ನನ್ನೂರು ನನ್ನ ಜನ - ೧ ಮನಕೆ ಮೇವು

ನನ್ನೂರು ನನ್ನ ಜನ - ೧ ಮನಕೆ ಮೇವು

ಶ್ರೀಮತಿ ಚಂದ್ರಕಲಾ ನಂದಾವರ ಅಧ್ಯಾಪಿಕೆಯಾಗಿ, ಲೇಖಕಿಯಾಗಿ ಗುರುತಿಸಿಕೊಂಡವರು. ಮಂಗಳೂರಿನ ಹೃದಯಭಾಗದಲ್ಲಿರುವ ಗಣಪತಿ ಹೈಸ್ಕೂಲಿನಲ್ಲಿ ಅಧ್ಯಾಪಿಕೆಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕರಾವಳಿ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದವರು.
ಅವರು ಬರೆದಿರುವ, ಇದೇ ವರುಷ (೨೦೧೯) ಪ್ರಕಟವಾಗಿರುವ “ನನ್ನೂರು ನನ್ನ ಜನ” ಒಂದು ಅಪರೂಪದ ಪುಸ್ತಕ. (ಪ್ರಕಾಶಕರು: ಹೇಮಾಂಶು ಪ್ರಕಾಶನ, “ದೃಶ್ಯ", ಗೊಲ್ಲಚ್ಚಿಲ್, ದೇರೆಬೈಲು, ಮಂಗಳೂರು ೫೭೫೦೦೬) ಆತ್ಮಕಥನದಂತಿರುವ ಇಲ್ಲಿನ ಬರಹಗಳು ಅದರಾಚೆಗಿನ ವ್ಯಾಪಕ ವಿಷಯಗಳನ್ನು ಒಳಗೊಂಡಿದ್ದು ಓದುಗರ ಮನದಾಳದ ನೆನಪುಗಳಿಗೆ ಲಗ್ಗೆ ಹಾಕುತ್ತವೆ. ಈ ಬರಹಗಳು ವಾರ್ತಾಭಾರತಿ ಪತ್ರಿಕೆಯಲ್ಲಿ ಒಂದೂವರೆ ವರುಷ ಅಂಕಣವಾಗಿ ಪ್ರಕಟವಾಗಿದ್ದವು.
ತನ್ನ ಬದುಕು ಸಾಗಿದ ಬಗೆಯನ್ನು ತೆರೆದಿಡುತ್ತಲೇ ಚಂದ್ರಕಲಾ ನಂದಾವರ ಕಳೆದ ೬೦ ವರುಷಗಳಲ್ಲಿ ದಕ್ಷಿಣ ಕನ್ನಡದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳನ್ನು ದಾಖಲಿಸಿದ್ದಾರೆ. ಹೆಂಗರುಳಿನ ಭಾಷೆಯಲ್ಲಿ ಅವರು ನವಿರಾಗಿ ಬರೆದಿರುವ ಘಟನಾವಳಿಗಳನು ಓದುತ್ತಾ ಹೋದಂತೆ ನಮಗೆ ಆಪ್ತವೆನಿಸುತ್ತವೆ.
ಪರಸ್ಪರ ಸಜ್ಜನಿಕೆ, ಸಾಮುದಾಯಿಕ ಸೌಹಾರ್ದತೆಯಂತಹ ಜೀವನಮೌಲ್ಯಗಳನ್ನು ಎಲ್ಲರ ಮನದಲ್ಲಿಯೂ ಎಚ್ಚರಿಸುವಷ್ಟು ಶಕ್ತವಾಗಿವೆ ಅವರ ಬರಹಗಳು. ದಕ್ಷಿಣ ಕನ್ನಡದ ಮಂಗಳೂರು ಮತ್ತು ಸುತ್ತಲಿನ ಪ್ರದೇಶ ಹಾಗೂ ಇಲ್ಲಿನ ಜನರು, ಅವರ ಬದುಕಿನ ಬಗ್ಗೆ ಸಮೃದ್ಧ ಮಾಹಿತಿಯಿರುವ ಈ ಪುಸ್ತಕ, ಈಗಿನ ತಲೆಮಾರಿನವರು ಓದಲೇ ಬೇಕಾದ ಕೃತಿ. ಈ ಕಾರಣಕ್ಕಾಗಿ, ಇನ್ನು ಪ್ರತಿ ಭಾನುವಾರ ಇದರ ಅಧ್ಯಾಯಗಳು “ಸಂಪದ"ದಲ್ಲಿ ಪ್ರಕಟವಾಗಲಿವೆ. - ಸಂಚಾಲಕ
