ನನ್ನ ತಮ್ಮ ಶಂಕರ

ನನ್ನ ತಮ್ಮ ಶಂಕರ

ಪುಸ್ತಕದ ಲೇಖಕ/ಕವಿಯ ಹೆಸರು
ಅನಂತನಾಗ್
ಪ್ರಕಾಶಕರು
ನಳಂದ ಮಂಟಪ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦, ಮುದ್ರಣ: ೨೦೦೧

‘ನನ್ನ ತಮ್ಮ ಶಂಕರ್' ಎನ್ನುವ ಪುಸ್ತಕ ಖ್ಯಾತ ಚಿತ್ರನಟ, ನಿರ್ದೇಶಕ ಶಂಕರ್ ನಾಗ್ ಅವರ ಜೀವನ ಕಥನ ಅವರ ಅಣ್ಣನ ದೃಷ್ಟಿಯಲ್ಲಿ. ಬದುಕಿದ ಕೇವಲ ೩೬ ವರ್ಷಗಳಲ್ಲಿ ಶಂಕರ್ ಸಾಧಿಸಿದ್ದು ಬಹಳ. ಪಾದರಸದ ವ್ಯಕ್ತಿತ್ವ, ದೂರದರ್ಶಿ ಚಿಂತನೆ ಇವೆಲ್ಲಾ ಮೇಳೈಸಿದ ಅಪರೂಪದ ವ್ಯಕ್ತಿ ಶಂಕರ್ ನಾಗ್. ಇವರ ಸಾವಿನ ಬಳಿಕ ಅನಂತನಾಗ್ ಒಂದು ರೀತಿಯಲ್ಲಿ ಕುಸಿದು ಹೋಗಿದ್ದರು. ಆದರೆ ಸಾಹಿತಿ, ಪತ್ರಕರ್ತ ಲಂಕೇಶ್ ಅವರ ಮಾತಿಗೆ ಕಟ್ಟುಬಿದ್ದು ತಮ್ಮ ಹಾಗೂ ಶಂಕರ್ ನಾಗ್ ಒಡನಾಟವನ್ನು ಲಂಕೇಶ್ ಪತ್ರಿಕೆಯಲ್ಲಿ ಬರೆಯಲು ಪ್ರಾರಂಭಿಸಿದ ನಂತರ ಸ್ವಲ್ಪ ಚೇತರಿಸಿಕೊಂಡರು. ಶಂಕರ್ ನಾಗ್ ಅಭಿಮಾನಿಗಳು ಈಗಲೂ ತಮ್ಮ ಆರಾಧ್ಯ ದೈವವನ್ನು ಮರೆತಿಲ್ಲ. ಬೆಂಗಳೂರಿನ ಆಟೋಗಳಲ್ಲಿ ಈಗಲೂ ಶಂಕರ್ ಹೆಸರು, ಚಿತ್ರಗಳಿವೆ. ಶಂಕರ್ ನೆನಪಿನಲ್ಲಿ ಈಗಲೂ ಚಲನ ಚಿತ್ರಗಳು ಬರುತ್ತಿವೆ. ಇದು ಓರ್ವ ನಟನ ಸಾರ್ಥಕತೆ ಎಂದರೆ ತಪ್ಪಿಲ್ಲ. ಎಲ್ಲದರ ನಡುವೆ ಅನಿಸುವುದು ಒಂದೇ... ಶಂಕರ್ ಇನ್ನೂ ಬದುಕಿರಬೇಕಿತ್ತು.

ಅನಂತನಾಗ್ ಮಾತುಗಳಲ್ಲೇ ಹೇಳುವುದಾದರೆ “೧೯೯೦ರಲ್ಲಿ ಶಂಕರನ ನಿಧನದ ನಂತರ ನನ್ನ ಮನಸ್ಥಿತಿ ತುಂಬಾ ಹದಗೆಟ್ಟಿತ್ತು. ೧೯೯೧ರಲ್ಲಿ ಮಂಗಳೂರಿಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ಅಲ್ಲಿಗೆ ಲಂಕೇಶರೂ ಬಂದಿದ್ದರು. ರಾತ್ರಿ ಸೇರಿದಾಗ ಮೇಷ್ಟ್ರು ‘ಎಷ್ಟು ದಿನಾಂತ ಹೀಗೆ ಕೊರಗ್ತೀರಿ? ಅದರಿಂದಾಚೆಗೆ ಬನ್ನಿ. ಸಕಾರಣವಿಲ್ಲದೆ ನಾವೆಲ್ಲರೂ ಪಾಪಪ್ರಜ್ಞೆಯಿಂದ ನರಳುತ್ತಿರುತ್ತೇವೆ. ನೀವು ವಾರ ವಾರ ಶಂಕರನ ಬಗ್ಗೆ ನಿಮಗನಿಸಿದ್ದು ಬರೆಯಿರಿ. ಪತ್ರಿಕೆಯಲ್ಲಿ ಹಾಕ್ತೀನಿ' ಎಂದಂದು ಕಣ್ಣಲ್ಲಿ ಕಣ್ಣಿಟ್ಟು ಅದೆಷ್ಟೋ ಸಮಯ ದಿಟ್ಟಿಸಿದರು…

