ನನ್ನದು ಈ ಕನ್ನಡ ನಾಡು

ನನ್ನದು ಈ ಕನ್ನಡ ನಾಡು

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರ.ಸಂಪಾದಕರು-ಬಿ.ಎಂ.ಇದಿನಬ್ಬ, ಸಂ-ಚಿ.ಶ್ರೀನಿವಾಸರಾಜು, ಅಂದನೂರು ಶೋಭಾ
ಪ್ರಕಾಶಕರು
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನ ಸೌಧ, ಬೆಂಗಳೂರು-೫೬೦೦೦೧
ಪುಸ್ತಕದ ಬೆಲೆ
ರೂ.೨೦.೦೦ ಮುದ್ರಣ: ೨೦೦೫

ನಾಡಿನ ಖ್ಯಾತ ಸಾಹಿತಿವರೇಣ್ಯರಾದವರಿಂದ ರಚಿಸಲ್ಪಟ್ಟ ೬೪ ಶ್ರೇಷ್ಠ ಕವನಗಳು, ಕವಿಕಾವ್ಯ ಪರಿಚಯ ಇವುಗಳನ್ನು ಒಳಗೊಂಡ ಹೊತ್ತಗೆಯೇ ‘ನನ್ನದು ಈ ಕನ್ನಡ ನಾಡು'. ಕನ್ನಡ ನಾಡು ನುಡಿಯ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರತಂದ ಕವನಗಳ ಗುಚ್ಛವಿದು. ಮುನ್ನುಡಿ,ಹಿನ್ನುಡಿ ಎಂದು ಪ್ರತ್ಯೇಕವಾಗಿ ಇಲ್ಲ. ಪ್ರಧಾನ ಸಂಪಾದಕರಾದ ಬಿ.ಎಂ.ಇದಿನಬ್ಬ ಇವರೇ ಪುಸ್ತಕವನ್ನು ಹೊರತಂದ ಆಶಯವನ್ನು ಬರೆದಿರುತ್ತಾರೆ.

ನಮ್ಮ ಕನ್ನಡ ನಾಡು ನುಡಿಗೆ ಈಗ ಒದಗಿರುವ ಅವಸ್ಥೆಯನ್ನು ಸರಿಪಡಿಸುವಲ್ಲಿ ಒಂದಷ್ಟು ಕವನಗಳು ಸಹಕಾರಿಯಾಗಬಹುದೆಂಬ ಆಶಯ ಸಂಪಾದಕರದು. ಪಂಜೆ ಮಂಗೇಶರಾಯರ ಬಂತ್ಯೆ ಬಂತೈ ತೆಂಕಣಗಾಳಿ, ಬೆನಗಲ್ ರಾಮರಾವ್ ಅವರ ಕನ್ನಡಾಂಬೆಯ ಹಿರಿಮೆ, ಬಿ.ಎಂ.ಶ್ರೀ ಅವರ ಮೈಸೂರು ಮಕ್ಕಳು, ಮಾಸ್ತಿಯವರ ಕನ್ನಡ ನಾಡ ಸ್ಥಿತಿ, ದ.ರಾ.ಬೇಂದ್ರೆಯವರ ಕನ್ನಡ ನಾಡ ರಾಣಿ, ಆನಂದ ಕಂದರ ಅರುಣೋದಯ, ಪಾಂಡೇಶ್ವರ ಗಣಪತಿರಾವ್ ಅವರ ಕನ್ನಡ ಕುಲ, ವಿ.ಕೃ.ಗೋಕಾಕ ಅವರ ನಾಡಿನ ಹಾಡು, ಕಯ್ಯಾರರ ನಾಡ ಬಾವುಟ ಹಾರಿಸಿ, ಗೋಪಾಲಕೃಷ್ಣ ಅಡಿಗರ ಕನ್ನಡವೆಂದರೆ ವಾವ್ ಒಂದಕ್ಕಿಂತ ಒಂದು ಅದ್ಭುತ, ಅಮೋಘ ಸಾಲುಗಳಿವೆ.

ಮೈರೋಮಾಂಚನಗೊಳ್ಳುವ, ನವಿರೇಳಿಸುವ ಪದಪುಂಜಗಳೊಂದಿಗೆ ಪುಸ್ತಕದ ಎಲ್ಲಾ ಕವನಗಳು ಅನಾವರಣಗೊಂಡಿವೆ. ಬಿ.ಎಂ.ಇದಿನಬ್ಬ ಅವರ *ಕನ್ನಡ ನಾಡಿನ ಏಕೀಕರಣ* ಕವನದ ಬಗ್ಗೆ ನಾಲ್ಕು ಮಾತುಗಳು. ೨೪ಸಾಲುಗಳಿಂದ ಬರೆಯಲ್ಪಟ್ಟ, ಏಕೀಕರಣಕ್ಕೆ  ವ್ಯಯಿಸಿದ ಸಮಯ ಮತ್ತು ಶ್ರಮದ ಬಗ್ಗೆ, ಹಾರಿಸೋಣ ಕನ್ನಡದ ಬಾವುಟವನ್ನು ಜಗದಗಲ ಬಾನೆತ್ತರಕ್ಕೆ, ಒಕ್ಕೊರಲಿನಿಂದ ಕೂಗೋಣ ಕನ್ನಡ ಕನ್ನಡ ಎಂಬುದಾಗಿ ತಮ್ಮ ಮನಸಿನ ಭಾವನೆ, ಆಲೋಚನೆಗಳನ್ನು ಕವನವಾಗಿಸಿದ್ದಾರೆ.

ಹರಿದು ಹಂಚಿ ಹೋಗಿದೆ, ಬನ್ನಿರೆಲ್ಲರು ಒಗ್ಗೂಡಿ ಕಟ್ಟುವ, ಮರಳಿ ತರುವ ಕನ್ನಡದ ಸೌಭಾಗ್ಯವ, ಮಾತೆಗೆ ಸಂತಸ ತರುವ, ಎಲ್ಲರೂ ಒಂದಾಗೋಣ, ಎಂಥ ಚಂದದ ಸಾಲುಗಳಲ್ಲವೇ?

-ರತ್ನಾ ಕೆ.ಭಟ್, ತಲಂಜೇರಿ