ನಿವೃತ್ತಿಯ ಈ ದಿನಗಳಲ್ಲಿ ಕುಳಿತಲ್ಲೇ ಕುಳಿತು ಹೊರಮನಸ್ಸು ಜಡವಾದಾಗ ಒಳಮನಸ್ಸು ಎಲ್ಲೆಲ್ಲೋ ಅಲೆದಾಡಿ ಬಚ್ಚಿಟ್ಟ ನೆನಪು ಗಳನ್ನು ಹುಡುಕಿ ಹುಡುಕಿ ಮೆಲುಕಾಡುವಾಗ ಒಣಗಿದ ಹುಲ್ಲಾದರೂ ಮೆಲುಕಾಡಿದಂತೆ ಹಸುರಿನ ಪರಿಮಳ, ರುಚಿ ಒಸರುವ ನೆನಪುಗಳು ಇಂದಿನ ಬದುಕನ್ನು ಉಸಿರಾಡುವಂತೆ ಮಾಡುತ್ತವೆ ಎಂದರೆ ತಪ್ಪಲ್ಲ. `ಹರಿವ ನದಿಗೆ ನೆನಪುಗಳ ಹಂಗಿಲ್ಲ’ ಎನ್ನುವುದು ಹಿರಿಯರ ಅನುಭವದ ಮಾತು. ಆದರೆ ಕೂಡುತ್ತಾ ಕಳೆಯುತ್ತಾ ಸಾಗುವ ಮನುಷ್ಯನ ಜೀವನದಲ್ಲಿ ನೆನಪುಗಳ ಬುತ್ತಿಯನ್ನು ಬಿಚ್ಚಿ ಉಣ್ಣುವ ಸುಖ ನದಿಗಿಲ್ಲವಲ್ಲಾ ಎಂದು ವ್ಯಥೆ ಪಡುವಂತಾಗುತ್ತದೆ. ಜೊತೆಗೆ ನೆನಪುಗಳ ಹಂಗಿನೊಂದಿಗೆ ಕನವರಿಸುವಾಗ ‘ಎನಿತು ಜೀವರಿಗೆ ಎನಿತು ಋಣಿಗಳೋ ನಾವು; ತಿಳಿದು ನೋಡಿದರೆ ಜೀವನವೆನ್ನು ವುದು ಋಣದ ಗಣಿಯೋ ತಾನು’ ಎನ್ನುವ ಕವಿವಾಣಿ ಅಕ್ಷರಶಃ ಸತ್ಯ ಎನ್ನುವುದು ಅರಿವಾಗದೆ ಇರದು. ಈ ಬದುಕಿನಲ್ಲಿ ಕೇಳಿದ ಮೆಚ್ಚುಗೆಯ ಮಾತುಗಳ ಸಂತಸದ, ನೋಡಿದ ಕಣ್ಗಳ ಸುಖದ ಕ್ಷಣಗಳು, ತಿಂದ ನಾಲಗೆಯ ಸವಿರುಚಿಯ ನೆನಪುಗಳು ಅಷ್ಟೇ ಆಗಿ ಉಳಿಯದೆ ವ್ಯಕ್ತಿತ್ವ ನಿರ್ಮಾಣದಲ್ಲಿ ಮುಖ್ಯವಾದ ಜೀವ ದ್ರವ್ಯಗಳಾಗಿ, ಬದುಕಿಗೊಂದು ಅರ್ಥ ನೀಡಿ ಇಂದಿಗೂ ನಮ್ಮೊಂದಿಗೆ ವಿಹರಿಸುತ್ತವೆ. ನಮ್ಮನ್ನು ಚೇತೋಹಾರಿಯಾಗಿಡುವ ಈ ಕ್ಷಣಗಳು ಸಂಕುಚಿತ, ಸ್ವಾರ್ಥ, ಭ್ರಷ್ಟಾಚಾರಗಳಿಂದ ಕಲುಷಿತವಾದ ಇಂದಿನ ವಾತಾವರಣದಲ್ಲಿಯೂ ಉಸಿರಾಡುವಂತೆ ಮಾಡುತ್ತವೆ. ಜೀವಪರ ವಾಗಿ ನಿಲ್ಲುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. “ನನ್ನ ಶ್ವಾಸವಿರುವುದು ನಿಮ್ಮ ವಿಶ್ವಾಸದಲ್ಲಿ” ಎನ್ನುವ ನನ್ನ ಗುರುಗಳಾದ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರ ಮಾತಿನ ಸತ್ಯದ ಅರಿವಾಗುತ್ತದೆ.  ಜೊತೆಗೆ ವಿಶ್ವಾಸವೇ ಇಲ್ಲದೆ ಅನುಮಾನಗಳೇ ಹುತ್ತವಾಗಿ ಬೆಳೆದು ನಮ್ಮ ಚಿತ್ತವನ್ನು ಕೆಡಿಸುವ, ಕಾಡುವ ಖಿನ್ನತೆಯಿಂದ ಹೊರಬರುವುದಕ್ಕೆ ಇರುವ ಬಹಳ ಒಳ್ಳೆಯ ದಾರಿ ಈ ಜೀವನದ ಹಂಗುಗಳ ಹಂದರದ ಚಿತ್ತಾರ ಬಿಡಿಸುವುದು. ಈ ಚಿತ್ತಾರ ಈಗ ನಿಮ್ಮ ಮುಂದಿದೆ.
