ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 1)
ಒಂದೊಮ್ಮೆಉತ್ಕಲ-ಕಳಿಂಗಗಳೆಂಬ ಹೆಸರನ್ನು ಹೊತ್ತಿದ್ದ ಇವತ್ತಿನ ಒಡಿಶಾದಲ್ಲಿ ಅನೇಕ ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳಿವೆ ಎಂಬ ವಿಚಾರವನ್ನು ಓದಿ ತಿಳಿದುಕೊಂಡಿದ್ದೆ. ಒಮ್ಮೆ ಭೇಟಿಕೊಡಬೇಕೆಂಬ ಆಲೋಚನೆಯನ್ನೂ ಮಾಡಿದ್ದೆ. ಹಾಗೆ ನಾನು ಬಹಳವಾಗಿ ಇಷ್ಟ ಪಡುವ ಬೆಂಗಳೂರಿನ ಪ್ರವಾಸಿ ಸಂಸ್ಥೆಯೊಂದು ಒಡಿಶಾ ಟೂರ್ ಯೋಜನೆ ಹಾಕಿಕೊಂಡಿದ್ದಾರೆಂದು ತಿಳಿದ ಕೂಡಲೇ ನಾನು ಹೊರಟು ಬಿಟ್ಟೆ. 27 ಮಂದಿ ಪ್ರವಾಸಿಗಳಿದ್ದ ನಮ್ಮತಂಡ (ವ್ಯವಸ್ಥಾಪಕಿ ಶಾಲಿನಿಯವರು ಸೇರಿ 28 ಮಂದಿ) ಹೊರಟದ್ದು ನವೆಂಬರ್ 15, 2024ರಂದು ಬೆಳಗ್ಗೆ 3.45 ಗಂಟೆಗೆ. ವಿಮಾನಕ್ಕೆ ಬುಕ್ ಮಾಡಿದರೆ ಇರುವ ಒಂದು ತೊಂದರೆ ಎಂದರೆ ರಾತ್ರಿಯ ಅಪವೇಳೆಯಲ್ಲಿ ನಿಲ್ದಾಣಕ್ಕೆ ಹೋಗಿ ತಪಾಸಣೆಗಳನ್ನು ಮಾಡಿ ಅಲ್ಲಿ ಗಂಟೆಗಟ್ಟಲೆ ಕಾಯುವುದು. ಕೊನೆಗೂ 6.50ಕ್ಕೆ ನಾವು ಹೋಗಲಿರುವ ಭುವನೇಶ್ವರಕ್ಕೆ ಹೊಗುವ ವಿಮಾನ ಬಂತು. ನಾವು ಹತ್ತಿ ಕುಳಿತು ಟೂರ್ ವ್ಯವಸ್ಥಾಪಕರು ಕಟ್ಟಿಕೊಟ್ಟಿದ್ದ ತಿಂಡಿ ಪ್ಯಾಕೆಟ್ಟುಗಳನ್ನು ತೆರೆದು ತಿಂದೆವು. ವಿಮಾನವು 8.5೦ಕ್ಕೆ ಸರಿಯಾಗಿ ಭುವನೇಶ್ವರ ತಲುಪಿತು.
