ನನ್ನ ತಪ್ಪೇ ಅಥವಾ ಸಿನಿಕತನವೇ?

ನನ್ನ ತಪ್ಪೇ ಅಥವಾ ಸಿನಿಕತನವೇ?

ಬರಹ

ಬೈದುಕೊಂಡೆ ಶುರುಮಾಡುತ್ತೇನೆ. ಮಂಗಳೂರಿನ ಮಧ್ಯಾಹ್ನದ ಬಿಸಿಲು, ಕರೆ೦ಟಿಲ್ಲದೇ ಕೊರಗುವ ಫ್ಯಾನ್ ಗಳ ನಡುವೆ ಕೂತಾಗ ಇದ್ದವರ ಮೇಲೆಲ್ಲಾ ರೇಗುತ್ತಾ ಇರೋದು ಒಂದು ಉದ್ಯೋಗ. ಬೈಯೊದು ನಮ್ಮ ಆಜನ್ಮ ಸಿದ್ಧಹಕ್ಕುರ್‍ಈ ಎಂಬ ಸ್ನೇಹಿತ ಪ್ರತಾಪನ ಮಾತು ನಕ್ಕು ನಿಲ್ಲಿಸಲು ಬಿಡೋದಿಲ್ಲ. ಸಾಹಿತ್ಯದ ಓದಿನಲ್ಲಿ ಹೇಳಿದ ಮೊದಲ ವಾಕ್ಯವೇ ’ಪ್ರಮಾಣಿಸಿ ನೋಡು’. ಅಂದಿನಿಂದ ಶುರುವಾದ ಈ ಖಾಯಿಲೆ ಇನ್ನು ನಿಂತಿಲ್ಲ. ಯಾಕೋ ಗೊತ್ತಿಲ್ಲ, ತುಂಬಾ ಇಷ್ಟ ಅದ್ರು ಬೈತೆನೆ. ಇಂಥ ಸಿನಿಕತನ ಇತ್ತೀಚೆಗೆ ಆರಂಭವಾಗಿದೆ. ಒಟ್ಟು ಬೈಯ್ಯುತ್ತಾ ಯಾವುದನ್ನು ರಿಸಿವ್ ಮಾಡದ ಮೆನ್ಟಾಲಿಟಿ ತಲುಪಿದ ಬಗ್ಗೆ ವಿಷಾದವಿದೆ. ಬಾಲ್ಯದ ಮುಗ್ಧತೆ ಇದ್ದಿದರೆ ಎಲ್ಲವನ್ನು ನನ್ನದು ಮಾಡಿಕೊಳ್ಳಬಹುದಿತ್ತು. ಇದು ನನ್ನೊಬ್ಬನ ಖಯಾಲಿಯಲ್ಲ ಬಿಡಿ, ನನ್ನ ಪತ್ರಕರ್ತ ಮಿತ್ರ ನನಗಿಂತ ಸಿನಿಕ. ಅದು ಎಷ್ಟೆಂದರೆ ತನ್ನ ಬಗ್ಗೆ ದಿನಕ್ಕೆ ಹತ್ತು ಸಲ ಬೈದುಕೊಳ್ಳುತ್ತಾನೆ.
ನನಗೂ ನನ್ನ ತಮ್ಮನಿಗೂ ವಾದ ಶುರುವಾಯಿತೆಂದರೆ ಮುಗಿಯಿತು ಸಂಧಾನಕ್ಕೆ ಅಪ್ಪನ ಬೈಗುಳವೇ ಮದ್ದು. ಅತನಿಗೆ ತಾನು ಕಲಿತ ಇಂಗ್ಲೀಷ್ ಸಾಹಿತ್ಯದ ಬಗ್ಗೆ ಬ್ರಿಟಿಷರಿಗಿಂತ ಹೆಚ್ಚು ಪ್ರೀತಿ. ನಾನೋ ಕನ್ನಡಾಂಬೆಯ ಮುದ್ದು ಕುವರ, ಕನ್ನಡ ಸಾಹಿತ್ಯ ಓದಿದ ತಪ್ಪಿಗೆ ವಾದಿಸಿ ಗೆಲ್ಲಲೇಬೇಕು. ಅಲ್ಲಿಗೆ ಆರಂಭವಾಗುತ್ತದೆ ನಮ್ಮ ಕದನ. ಎಲ್ಲ ಸಾಹಿತಿಗಳು, ಕೃತಿಗಳು ನಮ್ಮ ಜಗಳದಿಂದ ವಂಚಿತರಾಗಲು ಸಾಧ್ಯವೇ ಇಲ್ಲ. ಆತನ ಮೇಲೆ ನಾನು ಪ್ರಯೋಗಿಸುವ ಪ್ರಮುಖ ಅಸ್ತ್ರ ಜಾಗತಿಕರಣದ ಗುಲಾಮ ನೀನು ಎಂಬುದು. ಅದು ಸರಿ, ಇಷ್ಟು ವರ್ಷ ಕಸರತ್ತು ಮಾಡಿದರೂ ನಿನಗೆ ಆದ ಲಾಭವಾದರೂ ಏನು ಎಂಬ ಪ್ರಶ್ನೆಯಿಂದ ಬಯಲಲ್ಲಿ ಬೆತ್ತಲಾದಂತೆ ಅನಿಸಿದರೂ ನನ್ನ ಸಿನಿಕತನ ನನ್ನನ್ನು ಯಾವಾತ್ತೂ ವಾದದಲ್ಲಿ ಗೆಲ್ಲಿಸಿದೆ. ಎಂ.ಎ ಯಲ್ಲಿ ಕಲಿತ ಎಲ್ಲ ವಾದಗಳನ್ನು ಪ್ರಯೋಗಿಸಿದರೂ ಆತ ಸೋಲೊಪ್ಪಲಾರ.
ಇಷ್ಟಾಗಿಯೂ ನಾನು ಗುಟ್ಟಿನ ವಿಷಯ ನಿಮಗೆ ಮಾತ್ರ ಹೇಳಬೇಕು. ವಿಜ್ಞಾನ ವಿದ್ಯಾರ್ಥಿಯಾದ ಆತನನ್ನು ಇಂಗ್ಲೀಷ್ ಎಮ್.ಎ ಗೆ ಸೇರುವಂತೆ ಪುಸಲಾಯಿಸಿದವನು ನಾನೇ. ಎಲ್ಲಿಯೋ ನನ್ನ ಮನದ ಮೂಲೆಯ ಆಸೆ ಆತನ ಮೂಲಕ ನರವೇರಿದೆಯೇ ಎಂಬ ಗುಮಾನಿ.
ಅದರೂ ಆತನ ಮಾತನ್ನು ಅಷ್ಟು ಬೇಗ ತಳ್ಳಿಹಾಕಲಾಗುತ್ತಿಲ್ಲ. ಉದ್ಯೋಗಬೇಟೆಯ ಬಿಸಿಯಲ್ಲಿ ಈ ಸಿನಿಕತನ ಸ್ವಲ್ಪ ತಂಪು ನೀಡಿದರೂ ಯಾವುದಕ್ಕೂ ಇರಲಿ ಎಂದು ಇಂಗ್ಲೀಷ್ ಕಲಿಯಲು ಅರ್ಜಿ ಗುಜರಾಯಿಸಿದ್ದೇನೆ. ಯಾಕೊ ಒಂದು ಕಡೆ ಕನ್ನಡ ಸಾಹಿತ್ಯವನ್ನು ಪೂರ್ಣ ಕಲಿಯಲಾಗದ, ಇಂಗ್ಲೀಷನ್ನು ಅಪ್ಪಿಕೊಳ್ಳಲು ಮನಸೊಪ್ಪದ ಸಂದಿಗ್ಧದಲ್ಲಿದ್ದೇನೆ. ಇದು ಸಿನಿಕತನವೇ ಅಥವಾ ನನ್ನ ತಪ್ಪೇ?