ನನ್ನೂರು ನನ್ನ ಜನ - ೪ ಬದುಕುತ್ತಲೇ ಬದುಕಗೊಟ್ಟವರು
ಊರು ಎಂದ ಮೇಲೆ ಅಲ್ಲಿರುವ ಮಂದಿ ತಾವು ಬದುತ್ತಿರುವುದರೊಂದಿಗೆ ಇತರರ ಬದುಕಿಗೂ ಅಗತ್ಯವಾಗಿ ಬದುಕುವವರೇ ಆಗಿರುತ್ತಾರೆ. ಡಾಕ್ಟರರು ವಕೀಲರು ಒಂದು ಸಮಾಜದಲ್ಲಿ ಊರಿನಲ್ಲಿ ಗಣ್ಯರಾಗಿದ್ದಂತೆಯೇ ಅವರಿಗಿಂತ ಜನರೊಂದಿಗೆ ಹೆಚ್ಚು ಹೊಕ್ಕು ಬಳಕೆಯಿರುವವರು ಅಧ್ಯಾಪಕರು. ಬಿಜೈಯಲ್ಲಿ ಅಧ್ಯಾಪಕ, ಅಧ್ಯಾಪಿಕೆಯರ ಸಂಖ್ಯೆ ಬಹಳ ಇತ್ತು. ಕಾಪಿಕಾಡ್ ರಸ್ತೆಯಲ್ಲಿ ಹಿರಿಯರಾದ ನಾಗಮ್ಮ ಟೀಚರ್ ಕಾಪಿಕಾಡು ಶಾಲೆಯಲ್ಲಿಯೇ ಅಧ್ಯಾಪಿಕೆಯಾಗಿದ್ದವರು. ತಾರಾನಾಥರ ಅಂಗಡಿಯೆದುರು ಸ್ವಂತ ಮನೆ ಹಿತ್ತಿಲು ಇದ್ದು ಬಹಳ ವರ್ಷ ಸೇವೆಸಲ್ಲಿಸಿ ನಿವೃತ್ತರಾದರು. ಅಲ್ಲಿಯೇ ಇದ್ದ ಓಣಿಯೊಳಗಿನ ಮನೆಯ ಇಬ್ಬರು ಅಕ್ಕ ತಂಗಿಯರು ಶಕುಂತಳಾ ಮತ್ತು ವಿಮಲಾ ಟೀಚರ್ರವರು ಕೂಡಾ ಸ್ವಂತ ಮನೆ ಹೊಂದಿದ್ದು ಈಗಲೂ ವಿಮಲಾ ಟೀಚರ್ ಕಾಪಿಕಾಡ್ ರಸ್ತೆಯಲ್ಲಿನ ಇನ್ನೊಂದು ಓಣಿಯಲ್ಲಿ ಸ್ವಂತ ಮನೆ ಹೊಂದಿದ್ದು ಇದೀಗ ನಿವೃತ್ತರು. ಇವರು ಮಂಗಳೂರು ಮುನಿಸಿಪಲ್ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಕಾಪಿಕಾಡು ಶಾಲೆಯಲ್ಲಿಯೂ ಸೇವೆ ಸಲ್ಲಿಸಿ ನಿವೃತ್ತರಾದವರು. ಶಕುಂತಳಾ ಟೀಚರ್ ಈಗಿನ ಡಯಟ್ ಶಾಲೆ, ಅಂದರೆ ಹುಡುಗರ ಶಿಕ್ಷಕ ತರಬೇತಿ ಶಾಲೆಯಲ್ಲಿ ಅಧ್ಯಾಪಿಕೆಯಾಗಿ ವಿವಾಹವಾಗಿ ದೂರದ ಊರಿನಲ್ಲಿ ನೆಲೆಸಿದ್ದಾರೆ. ಆನೆಗುಂಡಿಯ ಎದುರಿನ ಎತ್ತರದ ಗುಡ್ಡದಲ್ಲಿ ಸಿಪ್ರಿಯನ್ ಮತ್ತು ಅವರ ಮಡದಿ ಬಿಜೈ ಲೂಡ್ರ್ಸ್ ಶಾಲೆಯ ಶಿಕ್ಷಕ ಶಿಕ್ಷಕಿಯರು. ನನ್ನ ಅಮ್ಮನ ಶಿಕ್ಷಕರೂ ಹೌದು. ಸಿಪ್ರಿಯನ್ ಸರ್ ಕಚ್ಚೆ ಪಂಚೆ ಹಾಕಿ ಕೋಟು ಹಾಕುತ್ತಿದ್ದರು. ಅವರು ಪ್ರಸಿದ್ಧ ಪಾಶ್ಚಾತ್ಯ ವಯೋಲೀನಿಸ್ಟ್ ಆಗಿದ್ದರು. ಸಿಪ್ರಿಯನ್ ಅವರ ತಮ್ಮನೂ ಲೂಡ್ರ್ಸ್ ಶಾಲೆಯ ಶಿಕ್ಷಕರೇ.
