ನನ್ನವಳು ಮತ್ತು ನಾನು

ನನ್ನವಳು ಮತ್ತು ನಾನು

ಬರಹ

ದಿನವೂ ನೋಡುತ್ತಿದ್ದೇನೆ
ಹೊಳೆವ ತಾರೆಯೆಡೆಗೆ
ಕೈಗೆ ಸಿಕ್ಕೀತೆಂಬ ಭ್ರಮೆಯಿಂದ
(ನಿಜ ಅದು ಭ್ರಮೆ)

ದೂರ ತೀರಕೆ ಸಾಗಿಬಿಡು
ಮರೆತು ಬಿಡು, ನಡೆದು ಬಿಡು
(ಸಾಧ್ಯವೇ ಇದು?)

ಅನುಭವಿಸಿದ್ದು ನೆನಪು,
ಕನವರಿಸಿದ್ದು ಒನಪು,
ಬೇಸರಿಸಿದ್ದು ಬಿಸುಪು,
ಜೀವದ ತುಂಬಾ ಇದೇ ಅಂಕ

ದೂರತೀರಕೆ ಸಾಗಿಬಿಡು
ಅಲೆಯಾಗಿ, ಕಲೆಯಾಗಿ ಬಿಡು

ಒಲವದೊಂದು ಕಂಪನ
ಹಣೆಗೊಂದು ಚುಂಬನ
(ನಿಜವೇ ಈ ಬಂಧನ?)
ಎಲ್ಲಿಂದಲೋ ಬಂದ ಹಕ್ಕಿ
ಮನದೊಳಗೆ ಮನೆಮಾಡಿ
ನೆನಪನುಳಿಸಿಹೋದಂತೆ

ದೂರತೀರಕೆ ಸಾಗಿ ಬಿಡು
ಚೆಲುವಾಗಿ, ಗೆಲುವಾಗಿ ಬಿಡು

ಮತ್ತದೇ ಬೇಸರಿಕೆ ಬರುವ ಮುನ್ನ
ಕಣ್ಣಂಚಲಿ ಹನಿ ಮೂಡವ ಮುನ್ನ
ಕೈ ಬೀಸಿ ಬೀಳ್ಕೊಡುವ ಮುನ್ನ
'ಜೋಪಾನ' ಎಂದೆನ್ನುವ ಮುನ್ನ
ನಿನ್ನೊಲವು ನಾನಾಗುವ ಮುನ್ನ

ದೂರ ತೀರಕೆ ಸಾಗಿ ಬಿಡು

ದಿನವೂ ನೋಡುತ್ತಲೇ ಇರುತ್ತೇನೆ
ಹೊಳೆವ ತಾರೆಯೆಡೆಗೆ
ಮತ್ತು
ನನ್ನೆದೆಯೊಳಗೆ