ನನ್ನೊಳಗಿನ “ಅವನು" (ಭಾಗ 1)

ನನ್ನೊಳಗಿನ “ಅವನು" (ಭಾಗ 1)

ಮತ್ತೆ ಆರಂಭವಾಗಿದೆ ಮುಂಗಾರು ಮಳೆ.... ಆಗೊಂದು ಈಗೊಂದು ಮಿಂಚು ಕಾಣುತಿರೆ ಸಿಡಿಲ ಆರ್ಭಟಕೆ ತುಂತುರು ಮಳೆಹನಿಯ ಸುಂದರ ದೃಶ್ಯದೊಳು ಭುವಿ ತಂಪಾಗಿ ಹಾಯಾಗಿ ನಗುತ್ತಿದ್ದರೂ ನನಗೇಕೋ ಮನದಲ್ಲಿ ದುಗುಡ... ಶಾಲೆ ಆರಂಭವಾಗಿ ಮಕ್ಕಳು ಶಾಲೆಗೆ ಬರುತ್ತಿದ್ದರೂ ನನ್ನ ಕಣ್ಣು ಹುಡುಕುತ್ತಿದೆ ಅವನನ್ನು.... ಅಷ್ಟೊಂದು ಉಲ್ಲಾಸದಿಂದ ಕಳೆದ ವರ್ಷ ನಲಿಕಲಿ ಪುಟಾಣಿಗಳಿಗೆ ವಿದ್ಯಾಪ್ರವೇಶ ಮಾಡಿದ್ದರೂ ಈ ವರ್ಷ 1ನೇ ತರಗತಿಗೆ ವಿದ್ಯಾಪ್ರವೇಶ ಮಾಡುವಾಗ ಏನನ್ನೋ ಕಳೆದುಕೊಂಡ ಭಾವ! ಅದೇಕೋ ಶಾಲೆಗೆ ಹೋದರೂ ಮನೆಗೆ ಬಂದರೂ ಅವನ ನೆನಪಾದಾಗಲೆಲ್ಲ ಶೂನ್ಯ ನೋಟ...! ಮರೆಯಬೇಕು ಎಂದರೂ ಮರೆಯಲಾಗದ ಸಂಕಟ. ನನ್ನನ್ನೇ ನಾ ಮರೆತು ಬಿಡುವಂತೆ ಮಾಡುತ್ತಿದೆ..... ಆ ಘಟನೆ.

ಹೌದು ಮಿತ್ರರೇ, ನಾನು ಹೇಳುತ್ತಿರುವುದು ಕಟ್ಟುಕತೆಯಲ್ಲ. ಮನ ಕಲುಕಿದ ಒಂದು ದುಃಖದ ವಿಷಯ. ನಮ್ಮ ಶಾಲೆಯಲ್ಲಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಮಕ್ಕಳು ದಾಖಲಾಗಿ ಶಾಲೆಗೆ ಬರುವ ಸಂಭ್ರಮ... ಅದರಲ್ಲೂ ಒಂದನೇ ತರಗತಿಯ ಪುಟಾಣಿಗಳನ್ನು ಸ್ವಾಗತಿಸುವ ಶಿಕ್ಷಕರು. ಶಾಲೆಯಲ್ಲಿ ಮಕ್ಕಳ ದಾಖಲಾತಿ ಅರ್ಜಿ ಭರ್ತಿಗೊಳಿಸಿ, ಬೇಕಾದ ಮಾಹಿತಿಯನ್ನು ತಿಳಿಸಲು ಮುಖ್ಯ ಶಿಕ್ಷಕರು ನನಗೆ ಜವಾಬ್ದಾರಿ ನೀಡಿದ್ದರು. ಅಂತೆಯೇ ನಾನು ಮಕ್ಕಳ ದಾಖಲಾತಿ ಮಾಡಿಕೊಳ್ಳುತ್ತಾ ಅವರ ಪೋಷಕರ ಜೊತೆ ಸ್ವಲ್ಪ ಮನೆ ಪರಿಸರದ ಬಗ್ಗೆನೂ ವಿಚಾರಿಸಿಕೊಳ್ಳುತ್ತಿದ್ದೆ. ಏಕೆಂದರೆ ಮಗುವಿನ ಕಲಿಕೆಗೆ ಮನೆ ಪರಿಸರವೂ ಪೂರಕವಾಗಿದೆಯೋ ಅಥವಾ ನಾವೇನಾದರೂ ಪರಿಹಾರ ಕಂಡುಕೊಳ್ಳಬೇಕೋ ಏನೋ ಎಂದು ತಿಳಿಯುವ ಯೋಚನೆ... ಹಾಗೆಯೇ 1ನೇ ತರಗತಿಗೆ "ವಿಕಾಸ್"(ಹೆಸರು ಬದಲಿಸಲಾಗಿದೆ) ಎಂಬ ಮಗುವನ್ನು ದಾಖಲು ಮಾಡಲು ಅವನ ಅಪ್ಪ ಶಾಲೆಗೆ ಬಂದರು. ನನಗೆ ಅವರ ಪರಿಚಯ ಇರಲಿಲ್ಲ. ದಾಖಲು ಮಾಡಿಕೊಂಡ ನಂತರ ಅವರಲ್ಲೂ ಮನೆ ಪರಿಸರ ಬಗ್ಗೆ ವಿಚಾರಿಸಿದಾಗ ಅವರು ಕೂಲಿ ಕೆಲಸಕ್ಕೆ ಹೋಗಿ ಮನೆಯ ಹಾಗೂ ಮಗುವಿನ ಜವಾಬ್ದಾರಿ ನಿರ್ವಹಿಸುವ ಕುರಿತು ತಿಳಿಸಿದರು. ಅವರ ಹೆಂಡತಿ ಅಸೌಖ್ಯದಲ್ಲಿದ್ದು ನಡೆದಾಡುವುದು ಕಷ್ಟ, ಎಲ್ಲಾ ಕಡೆ ಮದ್ದು ಮಾಡಿ ಸಾಕಾಯ್ತು. ತುಂಬಾ ಕಷ್ಟ ಜೀವನ ಅಂತ ಬೇಸರ ವ್ಯಕ್ತ ಪಡಿಸಿದರು. ನಾನು ಕೆಲಸದಿಂದ ಬರುವಾಗ ಮಗುವೇ ಗಂಜಿ ಬೇಯಲು ಒಲೆಯಲ್ಲಿ ಇಡುತ್ತಾನೆ ಅಂದರು. ಒಬ್ಬರು ಕಷ್ಟದಲ್ಲಿದ್ದಾರೆ ಎಂದರೆ ಮರುಗುವ ನನ್ನ ಮನಸ್ಸಿಗೆ ಅದೇಕೋ ತುಂಬಾ ಬೇಸರವಾಯಿತು. ನಾನು ಒಂದು ಕಡೆ ವೈದ್ಯರ ಹತ್ರ ಮದ್ದು ಮಾಡಿ ಹೇಳಿ ವೈದ್ಯರ ನಂಬರ್ ಕೊಟ್ಟೆ. "ಮಗುವನ್ನು ಪ್ರತಿದಿನ ಕರೆದುಕೊಂಡು ಬರಲು ಕಷ್ಟ. ಆಟೋ ವ್ಯವಸ್ಥೆ ಇದ್ದರೆ ಒಳ್ಳೆಯದು,ಹಣ ಕೊಡುತ್ತೇನೆ" ಅಂದರು. ನಾನು ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರ ಬಳಿ ಈ ವಿಷಯ ಹೇಳಿದೆ. ಅವರಿಬ್ಬರೂ ಆಟೋ ವ್ಯವಸ್ಥೆ ಮಾಡಿದರು. ಆ ಮುಗ್ಧ ಬಾಲಕ ನಲಿದಾಡುತ್ತ ಶಾಲೆಗೆ ಲವಲವಿಕೆಯಿಂದ ಬರಲು ಆರಂಭಿಸಿದ.

