ನನ್ನ ತೋಟದ ನೀಲಿ ಹೂಗಳು
ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಕಥೆಗಾರ ಜೋಗಿ (ಗಿರೀಶ್ ಹತ್ವಾರ್) ಹತ್ತಾರು ಕತೆಗಳನ್ನು ಹೆಕ್ಕಿ ತಂದು ‘ನನ್ನ ತೋಟದ ನೀಲಿ ಹೂಗಳು' ಎಂದು ಹೆಸರಿಸಿದ್ದಾರೆ. ಪುಸ್ತಕದಲ್ಲಿ ಪುಟ್ಟ ಪುಟ್ಟ ೧೪ ಕಥೆಗಳಿವೆ. ಜೋಗಿಯವರ ಕಥೆಗಳನ್ನು ಓದುವುದೇ ಬಹಳ ಸೊಗಸು.
ಈ ಪುಸ್ತಕವನ್ನು ಸಪ್ನ ಬುಕ್ ಹೌಸ್ ನವರು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಹೊರ ತಂದಿದ್ದಾರೆ. ಈ ಬಗ್ಗೆ ಸಾಹಿತಿ ಚೆನ್ನವೀರ ಕಣವಿಯವರು ಬೆನ್ನುಡಿಯನ್ನು ಬರೆದಿದ್ದಾರೆ. “..ಹೀಗೆ ಲೇಖಕ-ಪ್ರಕಾಶಕ-ಓದುಗರ ನಡುವೆ ನಿಕಟ ಸಂಪರ್ಕವನ್ನುಂಟು ಮಾಡುವ ಉದ್ದೇಶವೂ ಇದರಲ್ಲಿ ಅಡಕವಾಗಿದೆ. ಇದರಿಂದ ಪುಸ್ತಕಗಳಿಗೆ ಅಗತ್ಯವಾದ ಪರಿಸರವನ್ನು ನಿರ್ಮಿಸಿ, ಪುಸ್ತಕೋದ್ಯಮವನ್ನು ಒಂದು ನಾಡಿನ ಪ್ರಗತಿಶೀಲತೆಯ ಪ್ರತೀಕವಾಗಿರಿಸಿ, ಅನೇಕ ಮಾಧ್ಯಮಗಳ ಮಧ್ಯದಲ್ಲಿಯೂ ಪುಸ್ತಕಗಳು ಗೆಲ್ಲುವಂತೆ ಶ್ರಮಿಸುತ್ತಿರುವ ಸಪ್ನ ಬುಕ್ ಹೌಸ್ ನ ಪ್ರಯತ್ನ ಸ್ವಾಗತಾರ್ಹ" ಎಂದಿದ್ದಾರೆ.
ಪುಸ್ತಕದ ಪರಿವಿಡಿಯಲ್ಲಿರುವ ಕಥೆಗಳು ಇಕ್ಬಾಲ್ ಚರಿತೆ, ಕಾಗದದ ದೋಣಿ, ಮುಸ್ಸಂಜೆಯ ಮೂರು ಗಳಿಗೆ, ಲಾಲ್ ಕಿತಾಬ್, ನಾಯಕರ ಮೂರ್ತಿ, ಗುರುರಾಜನ ಸಮಾಜವಾದ, ಸಂತಾಪ, ಉಭಯ ಕುಶಲೋಪರಿ, ಒಂದು ಮಾತುಕತೆ, ಖಾಲಿ ಜೇಬು ರಾಲಿ ಸೈಕಲ್, ಮಾಲತಿಯ ದಿವಾಕರ, ಹಳದಿ ಎಲೆಯ ಸ್ವಗತ, ಇಷ್ಟು ದಿನ ಈ ವೈಕುಂಠ..., ಹುಲಿ ಬಂದ ಕಾಲಕ್ಕೆ ಹೀಗೆ ಕಥೆಗಳ ಶೀರ್ಷಿಕೆಯೇ ಕುತೂಹಲ ಕೆರಳಿಸುತ್ತವೆ.