ಮಂಗಳೂರಿನ ಕದ್ರಿ ಗ್ರಾಮದ ಬಿಜೈ ವಾರ್ಡ್ ಇಂದಿನಂತೆ ಅಂದು 1950ರ ಆಸುಪಾಸಿನಲ್ಲೂ ಸಭ್ಯ ಸಮಾಜದ ಊರು. ಸಾಕಷ್ಟು ಹಣವಂತರ ಊರು ಇದಾಗಿಲ್ಲ ದಿದ್ದರೂ ವಿದ್ಯಾವಂತರ ಊರು. ಇಂದಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಜಂಕ್ಷನ್ ಅಂದಿನ ಕಾವೂರು ಕ್ರಾಸ್. ಈ ರಸ್ತೆಯ ಪೂರ್ವಕ್ಕೆ ಬಿಜೈ ಚರ್ಚನ್ನು ಹಾದು ಕದ್ರಿ ಗುಡ್ಡೆಯ ಬುಡದವರೆಗೆ, ಉತ್ತರಕ್ಕೆ ಕೊಟ್ಟಾರ ಕ್ರಾಸ್ ಜಂಕ್ಷನ್‍ವರೆಗಿನ ಕಾಪಿಕಾಡಿನವರೆಗಿನ ಎರಡು ಮುಖ್ಯ ರಸ್ತೆಗಳನ್ನೊಳಗೊಂಡ ವ್ಯಾಪ್ತಿಯ ಒಳಗಿನ ಪರಿಚಯ ನನ್ನ ಬಾಲ್ಯ ಕಾಲದ್ದು. ಅಂದಿನ ಮಣ್ಣಿನ ರಸ್ತೆಯಲ್ಲಿ ಎತ್ತಿನ ಗಾಡಿಗಳ ಗಂಟೆಯ ಸದ್ದು, ಅಪರೂಪಕ್ಕೆ ಕುದುರೆ ಜಟಕಾಗಳ ಸದ್ದು ಕೇಳಿಸುತ್ತಿತ್ತು. ಈ ನಡುವೆ ಉತ್ತರದಲ್ಲಿರುವ ಬಾಳೆಬೈಲನ್ನು ಹಾದು ದಕ್ಷಿಣಕ್ಕೆ ಕೊಡಿಯಾಲ್‍ಬೈಲ್‍ಗೆ ಹರಿದು ಮುಂದೆ ಪಶ್ಚಿಮಕ್ಕೆ ಮುಖಮಾಡಿ ಬೈಲ್ ಸಾಗರಕ್ಕೆ ಸಾಗುವ ತಿಳಿನೀರಿನ ವರ್ಷದುದ್ದಕ್ಕೂ ಹರಿಯುವ ದೊಡ್ಡ ತೋಡು. ಇದರ ಅಕ್ಕಪಕ್ಕಗಳಲ್ಲಿ ಮುಖ್ಯವಾಗಿ ಬತ್ತದ ಗದ್ದೆ, ತೆಂಗಿನ ತೋಟ, ನಡುವೆ ಕಂಗಿನ ಗಿಡಗಳು, ವೀಳ್ಯದೆಲೆ ಬಳ್ಳಿಗಳೂ ಕಂಗೊಳಿಸಿದಂತೆ ದಟ್ಟವಾದ ಮರ, ಗಿಡ, ಬಳ್ಳಿಗಳಿಂದ ಕಂಗೊಳಿಸುವ ಬನಗಳು ಇದ್ದುವು. ಈ ಬಿಜೈ ಎನ್ನುವ ಊರಿನ ಪೂರ್ವಕ್ಕೆ ಕದ್ರಿಗುಡ್ಡೆ ಯಿದ್ದರೆ ಪಶ್ಚಿಮಕ್ಕೆ ಡಬ್ಬಲ್ ಗುಡ್ಡೆ, ಪಾಯಿಸರಗುಡ್ಡೆ, ಚಿಲಿಂಬಿ ಗುಡ್ಡೆಗಳಿದ್ದು