ಬಿಜೈ ಲೂಡ್ರ್ಸ್ ಶಾಲೆಯ ಇನ್ನೂ ಅನೇಕ ಮಂದಿ ಶಿಕ್ಷಕಿಯರು ಬಿಜೈ ಚರ್ಚ್ ಬಳಿಯಲ್ಲಿ ಆನೆಗುಂಡಿಯ ಒಳಭಾಗದಲ್ಲಿ ಸ್ವಂತ ಮನೆ, ಗದ್ದೆ ತೋಟಗಳಿದ್ದವರು. ಹಾಗೆಯೇ ಅವರಲ್ಲಿ ಅನೇಕರು ಅವಿವಾಹಿತ ಮಹಿಳೆಯರು. ಈ ಶಾಲೆಯ ಇನ್ನೊಬ್ಬ ಹಿರಿಯ ಅಧ್ಯಾಪಿಕೆ ಲಿಲ್ಲಿ ಪಿಂಟೋ ಕಾಪಿಕಾಡಿನಲ್ಲಿದ್ದರು. ಇವರೆಲ್ಲರೂ ಅಂದಿನ ದಿನಗಳಲ್ಲಿ ನಡೆದೇ ಶಾಲೆಗೆ ಹೋಗಿ ಬರುತ್ತಿದ್ದುದರಿಂದ ನಾವೂ ಅವರ ಜೊತೆ ಮಾತಾಡಿಕೊಂಡು ಹೋಗುತ್ತಿದ್ದ ದಿನಗಳು ನಮ್ಮ ಪಾಲಿಗೆ ಖುಷಿಯ ದಿನಗಳು. ಕಾಪಿಕಾಡ್ ಶಾಲೆಯಲ್ಲಿದ್ದ ಇಬ್ಬರಲ್ಲಿ ಒಬ್ಬರು ಬಾಳೆಬೈಲಿನವರಾಗಿದ್ದು ಕಚ್ಚೆ ಪಂಚೆಯ ಉದ್ದನೆಯ ಶೆಂಡಿ ಭಟ್ರು ಮಾಸ್ಟರ್. ಹೆಸರು ಮರೆತಿದ್ದೇನೆ. ಇನ್ನೊಬ್ಬರು ಶ್ರೀನಿವಾಸ ಮಾಸ್ಟ್ರು, ಆನೆಗುಂಡಿಯವರಾಗಿದ್ದರೆ, ರಂಗ ಮಾಸ್ಟ್ರು, ಕೃಷ್ಣ ಮಾಸ್ಟ್ರು ಕಾಫಿಕಾಡು ಕಾಲನಿಯಲ್ಲಿ ವಾಸಿಸುತ್ತಿದ್ದರು. ಹಾಗೆಯೇ ನನ್ನ ಮನೆಯಲ್ಲಿ ನನ್ನ ಅಪ್ಪ ಕೊಂಡಾಣ ವಾಮನರು ಉರ್ವ ಚರ್ಚ್ ಶಾಲೆ ಸೈಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಚಿಕ್ಕಪ್ಪ ಕೊಂಡಾಣ ಶ್ಯಾಮ ಮಾಸ್ಟ್ರು ಕುದ್ರೋಳಿಯ ಉರ್ದು ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರು. ಮುಂದೆ ಕಾಪಿಕಾಡಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಕಾಪಿಕಾಡಿನಲ್ಲಿದ್ದ ಇನ್ನೊಬ್ಬ ಶಿಕ್ಷಕಿ ಮುನ್ಸಿಪಲ್ನ ಇತರ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಮುಂದೆ ಕಾಪಿಕಾಡ್ ಶಾಲೆಯಲ್ಲಿಯೂ ಸೇವೆ ಸಲ್ಲಿಸಿದವರು ಸೀತಾ ಟೀಚರ್. ಹೀಗೆ ಬಿಜೈ ಊರಲ್ಲಿ ಎರಡು ಶಾಲೆಗಳಿದ್ದುದರಿಂದ ಇಲ್ಲಿ ಶಿಕ್ಷಕ, ಶಿಕ್ಷಕಿಯರ ಸಂಖ್ಯೆಯೂ ಹೆಚ್ಚೇ ಇತ್ತು. ಶಿಕ್ಷಕರೆಂದರೆ ಊರಿಗೇ ಮಾದರಿಗಳು. ಈ ಎಲ್ಲಾ ಶಿಕ್ಷಕ, ಶಿಕ್ಷಕಿಯರು ನಿಜವಾಗಿಯೂ ಮಾದರಿಯಾಗಿದ್ದರು. ಅವರಿಗೆ ಇದ್ದ ಗೌರವ, ಮರ್ಯಾದೆಗಳನ್ನು ಬಹುಶಃ ಇತರ ವೃತ್ತಿಗಳವರು ಪಡೆದಿರಲಾರರು. ಇದೇ ಕಾಪಿಕಾಡಿನಲ್ಲಿ ಇದ್ದ ಶಿಕ್ಷಕ ದಂಪತಿಯಲ್ಲಿ ಡಿ. ಮಾಧವ ರಾವ್ ಇವರು ಕೊಡ್ಲಮೊಗರುವಿನ ವಾಣಿ ವಿಲಾಸ ಹೈಸ್ಕೂಲ್ ಇಲ್ಲಿ ಅಧ್ಯಾಪಕರಾದರೆ ಅವರ ಮಡದಿ ಲಲಿತಾ ಅವರು ಕೆನರಾ ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಕಾಪಿಕಾಡಿನಲ್ಲಿ ಸ್ನಾತಕೋತ್ತರ ಪದವೀಧರರಾಗಿ ಸೈಂಟ್ ಆ್ಯಗ್ನೆಸ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರು ರಾಧಾ ಆಚಾರ್ಯ ಹಾಗೂ ಮ. ರಾಜೀವ ಎಂಬವರು ಸೈಂಟ್ ಅಲೋಶಿಯಸ್ನಲ್ಲಿ ಶಿಕ್ಷಕರಾಗಿ ಮುಂದೆ ಬೆಂಗಳೂರಿಗೆ ತೆರಳಿದರು. ಅಮ್ಮನ ಸಹಪಾಠಿಗಳೂ ಕೆಲವರು ಶಿಕ್ಷಕಿಯರಾಗಿದ್ದರು. ಅವರಲ್ಲಿ ಕರ್ಮಿನ್ ಟೀಚರ್ ಒಬ್ಬರು. ಕ್ರಿಶ್ಚಿಯನ್ ಸಮುದಾಯದವರಿಗೆ ಧಾರ್ಮಿಕವಾಗಿ ಸಿಸ್ಟರ್ಸ್, ಬ್ರದ್ರರ್ಸ್ ಮತ್ತು ಫಾದರ್ಗಳಾಗುವುದು ಅಂದಿನ ದಿನಗಳಲ್ಲಿ ಒಂದು ವಿಶೇಷವಾದ ಸಂದರ್ಭ. ಕಾಪಿಕಾಡ್ ಶಾಲೆಯ ಬಳಿಯ ಒಂದು ಮನೆಯಿಂದ ಒಬ್ಬರು ಫಾದರ್ ಆಗಿದ್ದು ಅವರು ಚರ್ಚ್ಗಳಲ್ಲಿ ಸೇವೆ ಸಲ್ಲಿಸಿದವರು. ಇವರು ನನ್ನ ಮಾವನ ಸಹಪಾಠಿ ಆಗಿದ್ದರು. ಇನ್ನೊಬ್ಬರು ಮಹಿಳೆ ಸಿಸ್ಟರ್ ಆಗಿದ್ದು ದೂರದ ಊರಲ್ಲಿ ಇದ್ದು ಊರಿಗೆ ಬಂದಾಗ ನಮ್ಮ ಮನೆಗೆ ಬಂದು ಹೋಗುವ ರೂಢಿ ಇಟ್ಟುಕೊಂಡಿದ್ದರು.
ನಮ್ಮೂರಲ್ಲಿ ನಾಟಕ ಕಲಾವಿದರೂ ಅಂದೇ ಇದ್ದರು. ಬಹುಮುಖ್ಯವಾಗಿ ತುಳು ನಾಟಕದ ಮುಖ್ಯ ವ್ಯಕ್ತಿ ಕೆ.ಎನ್. ಟೈಲರ್. ತನ್ನ ನಾಟಕಗಳ ಪ್ರಯೋಗದ ಪ್ರಾರಂಭದ ದಿನಗಳಲ್ಲಿ ಇಲ್ಲಿಯೇ ಇದ್ದು ಕಾಪಿಕಾಡ್ ಶಾಲೆಯ ಆವರಣದಲ್ಲಿ, ಬಾಳಿಗಾ ಸ್ಟೋರ್ಸ್ ಬಳಿ ನಾಟಕ ಪ್ರದರ್ಶನ ಮಾಡುತ್ತಿದ್ದರು. ಇವರ ತಂಡದ ಬಹಳ ಪ್ರಸಿದ್ಧ ನಾಟಕ ‘ತಮ್ಮಲೆ ಅರುವತ್ತನ ಕೋಲ’ದಲ್ಲಿ ನಮ್ಮೂರವರೇ ಆದ ಬಿ.