ಇಲ್ಲಿರುವ ಕಾಗದದ ದೋಣಿ ಕಥೆಯ ಕೊನೆಯ ಸಾಲುಗಳು ಬಹಳ ಸೊಗಸಾಗಿ ವರ್ಣಿಸಲ್ಪಟ್ಟಿವೆ. ಅಪ್ಪ ಹಾಗೂ ಅಜ್ಜನಿಂದ ತನ್ನ ಮಗ ಶ್ರೀನಿಧಿ ಹಾಳಾಗುತ್ತಿದ್ದಾನೆ ಎಂದು ಭಾವಿಸಿದ ಅಮ್ಮ ಅವನನ್ನು ಆಕೆಯ ಸುಪರ್ದಿಗೆ ತೆಗೆದುಕೊಂಡಳು. ಆದರೇನಾಯಿತು?
“ಶ್ರೀನಿಧಿ ಈ ಮಧ್ಯೆ ಕಳೆದುಕೊಂಡ ಬಾಲ್ಯದ ಹುಡುಗಾಟ, ಬೆರಗು ಇವುಗಳನ್ನು ದಾಖಲಿಸುವುದು ಇಲ್ಲಿನ ಉದ್ದೇಶವಲ್ಲ. ಅದು ಒಬ್ಬೊಬ್ಬರನ್ನು ಒಂದೊಂದು ಥರ ಕಾಡುತ್ತದೆ. ಮಕ್ಕಳು ನಮ್ಮ ದೇಶದಲ್ಲಿ ಇವತ್ತು ಹೆತ್ತವರ ಆಶೋತ್ತರಗಳನ್ನು ಪೂರ್ತಿ ಮಾಡುವ ಸಾಧನಗಳಂತೆ ಬಳಕೆಯಾಗುತ್ತದೆ ಅನ್ನುವುದನ್ನು ನೀವು ಒಪ್ಪುತ್ತೀರೋ ಇಲ್ಲವೋ ಗೊತ್ತಿಲ್ಲ. ಮಕ್ಕಳಿಗೆ ಚಂದದ ಬಟ್ಟೆ ಹಾಕಿ, ತಾವು ಬಾಲ್ಯದಲ್ಲಿ ಕಳೆದುಕೊಂಡ ಅನುಕೂಲಗಳು ಅವರಿಗೆ ಸಿಗುವಂತೆ ಮಾಡಿ ಸಂತೋಷಪಡುವಷ್ಟಕ್ಕೆ ಹೆತ್ತವರ ಸಂತೋಷ ಮತ್ತು ಸೆಲ್ಫ್ ಐಡೆಂಟಿಫಿಕೇಷನ್ ನಿಂತರೆ ಸಂತೋಷ. ಆದರೆ ಅದು ಮಕ್ಕಳನ್ನು ಪೂರ್ತಿಯಾಗಿ ರೂಪಿಸುವ ಮಟ್ಟಕ್ಕೆ ಬೆಳೆದರೆ ಏನಾಗುತ್ತದೆ ಅನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಈ ಕತೆಯಲ್ಲಿ ಬರುವ ತಾತ ಶ್ರೀಕಂಠಯ್ಯ ಕ್ರಮೇಣ ತಾನು ನಿರುಪಯುಕ್ತ ಅನ್ನುವ ಭಾವನೆಯನ್ನು ಬೆಳೆಸಿಕೊಳ್ಳುತ್ತಾನೆ. ಮಗನಿಗೆ ಆಕೆ ಎಲ್ಲಾ ಜಾಣತನವನ್ನು ಕಲಿಸಿಕೊಟ್ಟಿದ್ದಾಳೆ. ಜ್ಞಾನ ಭಂಡಾರ ಆಗುವಂತೆ ಮಾಡಿದ್ದಾಳೆ. ಆದರೆ ಕಾಗದದ ದೋಣಿ ಮಾಡುವ ಸರಳ ಕಲೆ, ಗಾಳಿಪಟ ಹಾರಿಸುವ ಸಂತೋಷ, ಎದ್ದು ಬಿದ್ದು ಸೈಕಲ್ ಕಲಿಯುವ ಖುಷಿ ಎಲ್ಲವೂ ಅವರಿಗೆ ಎರವಾಗಿದೆ. ಮುದುಕರಿಗೆ ತಾವು ನಿರುಪಯುಕ್ತ ಅನ್ನಿಸುವಂತೆ ಮಾಡಿದ್ದು ನಮ್ಮ ಕಾಲದ ದೊಡ್ದ ಸೋಲು. ಅವರೊಳಗಿನ ಅನುಭವ, ಕಲಾವಂತಿಕೆ ಕಲ್ಪನಾಶಕ್ತಿ ಮಕ್ಕಳಿಗೆ ವರ್ಗವಾಗುತ್ತಿತ್ತು. ಶ್ರೀನಿಧಿಯಂಥ ಮಕ್ಕಳು ಹಿರಿಯರ ಥರ ಮಾತನಾಡುತ್ತಿದ್ದಾರೆ. ಹಿರಿಯರು ಮುದುಕರಂತಾಗಿದ್ದಾರೆ. ಮುದುಕರು ಬದುಕಿದ್ದೂ ಸತ್ತಿದ್ದಾರೆ. ಈ ಸ್ಥಿತಿಯಿಂದ ಪಾರಾಗುವುದು ಹೇಗೆ? ಒಂದು ಗುಡ್ಡದ ಮೇಲೆ ನಿಂತುಕೊಂಡು ಅಜ್ಜ ಮಾಡಿಕೊಟ್ಟ ಗಾಳಿಪಟವನ್ನು ಪುಟ್ಟ ಹುಡುಗ ಹಾರಿಸುವ ದೃಶ್ಯ. ಸಣ್ಣ ಕೊಳದಲ್ಲಿ ತಾತನ ಮಾರ್ಗದರ್ಶನದಲ್ಲಿ ಮಗು ಮಾಡಿದ ದೋಣಿಯನ್ನು ತೇಲಿಬಿಡುವ ಅಪ್ಯಾಯಮಾನ ಕ್ಷಣ. ಗಿರಿಗಿಟ್ಲೆಯನ್ನು ಗಾಳಿಗೆದುರಾಗಿ ಹಿಡಿದು ಓಡುತ್ತಿರುವ ಕಂದನ ಕಾಲನ್ನೇ ನೋಡುತ್ತಿರುವ ತಾತ..."
ತಮ್ಮ ಕಥೆಗಳ ಬಗ್ಗೆ ಜೋಗಿಯವರು ತಮ್ಮ ಮುನ್ನುಡಿಯಾದ ‘ಇದನ್ನು ಆಮೇಲೂ ಓದಬಹುದು' ಇಲ್ಲಿ ಬರೆದದ್ದು ಹೀಗೆ “ಇಲ್ಲಿರುವ ಕತೆಗಳೆಲ್ಲ ನನ್ನ ಇಷ್ಟದವು. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದವು. ಇವುಗಳ ಮೂಲಕ ನಾನು ಜೀವನವನ್ನು ನೋಡಲು ಯತ್ನಿಸಿದ್ದೇನೆ. ಕೆಲವೊಂದು ಕತೆಗಳು ನನಗೆ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿವೆ. ಕೆಲವು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ.” ಎಂದಿದ್ದಾರೆ. ೧೪೨ ಪುಟಗಳ ಈ ಪುಸ್ತಕವನ್ನು ಜೋಗಿ ‘ಕತೆಗಳ ಸಹವಾಸದಲ್ಲಿ ಹಗಲಿರುಳು ಸುಖವಾಗಿದ್ದಾರೆಂದು ನಾನು ಗಾಢವಾಗಿ ನಂಬಿರುವ ‘ಕಥೆಕೂಟ'ದ ಮಿತ್ರಮಂಡಳಿಗೆ’ ಅರ್ಪಣೆ ಮಾಡಿದ್ದಾರೆ.