ಇವುಗಳನ್ನೇರಿ ಇಳಿದರೆ ಲಾಲ್‍ಬಾಗ್, ಲೇಡಿಹಿಲ್, ಉರ್ವಾ ಎಂಬ ಊರುಗಳಿಗೆ ಸೇರಬಹುದಾಗಿತ್ತು. ಹೀಗೆ ಗುಡ್ಡಗಳ ನಡುವೆ ಇರುವ ತಗ್ಗಿನ ಜನ ಬತ್ತದ ಗದ್ದೆಗಳಲ್ಲಿ, ಮಲ್ಲಿಗೆ ತೋಟಗಳಲ್ಲಿ ದುಡಿಯುವ ಕೃಷಿಕರಾಗಿದ್ದಂತೆ ಹೆಚ್ಚಿನ ಜನರು ಹಂಚಿನ ಕಾರ್ಖಾನೆಗೆ, ಗೇರುಬೀಜ ಕಾರ್ಖಾನೆಗೆ, ಏಲಕ್ಕಿ ಕಾರ್ಖಾನೆಗೆ ಹೋಗುವ ಕಾರ್ಮಿಕರು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಜನರಿದ್ದಂತೆ ಸಮ ಸಮವಾಗಿ ಕ್ರಿಶ್ಚಿಯನ್ ಸಮುದಾಯದವರು ಇದ್ದರು. ಮುಸ್ಲಿಮರ ಜನಸಂಖ್ಯೆ ತೀರಾ ಕಡಿಮೆಯೆಂದರೆ ಸರಿ. ಆದರೆ ಇದ್ದ ಒಂದು ಮನೆ ಹಲವಾರು ಎತ್ತಿನ ಗಾಡಿಗಳನ್ನು ಇಟ್ಟುಕೊಂಡಿದ್ದ ಬ್ಯಾರಿ ಸಮುದಾಯದವರದ್ದು. ಜಿನಸು ವ್ಯಾಪಾರದ ಸಾಗಣೆ ಇವರದ್ದೇ ಆಗಿತ್ತು. ಹಿಂದುಳಿದ ವರ್ಗಗಳಲ್ಲಿ ಬಹುಮುಖ್ಯರು ಬಿಲ್ಲವ ಸಮುದಾಯದವರು. ಸ್ವಂತ ಮನೆ, ಹಿತ್ತಿಲುಗಳನ್ನುಳ್ಳವರಾಗಿದ್ದು ತಮ್ಮ ಬಂಧು ಬಾಂಧವರಿಗೆ ಬಿಡಾರಗಳನ್ನು ಕೊಟ್ಟು ಸಹಕರಿಸುತ್ತಿದ್ದರು. ದೇವಾಡಿಗ ಮನೆತನಗಳೂ ಇದ್ದು ಇವರೂ ಕೂಡಾ ತಮ್ಮ ಆಪ್ತೇಷ್ಟರಿಗೆ ಬಿಡಾರಗಳನ್ನು ನೀಡಿದ್ದರು. ಬಿಜೈಯ ‘ನೋಡು’ ಎನ್ನುವಲ್ಲಿ ಎತ್ತರದಿಂದ ಬೀಳುವ ಜಲಪಾತ ಹಾಗೂ ಹರಿಯುವ ತೋಡು ಇದ್ದುದರಿಂದ ಬಿಜೈಯ ಬಟ್ಟಗುಡ್ಡೆ (ಬಟ್ಟೆಯ ಗುಡ್ಡೆ), ಡಬ್ಬಲ್‍ಗುಡ್ಡೆ ಹಾಗೂ ಕದ್ರಿಯ ಗುಡ್ಡೆಗಳ ಕಾರಣಕ್ಕೆ ಬೇರೆ ಬೇರೆ ಮೂಲ ಸ್ಥಾನಗಳಿಂದ ಬಂದ ಮಡಿವಾಳರು ಇಲ್ಲಿ ಬಂದು