ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೧

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಭಾಗ-೧

ಬರಹ

“ಪ್ರತಿಯೊಬ್ಬರಲ್ಲೂ ಒಬ್ಬ ಬರಹಗಾರ ಇದ್ದೇ ಇರುತ್ತಾನೆ” ಹೀಗೆಂದು ಯಾರು ಹೇಳಿದರೋ ನನಗೆ ಗೊತ್ತಿಲ್ಲ. ಈ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಆದರೆ ಆ ಬರಹಗಾರ ಯಾವಾಗ ಮತ್ತು ಹೇಗೆ ಮೊಳಕೆಯೊಡೆದು ಹೊರಬರುತ್ತಾನೆ ಎಂದು ಹೇಳುವದು ಸ್ವಲ್ಪ ಕಷ್ಟವೇ. ಹಾಗೂ ಅವನನ್ನು ಬೆಳೆಸುವದು ಬಿಡುವದು ಆಯಾ ವ್ಯಕ್ತಿಯ ಅಭಿರುಚಿ, ಅಭಿವ್ಯಕ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಇದಲ್ಲದೆ ಬರಹಗಾರನ ಹಿನ್ನೆಲೆ, ಪರಿಸರ, ಸ್ಪೂರ್ತಿ, ಪ್ರೋತ್ಸಾಹಗಳು ಅವನ ಬೆಳೆವಣಿಗೆಗೆ ಸಾಕಷ್ಟು ಸಹಾಯಕಾರಿಯಾಗುತ್ತವೆ. ಕೆಲವರು ಮನೆಯಲ್ಲಿನ ಸಾಹಿತ್ಯಕ ವಾತಾವಾರಣದಿಂದ, ಕೆಲವರು ಯಾರದೋ ಸ್ಪೂರ್ತಿಯಿಂದ. ಕೆಲವರು ಯಾವುದೋ ಘಟನೆಯ ಪರಿಣಾಮದಿಂದ, ಕೆಲವರು ಯಾರದೋ ಪ್ರೋತ್ಸಾಹದಿಂದ, ಕೆಲವರು ಸುಮ್ಮನಿರಲಾರದೆ ಏನನ್ನೋ ಗೀಚುತ್ತಾ ಗೀಚುತ್ತಾ ಮೆಲ್ಲಗೆ ಬರಹಗಾರರಾಗಿ ಮೊಳಕೆಯೊಡೆದು ಹೊರಬರುತ್ತಾರೆ. ಇನ್ನು ಕೆಲವರು ತಮ್ಮ ಖಾಸಗಿ ಜೀವನದ ಸಂಗತಿಗಳನ್ನು ಅತ್ತ ಯಾರೊಂದಿಗೂ ಹೇಳಿಕೊಳ್ಳದೆ ಇತ್ತ ತಮ್ಮೊಳಗೆ ಹಿಡಿದಿಟ್ಟುಕೊಳ್ಳಲಾರದೆ ಒಳಗೊಳಗೆ ಒದ್ದಾಡುವ ಘಳಿಗೆಯಲ್ಲಿ ಅಕ್ಷರಗಳ ರೂಪದಲ್ಲಿ ಹೊರಗೆ ಚೆಲ್ಲಿ ಹಗುರಾಗುವದರ ಮೂಲಕ ಬರಹಗಾರರಾಗಿ ಬೆಳೆಯುತ್ತಾರೆ. ಮತ್ತೆ ಕೆಲವರು ಪ್ರೀತಿ, ಪ್ರೇಮದಲ್ಲಿ ಬಿದ್ದು ಪ್ರಿಯತಮನನ್ನೋ, ಪ್ರಿಯತಮೆಯನ್ನೋ ಮೆಚ್ಚಿಸಲು ಏನನ್ನೋ ಬರೆಯುತ್ತಾ ಬರೆಯುತ್ತಾ ದಿನಕಳೆದಂತೆ ಪ್ರಬುದ್ಧ ಬರಹಗಾರರಾಗಿ ಬೆಳೆಯುತ್ತಾರೆ. ಹೀಗೆ ಬರವಣೆಗಿಗೆ ಯಾವುದಾದರೊಂದು ನೆಪ ಅಥವಾ ಕಾರಣ ಬೇಕಷ್ಟೆ! ಆನಂತರ ಅದು ಜಿನುಗುತ್ತಾ ಜಿನುಗುತ್ತಾ ಹೊಳೆಯಾಗಿ ಹರಿಯುತ್ತದೆ! ಬರೆಯುತ್ತಾ ಬರೆಯುತ್ತಾ ಬಲಗೊಳ್ಳುತ್ತದೆ! ಇದು ಒಬ್ಬ ಬರಹಗಾರ ಬೆಳೆದು ಬರುವ ಬಗೆ!

ಹಾಗಾದರೆ ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಯಾವಾಗ ಮತ್ತು ಹೇಗೆ? ಈ ಪ್ರಶ್ನೆಗೆ ಖರೆ ಖರೆ ಎನ್ನುವಂಥ ಇಂತಿಂಥದೇ ಉತ್ತರ ಇಲ್ಲವಾದರೂ ಹುಡುಕಲು ಪ್ರಯತ್ನಿಸಿದರೆ ಕೆಲವು ಉತ್ತರಗಳು ನಾ ಮುಂದು ತಾ ಮುಂದೆಂದು ನನ್ನ ಸುತ್ತ ಸುತ್ತುತ್ತಾ ಗಿರಿಗಿಟ್ಲಿ ಆಡತೊಡಗುತ್ತವೆ.

ಮೊಟ್ಟ ಮೊದಲಿಗೆ ದೊಡ್ದಪ್ಪ ಹೊಳೆದಂಡೆಯ ಉಸುಕಿನ ಮೇಲೆ ನನ್ನ ಹೆಸರನ್ನು ಬರದು ತೋರಿಸಿ ಅದರಂತೆ ಬರೆ ಎಂದು ಹೇಳಿದಾಗ ಬೆರಗಿನಿಂದ ಬರೆದೆನಲ್ಲ, ಆಗ ಏನಾದರು ನನ್ನೊಳಗಿನ ಬರಹಗಾರ ಮೊಳಕೆಯೊಡೆದನಾ? ಅಥವಾ ಮೊಟ್ಟ ಮೊದಲಿಗಾದ ಅವಮಾನವನ್ನು ಯಾರೊಂದಿಗೂ ಹಂಚಿಕೊಳ್ಳಲಾರದೆ ನೋಟ್ ಪುಸ್ತಕದಲ್ಲಿ ಹುದುಗಿ ಹೇಗೆ ವ್ಯಕ್ತಪಡಿಸುವದು ಎಂದು ಗೊತ್ತಾಗದೆ ನನ್ನಷ್ಟಕ್ಕೆ ನಾನೇ ಬಿಕ್ಕುತ್ತಾ ಅರೆ ಬರೆ ಗೆರೆಗಳನ್ನು ಎಳೆದೆನಲ್ಲ, ಆಗ ಏನಾದರು ಆ ಬರಹಗಾರ ಮಿಸುಕಾಡಿದನಾ? ಅಥವಾ ಗೌರಜ್ಜಿಯ ಕುತೂಹಲಭರಿತ ಕತೆಗಳನ್ನು ಕೇಳುತ್ತಾ ಕೇಳುತ್ತಾ ನಾನು ಅವುಗಳನ್ನು ಮತ್ತೆ ಅಕ್ಷರಗಳಲ್ಲಿ ಮರುಕುಳಿಸುವ ಪ್ರಯತ್ನಮಾಡಿದೆನಲ್ಲ, ಆಗ ಏನಾದರು ಆ ಬರಹಗಾರ ಹೊರಬರಲು ಪ್ರಯತ್ನಿಸಿದನಾ? ಅಥವಾ ಶಾಲೆಯಲ್ಲಿ ಮೇಷ್ಟ್ರು ’ಸಾಕುಪ್ರಾಣಿ’ ಯ ಮೇಲೆ ಪ್ರಬಂಧ ಬರೆಯಲು ಹೇಳಿದಾಗ ಅದನ್ನು ಬರೆದು ಅವರಿಂದ ಶಹಭಾಸ್ಗಿರಿ ಗಿಟ್ಟಿಸಿದೆನಲ್ಲ, ಆಗ ಏನಾದರು ನನ್ನೊಳಗಿನ ಬರಹಗಾರ ರೂಪಗೊಂಡನಾ? ಅಥವಾ ಇವೆಲ್ಲವೂ ಒಟ್ಟಾಗಿ ನನ್ನೊಳಗಿನ ಬರಹಗಾರ ಮೂಡಿಬರಲು ಚಡಪಡಿಸಿದನಾ? ಇವೆಲ್ಲಕ್ಕೂ ಉತ್ತರ ಮಾತ್ರ ಒಂದೇ ಗೊತ್ತಿಲ್ಲ! ಗೊತ್ತಿಲ್ಲ!! ಗೊತ್ತಿಲ್ಲ!!!

