ನನ್ನದೊಂದು ಬದುಕಿನ ಪುಸ್ತಕ…(ಭಾಗ 2)

ನನ್ನದೊಂದು ಬದುಕಿನ ಪುಸ್ತಕ…(ಭಾಗ 2)

ಕೆಲವೊಮ್ಮೆ ಸಂಜೆಯ ನಡಿಗೆಗಾಗಿ ಪಾರ್ಕಿನಲ್ಲಿ ಹೋಗುತ್ತಿರುವಾಗ ಅಲ್ಲಿ ಕಾಣುವ ಯುವಕ ಯುವತಿಯರ ನಗುವನ್ನು ನೋಡಿದಾಗ ಯೌವ್ವನದ ನನ್ನ ಪ್ರೀತಿಯು ನೆನಪಾಗುತ್ತದೆ. ಅರೆ ಪ್ರೀತಿ ಒಂದು ಮುಗಿಯದ ಅಕ್ಷಯ ಪಾತ್ರೆ, ಇಂದಿನ ಯುವಕ ಯುವತಿಯರಿಗೆ ಪ್ರೀತಿಯ ಮಹತ್ವ, ಪ್ರೀತಿಯ ಪಾವಿತ್ರ್ಯತೆ, ಪ್ರೀತಿಯ ಜೀವನದ ಬಗ್ಗೆ ಬರೆಯಬೇಕು, ಅವರನ್ನು ಎಚ್ಚರಿಸಬೇಕು, ಪ್ರೀತಿಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಬಾರಿ ಏನಾದರೂ ಮಾಡಿ ಅಮರ್ ಪ್ರೇಮ್ ಕಹಾನಿ ಬರೆಯಲೇಬೇಕು ಎಂದು ಯೋಚಿಸುತ್ತೇನೆ. ಆದರೆ ಟಿವಿಗಳಲ್ಲಿ ಬರುವ ಪ್ರೀತಿಗಾಗಿ ಕೊಲೆಗಳು, ವಂಚನೆಗಳು, ಮುಖವಾಡಗಳು ಎಲ್ಲವನ್ನು ನೋಡುತ್ತಿದ್ದರೆ ಈಗ ಇರುವುದು ನಿಜ ಪ್ರೀತಿ ಅಲ್ಲ, ಕಪಟ ಪ್ರೀತಿ. ಈಗಿನ ಯುವಕ ಯುವತಿಯರಿಗೆ ಪ್ರೀತಿಯ ಬಗ್ಗೆ, ಅದರ ಆಳದ ಬಗ್ಗೆ ಗೊತ್ತೇ ಇಲ್ಲ‌. ಪ್ರೀತಿ ಒಂದು ವ್ಯಾಪಾರದ, ಕಾಮ ಪ್ರಚೋದನೆಯ, ಹದಿಹರೆಯದ ಒಂದು ಭಾವ ಮಾತ್ರವಾಗಿದೆ. ಈಗ ಆದನ್ನು ಬರೆದು ಪ್ರಯೋಜನವಾದರೂ ಏನು ಎಂದು ಮತ್ತೆ ಒಳಗಿನ ಮನಸ್ಸು ನುಡಿಯುತ್ತದೆ. ಹಳೆಯ ನನ್ನ ಪ್ರೀತಿಯನ್ನು ನೆನಪು ಮಾಡಿಕೊಂಡು ಹಾಗೆಯೇ ಮರೆಯುತ್ತೇನೆ.

