ನನ್ನ ಕಿಟಕಿ

ನನ್ನ ಕಿಟಕಿ

ಪುಸ್ತಕದ ಲೇಖಕ/ಕವಿಯ ಹೆಸರು
ಯೋಗೀಂದ್ರ ಮರವಂತೆ
ಪ್ರಕಾಶಕರು
ಪ್ರಿಸಮ್ ಬುಕ್ಸ್ ಪ್ರೈ. ಲಿ.
ಪುಸ್ತಕದ ಬೆಲೆ
ರೂ. ೨೦೩, ಮುದ್ರಣ : ೨೦೨೨

ಲೇಖಕ, ಅಂಕಣಕಾರ ಯೋಗೀಂದ್ರ ಮರವಂತೆ ಅವರು ಪಶ್ಚಿಮ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಗ್ರಾಮದವರು. ಇಂಗ್ಲೆಂಡ್ ನ  ಬ್ರಿಸ್ಟಲ್ ನಗರದ "ಏರ್ ಬಸ್"  ಕಂಪನಿಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರಾಗಿರುವ ಅವರು ಬ್ರಿಟನ್ನಿನ ಜೀವನಾನುಭವಗಳನ್ನು ಅಂಕಣಗಳಾಗಿ ಪ್ರಬಂಧಗಳಾಗಿ ಕನ್ನಡದ ಪತ್ರಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಸುಧಾ ವಾರಪತ್ರಿಕೆಯ 2019 ಹಾಗು 2021ರ  ಯುಗಾದಿ ಸ್ಪರ್ಧೆಗಳಲ್ಲಿ  ಇವರ ಪ್ರಬಂಧಗಳು  ಬಹುಮಾನ ಪಡೆದಿವೆ.

ಯೋಗೀಂದ್ರ ಮರವಂತೆ ಅವರ ನೂತನ ಪ್ರಬಂಧ ಸಂಕಲನ ನನ್ನ ಕಿಟಕಿ. ಹಿರಿಯ ಕತೆಗಾರ, ಲೇಖಕ ರಘುನಾಥ ಚ.ಹ. ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. “ಯೋಗೀಂದ್ರ ಮರವಂತೆ ಅವರ ‘ನನ್ನ ಕಿಟಕಿ’ ಪ್ರಬಂಧ ಪ್ರಕಾರದ ಬಗ್ಗೆ ಪ್ರೀತಿಯುಕ್ಕಿಸುವ ಪ್ರಬಂಧಗಳ ಸಂಕಲನ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಕಲೆಹಾಕಿದ ವಿವರಗಳ ಆಕರ್ಷಕ ಜೋಡಣೆಯೇ ಪ್ರಬಂಧ ಎನ್ನುವಂತಾಗಿರುವ ದಿನಗಳಲ್ಲಿ, ರಮ್ಯ ಭಾಷೆಯಲ್ಲಿ ರೂಪುಗೊಂಡ ಬರವಣಿಗೆಯನ್ನು ಪ್ರಬಂಧವೆಂದು ಪ್ರಕಟಿಸುತ್ತಿರುವ ಸಂದರ್ಭದಲ್ಲಿ, ಯೋಗೀಂದ್ರರ ಪ್ರಬಂಧಗಳು ‘ಪ್ರಬಂಧ ಧ್ವನಿ’ಯ ಮೂಲಕ ಗಮನಸೆಳೆಯುತ್ತವೆ. ಪ್ರಬಂಧದ ಶಿಲ್ಪ ಹಾಗೂ ಧ್ವನಿಯ ಕಸುಬುದಾರಿಕೆಯ ಬಗ್ಗೆ ಗಮನಕೊಡುವ ನಿಜ ಪ್ರಬಂಧಗಳ ಕಾರಣದಿಂದಾಗಿ ‘ನನ್ನ ಕಿಟಕಿ’ ಗಮನಸೆಳೆಯುತ್ತದೆ. ಯೋಗಿಂದ್ರರ ಪ್ರಬಂಧಗಳಲ್ಲೂ ವಿವರಗಳಿವೆ. ಆಕರ್ಷಕ ಹೆಣಿಗೆಯೂ ಇದೆ. ಆದರೆ, ಈ ವಿವರಗಳು ಮಾಹಿತಿಯಾಗಿಯಷ್ಟೇ ಉಳಿಯದೆ, ಮೋಹಕ ಭಾಷೆ ಬಣ್ಣದ ಹೊದಿಕೆಯಾಗಿಯಷ್ಟೇ ಉಳಿಯದೆ, ಹೊಸ ನೋಟವೊಂದನ್ನು ಕಟ್ಟಿಕೊಡುವ ಮೂಲಕ ಪ್ರಬಂಧದ ಸಾರ್ಥಕ ಕ್ಷಣಗಳನ್ನು ದಕ್ಕಿಸಿಕೊಂಡಿವೆ. 

‘ನನ್ನ ಕಿಟಕಿ’ ಸಂಕಲನದ 26 ಪ್ರಬಂಧಗಳು ಎರಡು ಭಾಗಗಳಲ್ಲಿ ವಿಂಗಡಣೆಗೊಂಡಿವೆ. ಮೊದಲ ಭಾಗದ ಪ್ರಬಂಧಗಳು ಪ್ರಬಂಧಕಾರರ ಊರು-ತವರಿನ ಭಿತ್ತಿಯಲ್ಲಿ ರೂಪುಗೊಂಡಿದ್ದರೆ, ಎರಡನೇ ಭಾಗದ ರಚನೆಗಳ ಕೇಂದ್ರದಲ್ಲಿರುವುದು ಪ್ರಬಂಧಕಾರರ ಕರ್ಮಭೂಮಿ ಇಂಗ್ಲೆಂಡು. ಈ ಪ್ರಬಂಧಗಳನ್ನು ‘ಕಿಟಕಿಯೊಳಗಿನ ರಚನೆಗಳು’ ಹಾಗೂ ‘ಹೊರಗಿನ ರಚನೆಗಳು’ ಎಂದೂ ಹೇಳಬಹುದು. ಊರ ಹಿನ್ನೆಲೆಯ ನೆನಪುಗಳು ಸಹಜವಾಗಿಯೇ ಆರ್ದ್ರತೆಯನ್ನು ಹೊಂದಿದ್ದು ನೆನಪುಗಳಿಗೆ ಹೆಚ್ಚು ಆತುಕೊಂಡಿದ್ದರೆ, ಉತ್ತರಾರ್ಧದ ರಚನೆಗಳು ವರ್ತಮಾನದ ನೆಲೆಗಟ್ಟಿನವು ಹಾಗೂ ಬೌದ್ಧಿಕತೆಯನ್ನು ಹೆಚ್ಚು ಅವಲಂಬಿಸಿದವು ಎಂಬುದಾಗಿ ಅವರು ಬರೆದಿದ್ದಾರೆ. ೧೭೪ ಪುಟಗಳ ಈ ಪ್ರಬಂಧ ಸಂಕಲನವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.