ನನ್ನೊಳಗಿನ ಬರಹಗಾರ ರೂಪಗೊಂಡಿದ್ದು ಹೇಗೆ ಎಂಬುದನ್ನು ಬಗೆಯುತ್ತಾ ಹೋದರೆ ಅದಕ್ಕೆ ಕಾರಣವಾದ ಹಿನ್ನೆಲೆ, ಪರಿಸರ ಘಟನೆಗಳು. ವ್ಯಕ್ತಿಗಳು, ಪ್ರಯತ್ನಗಳು ಎಲ್ಲವೂ ನೆನಪಾಗುತ್ತವೆ. ಹಾಗೆ ನೋಡಿದರೆ ನಾನು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ತೀರಾ ಇತ್ತೀಚಿಗಷ್ಟೆ! ಅಂದರೆ ಈಗ್ಗೆ ಐದು ತಿಂಗಳು ಹಿಂದೆ ನನ್ನದೊಂದು ಬ್ಲಾಗು ಶುರು ಮಾಡಿದ ಮೇಲೆ! ಬ್ಲಾಗು ಆರಂಭಿಸಿದ ಮೇಲೆ ಏನಾದರು ಬರೆಯಲೆಬೇಕಲ್ಲ? ಸರಿ, ಬರವಣಿಗೆಯನ್ನು ತೀರಾ ಪ್ರೊಫೆಷನಲ್ಲಾಗಿ ತೆಗೆದುಕೊಂಡಿರುವೆನೇನೋ ಎನ್ನುವಷ್ಟರಮಟ್ಟಿಗೆ ಹಟಕ್ಕೆ ಬಿದ್ದು ಬರೆಯುತ್ತಾ ಬಂದೆ. ನಾನು ಕಂಡಿದ್ದನ್ನು, ಕೇಳಿದ್ದನ್ನು. ಅನುಭವಿಸಿದ್ದನ್ನು, ಓದಿದ್ದನ್ನು, ಇಷ್ಟವಾದದ್ದನ್ನು ಅಕ್ಷರಗಳಲ್ಲಿ ಇಳಿಸತೊಡಗಿದೆ. ನೋಡ ನೋಡುತ್ತಿದ್ದಂತೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ನನ್ನ ಬ್ಲಾಗು ಮೂವತ್ತೆಂಟು ಪೋಸ್ಟಗಳಿಂದ ರಾರಾಜಿಸತೊಡಗಿತು.

