ನನ್ನೊಳಗಿನ “ಅವನು" (ಭಾಗ 2)

ನನ್ನೊಳಗಿನ “ಅವನು" (ಭಾಗ 2)

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ನಮ್ಮ ಶಾಲೆಯಲ್ಲಿ ನಡೆದಿದ್ದು, ಸಣ್ಣ ಮಕ್ಕಳಿಗೆ ರಜೆ ಕೊಡುವ ಬದಲು ಪೋಷಕರ ಜೊತೆ ಬರಬೇಕು ಎಂದು ಹೇಳಿದ್ದೆವು. ಅವನನ್ನು ಅವನ ಅಪ್ಪ ಕೆಲಸ ಇದೆಯೆಂದು ಕರೆದುಕೊಂಡು ಬಾರದಿದ್ರೆ ಎಂದು ಯೋಚಿಸಿ ಫೋನ್ ಮಾಡಿ, "ಮಗುವಿಗೆ ಆಟ ಎಂದರೆ ತುಂಬಾ ಇಷ್ಟ. ಅದಲ್ಲದೆ ಊಟಕ್ಕೂ ಗಮ್ಮತ್ತಿದೆ. ಅವನನ್ನು ಕರೆದುಕೊಂಡು ಬರಲೇಬೇಕು" ಎಂದು ಹೇಳಿದೆ. ಅಂತೆಯೇ ಅವನಪ್ಪ ಕರೆದುಕೊಂಡು ಬಂದರು. "ನೀವು ತುಂಬಾ ಚೆನ್ನಾಗಿ ಮಗನನ್ನು ನೋಡಿಕೊಳ್ಳುತ್ತೀರಿ ಮೇಡಂ. ಅವನಿಗೆ ನಿಮ್ಮದೇ ಸುದ್ದಿ ಮನೆಯಲ್ಲಿ.... ಖುಷಿಯಿಂದ ಶಾಲೆಗೆ ಬರ್ತಾನೆ" ಅಂದ್ರು. "ನೀವೇನು ಚಿಂತೆ ಮಾಡಬೇಡಿ. ಚೆನ್ನಾಗಿ ನೋಡಿಕೊಳ್ಳುತ್ತೇವೆ" ಅಂದೆ.

ಒಂದಿನ ನಾನು ಮಧ್ಯಾಹ್ನ ನಮ್ಮ ಸಂಬಂಧಿಕರ ಮನೆ ಕಾರ್ಯಕ್ರಮ ಎಂದು ರಜೆ ಹಾಕಿ ಹೊರಟೆ. ಕಾರು ಹತ್ರ ನಾನು ಬರುವಾಗ ತರಗತಿಯಿಂದ ಹೊರಗೆ ಬಂದ ಅವನು ಸ್ವಂತ ತಾಯಿ ಮಗುವನ್ನು ಬಿಟ್ಟು ಹೋಗುವಾಗ ಕಣ್ಣೀರು ಹಾಕಿದಂತೆ, ಕಣ್ಣೀರು ಸುರಿಸಿದಾಗ ನಮ್ಮ ಶಾಲಾ ಶಿಕ್ಷಕಿ ಸೆವರಿನ್ ಮೇಡಂ.. ನನ್ನನ್ನು ಕರೆದು ಇವನು ಅಳುತ್ತಿದ್ದಾನೆ ಟೀಚರ್ ಅಂತ ಹೇಳಿಕೊಂಡು ಮುದ್ದು ಮಾಡಲಾರಂಭಿಸಿದರು. ನನಗೂ ಅಳು ಬಂತು. ನಾನೀಗ ಬೇಗ ಹೋಗಿ ಬರುತ್ತೇನೆ ಅಂತ ಅವನಿಗೆ ಸಮಾಧಾನ ಹೇಳಿ ಹೊರಟೆ. ಆ ಮಗು ಅಷ್ಟೊಂದು ನನ್ನನ್ನು ಹಚ್ಚಿಕೊಂಡಿದೆ ಎಂದು ತಿಳಿದು ಇನ್ನೂ ಬೇಸರವಾಯ್ತು. ಎಳೆಯ ಮಕ್ಕಳಿಗೂ ನಮ್ಮ ಪ್ರೀತಿ, ಕಾಳಜಿ ಅರ್ಥವಾಗುತ್ತದೆ...!

ಇನ್ನೇನು ವಿದ್ಯಾಪ್ರವೇಶ ಎರಡು ಮೂರು ದಿನಗಳಲ್ಲಿ ಮುಗಿದು ಪಾಠ ಆರಂಭದ ದಿನಗಳು ಬರಲಿದ್ದು ನಾನು 1ನೇ ತರಗತಿಗೆ ಕನ್ನಡ ಅಕ್ಷರ ಕಲಿಸುವ ತವಕ, ಅವನಿಗೂ ಕನ್ನಡ ಅಕ್ಷರದ ಮೇಲೆ ಪ್ರೀತಿ ಬರುವ ಹಾಗೆ ಮಾಡಬೇಕು ಎಂದು ಕನಸು ಕಾಣುತ್ತಿದ್ದೆ. ಆ ದಿನ ಅವನು ಬಂದಿರಲಿಲ್ಲ. ನಾನು ಅವತ್ತು ತಲೆನೋವು ಎಂದು ಮಧ್ಯಾಹ್ನದ ನಂತರ ರಜೆ ಹಾಕಿ ಮನೆಗೆ ಬಂದೆ. ಮನೆಗೆ ಬಂದು ಸ್ವಲ್ಪ ಹೊತ್ತಿಗೆ ನಮ್ಮ ಶಾಲಾ ಶಿಕ್ಷಕಿ ಸವಿತಾ ಮೇಡಂ ನನಗೆ ಫೋನ್ ಮಾಡಿ ಟೀಚರ್, ಒಂದು ವಿಷಯ ನೀವು ಟೆನ್ಷನ್ ಮಾಡಬಾರದು ಎಂದರು. ಭಯವಾಯ್ತು... ಆದರೂ ಹೇಳಿ ಏನು ಅಂದೆ. ಅದೂ.. ಅದೂ "ವಿಕಾಸ್" ನ ಅಮ್ಮ ಬೆಳಿಗ್ಗೆ ತೀರಿಕೊಂಡರಂತೆ... ಮಾಧ್ಯಮದವರು, ಪಂಚಾಯತ್ ನವರೆಲ್ಲಾ ಸೇರಿದ್ದಾರಂತೆ ಅಂದ್ರು. ನನಗೆ ತುಂಬಾ ದುಃಖವಾಯಿತು. ಅವನು ಶಾಲೆಗೆ ಸೇರಿ 3ತಿಂಗಳು ಆಗುತ್ತಿದೆಯಷ್ಟೇ. ನಾನು ಅವರ ಮನೆಗೆ ಹೋಗಬೇಕು, ಅವನಮ್ಮನನ್ನು ನೋಡಿ ಮಾತಾಡಿಸಬೇಕು ಅಂತೆಲ್ಲ ಮನಸಲ್ಲಿ ಮೊದಲೇ ಯೋಚಿಸಿದ್ದೆ. ಆದರೆ ವಿಧಿಯಾಟ ಬಲ್ಲವರಾರು? ಆದರೂ ಮಗುವಿಗೆ ಅಮ್ಮ ಇಲ್ಲವಾದರೂ ಅಪ್ಪ ಇದ್ದಾರೆಲ್ವಾ, ಶಾಲೆಯಲ್ಲಿ ನಾವೂ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಮನದಲ್ಲಿ ದೃಢ ಸಂಕಲ್ಪ ತೊಟ್ಟೆ. ಆದರೆ... ಆದರೆ... ಸಂಜೆಯ ಹೊತ್ತಿಗೆ ಮುಖ್ಯಶಿಕ್ಷಕರು ಅವರ ಮನೆಗೆ ತೆರಳಿ ಪರಿಸ್ಥಿತಿ ನೋಡಿ ಅದೂ ವಿಕಾಸ್ ನನ್ನು ನೋಡಿ ತುಂಬಾ ಬೇಸರವಾಯಿತು. ಮಗುವಿಗೆ ಅಮ್ಮ ತೀರಿದ್ದು ಗೊತ್ತೇ ಆಗ್ತಿಲ್ಲ, ಮಣ್ಣಲ್ಲಿ ಆಡಿಕೊಂಡಿದ್ದ ಅಂದ್ರು. ನಾನು ಅಂತೂ ಹೋಗುವ ಯೋಚನೆ ಮಾಡಿದರೂ ನನಗೆ ದುಃಖ ಸಹಿಸಲಾಗದು ಎಂದು ಮನೆಯಲ್ಲೇ ಮಗುವಿಗಾಗಿ ಪ್ರಾರ್ಥಿಸಿದೆ. 

