ನನ್ನ ಇಂಡಿಯಾ...

ನನ್ನ ಇಂಡಿಯಾ...

ಕವನ

ನನ್ನ ಇಂಡಿಯಾ..

ಹಳ್ಳಿಗಳ ಸುತ್ತಾ ಮುತ್ತು ರತ್ನದ ಬಿಕರಿ

ಸಾಂಬಾರ ಪಾದಾರ್ಥದ ಘಮ

ಸುಖ ನೆಮ್ಮದಿ ಜೀವನ ನಿನ್ನೊಳಗೆ..

 

ಬಂದ ಆಂಗ್ಲರು ಕಬಳಿಸಿದರು

ನಿನ್ನ ಸಂಪತ್ತು ಸಾಗರವ

ಕಾರ್ಮೋಡ ಕವಿದಿತ್ತು ಬಾಳಿಗೆ

ಬೆಳಕಾಗದೆ ಅಂಬರ..

 

ಹೋರಾಡಿ ಮಡಿದ ವೀರರ ಚಿತ್ರಪಟ

ಅಲ್ಪರ ಕೈಯೊಳಗೆ ಸುಡುತಿದೆ

ಏಕತೆಗೆಂದು ಅವರು ಮುಕ್ತಮಾಡಿದರು ಭಾರತವ

ಮನಸು ಭಿನ್ನಮತದಲ್ಲಿದೆ ನನ್ನ ಇಂಡಿಯಾ..

 

ಸಿರಿವಂತನ ಜೇಬು ತುಳುಕಿ ರೂಪಾಯಿಯೊಂದು ಬಿದ್ದಿತ್ತು 

ಹಸಿದ ಬಡವ ಖುಷಿಯಿಂದ ಹೆಕ್ಕಿದ

ಹೆಕ್ಕಿದವ ಕಳ್ಳ ಜೈಲಿನಲಿ ಕೊಳೆಯುತ್ತ

ಮಕ್ಕಳು ಮರಿ ಮನೆಯಲ್ಲಿ ಅನಾಥ

 

ಅಸಮಾನತೆಯಲ್ಲವೇ ಇಂಡಿಯಾ..

ಸ್ವಾತಂತ್ರ್ಯವೆಲ್ಲಿದೆ ಇಂಡಿಯಾ

ಮಾತು ಮುಚ್ಚಿಸುವ ಕಾರ್ಯ ನಡೆಯುತಿರುವಾಗ

ಬಡವನ ಕೋಪ ದವಡೆಯಡಿಗೆ ಸರಿದಿರುವಾಗ..

 

ನನ್ನ ಇಂಡಿಯಾ..

ಸೈನಿಕರನ್ನು ಗಡಿಯಲ್ಲಿ ಬಿಟ್ಟು

ರಕ್ಷಣೆಯ ಜವಾಬ್ದಾರಿ ಅವರಿಗೆ ಕೊಟ್ಟು

ಕಲಹವಿದೆ ನಮ್ಮಲ್ಲಿ ಒಳಗೊಳಗೆ

 

ಟೀಕೆ ಮಾತು ಸಾಕಾಗಿದೆ

ಬಡವನ ಹೊಟ್ಟೆ ಬರಿದಾಗಿದೆ

ಸಂಘರ್ಷದ ಬೇಗೆಯು ಸುಡುತಿದೆ

ಆದರೂ ಅವ ಮೂಢನಂತಿದ್ದಾನೆ

ಬದಲಿಸಬೇಕು ಮೋಸಗಾರರ ಬಣ್ಣ

ಹೊಂಗಿರಣಕೆ ತೆರೆಯಬೇಕು ಕಣ್ಣ

ವೇಷಧಾರಿಗಳ ತೊಲಗಿಸಬೇಕು ಇಂಡಿಯಾ...     

-ಶಮೀರ್ ನಂದಿಬೆಟ್ಟ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್