ಪುಸ್ತಕ ಬರೆಯಲು ಸಾಧ್ಯವಾಗಲಿಲ್ಲ. ಈ ಯೋಚನೆಗಳೆಲ್ಲವೂ ಹಳೆಯದಾಯಿತು. ಹೊಸ ಟ್ರೆಂಡ್ ಏನೆಂದರೆ ಯುವಕರಿಗೆ ಮಾರ್ಗದರ್ಶನ ಮಾಡುವ, ವ್ಯಕ್ತಿತ್ವ ವಿಕಸನದ, ಅವರ ಉದ್ಯೋಗ, ವ್ಯಾಪಾರಕ್ಕೆ ಮಾರ್ಗದರ್ಶನ ನೀಡುವ  ಹೊಸ ಹೊಸ ಐಡಿಯಾಗಳು, ಟಿಪ್ಸ್ ಗಳು, ಆಲೋಚನೆಗಳ ಬಗ್ಗೆ ಪುಸ್ತಕ ಬರೆದರೆ ಹೆಚ್ಚು ಜನಪ್ರಿಯವಾಗುತ್ತದೆ ಎಂದು ಆಗಾಗ ಕೆಲವರು ಮಾತನಾಡುವುದನ್ನು ಕೇಳಿ ಅದನ್ನಾದರೂ ಬರೆಯೋಣ ಎಂದು ಪೆನ್ನು ಪೇಪರ್ ಹಿಡಿದು ಕುರ್ಚಿಯ ಮೇಲೆ ಕುಳಿತೆ. ಆಗ ಪಕ್ಕದಲ್ಲಿದ್ದ ಪತ್ರಿಕೆಯ ಮೇಲೆ ಕಣ್ಣಾಡಿಸಿದರೆ ಅಲ್ಲಿ ಬರೆದಿದ್ದ ಅನೇಕ ವಿಷಯಗಳನ್ನು ಓದಿದ ಮೇಲೆ ಇದು ನನ್ನಿಂದ ಸಾಧ್ಯವಿಲ್ಲ. ನನ್ನ ಆಲೋಚನೆಗಳು ತುಂಬಾ ಹಳೆಯದು. ಈಗ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ಯುವಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿಯು ದೊರೆಯುತ್ತದೆ. ಅವರಿಗೆ ಹಣ ಮಾಡುವ, ಏನನ್ನಾದರೂ ಸಾಧಿಸುವ, ಮಜಾ ಮಾಡುವ ಆಲೋಚನೆಗಳೇ ತುಂಬಿ ತುಳುಕುತ್ತಿವೆ. ಅವರನ್ನು ಮೆಚ್ಚಿಸಲು ನಾನು ಅದಕ್ಕೆ ಪೂರಕವಾದ ವಿಷಯಗಳನ್ನೇ, ಮಾರ್ಗಗಳನ್ನೇ, ಬರೆಯಬೇಕು. ನನಗೆ ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನಾನು ಯಾವುದೋ ಮೌಲ್ಯಯುತ ದಾರಿಗಳನ್ನು ಬರೆದು ಅಪಹಾಸ್ಯಕ್ಕೆ ಒಳಗಾಗಬಹುದು. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ನನ್ನ ಸಲಹೆಗಳು ಹಾಸ್ಯಾಸ್ಪದವಾಗಿ ಕಾಣಬಹುದು ಎಂದು ಒಳ ಮನಸ್ಸು ನುಡಿಯುತ್ತಿದ್ದಂತೆ ಆ ರೀತಿಯ ಪುಸ್ತಕಗಳನ್ನು ಬರೆಯುವ ಯೋಚನೆಗಳನ್ನು ಮಾಡಲಾಗುತ್ತಿಲ್ಲ.

ಬರೆಯಬಹುದಾದ ಎಲ್ಲ ವಿಷಯಗಳನ್ನು ಮತ್ತೆ ಮತ್ತೆ ಯೋಚಿಸಿದ ನಂತರ ಬಹುಶಃ ನನ್ನ ಬದುಕಿನ ಅನುಭವವೇ ಬೇರೆ. ಈಗಿನ ಸಾಮಾಜಿಕ ವ್ಯವಸ್ಥೆಯೇ ಬೇರೆ. ನನ್ನ ಬದುಕು ಈಗಿನ ಕಾಲಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಈಗಿನ ಬದುಕು ವೇಗ, ಸ್ಪರ್ಧೆ ಯಶಸ್ಸನ್ನು ಅವಲಂಬಿಸಿದೆ. ಫಲಿತಾಂಶಗಳು ಯಾವಾಗಲೂ ಐಪಿಎಲ್ ಮ್ಯಾಚ್ ನಂತೆ ಇರಬೇಕು, ಅಂದರೆ ಗೆಲ್ಲುತ್ತಲೇ ಇರಬೇಕು. ಅದೂ ಸಹ ಆಕರ್ಷಕವಾಗಿಯೂ, ಸದಾ ಥ್ರಿಲ್ ಕೊಡುತ್ತಿರಬೇಕು. ನಮ್ಮ ಯೋಚನೆಗಳು ಬಹುತೇಕ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ.