ಕತ್ತಲೆಯಾಗುತ್ತಿದ್ದಂತೆ ತಿಳಿಯಿತು ಅವನ ಅಪ್ಪನಿಂದ ಮಗು ದೂರವಾಗಬೇಕಾದ ಪರಿಸ್ಥಿತಿ, ಅವನಿಗೆ ಸಂಬಂಧಿಕರು ಇಲ್ಲವಾದುದರಿಂದ ಅವನನ್ನು ಮಂಗಳೂರು ಆಶ್ರಮಕ್ಕೆ ಸೇರಿಸುವುದು ಎಂದು. ಇದನ್ನು ತಿಳಿದ ನಾನು ಬಿಕ್ಕಿಬಿಕ್ಕಿ ಅಳತೊಡಗಿದೆ. ಆಕಾಶವೇ ಕಳಚಿ ಬಿದ್ದಂತಾಯಿತು. ಊಟನೂ ಮಾಡಲಿಲ್ಲ. ನನ್ನನ್ನು ನೋಡಿ ನನ್ನ ಮಗಳೂ ಅಳಲಾರಂಭಿಸಿದಳು. ಮುಖ್ಯಶಿಕ್ಷಕರು ಹಾಗೂ ಉಳಿದ ಶಿಕ್ಷಕರೆಲ್ಲರೂ ಅಳುತ್ತಿದ್ದರೂ ನನ್ನನ್ನು ಅವರೆಲ್ಲ ಫೋನ್ ಮಾಡಿ ಸಮಾಧಾನ ಮಾಡುತ್ತಿದ್ದರು. ಏಕೆಂದರೆ ಅವರೆಲ್ಲರಿಗೂ ನಾನು ಆ ಮಗುವನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುವ ಪರಿ ಗೊತ್ತಿತ್ತು. ಇಡೀ ರಾತ್ರಿ ಅವನಿನ್ನೂ ಶಾಲೆಗೆ ಬರುವುದಿಲ್ಲ ಎಂದು ತಿಳಿದು ಕೂಗಿದೆ. ಆ ದಿನದ ನನ್ನ ದುಃಖ ಹೇಳತೀರದು. ಆಶ್ರಮದಲ್ಲಿ ಹೇಗೆ ಹೊಂದಿಕೊಳ್ಳುತ್ತಾನೋ, ಅವನ ಪಾದಗಳ ಗಾಯವನ್ನು ಅಲ್ಲಿ ಗಮನಿಸಿ ಚೆನ್ನಾಗಿ ನೋಡಿಕೊಳ್ಳುತ್ತಾರೆಯೋ ಏನೆಲ್ಲಾ ಗೊಂದಲಗಳು... ಸ್ವಂತ ಮಗುವಿನಷ್ಟೆ ಬೇಸರಪಟ್ಟೆ. ಮರುದಿನ ಶಾಲೆಗೆ ಒಲ್ಲದ ಮನಸ್ಸಿನಿಂದ ಹೋದೆ. ಅವನಿಲ್ಲ!.... ಏನೋ ಕಳೆದುಕೊಂಡ ಭಾವ. ಶಿಕ್ಷಕರೆಲ್ಲರ ಕಣ್ಣಲ್ಲಿ ನೀರು... ನಾನಂತೂ ಕೂಗಿ ಕೂಗಿ ಬಸವಳಿದಿದ್ದೆ. "ಅವನು" ಇಲ್ಲದ ಆ ತರಗತಿ!..... ಮಕ್ಕಳಿಗೂ ಶಾಲೆಯಲ್ಲಿ ಬೇಸರ...

