ನನ್ನೊಬ್ಬನಿಂದ ಏನೆಲ್ಲ ಆದೀತು!

ನನ್ನೊಬ್ಬನಿಂದ ಏನೆಲ್ಲ ಆದೀತು!

ಸಮುದ್ರ ತೀರದಲ್ಲಿ ಒಬ್ಬ ವ್ಯಕ್ತಿ ನಡೆಯುತ್ತಿದ್ದ. ಆಗಾಗ ಬಗ್ಗಿ, ಹೊಯಿಗೆಯಲ್ಲಿ (ಮರಳಿನಲ್ಲಿ) ಸಿಲುಕಿದ್ದ ನಕ್ಷತ್ರ ಮೀನುಗಳನ್ನು ಹೆಕ್ಕಿ, ಸಮುದ್ರದ ನೀರಿಗೆ ಎಸೆಯುತ್ತಿದ್ದ.
ಅವನಿಗೆದುರಾಗಿ ನಡೆದು ಬರುತ್ತಿದ್ದ ಇನ್ನೊಬ್ಬ ವ್ಯಕ್ತಿ. ಮೊದಲನೆಯ ವ್ಯಕ್ತಿ ಹತ್ತಿರ ಬಂದಾಗ ಎರಡನೆಯಾತ ಕೇಳಿದ, “ಅದೇನು ಮಾಡುತ್ತಿದ್ದಿ?” ಮೊದಲನೆಯಾತ ಮುಗುಳ್ನಕ್ಕು ತನ್ನ ಕೆಲಸ ಮುಂದುವರಿಸಿದ. ಆತನನ್ನು ಹಿಂಬಾಲಿಸಿದ ಎರಡನೆಯಾತ ಪುನಃ ಅದೇ ಪ್ರಶ್ನೆ ಕೇಳಿದ. ಈಗ ಮೊದಲನೇ ವ್ಯಕ್ತಿ ಉತ್ತರಿಸಿದ: “ಕಾಣುತ್ತಿಲ್ಲವೇ? ನಕ್ಷತ್ರ ಮೀನುಗಳನ್ನು ಹೆಕ್ಕಿಹೆಕ್ಕಿ ನೀರಿಗೆ ಎಸೆಯುತ್ತಿದ್ದೇನೆ – ಅವು ಬದುಕಿಕೊಳ್ಳಲಿ ಎಂದು.”
ಸ್ವಲ್ಪ ಹೊತ್ತು ಸುಮ್ಮನಿದ್ದ ಎರಡನೆಯವನು ಮತ್ತೆ ಪ್ರಶ್ನಿಸಿದ: “ಅಲ್ಲಯ್ಯಾ, ನಿನ್ನ ಸಮಯ ಹಾಳು ಮಾಡ್ತಿದ್ದೀಯಾ. ಈ ಸಮುದ್ರತೀರದ ಹೊಯಿಗೆಯಲ್ಲಿ ಒಂದೆರಡಲ್ಲ, ಸಾವಿರಾರು ನಕ್ಷತ್ರ ಮೀನುಗಳು ಅಲೆಯೊಂದಿಗೆ ಬಂದು ಬಿದ್ದಿವೆ. ನೀನು ಎಷ್ಟೇ ನಕ್ಷತ್ರ ಮೀನುಗಳನ್ನು ಹೆಕ್ಕಿ ನೀರಿಗೆಸೆದರೂ ಅದರಿಂದೇನು ಬದಲಾಗುತ್ತದೆ?” ಮೊದಲನೆಯಾತ ಮೌನವಾಗಿ ತನ್ನ ಕಾಯಕ ಮುಂದುವರಿಸಿದ. ಎರಡನೆಯಾತ ಪುನಃ ಅದೇ ಪ್ರಶ್ನೆ ಕೇಳಿದ. ಆಗ, ಇನ್ನೊಂದು ನಕ್ಷತ್ರ ಮೀನನ್ನು ಹೆಕ್ಕಿ, ಅದನ್ನು ಸಮುದ್ರಕ್ಕೆ ಎಸೆಯುತ್ತ ಮೊದಲನೆಯವನು ಉತ್ತರಿಸಿದ: “ಇಲ್ಲಿ ನೋಡು, ಈ ನಕ್ಷತ್ರ ಮೀನನ್ನು ನಾನೀಗ ಸಮುದ್ರಕ್ಕೆ ಎಸೆದಾಗ ಅದರ ಜೀವನವೇ ಬದಲಾಯಿತು.”
ಹೌದಲ್ಲ! ಸಾಯುತ್ತಿದ್ದ ಆ ನಕ್ಷತ್ರ ಮೀನು ಬದುಕಿತು! “ನನ್ನೊಬ್ಬನಿಂದ ಏನಾದೀತು?” ಎಂದು ಯೋಚಿಸುತ್ತಾ ನಿಷ್ಕ್ರಿಯರಾಗುವ ಪ್ರತಿಯೊಬ್ಬರೂ ಮತ್ತೆಮತ್ತೆ ಚಿಂತನೆ ಮಾಡಬೇಕಾದ ಸಂಗತಿ ಇದು, ಅಲ್ಲವೇ