ನನ್ನ ಗೊಂದಲ ಅಥವಾ ಕಸ್ತೂರಿ ಕನ್ನಡ
ಇದೇನಿದು ವಿಚಿತ್ರ ಶೀರ್ಷಿಕೆ? ಎಂದೆನ್ನಬೇಡಿ. ನನ್ನಲ್ಲಿದ್ದ ಒಂದು ಗೊಂದಲ, ನಮ್ಮ ಭಾಷೆಯ ಸೊಗಸನ್ನು ಹೊರಹಾಕಿತು.
ಈ ಕೆಳಗಿನ ವಾಕ್ಯವನ್ನು ಗಮನಿಸೋಣ.
"ಮನೆಗೆ ಬಂದ ಆಫಿಸರನ್ನು ಹೊಸದಾಗಿ ಕೊಂಡ ಟೇಬಲ್ಲಿನ ಮುಂದಿನ ಚೇರಿನಲ್ಲಿ ಕೂಡಿಸಿ, ಒಂದು ಗ್ಲಾಸ್ ಜ್ಯೂಸ್ ಕೊಟ್ಟು ಸತ್ಕರಿಸಿದೆವು”. ಇದು ಸಾಮಾನ್ಯವಾಗಿ ನಾವೆಲ್ಲರೂ ಕೇಳುವ ಕನ್ನಡ. ಆದರೆ ಇದೇನಿದು ? ಇಂಗ್ಲೀಷ್ ಬಳಕೆ ಇಷ್ಟೊಂದು?
ಇದನ್ನೇ ಶುದ್ಧ ಕನ್ನಡದಲ್ಲಿ ಹೇಳೋಣ.
"ಮನೆಗೆ ಬಂದ ಸಾಹೇಬರನ್ನು ಹೊಸದಾಗಿ ಕೊಂಡ ಮೇಜಿನ ಮುಂದಿನ ಕುರ್ಚಿಯಲ್ಲಿ ಕೂಡಿಸಿ, ಒಂದು ಲೋಟ ಪಾನಕ ಕೊಟ್ಟು ಸತ್ಕರಿಸಿದೆವು”. ಇದು ಸೊಗಸಾಗಿದೆ ಎಂದೆನಿಸುತ್ತದೆ.
ಮೊದಲಿನ ವಾಕ್ಯದಲ್ಲಿನ ಇಂಗ್ಲೀಷ್ ಪದಗಳಿಗೆ ಬದಲಾಗಿ ಬಳಸಿದ ಯಾವ ಪದಗಳೂ ಕೂಡ ಕನ್ನಡದ್ದಲ್ಲ. ಪಾರಸಿಗಳ ಮೇಜು-ಕುರ್ಚಿಗಳಲ್ಲಿ ಅರಬರ ಸಾಹೇಬರನ್ನು ಕೂಡಿಸಿ ಮರಾಠಿಯ ಲೋಟದಲ್ಲಿ ಪಾನಕ ಕೋಟ್ಟಿದ್ದೇವೆ. ಆದರೂ ಎರಡನೇ ವಾಕ್ಯ ಹಿತವೆನಿಸುತ್ತದೆ! ಆದರೆ ಇದನ್ನು ಶುದ್ಧ ಕನ್ನಡವೆನಬಹುದೇ?