ಯಾವ ಜನ್ಮದ ಪುಣ್ಯವೋ ಏನೋ... ಅವನ ಆಶ್ರಮದಲ್ಲಿರುವ ಒಬ್ಬರು ಸ್ಟಾಫ್ ನಮ್ಮ ಶಾಲೆಯ ಅತಿಥಿ ಶಿಕ್ಷಕಿ ನವ್ಯ ಮೇಡಂ ರವರ ಹಳೆವಿದ್ಯಾರ್ಥಿ ಎಂದು ತಿಳಿಯಿತು. ಟೀಚರ್ ಅವರಲ್ಲಿ ಇವನನ್ನು ಚೆನ್ನಾಗಿ ನೋಡಿಕೊಳ್ಳಲು ವಿನಂತಿ ಮಾಡಿಕೊಂಡರು. ನಾನು ಕೂಡಾ ಅವರಿಗೆ ಫೋನ್ ಮಾಡಿ ಅವನ ಎಲ್ಲ ವಿಷಯ ಹೇಳಿ ಚೆನ್ನಾಗಿ ನೋಡಿಕೊಳ್ಳಿ, ನಿಮಗೆ ಪುಣ್ಯ ಸಿಗಬಹುದು ಎಂದು ಬೇಡಿಕೊಂಡೆ. ಅವನಿಗೆ ವೀಡಿಯೋ ಕಾಲ್ ಮಾಡಿದಾಗ ನನ್ನನ್ನು ನೋಡಿ ಜೋರು ಅಳಲಾರಂಭಿಸಿದ. ನಾನು ಬರ್ತೀನಿ... ಏನು ಬೇಕು ಕೇಳಿದೆ. ಚಾಕ್ಲೇಟ್ ಬೇಕು ಅಂದ. ನಾನು ಬರುವಾಗ ಚಾಕಲೇಟು ತರ್ತೀನಿ ಅಂದೆ. ಅವನಿಗೆ 3 ಜೊತೆ ಡ್ರೆಸ್ ತೆಗೆದು ಅಲ್ಲಿಗೆ ಕೊಟ್ಟು ಕಳುಹಿಸಿದೆ. ನೆನಪಾದಾಗ ಫೋನ್ ಮಾಡಿ ಮಾತಾಡುತ್ತಿದ್ದೆ. ಆದರೆ ಅವನಿಗೆ ಬೇಸರವಾಗುತ್ತಿತ್ತು.