ಕ್ರಿಶ್ಚಿಯನ್ನರ, ಬಿಲ್ಲವರ ಬಿಡಾರಗಳಲ್ಲಿ ಬಾಡಿಗೆದಾರರಾಗಿ ನೆಲೆಸಿದ್ದರು. ಇವರಲ್ಲದೆ ಕಾಪಿಕಾಡ್‍ನಲ್ಲಿ ನೇಕಾರರ ಮನೆಯೊಂದಿದ್ದು, ಇಲ್ಲಿ ಮಗ್ಗದಲ್ಲಿ ನೇಯುವ ರಾಟೆಯಲ್ಲಿ ನೂಲುವ ನೇಕಾರರು ಕೂಡಾ ಈ ಮನೆಯ ಆಸುಪಾಸಿನಲ್ಲಿ ಕ್ರಿಶ್ಚಿಯನ್ನರ, ಬಿಲ್ಲವರ ಮನೆಗಳಲ್ಲಿ ಬಾಡಿಗೆದಾರರಾಗಿದ್ದರು. ಇವರಲ್ಲದೆ ಕ್ಷೌರಿಕ ಸಮುದಾಯದವರು, ಕುಲಾಲ ಸಮುದಾಯದ ಕೆಲವು ಮನೆಗಳು ಕ್ರಿಶ್ಚಿಯನ್, ಬಿಲ್ಲವ, ದೇವಾಡಿಗರ ಬಾಡಿಗೆದಾರರಾಗಿ ಇದ್ದುದು ಹಾಗೂ ಇವರೆಲ್ಲರೂ ಪೇಟೆಯೆನ್ನುವ ಮಂಗಳೂರಿನ ಆಸುಪಾಸಿನಲ್ಲಿ ತಮ್ಮ ಕುಲಕಸುಬುಗಳನ್ನು, ಜೊತೆಗೆ ಕಾರ್ಖಾನೆಗಳಲ್ಲಿ, ಕೃಷಿ ಕೆಲಸಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ನನ್ನ ತಿಳುವಳಿಕೆ ಇದ್ದ ದಿನದಿಂದಲೂ ಈ ಕೆಲಸಗಳಲ್ಲಿ ಗಂಡು ಹೆಣ್ಣು ಭೇದವಿಲ್ಲದೆ ದುಡಿಯುವ ಶ್ರಮಿಕ ವರ್ಗದವರೇ ಆಗಿದ್ದರು.
ಬಹಳ ವಿರಳವಾಗಿ ಶಿವಳ್ಳಿ ಬ್ರಾಹ್ಮಣರ ಮನೆಗಳು ಬಾಳೆಬೈಲಿನಲ್ಲಿ, ಕಾಪಿಕಾಡ್‍ನಲ್ಲಿ ಇದ್ದು ಇಲ್ಲಿನ ಕೆಲವು ಹಿರಿಯರು ಆ ಕಾಲಕ್ಕೆ ವಕೀಲರಾಗಿದ್ದರು. ಒಂದಿಬ್ಬರು ಶಾಲಾ ಅಧ್ಯಾಪಕರಿದ್ದರು. ಒಬ್ಬರು ಡಾಕ್ಟರ್‍ರಿದ್ದರು. ಹೊಟೇಲ್‍ಗಳಿದ್ದ ಹೊಟೇಲ್ ಮಾಲಕ ರಿದ್ದರು. ಬಹಳ ಕಡಿಮೆ ಜನಸಂಖ್ಯೆಯಲ್ಲಿ ಬಂಟರ ಮನೆಗಳು ಇದ್ದು, ಒಂದೆರಡು ಮನೆಗಳು ಸ್ವಂತವಾಗಿ ಉಳಿದವರು ಇತರರಂತೆ ಕ್ರಿಶ್ಚಿಯನ್ನರ ಬಿಡಾರಗಳಲ್ಲಿದ್ದು ದುಡಿಯುವ ವರ್ಗದವರಾಗಿದ್ದರು.
