ನದೀ ತೀರದಲ್ಲಿ- ಬರೆದವರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.
ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ಕವಿತಾ ಸಂಗ್ರಹದಿಂದ ನನಗೆ ಪ್ರಿಯವಾದ ಕೆಲವು ಕವಿತೆಗಳನ್ನು ಓದುಗರಿಗಾಗಿ ಆಯ್ಕೆ ಮಾಡಿ ಕೊಟ್ಟಿದ್ದೇನೆ.
*
ನದೀ ತೀರದಲ್ಲಿ
[ಕವಿತೆಗಳು] ಪುಟಗಳು : ೧೦೮.
ಅಂಕಿತ ಪುಸ್ತಕ,
೫೩, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಂಧಿ ಬಜಾರ್ ಮುಖ್ಯ ರಸ್ತೆ,
ಬಸವನಗುಡಿ, ಬೆಂಗಳೂರು-೬೦ ೦೦೪.
ಮೊದಲ ಮುದ್ರಣ : ೨೦೦೪
-ಎಚ್. ಎಸ್. ವೆಂಕಟೇಶಮೂರ್ತಿ.
೧. ಪ್ರಾರ್ಥನೆ :
ನನ್ನ ಪ್ರಾರ್ಥನೆ ಇಷ್ಟೆ ಆ ತಥಾಗತನಲ್ಲಿ;
ಹಿಂದೊಮ್ಮೆ ಹಿಮಗಿರಿಯ ತಪ್ಪಲಲ್ಲುದ್ಭವಿಸಿ
ಎತ್ತರೆತ್ತರ ಬೆಳೆದು ನೆರಳು ಮಗುಚಿದನಾದಿ
ಬೋಧಿವೃಕ್ಷವೇ ಈಗ ನನ್ನ ಮನದೋವರಿಯ
ಕಿಷ್ಕಿಂಧೆಯಲಿ ಮತ್ತೆ ಮೊಳಕೆ ಒಡೆಯಲಿ. ತನ್ನ
ಕಿರುದೇಟ ಚೆಲ್ಲಿ ಎಲೆಗಳ ಸುರುಳಿ ಬಿಚ್ಚಲಿ.
ಕಿರಣ ಸೊರೆ ಚೀಪಿ ಇಷ್ಟಿಷ್ಟೆ ಮೇಲೇಳಲಿ.
ಕೆಮ್ಮಣ್ಣನೊತ್ತಿ ಎಳೆಹಸಿರ ಜೀಕುಳಿಯಾಡಿ
ಎತ್ತಿ ಹಿಡಿಯಲಿ ಎಲೆಯ ಬೊಗಸೆ ಕೆಂಗಿರಣಕ್ಕೆ !
ಬಿಸಿಲಲ್ಲಿ ಬಸವಳಿದು ಬಂದವರಿಗಾಸರೆಯ
ನೆರಳು ಹಿಡಿಯಲಿ. ಹಕ್ಕಿ ಅಳಿಲು ಕ್ರಿಮಿ ಕೀಟಕ್ಕೆ
ತವರಾಗಿ ನಿಲ್ಲಲಿ. ತೆಂಕಣದ ತಂಗಾಳಿ
ಇರುಳು ತಂಗಲಿ. ನಕ್ಷತ್ರ ಬಾಲಕರು
ಹಸಿರೆಲೆಯ ತೊಟ್ಟಿಲಲ್ಲಾಡಿಕೊಳ್ಳುತ್ತಿರಲಿ.
೨. ಉಡುಪಿ ಕೃಷ್ಣನ ಸ್ವಗತ
"ಐನೂರು ವರ್ಷಗಳ ಹಿಂದೆ ಇದ್ದಕ್ಕಿದ್ದ-
ಹಾಗೆ, ಸೆರೆಮನೆ ಗೋಡೆ ಸಿಡಿದು ಬೆಳಕಿನ ಕಿಂಡಿ !
ಕಿಂಡಿಯಲಿ ಕಂಡದ್ದು ಬೆರಗುಗಣ್ಣಿನ ಮೋರೆ !
ಝಲ್ಲೆಂದು ಎದೆ, ಕೈಯ ಕಡಗೋಲು ನಡುಗಿತ್ತು.
ಎಂಥ ಕಣ್ಣುಗಳಯ್ಯ ! ಕರುಣೆ, ಅನುಕಂಪೆ, ತ-
ನ್ಮಯ ಭಾವ ! ಕೊಳದಲ್ಲಿ ಮಾರುಗೈ ಮಾರಾಯ
ಕಿರಣ ಕೈಚಾಚಿ ಕೆಂದಾವರೆಯ ಕಣ್ಣೀರ
ಒರಸುವುದ ನೋಡಿ ಮರುಳಾದೆ, ಮಾರಾಯರೆ !
