ನನಗೂ ಆಸೆ

ಮೇಲೆ ತಿಳಿಸಿದಂತೆ, ಸಾಂಸ್ಕೃತಿಕ ಹಾಗು ರಾಷ್ಟ್ರೀಯ ಹಬ್ಬಗಳ ಮಧ್ಯೆ ಏನೂ ಭೇದವಿಲ್ಲದೆ ಸಮಾನತೆಯಿಂದ ಆಚರಿಸುವ ಸಂಸ್ಕೃತಿ ನಮ್ಮದು. ಅದರ ಪರವಾಗಿ ಎಲ್ಲೆಡೆ ಭರ್ಜರಿಯ ತಯಾರಿಗಳು ನಡೆಯುವಾಗ, ಶಾಲೆಯಲ್ಲಿ ನಮ್ಮದೇ ಆದ ತಯಾರಿಗಳು. ಹೀಗೆ ತಯಾರಿಯ ವಿಚಾರ ಬಂದಾಗ ಮಕ್ಕಳಿಗೆಲ್ಲ 15 ದಿನಗಳ ಮುಂಚಿನಿಂದಲೇ ಸಿದ್ಧ ಪಡಿಸದಿದ್ದರೆ ಕಡೆಗೆ ಮಕ್ಕಳು ತಮ್ಮ ಸ್ವತಂತ್ರದಂತೆ ಮೆರೆದುಬಿಡುತ್ತಾರೆ. ಹೀಗೆ ಮಕ್ಕಳ ಕಾರ್ಯಕ್ರಮಗಳ ತಯಾರಿಯ ತರಾತುರಿಯಲ್ಲಿರುವಾಗ ಮಕ್ಕಳ ಗಲಾಟೆ ಕೇಳಿ ತಡೆಯಲಾರದೇ ಕೂಗುವ ಪದ್ಧತಿ ಉಂಟು ಶಿಕ್ಷಕರಲ್ಲಿ. ಆದರೆ ಒಬ್ಬೊಬ್ಬರ ಪರಿ ಒಂದೊಂದು ರೀತಿಯದ್ದಷ್ಟೇ.. ಎಲ್ಲ ತರಗತಿಯಲ್ಲೂ ತರಲೆಯ ಮಕ್ಕಳಿರುತ್ತಾರೆ. ನಾವು ಹೇಳುವ ಬುದ್ಧಿ ಮಾತು, ತಿಳುವಳಿಕೆ ಅವರಿಗೆ ಕೇಳಿದ ಕ್ಷಣಕ್ಕಷ್ಟೇ ಸೀಮಿತ. ನಂತರ ಅದರ ಪರಿಚಯವೇ ಅವರಿಗಿರುವುದಿಲ್ಲ. ಅದು ಅವರ ತಪ್ಪಲ್ಲ, ಆದರೆ ಅದನ್ನು ಹೇಳದಿದ್ದರೆ ಅದು ನಮ್ಮ ತಪ್ಪಾಗುತ್ತದೆ. ಒಂದು ವಾರದಿಂದ ಕೆಲವು ಮಕ್ಕಳು ಮಾಡುತ್ತಿದ್ದ ತರಲೆಗೆ ಕಡಿವಾಣ ಹಾಕುತ್ತಲೇ ಇರುವ ನಿಟ್ಟಿನಲ್ಲಿ, ನಾನು ಅವರ ಹೆಸರನ್ನು ತರಗತಿಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಳಸುವುದು ಉಂಟು.
ಹೀಗಿರುವಾಗ ಒಂದು ದಿನ ಅವರ ತರಲೆ ಹೆಚ್ಚಾಗಿ, ಸ್ವಲ್ಪ ಖಾರವಾಗಿ ಎಚ್ಚರಿಕೆ ಕೊಟ್ಟು ಮಕ್ಕಳನ್ನು ಸುಮ್ಮನಿರಿಸಿ ಅಂದು ನಾ ಗೆದ್ದೇ. ಆದರೆ ಆ ಮಕ್ಕಳ ಮುಖ ಸಂಜೆ ಹೊತ್ತಿಗಾಗಲೇ ಸ್ವಲ್ಪ ಬಾಡಿತ್ತು. ನನಗೆ ಪಾಪ ಎನಿಸಿ.. ಮನೆಗೆ ಹೋಗುವ ಸಮಯದಲ್ಲಿ ಅವರನ್ನು ಸ್ವಲ್ಪ ಮುದ್ದಿನ ಮಾತಿನಿಂದ ಖುಷಿಪಡಿಸಿ, ನಗಿಸಿ, ಬಣ್ಣದ ಮಾತುಗಳನ್ನಾಡಿಸಿ, ಎಲ್ಲರಿಗೂ ಹೇಳಿದೆ.. ನೋಡಿ ಮಕ್ಕಳೇ ಇಂದು ಅವರಿಗೆ ನಾನು ತುಂಬಾ ಎಚ್ಚರಿಕೆ ಕೊಟ್ಟು ಮಾತನಾಡಿದ್ದೇನೆ ಅದರ ಅರ್ಥ ಅವರು ತರಲೆಗಳೋ ಅಥವಾ ತುಂಟರೋ ಎಂದೆನಲ್ಲ. ಅವರು ನನಗೆ ತುಂಬಾ ಇಷ್ಟದ ವಿದ್ಯಾರ್ಥಿಗಳು ಅದಕ್ಕೆ ಅವರ ಹೆಸರನ್ನು ನಾನು ಪದೇ ಪದೇ ಹೇಳುತ್ತಿರುತ್ತೇನೆ ಅಷ್ಟೇ... ಎಂಬ ಮಾತು ಕೇಳಿದ ಮಕ್ಕಳ ಮುಖದಲ್ಲಿ ಹೂವು ಅರಳುವುದೊಂದೇ ಬಾಕಿ. ಬಾಡಿ ಹೋಗಿದ್ದ ಮುಖದಲ್ಲೊಂದು ನಗೆ. ಕಡೆಗೆ ಖುಷಿ ಇಂದಲೇ ಮನೆಗೆ ಹೊರಟು ಹೋದರು.