ಈ ಬಿಸಿಲಿನ ತಾಪಮಾನದಲ್ಲಿ, ರಾಜಕೀಯ ವಾತಾವರಣದಲ್ಲಿ, ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ನಲ್ಲಿ, ನಾವು ಬರೆಯುವ ಪುಸ್ತಕವನ್ನು ಓದುವುದಾದರೂ ಯಾರು ? ಇಲ್ಲ, ಬರೆಯಲು ಸಾಧ್ಯವಾಗುತ್ತಿಲ್ಲ. ಹಾಗೆಂದು ಬದುಕು ಭಾರವೇನು ಆಗಿಲ್ಲ. ಬದುಕೇ ಒಂದು ಪುಸ್ತಕ. ಆ ಪುಸ್ತಕದಲ್ಲಿಯ ಎಲ್ಲ ಪುಟಗಳು ಸಾಧ್ಯವಾದಷ್ಟು ಮಾನವೀಯ, ಜೀವಪರ ನಿಲುವುಗಳನ್ನೇ ಪ್ರತಿಪಾದಿಸುತ್ತಾ ಬದುಕಬೇಕು. ಪುಸ್ತಕಗಳನ್ನು ಬೇರೆಯವರು ಓದಲು ಬರೆಯಬೇಕು, ಆದರೆ ಬದುಕು ನನಗಾಗಿ ಬದುಕಬೇಕು.

ಬದುಕೇ ಒಂದು ಪುಸ್ತಕವಾಗಿ, ಆ ಪುಸ್ತಕ ಇನ್ನೊಬ್ಬರಿಗೆ ಸ್ಪೂರ್ತಿಯಾಗಬೇಕು, ಮಾರ್ಗದರ್ಶನವಾಗಬೇಕು, ಇಂದಿನ ಅತಿಅವಶ್ಯಕತೆ ಇದೇ ಆಗಿದೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ಹಾಗೆಂದು ಬದುಕಿನ ಬಗ್ಗೆ ನನ್ನ ದೃಷ್ಟಿಕೋನವೇ ಸರಿ ಎಂದೇನೂ ಅಲ್ಲ. ಬದುಕುತ್ತಾ ಬರೆಯುವವರು, ಬರೆಯುತ್ತಾ ಬದುಕುವವರು, ಮುದ್ರಿಸುತ್ತಾ ಬದುಕುವವರು, ನಿದ್ರಿಸುತ್ತಾ ಬದುಕುವವರು, ಮಾರಾಟ ಮಾಡುತ್ತಾ ಬರೆಯುವವರು, ಮಾರಾಟವಾಗುತ್ತಾ ಬರೆಯುವವರು, ಅನುಭವಗಳಿಗೆ ಅಕ್ಷರ ರೂಪ ಕೊಡುವವರು, ಅಕ್ಷರಗಳಲ್ಲಿಯೇ ಅನುಭವವನ್ನು ಬರೆಯುವವರು, 

ಕದ್ದು ಬರೆಯುವವರು, ಬರೆಯುವುದನ್ನು ಕದಿಯುವವರು, ಅಧ್ಯಯನ ಚಿಂತನೆಗಳನ್ನೇ ಬರೆಯುವವರು, ಇದು ಯಾವುದೂ ಇಲ್ಲದೆ ಹಾಗೆಯೇ ಸಹಜವಾಗಿ ಬದುಕುತ್ತಿರುವವರು, ಬದುಕನ್ನೇ ಪುಸ್ತಕವಾಗಿಸಿಕೊಂಡವರು, ಪುಸ್ತಕಗಳಿಂದಲೇ ಬದುಕುತ್ತಿರುವವರು, ಹೀಗೆ ಬದುಕು ಸಹ ಒಂದು ನಿರಂತರ ಪಯಣ...

ಪುಸ್ತಕಗಳಿಗೆ ಹೇಗೆ ನಿರ್ದಿಷ್ಟ ವಿಷಯಗಳಿಲ್ಲವೋ, ಅಂತ್ಯವಿಲ್ಲವೋ, ಬದುಕು ಸಹ ಅದೇ ರೀತಿ ಅನೇಕ ಪ್ರಕಾರಗಳಲ್ಲಿ ಮುಂದುವರೆಯುತ್ತಲೇ ಇರುತ್ತದೆ. ಹೇಗೆ ಪುಸ್ತಕಗಳು ನಮ್ಮ ಆತ್ಮೀಯ ಗೆಳೆಯರಾಗುತ್ತವೋ, ಜ್ಞಾನ ಭಂಡಾರವಾಗುತ್ತವೋ,  ಹಾಗೆಯೇ ಪುಸ್ತಕಗಳು ನಮ್ಮ ಶತ್ರುಗಳು  ಹೌದು ಹಾಗೂ ಪುಸ್ತಕಗಳು ನಮ್ಮ ಮಿತಿಯೂ ಹೌದು.

