ನನ್ನ ಅಜ್ಜಿ
ಏನು ಹೇಳಲಿ ನನ್ನ ಬಾಲ್ಯವ
ಯಾರಿಗೆ ಹೇಳಲಿ ನನ್ನ ಬಾಲ್ಯವ ॥ಸ॥
ಕಳೆದುಕೊಂಡೆ ತಾಯಿಯ ಬಾಲ್ಯದಲ್ಲಿ
ನುಚ್ಚುನೂರಾಗಿಸಿಕೊಂಡೆ ಬಂಗಾರ ಬಾಲ್ಯವ
ಪರರ ಹಂಗಿನಲ್ಲಿ ಬೆಳೆದುಕೊಂಡೆ
ದಿನದಿನವೂ ನೋವನ್ನೇ ಉಂಡೆ ॥೧॥
ಕನವರಿಸಿದೆ ಅಮ್ಮಾ ಅಮ್ಮಾ ಎನ್ನುತ ಕನಸಿನಲ್ಲಿ
ಹುಡುಕಿದೆ ಅಮ್ಮಾ ಅಮ್ಮಾ ಎನ್ನುತ ಹಗಲಿನಲ್ಲಿ
‘ತೀರಿ ಹೋದರೂ’ ಎನ್ನ ಅಮ್ಮ ಸಿಗಬಹುದೆಂಬ ಭ್ರಮೆಯಲಿ
ಸೊರಗಿದೆ ದಿನದಿನವೂ ಅಮ್ಮನ ಕರೆಯಲ್ಲಿ ॥೨॥
ಸಾಕಿದಳು ಎನ್ನಯ ಅಜ್ಜಿಯೊಬ್ಬಳು
ದೇವರೇ ಕಳುಹಿಸಿದೆನೋ ಎನ್ನ ತಾಯಿಯ ಈ ರೂಪದಲಿ
ಎನ್ನಯ ಬಳಿಗೆ ಆಶಾಕಿರಣವಾದಳು
ಧಾರೆ ಎದೆದಳಜ್ಜಿ ಮಾತೃವಾತ್ಸಲ್ಯದಲ್ಲಿ ॥೩॥
ಓದು ಬರಹ ಇರಲಿಲ್ಲ ಅಜ್ಜಿಗೆ
ಓದು ಬರಹ ಕಲಿಯುವಂತೆ ಮಾಡಿದಳು ಎನಗೆ
ಸೇರಿಸಿದಳು ಜ್ಞಾನಮಂದಿರಕ್ಕೆ ವಿದ್ಯೆಯ ಹರಸಿದಳು ಎನಗೆ
ಏನದ್ಭುತವದೋ ಎಂದೂ ಮರೆಯದ ನೆನಪೆನಗೆ ॥೪॥
ತಾಯಿಯಾಗಿ ತಂದೆಯಾಗಿ ಗುರುವಾಗಿ
ಹೆಜ್ಜೆ ಹೆಜ್ಜೆಗೂ ದರ್ಶನ-ಮಾರ್ಗದರ್ಶನ
ಅರಳಿಸಿದಳು ಎನ್ನಯ ಬದುಕ ಪರಿಮಳಿಸುವಂತೆ
ದಿಕ್ಕು ತಪ್ಪಬಹುದಾದ ಬದುಕಿಗೆ ದಿಕ್ಸೂಚಿಯಾದಳಜ್ಜಿ ॥೫॥
-ಟಿ, ಮಂಜಪ್ಪ, ನವಿಲೆಬಸವಾಪುರ
ಚಿತ್ರ ಕೃಪೆ: ಇಂಟರ್ನೆಟ್ ತಾಣ