ಕೊಂಕಣಿಗರ ಸಂಖ್ಯೆಯೂ ಕಡಿಮೆಯೇ. ಬಾಳಿಗಾ ಸ್ಟೋರ್‍ನ ಬಾಳಿಗಾ ಸಹೋದರರು ಇಲ್ಲಿ ನೆಲೆಸಿರಲಿಲ್ಲ. ಕಾವೂರು ಕ್ರಾಸ್‍ನಲ್ಲಿ ಕಮಲಾಕ್ಷ ನಾಯಕ್‍ರ ಜೀನಸಿನ ಅಂಗಡಿ ಇದ್ದು ಕಮಲಾಕ್ಷ ನಾಯಕರು ಚರ್ಚ್ ದಾರಿಯಲ್ಲಿ ಸ್ವಂತ ಮನೆ ಹಿತ್ತಿಲು ಹೊಂದಿದವರಾಗಿದ್ದರು. ಕಾಪಿಕಾಡಿನಲ್ಲಿದ್ದ ಜೀನಸಿನ ಅಂಗಡಿ ಮಾಲಕರಾದ ತಾರನಾಥರು ಡಬ್ಬಲ್‍ಗುಡ್ಡೆಯ ಬಿಜೈಯ ಬದಿಗಿದ್ದ ಗುಡ್ಡದಲ್ಲಿದ್ದವರು ಮುಂದೆ ಕಾಪಿಕಾಡ್ ನಲ್ಲಿ ಸ್ವಂತ ಮನೆ ಮಾಡಿದರು. ಇವರಲ್ಲದೆ ಸದಾನಂದನ ಅಂಗಡಿ ಎಂದು ಪ್ರಸಿದ್ಧವಾದ ಅಂಗಡಿಯಾಗಿದ್ದು ಜೀನಸು ಹೊರತುಪಡಿಸಿ ಉಳಿದೆಲ್ಲ ತರಕಾರಿ, ಹಣ್ಣು, ಬ್ರೆಡ್ಡು, ಬಿಸ್ಕತ್ತು, ಸೋಡಾ ಮೊದಲಾದವುಗಳ ಅಂಗಡಿಯಲ್ಲಿದ್ದ ಸಹೋದರರೆಲ್ಲರೂ ಕಾಪಿಕಾಡಿನಲ್ಲಿ ಬಿಡಾರವೊಂದರಲ್ಲಿದ್ದು, ಇಂದಿಗೂ ಕಮಲಾಕ್ಷ ನಾಯಕರ ಅಂಗಡಿಯೊಂದನ್ನು ಬಿಟ್ಟು ಉಳಿದ ಅಂಗಡಿಗಳು ಇದ್ದು ಅದೇ ಮನೆಯವರು ವ್ಯಾಪಾರ ನಡೆಸುತ್ತಿದ್ದಾರೆ.
ಬಹಳ ಮುಖ್ಯವಾಗಿ ಗುರುತಿಸಲ್ಪಡುವ ಇನ್ನೆರಡು ಸಮುದಾಯಗಳು ದಲಿತ ಸಮುದಾಯಗಳು. ಕಾಪಿಕಾಡ್‍ನಲ್ಲಿರುವ ಕಾಲನಿ ರಸ್ತೆಯ ಪೂರ್ವ ಪಶ್ಚಿಮಕ್ಕೆ ಹರಡಿರುವ ವಿಸ್ತಾರವಾದ ತಗ್ಗಿನಲ್ಲಿ ಹಾಗೂ ಗುಡ್ಡದಲ್ಲಿ ಮುಂಡಾಲ ಸಮುದಾಯದವರಿದ್ದರೆ ಪಾೈಸರಗುಡ್ಡೆ, ಚಿಲಿಂಬಿ ಗುಡ್ಡದಲ್ಲಿ ಕೊರಗರ ಸಮುದಾಯವು ನೆಲೆಸಿತ್ತು. ಕಾಪಿಕಾಡ್ ಕಾಲನಿಯ ಬಹುತೇಕ ಪುರುಷರು, ಮಹಿಳೆಯರು ಮುನಿಸಿಪಾಲಿಟಿಯ ಶಾಲೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಸೇವಕ ವೃತ್ತಿಯಲ್ಲಿದ್ದಂತೆಯೇ ಅಧ್ಯಾಪಕ, ಅಧ್ಯಾಪಿಕೆಯರೂ ಇದ್ದರು. ಕೊರಗರು ಬುಟ್ಟಿ ಹೆಣೆವ ಕಾಯಕದೊಂದಿಗೆ ಕೆಲವರಷ್ಟೇ ಮುನಿಸಿಪಾಲಿಟಿಯಲ್ಲಿ ಡಿಡಿಟಿ ಸಿಂಪಡಿಸುವ ಸೇವೆಯಲ್ಲಿದ್ದರು. ಹೀಗೆ ಬಹು ಜಾತಿಯ, ಜನ ಸಮುದಾಯಗಳ ಹೊಕ್ಕು ಬಳಕೆ, ಪರಿಚಯ, ಸ್ನೇಹ ಅಧ್ಯಾಪಕರಾದ ನನ್ನ ತಂದೆ ಕೊಂಡಾಣ ವಾಮನರದ್ದು. ಒಳ್ಳೆಯ ಸ್ನೇಹಶೀಲೆ, ಮಾತುಗಾರ್ತಿಯಾದ ಅಮ್ಮನಿಗೂ ಬಿಜೈಯ ಕಾಪಿಕಾಡ್‍ನಿಂದ ಕಾವೂರು ಕ್ರಾಸ್‍ಗೆ ಹೋಗಲು (ತಾಯಿ ಮನೆಗೆ) ದಾರಿಯುದ್ದಕ್ಕೂ ಎಲ್ಲರೂ ಮಾತಿಗೆ ಸಿಗುವವರೇ.