ವಿ. ಕಿರೋಡಿಯನ್ ಮಾವನಾಗಿ ಅಭಿನಯಿಸುತ್ತಿದ್ದರು. ಇನ್ನೊಬ್ಬ ಕಲಾವಿದ ವಸುಕುಮಾರ್ ಇವರು ಕೂಡಾ ಬಾಳಿಗಾ ಸ್ಟೋರ್ಸ್ನ ಎದುರುಗಡೆಯಲ್ಲಿ ವಾಸಿಸುತ್ತಿದ್ದರು. ನಾಟಕವಲ್ಲದೆ ಪುರಾಣ ವಾಚನ, ಹರಿಕಥೆ, ತಾಳಮದ್ದಳೆಗಳೂ ನಡೆಯುತ್ತಿದ್ದು ಅವುಗಳನ್ನು ನಡೆಸುವ ಪೋಷಕರು ಇಲ್ಲಿಯವರೇ ಆಗಿದ್ದರು. ನನ್ನ ತಂದೆ ಪುರಾಣ ವಾಚನ, ಹರಿಕಥೆ, ತಾಳಮದ್ದಳೆಗಳ ಕಲಾವಿದರಾದುದರಿಂದ ಊರಿನ ಬಹುಜನರ ಸ್ನೇಹ, ಪರಿಚಯಗಳೊಂದಿಗೆ, ಅಧ್ಯಾಪಕರಾದುದರಿಂದ ಊರಿನ ಹೆಚ್ಚಿನ ಮನೆಯಲ್ಲಿ ಅವರ ಪ್ರತ್ಯಕ್ಷ ಶಿಷ್ಯರಿದ್ದಂತೆ, ಮಕ್ಕಳ ತಂದೆತಾಯಿಗಳು, ಪರೋಕ್ಷ ಶಿಷ್ಯರಂತೆ ಇದ್ದರು. ಆ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಟ್ಯೂಶನ್ ಎನ್ನುವುದು ಇರಲೇ ಇಲ್ಲ ಎಂದರೆ ತಪ್ಪಲ್ಲ. ಆದರೆ ಕಾಲೇಜಿಗೆ ಸೇರಿದ ಕೆಲವು ವಿದ್ಯಾರ್ಥಿಗಳಿಗೆ ಕನ್ನಡ ಕಷ್ಟವಾಗುತ್ತಿತ್ತಂತೆ. ಸೈಂಟ್ ಅಲೋಶಿಯಸ್ ಕಾಲೇಜಿನ, ಸರಕಾರಿ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕನ್ನಡ ಪಾಠ ಹೇಳಿಸಿಕೊಳ್ಳಲು ನಮ್ಮ ಮನೆಗೆ ಬರುತ್ತಿದ್ದರು.
ಊರಿನ ಗಣ್ಯರಲ್ಲಿ ಪ್ರಮುಖರಾದ ಇತರರು ಎಂದರೆ ಮೇಸ್ತ್ರಿಗಳೆಂದು ಕರೆಸಿ ಕೊಳ್ಳುತ್ತಿದ್ದ ರಾಮಪ್ಪ ಮೇಸ್ತ್ರಿ, ಐತಪ್ಪ ಮೇಸ್ತ್ರಿ ಸಹೋದರರು ಮತ್ತು ವಾಸಪ್ಪ ಮೇಸ್ತ್ರಿಗಳು. ರಾಮಪ್ಪ ಮೇಸ್ತ್ರಿ, ಐತಪ್ಪ ಮೇಸ್ತ್ರಿಗಳಿಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಇಂದಿನ ಯಾವ ಇಂಜಿನಿಯರಿಗೂ ಕಡಿಮೆಯಿಲ್ಲದಂತೆ ಅವರು ಕಟ್ಟಿರುವ ವಿವಿಧ ವಿನ್ಯಾಸಗಳ ದೊಡ್ಡ ದೊಡ್ಡ ಮನೆಗಳು, ಶಾಲಾ ಕಾಲೇಜು ಕಟ್ಟಡಗಳು ಈಗಲೂ ಮಂಗಳೂರಿನಲ್ಲಿ ಇವೆ ಎನ್ನುವುದು ಅವರ ಪ್ರಸಿದ್ಧಿಗೆ ಕೌಶಲ್ಯಕ್ಕೆ ಸಾಕ್ಷಿ. ವಾಸಪ್ಪ ಮೇಸ್ತ್ರಿಗಳೂ ಪ್ರಸಿದ್ಧರೇ ಆಗಿದ್ದು ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆ ಕಾಲಕ್ಕೆ ಪದಾಧಿಕಾರಿಗಳಾಗಿದ್ದರು. ಇವರ ಮನೆಯಿಂದ ಶಿವರಾತ್ರಿಯ ಸಂದರ್ಭದಲ್ಲಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಹೋಗುತ್ತಿತ್ತು. ಇವರೆಲ್ಲರೂ ಅಂದಿನ ದಿನಗಳಲ್ಲಿ ಶ್ರೀಮಂತರೇ. ಆದರೆ ಶ್ರೀಮಂತಿಕೆಯ ಶೋಕಿ ಹಾಗೂ ಶ್ರೀಮಂತರ ದರ್ಪ ಇರಲಿಲ್ಲ.