ಒಟ್ಟಿನಲ್ಲಿ ಪುಸ್ತಕಗಳು ನಮ್ಮ ಬದುಕಿನ ಭಾಗವಾದರೆ ಬದುಕು ಒಂದಷ್ಟು ಸಹನೀಯವಾಗುತ್ತದೆ ಎಂಬುದು ವಾಸ್ತವ. ಅದರಲ್ಲೂ ಬಾಲ್ಯದ ಪುಸ್ತಕಗಳ ಓದು ನಮಗೆ ನಮ್ಮೊಳಗಿನ ಮೌಲ್ಯಯುತ ಅರಿವು ಮೂಡಲು ಸಹಕಾರಿಯಾದರೆ, ಯೌವ್ವನದ ಪುಸ್ತಕಗಳ ಓದು ನಾವು ದಾರಿ ತಪ್ಪದಂತೆ ಎಚ್ಚರಿಕೆ ನೀಡುತ್ತವೆ. ಉದ್ಯೋಗ ಮತ್ತು ಕೌಟುಂಬಿಕ ಬದುಕಿನಲ್ಲಿ ಓದುವ ಪುಸ್ತಕಗಳು ನಮ್ಮ ಸಮಸ್ಯೆಗಳನ್ನು ಕಡಿಮೆಗೊಳಿಸಿ ಹೆಚ್ಚು ಜೀವನೋತ್ಸಾಹ ತುಂಬಿದರೆ, ನಿವೃತ್ತಿಯ ಅಂಚಿನ ಪುಸ್ತಕಗಳ ಓದು ನಮಗೆ ಬದುಕಿನ್ನು ಮುಗಿದಿಲ್ಲ ಎಂಬ ಭರವಸೆ ಮೂಡಿಸುತ್ತದೆ. ಅಂತಿಮವಾಗಿ ಹಾಸಿಗೆಯ ಮೇಲಿನ ಓದು ನಮ್ಮ ಸಂಪೂರ್ಣ ಬದುಕಿನ ನೆನಪುಗಳನ್ನು ನೆನಪಿಸುತ್ತ ಸಾವು ಸಹ ಸಹನೀಯವಾಗುವಂತೆ ಸಮಾಧಾನ ನೀಡುತ್ತದೆ.

ಆದ್ದರಿಂದ ಓದುವ ಅಭ್ಯಾಸ ಖಂಡಿತವಾಗಲೂ ಬಹಳ ಮುಖ್ಯ. ಅನೇಕ ಆಸ್ಪತ್ರೆಗಳು, ವೃದ್ಧಾಶ್ರಮಗಳು, ಜೈಲು ಎಲ್ಲವನ್ನು ನೋಡಿ ಅಲ್ಲಿನ ಶಾಶ್ವತ ನಿವಾಸಿಗಳನ್ನು ಗಮನಿಸಿದಾಗ, ಓದುವ ಹವ್ಯಾಸ ಇದ್ದವರು ತಮ್ಮ ಪರಿಸ್ಥಿತಿಯನ್ನು ಸಹ ಉತ್ತಮ ರೀತಿಯಲ್ಲಿ ಎದುರಿಸುತ್ತಿರುತ್ತಾರೆ. ಈ ಹವ್ಯಾಸಗಳಿಲ್ಲದವರು ನರಕಯಾತನೇ ಅನುಭವಿಸುತ್ತಿರುತ್ತಾರೆ. ಬದುಕು ಹೇಗೆ ಇರುತ್ತದೆ ಗೊತ್ತಿಲ್ಲ. ಆದರೆ ಓದುವ ಹವ್ಯಾಸ ನಿಮ್ಮ ಬದುಕನ್ನು ಎಲ್ಲ ಸಂದರ್ಭದಲ್ಲೂ, ಎಲ್ಲಾ ಕಾಲದಲ್ಲೂ ಸಹನೀಯಗೊಳಿಸುವುದು ಮಾತ್ರ ವಾಸ್ತವ. ದಯವಿಟ್ಟು ಪುಸ್ತಕಗಳನ್ನು ಬರೆಯುತ್ತಿರಿ, ಸಾಧ್ಯವಾಗದಿದ್ದರೆ ಓದುತ್ತಿರಿ, ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು.

-ವಿವೇಕಾನಂದ, ಎಚ್. ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