ರೆಪ್ಪೆ ಬಡಿಯದೆ ಹಗಲೂ ಇರುಳು ಕಾದಿದ್ದು
ಆವತ್ತು ಸಾರ್ಥಕಾ ಎನ್ನಿಸಿ ಹನಿಗಣ್ಣಾದೆ !
ಅಂದಿನಿಂದಿಂದುವರೆಗೂ ಸಣ್ಣ ಕಿಂಡಿಯಲಿ
ಎಷ್ಟೊಂದು ಮುಖ ಕಂಡವೋ ಲೆಖ್ಹವಿಟ್ಟಿಲ್ಲ !
ನಾನಂತು ಶಬರಿಗಣ್ಣಲ್ಲಿ ಕಾದಿದ್ದೇನೆ ಈ ತನಕ !
ಮತ್ತೆ ಕಂಡೀತೆ ಕಂಡೀತೇನು ಅಂಥ ಮುಖ ? !"
೩. ’ ನದೀ ತೀರದಲ್ಲಿ” ಪುಸ್ತಕದ ಹೊರಮೈ ನಲ್ಲಿ ಒಂದು ಕವಿತೆ ಇದೆ. ಅದು, ನಮ್ಮ ಪ್ರೀತಿಯ ಹಿರಿಯ ಕವಿ, ಚನ್ನವೀರ ಕಣವಿಯವರು, " ನದೀ ತೀರದಲ್ಲಿ" ಕವಿತಾ ಸಂಕಲನಕ್ಕಾಗಿಯೇ ರಚಿಸಿದ ಕೃತಿ. ಅದಕ್ಕೆ ಶೀರ್ಶಿಕೆ ಅವರು ಕೊಟ್ಟಿಲ್ಲ.
ವಿಹಾರಕ್ಕೆ ಬರಲಿಲ್ಲ ಈ ನದೀತೀರಕ್ಕೆ
ಬದುಕಿನೇರಿಳಿತಗಳ ದಾಟಿ ನೆಲ ಜಲದ ಮೈ-
ಗುಣವ ತುಂಬಿಕೊಂಡಿಹ ಮಡಿಲು, ಪ್ರೀತಿಯಲಿ ಕೈ-
ಚಾಚಿ ಕರೆಯಿತು ಪಾರದರ್ಶಕ ಪ್ರವಾಹಕ್ಕೆ.
ಇಕ್ಕೆಲದ ಹಸಿರು ಮರಗಳ ತುಂಬ ಹಕ್ಕಿಗಳೆ ;
ರೆಕ್ಕೆ ಬಿಚ್ಚಿವೆ ಮತ್ತೆ ದೂರದನ್ವೇಷಣೆಗೆ.
ಹರಿವ ನೀರಿನ ಮರ್ಮ ಕಾವ್ಯಕರ್ಮದ ತೆರೆಗೆ ,
ಹರಯ ತಿರುಗಿದ ಕವಿಯ ಕಣ್ತುಂಬ ಕವನಗಳೆ
ಬೆದೆಬಿದ್ದ ಪ್ರತಿಭೆ ಬೆಂಬೆತ್ತಿ ಕೆತ್ತುವ ಹದನು
ವ್ಯಂಗ್ಯಮೀರಿದ ನಿಸ್ಸಂಗನೆಲೆಗರ್ಥ ಸಾಂದ್ರ
[ಬತ್ತಿದರೆ ಪಾತ್ರಕ್ಕೆ ಕಪ್ಪೇಚಿಪ್ಪು ಚಂದ್ರ]
ಉಭಯ ನೀಳ್ದೋಳಿನಲಿ ಕನಸಿನ ಹೊಸ ಕಮಾನು
ಛಂದೋಬದ್ಧ ನುಡಿಗು ಒಗುಮಿಗುವ ಸ್ವಚ್ಛಂದ
ಮೈ-ಮನಸು-ಬುದ್ಧಿ ಪಳಗಿಸುವ ಕುಶಲ ಬಂಧ
-ಚನ್ನವೀರ ಕಣವಿ
*
ಮೇಲಿನ ಕವಿತೆಗಳನ್ನು ಡಾ. ಎಚ್. ಎಸ್. ವಿ. ರವರ ಅನುಮತಿಯನ್ನು ಪಡೆದು ಪ್ರಕಟಿಸಿರುತ್ತೇನೆ.