ಅಂದಿನ ಗಣ್ಯ ಹಿರಿಯರೆಲ್ಲರೂ ಕಚ್ಚೆ ಪಂಚೆ, ಶರ್ಟು, ಕೋಟುಗಳ ಜೊತೆಗೆ ಕೆಲವರು ತಲೆಗೆ ಟೊಪ್ಪಿಗಳನ್ನು ಹಾಕಿಕೊಳ್ಳುತ್ತಿದ್ದರು. ನಮ್ಮ ತಂದೆಯವರು ಕಚ್ಚೆ ಪಂಚೆ ಪೈರನ್ಗಳ ಜೊತೆಗೆ ಹೆಗಲಿಗೆ ಶಾಲು ಹಾಕಿಕೊಳ್ಳುತ್ತಿದ್ದರು. ತಲೆಗೆ ಗಾಂಧಿ ಟೋಪಿ ಧರಿಸುತ್ತಿದ್ದರು. ಮುಂದೆ ಟೋಪಿಯನ್ನು ತ್ಯಜಿಸಿದ್ದರು. ಇವರು ಖಾದೀಧಾರಿಗಳಾಗಿದ್ದರು. ಕಾಪಿಕಾಡ್ ಶಾಲೆಯಲ್ಲಿ ನನ್ನ ಗುರುಗಳಾದ ಗುರುವಪ್ಪ ಮಾಸ್ತರರೂ ಕೂಡಾ ಖಾದೀಧಾರಿಗಳಾಗಿದ್ದು ಅವರೂ ಯಕ್ಷಗಾನ ಅರ್ಥಧಾರಿಗಳಾಗಿದ್ದರು. ಇವರು ಕೂಡಾ ವಿಶೇಷ ಸಂದರ್ಭಗಳಲ್ಲಿ ಕಚ್ಚೆ ಪಂಚೆ ಶಾಲು ಧರಿಸುತ್ತಿದ್ದರು.
ಊರಿನಲ್ಲಿರುವ ಬಡವರಿರಲಿ, ಶ್ರೀಮಂತರಿರಲಿ ಅವರಿಗೆ ಬೇಕಾಗುವ ಇನ್ನೆಷ್ಟೋ ವಸ್ತುಗಳು ದಿನಬಳಕೆಗೆ ಬೇಕಲ್ಲವೇ? ಇವುಗಳನ್ನು ಪೂರೈಸುವ ಸಣ್ಣ ಪುಟ್ಟ ಅಂಗಡಿಗಳೂ ಅಗತ್ಯವಾದರೂ ಕಾಪಿಕಾಡು ರಸ್ತೆಯಲ್ಲಿ ಬೆರಳೆಣಿಕೆಯ ಅಂಗಡಿಗಳು ಇದ್ದುವು. ಕಾಪಿಕಾಡಿನ ಬಾಳೆಬೈಲಿನಲ್ಲಿದ್ದ ಬಾಬಣ್ಣನ ಅಂಗಡಿ, ಅವರ ತಮ್ಮನ ಅಂಗಡಿ ಇನ್ನೊಂದಿಷ್ಟು ದೂರದಲ್ಲಿ ನಮ್ಮ ಮನೆಯ ಪಕ್ಕ ಇದ್ದರೆ ಚಿನ್ನಯಣ್ಣನ ಅಂಗಡಿ ಬಾಳಿಗಾ ಸ್ಟೋರ್ಸ್ ಬಳಿ ಇತ್ತು. ಇಲ್ಲಿ ಮುಖ್ಯವಾಗಿ ಸಿಹಿ, ಚಪ್ಪೆ, ಶುಂಠಿ ಸೋಡಾಗಳು, ತಿನ್ನಲು ಬಾಳೆಹಣ್ಣು, ಬಿಸ್ಕತ್ತು, ಪೆಪ್ಪರಮಿಂಟು, ಹುರಿಗಡಲೆ, ನೆಲಗಡಲೆ, ಆಕ್ರೋಟ್ಗಳು ಸಿಗುತ್ತಿದ್ದುವು. ಹಾಗೆಯೇ ಶಾಲೆಗೆ ಹೋಗುವ ಮಕ್ಕಳಿಗೆ ಬೇಕಾದ ಪುಸ್ತಕ, ಪೇಪರ್, ಪೆನ್ಸಿಲ್, ಶಾಯಿ, ಅಡಿಕೋಲು, ರಬ್ಬರು, ಸ್ಲೇಟುಗಳು, ಬಣ್ಣದ ಕಾಗದಗಳು, ನೂಲಿನ ಉಂಡೆ, ಅಂಟು ಇತ್ಯಾದಿ ಇದ್ದುದರಿಂದ ನಾವು ಮಕ್ಕಳು ಈ ಅಂಗಡಿಯ ಗಿರಾಕಿಗಳು. ಇಂದು