ಈ ಊರಿನ ವ್ಯಾಪ್ತಿಯೊಳಗೆ ಎರಡು ಶಾಲೆಗಳಲ್ಲಿ ಒಂದು ಕಾಪಿಕಾಡು ಕಾಲನಿ ಯೊಳಗೆ ಇದ್ದ ಮುನಿಸಿಪಾಲಿಟಿ ಹಿರಿಯ ಪ್ರಾಥಮಿಕ ಶಾಲೆ. ಇನ್ನೊಂದು ಬಿಜೈ ಚರ್ಚ್‍ಗೆ ಸೇರಿದ ಲೂಡ್ರ್ಸ್ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಗಳ ಕಾರಣದಿಂದಲೇ ಈ ಊರಿನ ಹೆಚ್ಚಿನ ಮಂದಿ ವಿದ್ಯಾವಂತರು ಆಗಿದ್ದರೆಂದರೆ ತಪ್ಪಲ್ಲ. ನನ್ನ ಅಮ್ಮ ಬಿಜೈ ಲೂಡ್ರ್ಸ್ ಶಾಲೆಯ ವಿದ್ಯಾರ್ಥಿನಿ. ನಾನು ಕಾಪಿಕಾಡು ಶಾಲೆಯ ವಿದ್ಯಾರ್ಥಿನಿ. ನನ್ನ ಬಾಲ್ಯದಲ್ಲಿ ಶಾಲೆಗೆ ಹೋಗದ ಮಕ್ಕಳು ಇದ್ದರು ಎಂದೇ ನನಗೆ ಅನ್ನಿಸುವುದಿಲ್ಲ. ಎಲ್ಲರ ಮನೆಯ ಮಕ್ಕಳು ಶಾಲೆಗೆ ಹೋಗುತ್ತಿದ್ದುದ್ದನ್ನು ಗಮನಿಸಿದ್ದೇನೆ. ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸ ಪಡೆದ ಅಕ್ಷರಸ್ಥರ ಊರು ನನ್ನೂರು ಎಂದರೆ ಅತಿಶಯೋಕ್ತಿ ಅಲ್ಲ. ಕಾಪಿಕಾಡ್ ಕಾಲನಿಯಿಂದಲೂ ಕೊರಗರ ಗುಡ್ಡದ ಮನೆಗಳಿಂದಲೂ ವಿದ್ಯಾರ್ಥಿ ಗಳು ಬರುತ್ತಿದ್ದುದನ್ನು ಗಮನಿಸಿದರೆ ನಮ್ಮ ಜಿಲ್ಲೆಯ ಸಾಕ್ಷರತೆಗೆ ಶಿಕ್ಷಣವಂತರ ಹಿರಿಮೆಗೆ ನನ್ನೂರು ಕೂಡಾ ಕಾರಣ ಎಂದೇ ತಿಳಿದಿದ್ದೇನೆ.
ಈ ಊರಿನಲ್ಲಿ ದೇವಸ್ಥಾನ ಇಲ್ಲ. ಬಿಜೈ ಚರ್ಚ್ ಇದೆ. ಮಸೀದಿ ಇಲ್ಲ. ಆದರೆ ದೈವಸ್ಥಾನಗಳು ಇದ್ದು ಮುಖ್ಯವಾಗಿ ಕಾಪಿಕಾಡಿನಲ್ಲಿದ್ದುದು, ಇಂದು ಬಹಳ ಸುಂದರವಾದ ವ್ಯವಸ್ಥೆಯಲ್ಲಿದೆ. ಭಜನಾ ಮಂದಿರವೂ ಇರಲಿಲ್ಲವಾದರೂ ಕೆಲವೊಂದು ಅಬ್ರಾಹ್ಮಣರ ಮನೆಗಳಲ್ಲಿ ಸಾಂದರ್ಭಿಕವಾಗಿ ಭಜನಾ ಕಾರ್ಯಕ್ರಮಗಳು ನಡೆಯುತ್ತಿದ್ದುವು. ಆಗ ಅಲ್ಲಿಗೆ ಜಾತಿ ಭೇದವಿಲ್ಲದೆ ಅವರ ಬಂಧುಗಳೊಂದಿಗೆ ಉಳಿದವರೂ ಹೋಗಿ ಬರುವ ಪರಿಪಾಠ ಇತ್ತು.