ಮಾರನೇ ದಿನ ಎಂದಿನಂತೆ ದಿನಚರಿ ಶುರುವಾಯಿತು. ಆಶ್ಚರ್ಯವೆಂದರೆ ಮರುದಿನ, ಪ್ರತಿದಿನ ಹೇಳಿದ ಮಾತನ್ನು ಅಚ್ಚುಕಟ್ಟಾಗಿ ಕೇಳಿ ಕೂರುತ್ತಿದ್ದ ಮಕ್ಕಳೆಲ್ಲ ಹೆಚ್ಚು ಮಾತು, ಗಲಾಟೆ ಮಾಡುತ್ತಿದ್ದರು. ನನಗೆ ಸ್ವಲ್ಪ ವಿಚಿತ್ರ ಎನಿಸಿತು. ಸಂಜೆಯ ವರೆಗೂ ಇದನ್ನೆಲ್ಲಾ ಸಹಿಸಿ ಕೊನೆಯಲ್ಲಿ ಆ ಮಕ್ಕಳ ಬಳಿ ಕೇಳಿದೆ.. ದಿನವೂ ಶಿಸ್ತಿನಲ್ಲಿರುವ ನೀವುಗಳು ಇಂದೇಕೆ ಹೀಗೆ ಮಾಡುತ್ತಿದ್ದೀರಿ? ಏನಾಗಿದೆ ನಿಮಗೆ? ಎಂದು ಕೇಳಿದ್ದಕ್ಕೆ, ಆ ಮಕ್ಕಳೆಲ್ಲ ಒಬ್ಬರ ಮುಖ ಒಬ್ಬರು ನೋಡುತ್ತಾ ನಗಾಡುತ್ತಾ ಹೇಳಿದರು... "ಏನಿಲ್ಲ ಮಾತಾಜಿ ತುಂಬಾ ಮಾತನಾಡುವ ಮಕ್ಕಳು, ತುಂಬಾ ತರಲೆ ಮಾಡುವ ಮಕ್ಕಳೆಂದರೆ ನಿಮಗೆ ಇಷ್ಟ ಅಲ್ಲವೇ? ಅವರ ಹೆಸರನ್ನೇ ನೀವು ದಿನವೆಲ್ಲಾ ಹೇಳುತ್ತಾ ಇರುತ್ತೀರಿ. ಅದಕ್ಕೆ ನಮಗೂ ಆಸೆಯಾಯಿತು. ನಿಮ್ಮ ಬಾಯಲ್ಲಿ ಇಡೀ ದಿನ ನಮ್ಮ ಹೆಸರೇ ಬರಲಿ ಎಂದು.. ಅದಕ್ಕೆ ಹೀಗೆ ಮಾಡಿದೆವು" ಎಂದು ಹೇಳಿದ ಮಕ್ಕಳ ಮಾತು ಕೇಳಿ ನಾನು ನಗಬೇಕೋ, ಖುಷಿಪಡಬೇಕೋ ತಿಳಿಯಲಿಲ್ಲ. ಆದರೆ ಒಂದಂತೂ ಸತ್ಯ ಎಷ್ಟೋ ಸೂಕ್ಷ್ಮ ವಿಚಾರಗಳಲ್ಲಿ ನಾವೇ ಬುದ್ಧಿವಂತರು ಎಂದು ಸಮಯ ಸರಿತೂಗಿಸುವ ಪ್ರಯತ್ನ ಮಾಡಿದರೆ ಮಕ್ಕಳು ಅದಕ್ಕೂ ಮೀರಿದ ಒಂದು ಹೆಜ್ಜೆ ಮುಂದೆ ಯೋಚನೆ ಮಾಡುತ್ತಾರೆ ಎನ್ನುವುದಂತೂ ಸಾಬೀತಾಯಿತು.. ಅಲ್ಲವೇ..?
-ರಮ್ಯಾ ಆರ್ ಭಟ್, ಕುಂದಾಪುರ
ಚಿತ್ರ ಕೃಪೆ: ಇಂಟರ್ನೆಟ್ ತಾಣ