ನನಗೆ ಇಪ್ಪತ್ತೇಳು
ಕವನ
ಕೃಷ್ಣನಂತೆ ಸಂಕಿರ್ಣ ವಾಹಿನಿಯಾಗಿ
ಬುದ್ಧನಂತೆ ಸ್ಥಾಯಿರಸಿಕನಾಗಿ
ಬರಗಾಲ ಫಕೀರನಾಗಿ ತೆವಳಿದ್ದೇನೆ
ತಿಳಿಯಾಗಲು ಕಾಲವೂ ಹಪಹಪಿಸಿದ್ದೇನೆ
ಚೈತನ್ಯ ಸತ್ತಾಗಲೆಲ್ಲ ಸ್ಫೂರ್ತಿಯ ಸೆಲೆಗಾಗಿ ಹುಡುಕಿ,
ಹೊಸ ಉತ್ಸಾಹದಲ್ಲಿ ಧುಮುಕಿದ್ದೇನೆ.
ತೀರಸ್ಕೃತನಾಗಿದ್ದೇನೆ, ದಣಿದಿದ್ದೇನೆ, ಸೋತಿದ್ದೇನೆ,
ಸೃಜನಶೀಲತೆ ಇಲ್ಲದೆ, ಬರವಣಿಗೆಯೇ ಜೊಳ್ಳು ಅನ್ನಿಸಿದ್ದೂ ಇದೇ!
ಮಾಡಿರಬಹುದು ತಪ್ಪುಗಳನ್ನು, ಕಂಡದ್ದನ್ನು ತಿದ್ದಿದ್ದೇನೆ
ನೋಯಿಸಿರಬಹುದು, ನಿತ್ಯವೂ ಮರುಗಿದ್ದೇನೆ
ಭಾವ, ಬುದ್ಧಿಯ ಅಲಗಕ್ಕೆ ಸಿಕ್ಕು ಮಾಡಿರಬಹುದು
ಕೆಲವನ್ನು, ಸಿದ್ಧನಿದ್ದೇನೆ ಬಲಿಯಂತೆ ತಲೆತಗ್ಗಿಸಿ ನಿಲ್ಲಲು
ಉಪಕಾರ ಸ್ಮರಿಸದಿರಬಹುದು ಮುಖಸ್ತುತಿಯಾಗಿ
ಬೇಡಿದ್ದೇನೆ ಅನಂತಕಾಲದ ಒಳಿತನ್ನು.
ಬರೆದಿದ್ದೇನೆ ದೈವ ಬರೆಸಿದ್ದನ್ನು ಇಪ್ಪತ್ತೇಳು ಪುಟ!
ಬರವಣಿಗೆ ಸರಿಯಿಲ್ಲವೆಂದು ಗುಜುರಿಗಂತೂ ಹಾಕಲಾಗದು
ಅದರ ಮೌಲ್ಯ ಮಾಪನ ಕಾಲದ ಕೈಯಲ್ಲಿ
ಎಲ್ಲವನ್ನು ಕೊಟ್ಟ ದೈವದಮುಂದೆ ಮಂಡಿಯೂರಿ
ತಲೆತಗ್ಗಿಸುವುದೊಂದೇ ನನ್ನ ಕೈಯಲ್ಲಿ.