ನನ್ನಂತರಂಗದ ಪಿಸುಮಾತ ಆಲಿಪೆಯಾ

ನನ್ನಂತರಂಗದ ಪಿಸುಮಾತ ಆಲಿಪೆಯಾ

ಕವನ

ತಿಳಿಮುಗಿಲ ತೊಟ್ಟಿಲಲಿ ಮಲಗಿಹ 

ಹೊಳೆವ ಚಂದಿರನ ಬೆಳಕಿನಲಿ

ಚಳಿಯ ಪಿಸುಮಾತ ಶೃಂಗಾರ ಹೆಚ್ಚಿದೆ

ಕಳೆಯಲಿ ಮಿಂಚಿವೆ ಬೆರಗಿನಲಿ...

 

ಪ್ರೀತಿಯ ಕರೆಯನು ಆಲಿಸಿ ತಂದೆನು

ಜ್ಯೋತಿಯ ಬೆಳಗುತ ಸ್ವಾಗತಿಸಿ

ಕೀರ್ತಿಯ  ಅಲೆಯಲಿ ತೇಲುತ ಬಂದೆನು

ಸ್ಫೂರ್ತಿಯ ಸೆಲೆಯಿದು ಆರಾಧಿಸಿ...

 

ಒಲವಿನ ಬೆಸುಗೆಯ ಬಂಧದ ಸೆಳೆತವು

ಚೆಲುವಲಿ ಮಳೆಯಲಿ ತೊಯ್ದಿರಲು

ಬಲುಮೆಯ ಗೆಳೆಯ ಕರುಣೆಯ ಮಾತಲಿ

ಕಲಿವಿನ ಪಥವದು ಸಾಗಿರಲು....

 

ನಲ್ಲನ್ನೆದೆಯ ಪಿಸುಮಾತ ಕೇಳುತ ನಿಂತಳು

ಮೆಲ್ಲನೆ ಬಿದ್ದಳು ಪ್ರೀತಿಬಲೆಯಲಿ

ಸೊಲ್ಲಾಡದೆ ಮೌನದಿ ನಾಚುತ ನಾರಿಯು

ಪಲ್ಲಕ್ಕಿಯ ಸುಂದರ ಮೆರವಣಿಗೆಯಲಿ||

 

ಒಬ್ಬರನೊಬ್ಬರು ಅರಿಯುತ ಬೆರೆಯುತ

ಮಬ್ಬಲಿ ಮೆರೆಯುತ ಸಾಗುತಿಹರು

ಕಬ್ಬಿನ ಹಾಲಿನ ಸಿಹಿಯನು ಸವಿಯುತ

ಹಬ್ಬದ ಸಿರಿಯಲಿ ಕುಣಿಯುತಲಿ....

 

ಇನಿಯನ ಮಾತನು ಆಲಿಸಿ ಮಲಗುತ

ದನಿಯದು ಕೇಳದ ಪಿಸುಮಾತು

ಖನಿಯದು ಮಿಂಚುತ ಮಾತಲಿ ಮೀಯುತ

ವನಿತೆಯ ಸೆರಗಿನ ಸವಿಮಾತು....

 

ತಂಬೆಲರ ಅಭಿಷೇಕ ತಂಪಿನ ಆರಾಧನೆ

ನಂಬಿದ ದೇವರ ಆಶಿರ್ವಾದದಲಿ

ಸಂಭ್ರಮ ಸಿರಿಯಲಿ ಸತಿಪತಿ ಆಲಾಪನೆ

ಚುಂಬಿತ ಮೋಹದ ಪರಿಧಿಯಲಿ...

 

ಅಂತ ರಂಗದ ಮೃದಂಗ ಮಿಡಿಯುತ

ತಂತಿಯ ಮಿಡಿತವು ಹೆಚ್ಚಿರಲು.

ಚಿಂತನ ನಡೆದಿದೆ ಸೊಗಸದು ಕರೆದಿದೆ

ಮಂಥನ ನಡೆಯುತ ಮುಚ್ಚಿರಲು...
 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್