ನಿಲ್ದಾಣದ ಹೊರಗೆ ನಾವು ಅಲ್ಲಿ ತಿರುಗಾಡಲಿರುವ ಬಸ್ಸು ನಮಗಾಗಿ ಕಾಯುತ್ತಿತ್ತು. ತಂಡದವರ ಊಟ-ತಿಂಡಿಗಳ ಅಗತ್ಯಗಳಿಗೆಂದು ನಿಯೋಜಿತರಾಗಿದ್ದ ಅಡುಗೆಯವರು ಮೊದಲೇ ಹೋಗಿ ನಮ್ಮ ಬ್ರೇಕ್ ಫಾಸ್ಟ್ ಗೆ ಸಿದ್ದತೆ ಮಾಡಿಟ್ಟು ಬಸ್ಸಿನೊಳಗೆ ಹಾಕಿಟ್ಟಿದ್ದರು. ನಾವು ಬಸ್ಸನ್ನು ರಸ್ತೆ ಬದಿಯಲ್ಲಿ ಒಂದೆಡೆ ನಿಲ್ಲಿಸಿ ಕೈ-ಮುಖಗಳನ್ನು ತೊಳೆದು ತಿಂಡಿ ತಿಂದು ಕಾಫಿ-ಟೀ ಕುಡಿದೆವು. ನಂತರ ನಾವು ಮೊದಲು ಹೋಗಿದ್ದು ಸಮೀಪವೇ ಇದ್ದ ಉದಯಗಿರಿ ಮತ್ತು ಖಂಡಗಿರಿ ಗುಹೆಗಳ ಅವಶೇಷಗಳಿದ್ದ ಜಾಗಕ್ಕೆ. ಅಲ್ಲಿ ವ್ಯವಸ್ಥಾಪಕರು ನಿಯೋಜಿಸಿದ್ದ ಗೈಡ್ ನಮಗಾಗಿ ಕಾಯುತ್ತಿದ್ದರು. ಅವರು ಎಲ್ಲವನ್ನೂ ಹಿಂದಿಯಲ್ಲೇ ವಿವರಿಸಿ ಹೇಳುತ್ತಿದ್ದರು.
ಉದಯಗಿರಿ ಮತ್ತು ಖಂಡಗಿರಿ ಗುಹೆಗಳು (ಚಿತ್ರ ನೋಡಿ) ಭುವನೇಶ್ವರ ನಗರದಿಂದ ಸುಮಾರು 3ಕಿ.ಮೀ ದೂರದಲ್ಲಿಕುಮಾರಿ ಪರ್ವತ ಎಂಬ ಎರಡು ಅಕ್ಕಪಕ್ಕದ ಗುಡ್ಡಗಳಲ್ಲಿ ಅರ್ಧ ಪ್ರಾಕೃತಿಕ ಮತ್ತು ಅರ್ಧ ಮನುಷ್ಯ ನಿರ್ಮಿತವಾಗಿ ಸುಂದರವಾಗಿ ಶೋಭಿಸುವ ಗುಹೆಗಳು. ಉದಯಗಿರಿಯಲ್ಲಿ ನೆಲ ಅಂತಸ್ತು ಮಾತ್ರವಲ್ಲದೆ ಅದರ ಮೇಲೆ ಎರಡು ಅಂತಸ್ತುಗಳಿವೆ. ಒಳಗಿನಿಂದಲೇ ಮೇಲೆ ಹೋಗಬಹುದಾದ ಕಿಂಡಿಗಳೂ ಇವೆ. ಒಳಗೆ ಬೇರೆ ಬೇರೆ ಕೋಣೆಗಳಿವೆ. ಗೋಡೆಗಳ ಮೇಲೂ ಬಾಗಿಲುಗಳ ಹೊಸ್ತಿಲು-ದಾರಂದಗಳಲ್ಲೂ ಶಿಲ್ಪ ವಿನ್ಯಾಸಗಳೂ ಶಾಸನಗಳೂ ಇವೆ. ಅಲ್ಲೇ ಹಿಂದೆ ಇರುವ ಹಾಥಿಗುಹೆಯಲ್ಲಿ ಈ ಕುರಿತು ಉಲ್ಲೇಖವಿದೆ. ಕ್ರಿ.