ಮಾರ್ಕೆಟ್ನಲ್ಲಿ ಇಲ್ಲದ ನಮ್ಮತನ ಬಜಾರಿನಲ್ಲಿ ಬರುತ್ತದೆ, ಕೋಲ್ಡ್ಡ್ರಿಂಕ್ಕ್ಕಿಂತ ಥಂಡಾ ಪಾನೀಯ ಹಿತವೆನಿಸುತ್ತದೆ. ಮಕ್ಕಳು ಮಾರ್ನಿಂಗ್ ಮಾರ್ಚ್ಕ್ಕಿಂತ ಪ್ರಭಾತ ಫೇರಿ ಮಾಡಿದರೇನೆ ಚೆನ್ನ. ವಿಜಾಪುರ, ಬೆಳಗಾವಿ ಜಿಲ್ಲೆಗಳಲ್ಲಿ ಬ್ರಿಜ್ಗಳು ಕಡಿಮೆ, ಫೂಲುಗಳು ಜಾಸ್ತಿ! ಗುಲ್ಬರ್ಗಾದಲ್ಲಿ ಬಿಲ್ಡಿಂಗ್ಗಳನ್ನು ಕಟ್ಟಲಾರಂಭಿಸುವದಿಲ್ಲ, ಅಲ್ಲಿ ಬಾಂದಕಾಮನ್ನು ಶುರುಮಾಡುತ್ತಾರೆ. ಜಮಾಬಂದಿ, ನಾಕಾಬಂದಿ ನಮ್ಮಲ್ಲಿ ಸಾಮಾನ್ಯ. ಬೀದರನಲ್ಲಿ ಪ್ರಾಬ್ಲೆಮ್ಗಳೇಇಲ್ಲ, ಬರೀ ಪರೇಶಾನಿಗಳೇ! ಕರ್ನಾಟಕದಲ್ಲಿ ದಫೇದಾರರು, ಜಮಾದಾರರು, ಹವಾಲ್ದಾರರು ಜವಾಬ್ದಾರಿಯಿಂದ ಕೆಲಸ ಮಾಡುತ್ತಾರೆ.
ಇಷ್ಟೊಂದು ಅನ್ಯದೇಶೀಯ ಶಬ್ದಗಳನ್ನು ಲೀಲಾಜಾಲವಾಗಿ ತನ್ನಲ್ಲಿ ಸೇರಿಸಿಕೊಂಡ ಕನ್ನಡ ಅದೇಕೋ ಆಂಗ್ಲಭಾಷೆಯನ್ನು ಸಾಕಷ್ಟು ದೂರವೇ ಇಟ್ಟಿದೆಯೆನ್ನಬೇಕು. ಬಹುಶಃ ಆಂಗ್ಲ ಭಾಷೆಯಕ್ಕಿಂತಲೂ ಈ ಇತರೆ ಭಾಷೆಗಳಿಂದ ಶಬ್ದಗಳನ್ನು ಮೊದಲು ಎರವಲು ಪಡೆದಿದ್ದೇವೆ ಎಂದೆನಿಸುತ್ತದೆ. ಅದಕ್ಕೇ ಈ ಕನ್ನಡತನವಿದೆಯೇನೋ? ಅಥವಾ ಬಾಕಿ ಎಲ್ಲ ಭಾಷೆಯ ಜನರಿಗಿಂತಲೂ ಆಂಗ್ಲ ಭಾಷೆಯ ಜನರ ದಬ್ಬಾಳಿಕೆ ನಮ್ಮ ಮೇಲೆ ಜಾಸ್ತಿಯಾಯಿತೇ? ಹಾಗಾಗಿ ಸಮಾಜವು ತಾನಾಗಿಯೇ ಆಂಗ್ಲ ಭಾಷೆಯನ್ನು ತಿರಸ್ಕರಿಸಿತೆ? ಇದೊಂದು ಒಳ್ಳೆಯ ಸಂಶೋಧನಾ ವಿಷಯವಾಗಬಹುದು. ಅಲ್ಲದೇ ಅನ್ಯದೇಶೀಯ ಶಬ್ದಗಳು ಸುಲಭವಾಗಿ ನಮ್ಮ ವ್ಯಾಕರಣಕ್ಕೆ ಹೊಂದಿಕೊಳ್ಳುತ್ತವೆ.
ಈ ನಿಟ್ಟಿನಲ್ಲಿ ಶುದ್ಧ ಕನ್ನಡವನ್ನು ವಿವರಿಸುವದು ಕಷ್ಟಕರ. ಕಸ್ತೂರಿಯಂತಿರುವ ಕನ್ನಡದಲ್ಲಿ ಕೆಲವು ಇತರ ಪರಿಮಳಗಳು ಸೇರಿದರೆ ತಪ್ಪೇನಿಲ್ಲ. ಆದರೆ, ಕಸ್ತೂರಿಯನ್ನು ಕಲುಷಿತಗೊಳಿಸುವದು ಬೇಡ. ಸಾಧ್ಯವಾದಷ್ಟು ಶುದ್ಧ(?) ಕನ್ನಡವನ್ನೇ ಪ್ರಯೋಗಿಸೋಣ, ಕನ್ನಡತನವನ್ನು ಉಳಿಸೋಣ, ಬೆಳೆಸೋಣ.