ಕೆಲವೆಡೆ ಪ್ರಸಿದ್ಧವಾಗಿರುವ ‘ದೋಸೆ ಅಂಗಡಿ’ಗಳಿದ್ದಂತೆ ಅಂದು ಕಾಪಿಕಾಡು ರಸ್ತೆಯಲ್ಲಿ ಎರಡು ದೋಸೆ ಅಂಗಡಿಗಳು ಇದ್ದುವು. ಒಂದನ್ನು ಕ್ರಿಶ್ಚಿಯನ್ ಮಹಿಳೆ ನಡೆಸುತ್ತಿದ್ದರು. ಇನ್ನೊಂದನ್ನು ಕಾಪಿಕಾಡು ಶಾಲೆಯಲ್ಲಿ ಜವಾನೆಯಾಗಿದ್ದ ಕರ್ಗಿಯಕ್ಕ ನಡೆಸುತ್ತಿದ್ದರು. ಇದು ಬೆಳಗ್ಗಿನ ಹೊತ್ತಿನ ಅಂಗಡಿ. ಇಲ್ಲಿ ಸಿಗುವ ದೋಸೆಗೆ ‘ಆಪ’ ಎನ್ನುತ್ತಿದ್ದರು. ಇದಕ್ಕೆ ಚಟ್ನಿಯ ಅವಶ್ಯಕತೆ ಇಲ್ಲ. ಕಾಫಿಯಲ್ಲಿ ಮುಳುಗಿಸಿ ತಿನ್ನುತ್ತಿದ್ದುದೇ ಹೆಚ್ಚು. ಇಲ್ಲಿಂದ ಬೆಳಗ್ಗೆ ತಮ್ಮ ಮನೆಗೆ ಒಯ್ಯುತ್ತಿದ್ದವರು ಕೆಲವರಾದರೆ, ಹಲವರು ಗಂಡಸರು ಇಲ್ಲಿಯೇ ಬಂದು ಕಾಫಿ ಕುಡಿದು ದೋಸೆ ತಿಂದು ಹೋಗುತ್ತಿದ್ದರು. ಈ ಇಬ್ಬರೂ ಮಹಿಳೆಯರೂ ಬಹಳ ಜೋರಿನವರು ಅಂದರೆ ಶಿಸ್ತಿನವರು ಎಂದು ಹೇಳುವುದಿತ್ತು. ಆದರೆ ಇಂತಹ ಶಿಸ್ತು ಅಗತ್ಯವಿತ್ತು. ವ್ಯಾಪಾರ ವ್ಯವಹಾರ ಎಂದರೆ ಗಂಡಸರೇ ಮೋಸ ಹೋಗುವಾಗ ಹೆಂಗಸರು ಇನ್ನೂ ಹೆಚ್ಚು ಕಟ್ಟುನಿಟ್ಟಿನವರಾಗಬೇಕಾದುದು ಅನಿವಾರ್ಯವೇ ಅಲ್ಲವೇ? ಈ ದೋಸೆ ಅಂಗಡಿ, ಹೊಟೇಲುಗಳೇ ಬೆಳಗ್ಗಿನ ಗಂಜಿ ಊಟದ ಅಭ್ಯಾಸವನ್ನು ಬದಲು ಮಾಡಿರಬೇಕು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬೆಳಗ್ಗೆ ಗಂಜಿ ಊಟದ ಅಭ್ಯಾಸವಿದ್ದುದು ನಿಧಾನವಾಗಿ ಅಪರೂಪಕ್ಕೊಮ್ಮೆ ಹೊಟೇಲು ತಿಂಡಿ, ಆಪಗಳನ್ನು ಮನೆಗೆ ತರುತ್ತಾ ಕೊನೆಗೆ ಮನೆಯಲ್ಲೇ ಸಜ್ಜಿಗೆ ಅವಲಕ್ಕಿ, ಗೋಧಿ ದೋಸೆ, ಅವಲಕ್ಕಿ ಕಡಲೆ ಹೀಗೆ ತಯಾರಾಗಲು ಶುರುವಾಗಿರಬೇಕು. ಯಾಕೆಂದರೆ ಇಡ್ಲಿ, ಕಡುಬು, ದೋಸೆಗಳೆಲ್ಲಾ ಹಬ್ಬದ ತಿಂಡಿಗಳಾಗಿದ್ದು, ನಿತ್ಯದಲ್ಲಿ ಅವುಗಳ ತಯಾರಿ ತುಂಬಾ ಜನರಿರುವಲ್ಲಿ ಸಾಧ್ಯವಿರಲಿಲ್ಲ.