ಎಲ್ಲ ಮಕ್ಕಳ ತರಹ ವರ್ತನೆ ಅವನದ್ದಾಗಿರಲಿಲ್ಲ. ಕುಳಿತಲ್ಲಿ ಕೂರದೆ ಅವನದೇ ಲೋಕದಲ್ಲಿ ವಿಹರಿಸುತ್ತಿದ್ದ... ಮನೆಯಲ್ಲಿ ಅಮ್ಮನ ಆರೈಕೆ ಸರಿ ಸಿಗದೇ ಇದ್ದಾಗ ಮಗುವಿನ ವರ್ತನೆ ಹೇಗೆ ಎಂಬುದು ನಮಗೆಲ್ಲರಿಗೂ ಗೊತ್ತಲ್ವೆ? ಅವನು ನಲಿಕಲಿ "ಎ" ವಿಭಾಗದಲ್ಲಿ ಇದ್ದು ನಾನು ಆ ತರಗತಿಯ ಕ್ಲಾಸ್ ಟೀಚರ್ ಆಗಿದ್ದೆ. ಕಳೆದ ವರ್ಷ 3 ತಿಂಗಳು ನಲಿಕಲಿಗೆ ವಿದ್ಯಾ ಪ್ರವೇಶ ಸರ್ಕಾರದ ಆದೇಶ ಆಗಿತ್ತು. ಅದರನ್ವಯ ಚಟುವಟಿಕೆ ಮಿಳಿತ ಕಲಿಕೆಯಲ್ಲಿ ಮಕ್ಕಳು ತೊಡಗಿದ್ದರು. ಸಣ್ಣ ಮಕ್ಕಳೆಂದರೆ ನನ್ನ ಜೀವ. ಎಲ್ಲರನ್ನೂ ಮುದ್ದಿಸುತ್ತಿದ್ದೆ. ಆದರೂ ಅವನು ಎಂದರೆ ಅದೇಕೋ ವಿಶೇಷ ಕಾಳಜಿ. ನಾನು ಹಾಜರಿ ಕರೆಯುವಾಗ ಸರಿಯಾಗಿ ಉಚ್ಛಾರ ಬಾರದ ಅವನು "ಯಚ್ಚಿ ಟೀಚರ್" ಅಂತಿದ್ದ. ಅವನ ಉಚ್ಛಾರ ಸರಿಯಾಗಲಿ ಎಂದು ಹಾಗೆಯೇ ಮುದ್ದಿನಿಂದ ಐದಾರು ಬಾರಿ ಅವನ ಹೆಸರು ಕರೆಯುತ್ತಿದ್ದೆ. ಖುಷಿಯಿಂದ ಯಚ್ಚಿ ಟೀಚರ್ ಅಂತಿದ್ದ. ಹಾಗೆಯೇ ಅವನ ಪಾದಗಳ ಅಡಿಯಲ್ಲಿ ಆಗಾಗ ಅಲರ್ಜಿ ತರಹ ನೋವುಗಳು ಕಾಣಿಸಿಕೊಳ್ಳುವುದನ್ನು ಗಮನಿಸಿದೆ. ತುಂಬಾ ಬೇಸರವಾಯಿತು. ಅವನ ಅಪ್ಪನಿಗೆ ಫೋನ್ ಮಾಡಿದೆ. "ಅದು ಮಾಮೂಲು ಟೀಚರ್, ಮನೆಯಲ್ಲಿ ಕೆಸರಲ್ಲಿ ಆಡ್ತಾನೆ. ಕೆಸರು ಮುಟ್ಟಿದಾಗ ಜೋರಾಗುತ್ತೆ" ಅಂದ್ರು. ಆದ್ರೂ ನಾನು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹಠ ಮಾಡಿದೆ. ಕೆಲಸಕ್ಕೆ ಹೋದವರು ಶಾಲೆಗೆ ಬಂದರು. ಅವನ ನೋವು ಸರಿ ಕಮ್ಮಿಯಾದ ಮೇಲೆ ಶಾಲೆಗೆ ಬರಲಿ ಎಂದೆ. ನಮ್ಮ ಶಾಲೆಯ ಶಿಕ್ಷಕರೆಲ್ಲರಿಗೂ ಅವನ ಬಗ್ಗೆ ಹೇಳುತ್ತಿದ್ದೆ. ಅವರೆಲ್ಲರಿಗೂ ಅವನ ಮೇಲೆ ಅಪ್ಪಟ ಪ್ರೀತಿ, ಕಾಳಜಿ ಇತ್ತು. ಎಲ್ಲರೂ ಪ್ರತಿನಿತ್ಯ ಅವನನ್ನೊಮ್ಮೆ ಗಮನಿಸುತ್ತಿದ್ದರು. ತರಗತಿಯಲ್ಲಿ ಚೆನ್ನಾಗಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ. ಆದರೆ ಅವನು ಹೇಳಿದ ಹಾಗೆ ನಾನು