--ಶಂಕರ ನನಗೆ ಅವಿಸ್ಮರಣೀಯ. ಬಂಧುವಾಗಿ ಮಾತ್ರವಲ್ಲ, ಓರ್ವ ವ್ಯಕ್ತಿಯಾಗಿ, ಪರಿಪೂರ್ಣ ವ್ಯಕ್ತಿತ್ವ ಪಡೆದವನಾಗಿ. ಅವನ ಎಲ್ಲಾ ನೆನಪುಗಳನ್ನು ಸಂಪೂರ್ತಿಯಾಗಿ ಬರೆಯಲು, ದಾಖಲಿಸಲು ಆಗುವುದೇ ಇಲ್ಲ! ಅವನನ್ನು ನಾನು ‘ನೆನಪಿಸಿಕೊಳ್ಳುತ್ತೇನೆ' ಎಂದರೆ ಸಾಕೆನಿಸುವುದೇ ಇಲ್ಲ. ಅವನು ಈಗಲೂ ಪ್ರತಿ ದಿನ, ಪ್ರತಿ ರಾತ್ರಿ, ಕ್ಷಣ ಕ್ಷಣವೂ ಕಾಡುತ್ತಾನೆ. ಅವನು ಬದುಕದಿರುವುದು ನನಗೂ ಬದುಕಲು ಹಕ್ಕಿಲ್ಲವೆಂಬಂತೆ ದಿನಕ್ಕೊಮ್ಮೆಯಾದರೂ ನನ್ನನ್ನು ಚುಚ್ಚುತ್ತದೆ, ಇದು ಅನುಚಿತ ಪಾಪಪ್ರಜ್ಞೆ ಎಂಬ ಅರಿವು ನನಗಿದ್ದರೂ..." ಎಂದು ಬರೆದಿದ್ದಾರೆ.

ಶಂಕರ್ ನಾಗ್ ಜೊತೆಗಿನ ಬಾಲ್ಯ, ಚಿತ್ರ ಬದುಕು ಇವೆಲ್ಲವನ್ನೂ ಪುಸ್ತಕದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಅನಂತನಾಗ್ ಮಾಡಿದ್ದಾರೆ. ಎಲ್ಲಾ ಬರೆದರೂ ಇನ್ನಷ್ಟು ಉಳಿಯಿತಲ್ಲಾ, ಅನಿಸಿಬಿಡುತ್ತದೆ. ಅದೇ ಶಂಕರ್ ನಾಗ್ ವ್ಯಕ್ತಿತ್ವ. ಪುಸ್ತಕದ ಬಹಳಷ್ಟು ಕಡೆ ಆಂಗ್ಲ ಪದಗಳು ಓದಲು ಸಿಗುತ್ತದೆ. ಇದು ಸ್ವಲ್ಪ ಕಿರಿಕಿರಿ ಅನಿಸಿದರೂ ಅನಂತನಾಗ್ ವೃತ್ತಿಪರ ಬರಹಗಾರರಲ್ಲ ಎಂದು ಯೋಚಿಸುವಾಗ ಅವರ ಅನಿವಾರ್ಯತೆಯ ಅರಿವಾಗುತ್ತದೆ. ಶಂಕರ್ ನಾಗ್ ಭೀಕರ ಕಾರ್ ಅಪಘಾತದಲ್ಲಿ ಸತ್ತ ದಿನದಂದು ಅನಂತನಾಗ್ ಮನದಲ್ಲಿ ಮೂಡಿದ ಭಾವನೆಗಳನ್ನು ಅವರು ಹಂಚಿಕೊಂಡಿರುವುದನ್ನು ಓದಿದಾಗ ಕಣ್ಣಲ್ಲಿ ನೀರು ಬರುತ್ತದೆ. 