ಆಗ ಮನೆಗಳಲ್ಲಿ ಅಡುಗೆಗೆ ಕಟ್ಟಿಗೆ ಒಲೆಯೇ ಸಹಜವಾಗಿತ್ತು. ಸ್ವಂತ ಮನೆಗಳವರಿಗೆ ಅಥವಾ ಬಿಡಾರದವರಿಗೂ ತೆಂಗಿನ ಮರಗಳ ಸೋಗೆಗಳು ಬಚ್ಚಲ ಒಲೆಗೆ, ಅಡುಗೆಮನೆಗೆ ಕಟ್ಟಿಗೆ. ಕಟ್ಟಿಗೆ ಡಿಪೋಗಳಿಂದಲೇ ತರಬೇಕಾಗಿತ್ತು. ಕಾವೂರು ಕ್ರಾಸ್ನಲ್ಲಿ ದುಲ್ಸಿನ್ ಬಾಯಿಯವರ ಡಿಪೋ, ಆನೆಗುಂಡಿಯ ತಿರುವಿನಲ್ಲಿ ನಿವೃತ್ತ ಅಧ್ಯಾಪಕರ ಡಿಪೋಗಳಿದ್ದುವು. ಕಟ್ಟಿಗೆಗಳ ಕೊರತೆಯೂ ಆಗಾಗ ಕಾಡುತ್ತಿತ್ತು. ಆದ್ದರಿಂದ ನಮಗೆ ಕಟ್ಟಿಗೆ ಬೇಕಾದಾಗ ಎಲ್ಲಿರುತ್ತದೋ ಅಲ್ಲಿಂದ ತರುವುದಿತ್ತು. ಇಲ್ಲೆಲ್ಲಾ ನಾವು ಮಕ್ಕಳು ಕಟ್ಟಿಗೆ ಹೊತ್ತು ತರುತ್ತಿದ್ದುದು ಸಾಮಾನ್ಯವಾಗಿತ್ತು. ಅಷ್ಟೇ ಅಲ್ಲ ಹಾಗೆ ಹೊತ್ತು ತರುತ್ತಿದ್ದುದ್ದನ್ನು ಯಾರೂ ಅವಮಾನ ಎಂದು ತಿಳಿಯುತ್ತಿರಲಿಲ್ಲ. ಉಳಿದವರು ಹಾಗೆ ಭಾವಿಸುತ್ತಲೂ ಇರಲಿಲ್ಲ. ಊರಿನ ಗಂಡಸರಿಗೆ ಮತ್ತು ಮಕ್ಕಳಿಗೆ ಅಗತ್ಯವಾದ ಅಂಗಡಿ ಅಂದರೆ ಕ್ಷೌರದಂಗಡಿ. ಕಾವೂರು ಕ್ರಾಸ್ನ ಬಳಿ ಇದ್ದ ಕಿಟ್ಟಣ್ಣ ಮತ್ತು ಐತಪ್ಪಣ್ಣ ಎನ್ನುವ ಸಹೋದರರು ಕ್ಷೌರದಂಗಡಿ ನಡೆಸುತ್ತಿದ್ದು ಆ ಕಾಲಕ್ಕೂ ಬಹಳ ಸುಂದರವಾದ ಅಂಗಡಿಯಾಗಿತ್ತು. ಆ ಕಾಲದಲ್ಲಿ ಚಿಕ್ಕ ಗಂಡು, ಹೆಣ್ಣುಮಕ್ಕಳಿಗೆ ಕ್ಷೌರ ಮಾಡಿಸುತ್ತಿದ್ದರು. ಹೆಣ್ಣುಮಕ್ಕಳಿಗೆ ಸುಮಾರು 3, 4ನೆಯ ತರಗತಿಯವರೆಗೆ ಬಾಬ್ಕಟ್ ಮಾಡಿಸುತ್ತಿದ್ದರು ಎಂದೂ ಜಡೆ ಹಾಕುತ್ತಿರಲಿಲ್ಲ. ಆದರೆ ಬ್ರಾಹ್ಮಣ ಮನೆಯ ಹೆಣ್ಣುಮಕ್ಕಳಿಗೆ ಜಡೆ ಹೆಣೆಯುತ್ತಿದ್ದರೆಂದು ನೆನಪು. ಅಂಗಡಿಗೆ ಹೋದ ಮಕ್ಕಳು ಕ್ಷೌರ ಮಾಡುವಾಗ ಅಳದಂತೆ ಅವರಿಗೆ ಪೆಪ್ಪರಮೆಂಟು, ಬಿಸ್ಕತ್ತು ಕೊಟ್ಟು ಮುದ್ದು ಮಾತುಗಳಿಂದ ಪ್ರೀತಿಯ ಮಾತುಗಳನ್ನಾಡುತ್ತಾ ಕ್ಷೌರ ಮಾಡುತ್ತಿದ್ದ ಕಿಟ್ಟಣ್ಣ ಎಲ್ಲರಿಗೂ ಕಿಟ್ಟಣ್ಣ ಮಾಮ ಆಗಿದ್ದರು. ಇನ್ನೊಬ್ಬರು ಇವರ ದೂರದ ಸಂಬಂಧಿಯೇ ಆಗಿದ್ದ ಜಾರಪ್ಪನ ಅಂಗಡಿ ನಮ್ಮ ಮನೆಯ ರಸ್ತೆ ಬದಿಯಲ್ಲೇ ಇತ್ತು.