ಕೇಳಬೇಕಿತ್ತು! ಅವನು ಹೇಳಿದ ಆಟದ ಸಾಮಾನು ಕೊಡಬೇಕಿತ್ತು. ಪಾಪ ಮಗು, ಅಮ್ಮನಿಗೂ ಹುಷಾರಿಲ್ಲ, ಮನೆಯಲ್ಲಿ ಇವನೂ ಕೆಲಸ ಮಾಡುತ್ತಾನೆ ಅಂತೆ ಎಂದು ಮನದಲ್ಲಿ ಭಾವಿಸಿಕೊಂಡು ಶಾಲೆಯಲ್ಲಾದ್ರು ಸಂತಸದಲ್ಲಿರಲಿ ಎಂದು ಯೋಚಿಸುತ್ತಿದ್ದೆ. ಅವನ ಅಪ್ಪ ತುಂಬಾ ಚೆನ್ನಾಗಿ ಅವನನ್ನು ನೋಡಿಕೊಳ್ಳುತ್ತಿದ್ದರು. ಎರಡು ದಿನ ಅವನು ಶಾಲೆಗೆ ಬರಲಿಲ್ಲ. ನನಗೇಕೋ ತಳಮಳ. ಫೋನ್ ಮಾಡಿದೆ. ಅವನ ಅಮ್ಮ ಮಾತಾಡಿ ಜ್ವರ ಮೇಡಂ ಅಂದ್ರು. ನಿಮ್ಮ ಸುದ್ದಿ ಹೇಳುತ್ತಿರುತ್ತಾನೆ ಮಗು ಅಂದ್ರು. "ಅವನನ್ನು ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಿ. ಹುಷಾರಾದಾಗ ಬರಲಿ" ಎಂದೆ. ಶಾಲೆಯಲ್ಲಿ ವಿದ್ಯಾಪ್ರವೇಶದ ಚಟುವಟಿಕೆಯಲ್ಲಿ ಅವನಿಗೆ ನನ್ನ ಸಮಯ, ಕ್ರಾಫ್ಟ್ ವರ್ಕ್, ಶುಭಾಶಯ ವಿನಿಮಯ ತುಂಬಾ ಇಷ್ಟ. ಅದ್ಭುತ ಪ್ರತಿಕ್ರಿಯೆ. ನಾನು ಕನ್ನಡ ಅಕ್ಷರ ಬರೆದುಕೊಟ್ಟರು ಸಹ A, A ಅಂತ ಬರಿತಿದ್ದ. ಅವನಿಗೆ ಇಂಗ್ಲೀಷ್ ತುಂಬಾ ಇಷ್ಟ. ಒಂದಿನ ಮಕ್ಕಳಿಗೆ ಪ್ರಾಣಿಗಳ ಕೂಗು ಎಂಬ ಚಟುವಟಿಕೆ ಶುಭಾಶಯ ವಿನಿಮಯದಲ್ಲಿ ಬಂದಿತ್ತು. ಮಕ್ಕಳಿಗೆ ಹೇಳಿಕೊಟ್ಟು ಪ್ರತಿಯೊಬ್ಬರಿಗೆ ಅವಕಾಶ ನೀಡಿದೆ. 3ನೇ ತರಗತಿ ಮಕ್ಕಳನ್ನು ಮೀರಿಸಿ ಅದ್ಭುತವಾಗಿ ಕೆಲವೊಂದು ಪ್ರಾಣಿಗಳ ಕೂಗನ್ನು ಹೊರಡಿಸಿದ. ಎಲ್ಲ ಶಿಕ್ಷಕರನ್ನು ನೋಡಲು ಕರೆದೆ. ಎಲ್ಲರೂ ಖುಷಿಪಟ್ಟರು. "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬಂತೆ ಈ ಮಗುವನ್ನು ಪ್ರತಿಭಾ ಕಾರಂಜಿಗೆ, ಸಹಪಠ್ಯ ಚಟುವಟಿಕೆಗಳಿಗೆ ಸಿದ್ಧಗೊಳಿಸಿ ಅದ್ಭುತ ಮಿಮಿಕ್ರಿಗಾರನಾಗಿ ಮಾಡಬೇಕು ಎಂದು ಹೇಳಿದೆ. ಹಾಗೆಯೇ ಅವನ ವಿದ್ಯಾಪ್ರವೇಶ ದ ದಾಖಲೆಯಲ್ಲಿ ಮಿಮಿಕ್ರಿ ಮಾಡುವ ಪ್ರತಿಭೆ ಇದೆ ಎಂದು ನಮೂದಿಸಿದೆ.

(ಇನ್ನೂ ಇದೆ)

-ಪವಿತ್ರಾ, ಕೊಕ್ಕಡ ಗ್ರಾಮ, ಬೆಳ್ತಂಗಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