ಧಾರ್ಮಿಕ ಉತ್ಸವಗಳೆಂದರೆ ಚರ್ಚ್‍ನಲ್ಲಿ ಸಾಂತ್‍ಮಾರಿ ಹಬ್ಬ, ತೆನೆ ಹಬ್ಬ, ಕ್ರಿಸ್ಮಸ್ ಹಬ್ಬಗಳಾದರೆ ದೈವಸ್ಥಾನದಲ್ಲಿ ನೇಮ ನಡೆಯುತ್ತಿತ್ತು. ನಾಗರ ಪಂಚಮಿಯ ಹಿನ್ನೆಲೆಯಲ್ಲಿ ಬಾಳೆಬೈಲಿನ ತಂತ್ರಿಗಳ ಮನೆ ಹಾಗೂ ಆನೆಗುಂಡಿಯ ದಕ್ಷಿಣಕ್ಕೆ ಹಿಂದೂ ರುದ್ರಭೂಮಿಯ ಪೂರ್ವಕ್ಕೆ ಇದ್ದ ಡಾ. ರಾಮಕೃಷ್ಣರ ಮನೆಯಲ್ಲಿ ನಾಗಬನ ನಿಜವಾದ ಅರ್ಥದಲ್ಲಿ ದೊಡ್ಡ ದೊಡ್ಡ ಮರ, ಗಿಡ, ಬಳ್ಳಿಗಳಿಂದ ಕೂಡಿದ ಪ್ರಕೃತಿ ಸಹಜ ಬನ ಇದ್ದು ಬಿಜೈ ಊರಿನ ಜನ ಅಲ್ಲಿ ನಾಗನಿಗೆ ಹಾಲೆರೆಯಲು ಹೋಗುತ್ತಿದ್ದರು.
ಹೀಗೆ ಜಾತಿ ಮತಗಳ ವೈವಿಧ್ಯಗಳೊಂದಿಗೆ ಒಬ್ಬರ ಬದುಕಿಗೆ ಇನ್ನೊಬ್ಬರ ಸಹಕಾರವಿಲ್ಲದೆ ಬದುಕಲು ಸಾಧ್ಯವಿಲ್ಲದ ಆ ದಿನಗಳು ಸೌಹಾರ್ದದ ದಿನಗಳು ಆಗಿದ್ದವು ಎನ್ನುವುದು ಮನಸ್ಸಿನ ಸಂತೋಷವನ್ನು ಇಂದಿಗೂ ಹೆಚ್ಚಿಸುವ ನೆನಪುಗಳು. ಆದರೆ ಇಂದಿನ ವರ್ತಮಾನದಲ್ಲಿಯೂ ಇಲ್ಲಿನ ಜನ ಹಿಂದಿನ ಆ ಸ್ನೇಹ ಸೌಹಾರ್ದಗಳನ್ನು ಅಂದಿನಂತೆ ಅಲ್ಲದಿದ್ದರೂ ಜಾತಿ, ಮತ, ಧರ್ಮಗಳ ನಡುವಿನ ದ್ವೇಷಗಳಿಗೆ ಆಸ್ಪದ ಕೊಡದೆ ಸಾಮರಸ್ಯದ ಊರಾಗಿಯೇ ಉಳಿಸಿಕೊಂಡಿದ್ದಾರೆ ಎನ್ನುವುದು ಅದೇ ಕಾಪಿಕಾಡಿನ ಡಾ. ಕಾಶ್ಮೀರ್ ಮಥಾಯಸ್ ರಸ್ತೆಯಲ್ಲಿ ಈಗಲೂ ಓಡಾಡುವ ನನಗೆ ನಿಜವಾಗಿಯೂ ಸಂತೃಪ್ತಿಯ ಅನುಭವಗಳು. ಹೀಗೆ ಈ ಊರು ಆಧುನಿಕವಾದ ಎಲ್ಲಾ ವ್ಯವಸ್ಥೆಗಳನ್ನು ತನ್ನದಾಗಿಸಿಕೊಂಡರೂ ಊರಿನ ಆತ್ಮವಾದ ಸೌಹಾರ್ದ ಸಾಮರಸ್ಯವನ್ನು ಮುಂದೆಯೂ ಉಳಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.