ದಿನನಿತ್ಯಕ್ಕೆ ಬೇಕಾದ ಅವಶ್ಯಕತೆಗಳಲ್ಲಿ ಹಾಲು ಅತೀ ಮುಖ್ಯವಾದುದು. ದನ, ಎಮ್ಮೆಗಳನ್ನು ತುಂಬಾ ಸಂಖ್ಯೆಯಲ್ಲಿ ಸಾಕುತ್ತಿದ್ದ ಲೂವಿಸ್ ಪೊ ರ್ಬುಗಳ ಮನೆ ಹಾಲಿನ ಮನೆಯೆಂದೇ ಖ್ಯಾತಿ. ಅವರು ಕೆಲವು ಮನೆಗಳಿಗೆ, ಹೊಟೇಲುಗಳಿಗೆ ತಾವೇ ಒಯ್ದು ಕೊಡುತ್ತಿದ್ದರು. ಕೆಲವು ಮನೆಗಳವರು ಬೆಳಗ್ಗೆ ಸಂಜೆ ಅವರ ಮನೆಗೆ ಬಂದು ಕೊಂಡು ಹೋಗುತ್ತಿದ್ದರು. ಸಾಮಾನ್ಯವಾಗಿ ಸ್ವಂತ ಮನೆ ಇದ್ದವರು ತಮ್ಮ ಮನೆ ಖರ್ಚಿಗಾಗಿ ಒಂದೆರಡು ದನ ಸಾಕಿಕೊಳ್ಳುತ್ತಿದ್ದರು. ಹಾಲು ಇತರರಿಗೆ ಮಾರಾಟ ಮಾಡುತ್ತಿದ್ದ ಮನೆಗಳಲ್ಲಿ ಇನ್ನೆರಡು ಮನೆಗಳು ರಂಗಕ್ಕನ ಮನೆ ಮತ್ತು ಕಾಪಿಕಾಡು ಕಾಲನಿಯ ಬಳಿ ಇದ್ದ ಈಗಲೂ ಇರುವ ಸಣ್ಣಮ್ಮಕ್ಕ (ಅಜ್ಜಿಯ)ರ ಮನೆಗಳು. ಇವರ ಸಾಲಿಗೆ ಮತ್ತೆ ಸೇರಿದವರು ನಮ್ಮ ಮನೆಯ ಸಮೀಪಕ್ಕೆ ಗ್ರೆಟ್ಟಾ ತಾವ್ರೋ ಅವರ ಬಾಡಿಗೆ ಮನೆಗೆ ಬಂದ ಸಾಹೇಬರ ಮಡದಿ ಖುಲ್ಸುಮ್ ಅವರು. ಇವರು ಕೂಡಾ ದನ ಎಮ್ಮೆಗಳನ್ನು ಸಾಕಿ ಗಂಡನ ಸಂಬಳದ ಜೊತೆಗೆ ತನ್ನ ಹಾಲಿನ ಆದಾಯದಿಂದ ಸಂಸಾರ ನಿರ್ವಹಣೆ ಮಾಡುತ್ತಿದ್ದರು. ಆನೆಗುಂಡಿಯಿಂದ ಮುಂದೆ ಬಾಳಿಗಾ ಸ್ಟೋರ್ಸ್ನ ನಡುವೆ ಪಿ. ಮುರಹರಿ ರಾವ್ ಎನ್ನುವವರ ಮನೆಯಿದ್ದು ಇವರ ಮಡದಿಯೂ ಹಾಲು ಮಾರಾಟ ಮಾತ್ರವಲ್ಲ, ತುಪ್ಪ ತಯಾರಿಸುತ್ತಿದ್ದರು. ನಮಗೆ ತೀರಾ ಅಗತ್ಯವಾದಾಗ ಅವರ ಮನೆಯಿಂದ ತುಪ್ಪ ತರುತ್ತಿದ್ದುದು ನೆನಪು. ಅವರ ಮನೆಯಲ್ಲಿ ವರ್ಷಕ್ಕೊಮ್ಮೆ ವಿಶೇಷ ಪೂಜೆ, ಹರಿಕಥೆಗಳು ನಡೆಯುತ್ತಿತ್ತು. ಇವರ ಮನೆಯ ದಾರಿಯಲ್ಲೇ ಅವಲಕ್ಕಿ ತಯಾರಿಸುವ ಮನೆ ಇತ್ತು. ಇನ್ನು ಬಿಡಾರದ ಮನೆಗಳಲ್ಲಿರುವವರಿಗೆ ತಿಂಗಳಿಗೆ ಬೇಕಾದ ತೆಂಗಿನಕಾಯಿ ಮಾರಾಟ ಮಾಡುವವರು ಸ್ವಂತ ಮನೆ ಹಿತ್ತಿಲಲ್ಲಿ ತೆಂಗಿನ ಮರಗಳಿದ್ದವರು. ರಾಧಕ್ಕ, ರಂಗಕ್ಕ, ಎಲ್ಲಬಾಯಿ 25, 50 ತೆಂಗಿನಕಾಯಿಗಳನ್ನು ಮನೆ ಹಿಡಿದು ಕೊಡುತ್ತಿದ್ದರು. ತಿಂಗಳ ಸಂಬಳ ಪಡೆಯುವವರು ಈ ರೀತಿ ತರುತ್ತಿದ್ದರು. ಹೀಗೆ ಊರಿನ ಮಂದಿ ತಾವು ದುಡಿಯುತ್ತಲೇ ಇನ್ನೊಬ್ಬರ ಬದುಕಿಗೆ ಆಗುತ್ತಿದ್ದವರು.