆಯ, ಸೆಳೆತದ, ಅಪಾಯದೊಳಗಿನ ನಮ್ಮ ಯಾನ ಕೂಡ ಹೌದು. ತನ್ನ ಕನಸನ್ನು ಹಿಂಬಾಲಿಸಿ ಹೋಗುವುದಕ್ಕೂ ಮುನ್ನ ವೀಲಿಯೆ ಒಳಗೆ ಭೀತಿಯಿದೆ. ಇದು ನಮ್ಮ ನಿಮ್ಮೆಲ್ಲರೊಳಗೂ ಇರುವ ಭೀತಿಯೆ. ಒಂದು ಕ್ಷಣದಲ್ಲಿ ಅವನು ಥಟ್ಟನೆ ಎದ್ದು ಕನಸಿನ ಹಿಂದೆ ಹೊರಟು ಬಿಡುವಂತಹ ನಿರ್ಧಾರ ಮತ್ತು ಅದರೆಡೆಗೆ ಅವನಿಡುವ ಹೆಜ್ಜೆಯು ಅವನೊಳಗಿನ ಆ ಭೀತಿಯನ್ನು ತೊಡೆದು, ಅವನಿಗೆದುರಾಗುವ ಅನುಭವಗಳ ಮೂಲಕ ಆ ಭೀತಿಯನ್ನು ಅರಿವನ್ನಾಗಿ ಮಾರ್ಪಡಿಸತೊಡಗುತ್ತದೆ. ಈ ಹಿನ್ನೆಲೆಯಲ್ಲಿ ಓದಿದಾಗ ‘ನದಿಯು ಮಲಗಿದಾಗ’ ಕೃತಿಯು ನಮ್ಮೊಳಗೆ ನಾವೇ ಕೈಗೊಳ್ಳುವ ಅರಿವಿನ ಯಾನದ ಕಥೆಯಾಗಿಯೂ ಕಾಣುತ್ತದೆ.” ಎಂದಿದ್ದಾರೆ.

‘ನದಿಯು ಮಲಗಿದಾಗ’ ಕಾದಂಬರಿಯು ಕಲ್ಪನೆ ಮತ್ತು ವಾಸ್ತವತೆಗಳ ನಡುವೆ ಮಹಾವ್ಯತ್ಯಾಸವಿಲ್ಲದ ಬದುಕಿನ ಕಥೆ. ಇಲ್ಲಿ ‘ವಾಸ್ತವವಾದಿ ಮಾಂತ್ರಿಕತೆ’ ಇದೆಯಾದರೂ ಇದು ನಾಗಾಲ್ಯಾಂಡಿಗೇ ವಿಶಿಷ್ಟವೆನ್ನಬಹುದಾದ ಮಾಂತ್ರಿಕ ಲೋಕ. ಕಾದಂಬರಿಯಲ್ಲಿ ‘ಶಾಪಗ್ರಸ್ತ’ ಕರ್ಫ್ಯೂಮಿಯಾ ಹಳ್ಳಿಯಿದೆ. ಈ ಕರ್ಫ್ಯೂಮಿಯ ಜನರನ್ನು ಬೇರೆ ಹಳ್ಳಿಗಳ ಜನರು ತಮ್ಮ ಹಳ್ಳಿಯಲ್ಲಿ ಇಟ್ಟುಕೊಳ್ಳದೆ ಹೊರಗೆ ದಬ್ಬುತ್ತಾರೆ. ಹೀಗೆ ತಮ್ಮ ಹಳ್ಳಿಗಳಿಂದ ದಬ್ಬಿಸಿಕೊಂಡು ಬಂದವರೆಲ್ಲ ಇಲ್ಲಿ ಬಂದು ನೆಲೆಸುತ್ತಾರೆ. ಈ ಜನರಿಗೆ ಅಲೌಕಿಕ ಶಕ್ತಿಗಳಿದ್ದು, ಅವರಿಂದ ಅನರ್ಥವಾಗುತ್ತದೆ ಎಂಬ ನಂಬಿಕೆಯು ಇದರ ಹಿಂದಿನ ಕಾರಣ. ಈ ಹಳ್ಳಿಯಲ್ಲಿ ಏಟಿ, ಜೋಟೆ ಎಂಬ ಅಸಾಮಾನ್ಯ ಹೆಣ್ಣುಮಕ್ಕಳಿದ್ದಾರೆ. ಮನುಷ್ಯ ಸಹಜ ಸ್ವಭಾವಗಳ ಪ್ರತೀಕದಂತಿರುವ ಇವರ ವೃತ್ತಾಂತವು ‘ಸತ್ಯ’ವನ್ನು ಕುರಿತ ನಮ್ಮ ದೃಷ್ಟಿಕೋನವನ್ನೇ ಪಲ್ಟಾಯಿಸಿಬಿಡುತ್ತದೆ ಮತ್ತು ‘ಸತ್ಯ’ ಅನ್ನುವುದು ಎಷ್ಟು ಸಂಕೀರ್ಣವಾದದ್ದು ಅನ್ನಿಸತೊಡಗುತ್ತದೆ. ಇವೆಲ್ಲ ನಾಗಾಲ್ಯಾಂಡಿನಲ್ಲಿ ಒಂದು ಕಾಲಕ್ಕೆ ಜೀವಂತವಾಗಿದ್ದ ವಾಸ್ತವಗಳೇ ಆಗಿದ್ದವು ಎಂಬುದನ್ನು ಗಮನಿಸಿದರೆ, ಹಾಗಾದರೆ ‘ಈ ಕತೆ ಕಾಲ್ಪನಿಕ ಹೇಗಾದೀತು?’ ಎನ್ನುವ ಪ್ರಶ್ನೆಯೇಳುತ್ತದೆ. ‘ಸುಪ್ತಪ್ರಜ್ಞೆ’ಯಲ್ಲಿ ಬೇರುಬಿಟ್ಟ ಸಂಗತಿಗಳು ದಿಟವಿರಲಿ ಇಲ್ಲದಿರಲಿ ಈ ಕಾದಂಬರಿ ಪ್ರಪಂಚವನ್ನು ಹೀಗೆ ಆಳುತ್ತವೆ. ತಾನೊಬ್ಬಳು ಅನಿಷ್ಟ ಗುಣಗಳಿರುವ ಹೆಣ್ಣು, ತನ್ನಿಂದ ಮತ್ತೊಬ್ಬರಿಗೆ ಒಳ್ಳೆಯದಾಗುವುದಿಲ್ಲ ಎಂಬುದಾಗಿ ಏಟಿಯ ಒಳಗೆ ಆಳವಾಗಿ ಬೇರೂರಿದ್ದ ಭಾವವನ್ನು ವೀಲಿಯೆಯು ತನ್ನ ಮಾನವೀಯ ನಡವಳಿಕೆಗಳಿಂದ ದೂರವಾಗಿಸಿ ಅವಳನ್ನು ಬಿಡುಗಡೆಗೊಳಿಸುವುದು ಕೂಡ ಇಲ್ಲಿ ನಡೆಯುತ್ತದೆ... ಉಳಿದ ಸಂಗತಿಗಳನ್ನು ನೀವು ಈ ಕಾದಂಬರಿಯನ್ನು ಓದುವ ಮೂಲಕವೇ ತಿಳಿದುಕೊಳ್ಳಬೇಕು.