ನನ್ನವರು

ನನ್ನವರು

ಬರಹ

ಆ ಮನೆ
ಅವಳಿಗಿನ್ನೂ ಹೊಸತು
ಮೌನದೊಡನೆ ಬೆರತು
ಕೆಲವೊಮ್ಮೆ ನಗುವಳು
ನೆನಪನ್ನೇ ನೋಡುವಳು

ಮದುವೆಗೆ ಮುಂಚೆ
ರಿಂಗಣಿಸಿದಾಗ ಫೋನು
ಹಲೋ,ಹೇಳಿ, ಮತ್ತೆ , ಏನು
ಇಷ್ಟೇ ಮಾತು ಬೇರೇನಿಲ್ಲ
ಅತ್ತಲಿಂದ ಹಾಸ್ಯದಂಬಾರಿ
ಇವಳ ನಗು ನಿಮಿಷಕ್ಕೊಂದು ಬಾರಿ

ತಟ್ಟೆಯೊಳಗೆ ಬೆರಳಾಡಿಸುತ
ಒಳಗೊಳಗೇ ನಗುವಳು
(ಏನೆನಿಸುವುದೋ)
ಕೇಳಿದರೆ ಮತ್ತೆ ಮೌನ
ಹುಸಿಕೋಪ, ಮುದ್ದುಮುಖ
ಕೆಂಪೇರಿ ಸಂಜೆ ರಂಗಾಗುವಳು

ಮದುವೆಯ ದಿನ
ಭಯ ಮೌನದ್ದೇ ರಾಜ್ಯ
ನಗುವಿಲ್ಲ, ಮಾತಿಲ್ಲ
ತಲೆ ಎತ್ತುವುದೂ ಇಲ್ಲ.
ಬಿಟ್ಟ ಕಣ್ಣು ಬಿಟ್ಟಂತೆಯೇ
ನಗೆಮಾತಿಗೆ ಹುಸಿನಗು

ಅಪ್ಪನ ಹೊಯ್ದಾಟ
ಅಮ್ಮನ ಓಡಾಟ
'ರೇಷ್ಮೆ ಸೀರೆಗಳ ನಡುವೆ
ಕಳೆದೆ ಹೋಗಿದ್ದಾಳೆ ವಧು'
ಗಟ್ಟಿ ಮೇಳದ ನಡುವೆ
ಗಟ್ಟಿಯಾದಳು
(ನೋಡುತ್ತಲೇ ಇದ್ದಳು)

ಕಣ್ಣೀರ ಹಿಡಿದ ತಂದೆ
ಅಳುತ್ತಲೇ ಇದ್ದ ತಾಯಿ
ಮುಖ ಮರೆಸಿಕೊಂಡು
ಓಡಾಡುತ್ತಿದ್ದ ತಮ್ಮ
(ಕಾಣುತ್ತಿಲ್ಲವಲ್ಲ ಅವನು)
ನಡುವೆ ಜನರ ಜೋರು
(ಅವರವರ ಚಿಂತೆ ಅವರವರಿಗೆ)
ದುಃಖ ಒತ್ತರಿಸಿ
ಮಾತೇ ಮೌನವಾಗಿ
ನೋಡುತ್ತಲೇ ಇದ್ದಳು
ಎಲ್ಲರಿಗೂ ಸಂಭ್ರಮ
ಈ ದಿನ ಅನುಪಮ

ಅಳು ನುಗ್ಗಿ ಬಂತು
(ಬಿಕ್ಕಳಿಸುತ್ತಾಳೆ)
ತಲೆಯೆತ್ತಿ ನೋಡುತ್ತಾಳೆ
ಎಲ್ಲರೂ ಇಲ್ಲೇ
ಇವರೂ ನನ್ನವರೇ
(ನಗುತ್ತಾಳೆ)
ನೆನಪಾಗುತ್ತಾಳೆ.

ನನ್ನಕ್ಕನ ಮದುವೆ ಮುಗಿದು ಮನೆಗೆ ಬಂದಾಗ ಮನೆಯೆಲ್ಲಾ ಭಣ ಭಣವೆನಿಸುತ್ತಿತ್ತು ಆಗ ತೋಚಿದ್ದು ಈ ಗೀಚುಗಳು . ಪದ್ಯ ಬಾಲಿಶವೆನಿಸಬಹುದು. ಸಹಿಸಿಕೊಳ್ಳಿ