ಈ ವರ್ಷ ಶಾಲೆ ಆರಂಭವಾದಾಗ ಅಯ್ಯೋ... ಅವನದೇ ನೆನಪಲ್ಲಿ ಮನಸ್ಸು ಭಾರ.... ಅಲ್ಲಿಯ ಸ್ಟಾಫ್ ಗೆ ಫೋನ್ ಮಾಡಿ ವೀಡಿಯೋ ಕಾಲ್ ನಲ್ಲಿ ಅವನನ್ನು ತೋರಿಸಿ ಎಂದೆ. ಅವನು ನನ್ನನ್ನು ನೋಡಿ ಏನು ಮಾತಾಡದೆ ಕಣ್ಣೀರು ಸುರಿಸಲಾರಂಭಿಸಿದಾಗ ನನಗೂ ದುಃಖ. ಅವನು ನನ್ನನ್ನು ಮರೆತಿಲ್ಲ. ಹೆತ್ತಮ್ಮನನ್ನು ಎಳವೆಯಲ್ಲಿಯೇ ಕಳೆದುಕೊಂಡು ಅಪ್ಪನಿಂದ ದೂರ ಇದ್ದು ಅನಾಥವಾಗಿದೆ ಈ ಮಗು!... ಆದರೆ ಆ ಮಗು ಸಂತಸದಲ್ಲಿ ಇರಲಿ ಎಂದು ನಗುತ್ತಾ ಮಾತಾಡಿಸಲು ಆರಂಭಿಸಿದೆ. ಅಲ್ಲಿ ಖುಷಿ ಆಗುತ್ತಿದೆಯಾ ಕೇಳಿದೆ. ಹೂಂ ಅಂದ. ನಮ್ಮ ಶಾಲೆಗೆ ಬರ್ತೀಯ ಅಥವಾ ಅಲ್ಲೇ ಶಾಲೆಗೆ ಹೋಗ್ತೀಯ ಅಂದೆ. ನಿಮ್ಮ ಶಾಲೆಗೆ ಬರುತ್ತೇನೆ ಅಂದ. ದುಃಖ ಉಮ್ಮಳಿಸಿ ಬಂತು. ನೀವು ಬನ್ನಿ ಅಂದ. ಏನು ತರಬೇಕು ಕೇಳಿದೆ. ಚಾಕೋಲೇಟ್ ಅಂದ! ಯಾರೆಲ್ಲ ಬರಬೇಕು ಅಂದೆ. ನೀವು, ನಿಮ್ಮ ಮಗಳು, ನಿಮ್ಮ ಮಗು ಅಂದ. ಓಕೆ ಪುಟ್ಟ, ಬರ್ತೀವಿ ಅಂದೆ. ತುಂಬಾ ಬೇಸರ..... ಪ್ರತಿದಿನವೂ.....!! ಎಲ್ಲೇ ಇರಲಿ..ಮುಗ್ಧ ಕಂದನಾದ ಅವನನ್ನು ದೇವರು ಕಾಪಾಡಲಿ.... ಅವನ ಭವಿಷ್ಯ ಉಜ್ವಲವಾಗಲಿ ಎಂದೇ ಬೇಡುತ್ತೇನೆ.

ಸ್ನೇಹಿತರೇ, ಅವನು 7ನೇ ತರಗತಿ ಆಗುವುದರ ಒಳಗೆ ಅವನಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಿ ಕೀರ್ತಿಶಾಲಿಯನ್ನಾಗಿ ಮಾಡಬೇಕು ಅಂದುಕೊಂಡಿದ್ದೆ. ನನ್ನ ಕನಸೆಲ್ಲ ನುಚ್ಚುನೂರಾಯಿತು. ಅಂದುಕೊಂಡಂತೆ ಜೀವನ ಸಾಗದು ಎಂಬುದಕ್ಕೆ ಇದೊಂದು ಒಳ್ಳೆಯ ನಿದರ್ಶನ. ಅವನನ್ನು ಶಾಲೆಯಲ್ಲಿ ಬಿಟ್ಟು ಇರಲು ಅಸಾಧ್ಯವಾದರೂ ಅನಿವಾರ್ಯತೆ..... ಆದರೇನು ಮಾಡುವುದು? ನಮ್ಮಿಂದಾದ ಸಹಾಯ, ಮಾರ್ಗದರ್ಶನ ನೀಡುತ್ತಾ ಆ ಮಗುವಿನ ಭವಿಷ್ಯ ಉಜ್ವಲವಾಗಲು ಸಹಕರಿಸುವುದು ಎಂದು ಮನದಲ್ಲೇ ಸಮಾಧಾನ ಪಡುವುದು. ಜೀವನವೆಂಬ ಪಯಣ ಹೀಗೆಯೇ...... ಬಂದಂತೆ ಸ್ವೀಕರಿಸಲೇಬೇಕು...!

(ಮುಗಿಯಿತು)

-ಪವಿತ್ರಾ, ಕೊಕ್ಕಡ ಗ್ರಾಮ, ಬೆಳ್ತಂಗಡಿ

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