ನಾನು ಓದಿನಲ್ಲಿ ಸದಾ ಮುಂದಿದ್ದ ಕಾರಣಕ್ಕೆ ದೊಡ್ಡಪ್ಪ ನನಗೆ ಯಾವಾಗಲೂ ಕತೆ, ಕಾಮಿಕ್ಷ್ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಜೊತೆಗೆ ಗೌರಜ್ಜಿ, ದೊಡ್ಡಮ್ಮರ ಹಾಡು, ಕತೆ ಕೇಳುತ್ತಾ ಬೆಳೆದಿದ್ದರಿಂದ ನನಗೆ ಮೊದಲಿನಿಂದಲೂ ಸಾಹಿತ್ಯದತ್ತ ವಿಶೇಷ ಆಕರ್ಷಣೆ. ಬಹುಶಃ ಈ ಕಾರಣದಿಂದಲೇನೋ ನನ್ನೊಳಗಿನ ಬರಹಗಾರ ಬಾಲ್ಯದಿಂದಲೇ ಹರಳುಗಟ್ಟುತ್ತಾ ಬಂದಿರಬಹುದು. ನಾನು ಬೆಳೆದಂತೆ ಕತೆ, ಕಾದಂಬರಿ ಓದುವ ಹುಚ್ಚು ಹೆಚ್ಚಾಯಿತು. ಅದನ್ನು ಮತ್ತಷ್ಟು ಹೆಚ್ಚಿಸಿದವರು ನನ್ನ ದೊಡ್ದಪ್ಪನ ಮಕ್ಕಳಾದ ಬಸಮ್ಮಕ್ಕ ಮತ್ತು ರವಿ ಅಣ್ಣ. ನಾನು ರಜೆಗೆಂದು ನನ್ನ ದೊಡ್ಡಪ್ಪನ ಊರಾದ ಅಳವಂಡಿಗೆ ಹೋಗುತ್ತಿದ್ದೆ. ಅಲ್ಲಿ ನಮ್ಮ ದೊಡ್ದಪ್ಪ ಮನೆಗೆ ಬಹುಶಃ ಎಲ್ಲ ವಾರಪತ್ರಿಕೆ, ಮಾಸಪತ್ರಿಕೆ ಮತ್ತು ದಿನಪತ್ರಿಕೆಯೊಂದನ್ನು ತರಿಸುತ್ತಿದ್ದರು. ಅವನ್ನೆಲ್ಲ ನಾವು ಮುಗಿಬಿದ್ದು ಓದುತ್ತಿದ್ದೆವು. ಅದಲ್ಲದೆ ವಾಚನಾಲಯದಿಂದ ನನ್ನ ಅಕ್ಕ ಸಾಕಷ್ಟು ಕಾದಂಬರಿಗಳನ್ನು ತಂದು ಓದುತ್ತಿದ್ದುದರಿಂದ ಅವಳೊಂದಿಗೆ ನಾನೂ ಓದಿ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆ. ನನ್ನ ಅಣ್ಣ ಓದುತ್ತಿದ್ದುದು ವೆಟರ್ನರಿ ಸಾಯಿನ್ಸ್ ಆದರೂ ಅವನಿಗೆ ಮೊದಲಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ಅವನು ರಜೆಗೆ ಬರುವಾಗಲೆಲ್ಲಾ ಕನ್ನಡದ ಮಹತ್ವದ ಲೇಖಕರ ಪುಸ್ತಕಗಳನ್ನು ಕೊಂಡು ತರುತ್ತಿದ್ದ. ಅವನ್ನೆಲ್ಲ ಒಬ್ಬರಾದ ಮೇಲೆ ಒಬ್ಬರು ಓದಿ “ಇದು ಹೀಗಿರಬೇಕಿತ್ತು, ಅದು ಹಾಗಿರಬೇಕಿತ್ತು” ಎಂದೆಲ್ಲಾ ಚರ್ಚಿಸುತ್ತಿದ್ದೆವು. ಈ ಎಲ್ಲ ಅಂಶಗಳು ನನ್ನೊಳಗಿನ ಬರಹಗಾರನನ್ನು ಮೊದಲಿನಿಂದಲೂ ಬಡಿದೆಬ್ಬಿಸುತ್ತಾ ಅವನಿಗೊಂದು ರೂಪರೇಷೆ ನೀಡಿದವು ಎಂಬುದು ನನ್ನ ಅಭಿಪ್ರಾಯ.

-ಉದಯ ಇಟಗಿ
ಚಿತ್ರ ಕೃಪೆ: www.flickr.com