ನನ್ನ ದೇವರ ಪೂಜೆ

ನನ್ನ ದೇವರ ಪೂಜೆ

ಕವನ

ನಾ ಮಾಡುವ
ದೇವರ ಪೂಜೆಯ "ದೇವರು"
ಯಾರೆಂಬುದೇ ನನಗೆ ಗೊತ್ತಿಲ್ಲ.
ಇರುವನೆಂಬ ಭ್ರಮೆಯೂ ಇಲ್ಲ !
ಇದರೊಳಗಿದ್ದರೆ?
ದಯವಿಟ್ಟು ಹುಡುಕಿಕೊಳ್ಳಿ !

ಮೊದಲು 'ದೇವರುಗಳೆ'ಲ್ಲವನ್ನು
ಸ್ವಚ್ಚವಾಗಿ ತೊಳೆಯಬೇಕು
ತೊಳೆವಾಗ ನನ್ನ ಚಿತ್ತ ಕೊಳೆಯಾಗುತ್ತದೆ!
ಯಾಕಂದರೆ?
ದೇವರ ಗದ್ದುಗೆಯ ಮೇಲೆ ಹಾಸಿರುವ
ಪತ್ರಿಕೆಯ ತುಂಬೆಲ್ಲ
ಒಂದಿಲ್ಲೊಂದು ಪ್ರಚೋದಕ ಜಾಹೀರಾತುಗಳು!
ಅವುಗಳ ಬಗ್ಗೆ
ಕಿಂಚಿತ್ತೂ ಗಮನ ಹರಿಸದಿದ್ದರೆ
ನಮ್ಮ ಮನುಷ್ಯ ಕುಲಕ್ಕೆ ಅವಮಾನ
ಆಗ ಇನ್ನೆಲಿಯ ದೇವರ ಧ್ಯಾನ !

ಇನ್ನು ಫೋಟೋ-ಫ್ರೇಂಗಳಲ್ಲಿ ಬಂಧಿಸಿರುವ
ದೇವರುಗಳ ಜೊತೆ-ಜೊತೆಗೆ ಸರಿಸಮನಾಗಿ
ಮನೆಯ ಹಿರಿಯರ ಫೋಟೊ ಪೂಜಿಸಬೇಕು.
ಅವನ್ನು ಒರೆಸುವಾಗಲೂ
ನನ್ನ ಅರಿವು ಹರಿದು ಛಿದ್ರ-ಛಿದ್ರವಾಗುತ್ತದೆ.
ಹೇಗಂದರೆ?
ಕೆಲವು ಫೋಟೋ ಮುದ್ರಿಸಿದ
ಸ್ಟುಡಿಯೋದ ಹೆಸರು
ನನ್ನ ಹಳೆ ಪ್ರೇಯಸಿಯ ನಾಮಧೇಯ !
ಇಷ್ಟೇ ಸಾಕು,
ನೆನಪುಗಳ ಕಂತೆಯಲಿ ಕಳೆದು ಹೋಗಲು.

ಇವಿಷ್ಟು ಪ್ರವರ ಸಾಕಲ್ಲವೇ ?
ನನ್ನ ದೇವರ ಪೂಜೆಯ
ಶ್ರೆದ್ಧೆ ಅಳೆಯಲು !
ಅದರೂ ಮಾಡಲೇಬೇಕು "ದೇವರ ಪೂಜೆ "
ಕಾಟಾಚಾರಕ್ಕೆ.
ಮನೆಯವರ ಒತ್ತಾಯಕ್ಕೆ !!

Comments