ಪುಸ್ತಕದ ಕೊನೆಯಲ್ಲಿ ಅನಂತನಾಗ್ ಅಮ್ಮನಿಗೆ ವಿಷಯ ತಿಳಿಸಲು ಫೋನ್ ಮಾಡಿದಾಗ ಅವರು ಹೇಳುತ್ತಾರೆ “ಅನಂತ್, ಅಮ್ಮ ಆರ್ಡರ್ ಮಾಡಿದಂತೆ ‘ನೋಡು ಅಳೋದು ನಿಲ್ಲಿಸು, ಮನಸ್ಸಿನಲ್ಲೇ ರಾಮಜಪ ಮಾಡ್ತಿರು. ಧೈರ್ಯವಾಗಿದ್ದು ಎಲ್ಲಾ ನೀನೇ ಮಾಡಬೇಕು. ಅಳಬೇಡ ಅಂದ್ನಲ್ಲ? ಅವರವರ ಹಣೆಯಲ್ಲಿ ಬರೆದಿದ್ದಾಗುತ್ತೆ. ಎಷ್ಟು ಅಪಘಾತಗಳು ಆಗ್ತವೆ. ನಮ್ಮನೆಯಲ್ಲಿ ಆದಾಗ ತಿಳಿಯುತ್ತೆ. ಒಂದೇಳ್ತೀನಿ. ಮೆಲುಕು ಹಾಕ್ತಿರು. ಮಾತಾಜಿಯವರು ಎರಡು ವರ್ಷಗಳ ಹಿಂದೇನೇ ಹೇಳಿದ್ರು ಅಂತಿದ್ನಲ್ಲಾ.. ವಿಜಯದಶಮಿಯ ಮರುದಿನ..ನನಗಂತೂ ಯಾರಪ್ಪಾ ದೇವರೇ ಅನಿಸುತ್ತಲೇ ಇತ್ತು. ಅನಂತನೇ? ಶಂಕರನೇ? ಅವನೇ ಎಂದಾಯಿತು. ಅವನು ಹೋದ. ನೀನಂತೂ ಮಾಡೆಲ್ಲ' ಎಂದು ನಿರ್ಣಾಯಕವಾಗಿ ಹೇಳಿ ಫೋನ್ ಇಟ್ಟುಬಿಟ್ಟರು. 

ಬಾಕಿ ಎಲ್ಲವೂ, ನಂತರದೆಲ್ಲವೂ ಜನರಿಗೆ ಗೊತ್ತು. ಏನು ಬರೆಯಲಿ? ಇಷ್ಟು ಮಾತ್ರ ಸತ್ಯ. ಶಂಕರನ ಸಾವು ನಮ್ಮ ಮನೆಯ ಮಾತ್ರದ ದುರಂತವಾಗಲಿಲ್ಲ. ವಿಶೇಷವಾಗಿ ಕನ್ನಡನಾಡಿನ ಜನತೆಯೇ ಕಣ್ಣೀರಿಟ್ಟಿತು. ಹಲುಬಿತು. ಶಂಕರನಿಗೆ ೧೯೯೦ರ ೯ ನವೆಂಬರಿಗೆ ವರ್ಷ ಮೂವತ್ತಾರು ಆಗುತ್ತಿತ್ತಷ್ಟೇ! ಅನುಕಂಪದ ಆ ಮಹಾಪೂರ ನಮ್ಮ ನಮ್ಮ ವೈಯಕ್ತಿಕ ದುಃಖ, ನೋವು, ಪರಿತಾಪವನ್ನು ಕೊಚ್ಚಿಕೊಂಡು ಹೋಯಿತು. ಅವನ ಅಂತ್ಯಕ್ಕೆ ದೊರಕಿದ ಪ್ರತಿಕ್ರಿಯೆ ನೋಡಿದ ನನಗೆ ಅಬ್ಬಾ! ಪ್ರತಿಕ್ರಿಯೆಯೆ ಅನಿಸಿತು. ಅದೇ ಶಂಕರನ ಬಹುದೊಡ್ಡ ಸಾಧನೆ ಎನಿಸಿ ಅದರ ಕುರಿತು ಸಾರ್ಥಕ್ಯ, ಧನ್ಯತೆ, ಸಮಾಧಾನ ನೀಡಿತು.”

ಸುಮಾರು ೨೧೦ ಪುಟಗಳ ಈ ಪುಸ್ತಕ ಓದಿ ಮುಗಿಸಿದಾಗ ಒಂದು ರೀತಿಯ ಮೌನ ನಿಮ್ಮನ್ನು ಕಾಡುವುದರಲ್ಲಿ ಸಂಶಯವಿಲ್ಲ.