ಪೂ.8ನೇ ಶತಮಾನದಲ್ಲಿ ರಾಜಾಖರವೇಲನ ಕಾಲದಲ್ಲಿ ಜೈನ ಸಂನ್ಯಾಸಿಗಳ ವಾಸಕ್ಕೋಸ್ಕರ ಈ ಗುಹಾ ನಿವಾಸಗಳನ್ನು ಕಟ್ಟಿಸಿದ್ದರಂತೆ. ಹಿಂದೆ ಇವುಗಳನ್ನು ಕಟಕ ಗುಹೆಗಳೆಂದು ಕರೆಯುತ್ತಿದ್ದರು. ಉದಯಗಿರಿ ಅಂದರೆ ಸೂರ್ಯೋದಯ ಕಾಣಿಸುವ ಬೆಟ್ಟ. ಅದು ರಸ್ತೆಯ ಬಲಭಾಗದಲ್ಲಿದೆ. ಅದರೊಳಗಿನ ಗುಹೆಗಳು ದೂರದಿಂದಲೇ ಕಾಣಿಸುತ್ತಿದ್ದವು. ಹತ್ತಿರ ಹೋಗಿ ನೋಡಿದರೆ ಎಲ್ಲವೂ ಜರ್ಝರಿತಗೊಂಡಿದ್ದು ಸ್ಪಷ್ಟವಾಯಿತು. ಉದಯಗಿರಿಯಲ್ಲಿ ಹಿಂದೆ ವಾಸ ಯೋಗ್ಯವಾದ 117 ಗುಹೆಗಳಿದ್ದವಂತೆ. ಇವತ್ತು 18 ಮಾತ್ರ ಇವೆ. ಇವುಗಳಲ್ಲಿ ಮುಖ್ಯವಾದುದು ರಾಣಿ ಗುಹೆ.
ಅದುಎರಡು ಅಂತಸ್ತುಗಳಿರುವ ಒಂದು ಆಶ್ರಮದಂತಿದೆ. ಪ್ರತಿ ಅಂತಸ್ತಿನಲ್ಲಿಯೂ ಮೂರು ವಿಭಾಗಗಳಿದ್ದು ಮಧ್ಯದ ವಿಭಾಗವು ವಿಶಾಲವಾಗಿದೆ. ಕೆಳ ಅಂತಸ್ತಿನ ಮಧ್ಯ ಭಾಗದಲ್ಲಿ ಏಳು ಪ್ರವೇಶ ದ್ವಾರಗಳಿವೆ. ಮೇಲಿನ ಅಂತಸ್ತಿನಲ್ಲಿ ಒಂಬತ್ತು ಅಂಕಣಗಳಿವೆ. ಮಧ್ಯದ ವಿಭಾಗದ ಛಾವಣಿಯಲ್ಲಿ ರಾಜನ ವಿಜಯೋತ್ಸವ ಮೆರವಣಿಗೆಯ ಚಿತ್ರಗಳಿವೆ. ಕೆಲವೆಲ್ಲ ಹಾಳಾಗಿ ತಿರುಚಲ್ಪಟ್ಟಿವೆ. ಮಧ್ಯಭಾಗವನ್ನು ಎಡ-ಬಲ ಭಾಗಳಿಗೆ ಸೇರುವಲ್ಲಿ ಕಾಡುಪ್ರಾಣಿಗಳು, ಹಣ್ಣು ಹೊತ್ತ ಮರಗಳು, ಮನುಷ್ಯರು, ಸಂಗೀತೋಪಕರಣಗಳನ್ನು ನುಡಿಸುತ್ತಿರುವ ಸ್ತ್ರೀಯರು, ಕಪಿಗಳು, ಮತ್ತು ತುಂಟಾಟವಾಡುವ ಆನೆಗಳಿವೆ. ಆಯತಾಕಾರದ ಕಂಬಗಳಲ್ಲಿ ಜೈನಧರ್ಮಕ್ಕೆ ಸಂಬಧಿಸಿದ ಅಲಂಕಾರಿಕ ಶಿಲ್ಪಗಳಿವೆ. ಹಾಥಿ ಗುಹೆ, ಅನಂತ ಗುಹೆ, ಗಣೇಶ ಗುಹೆ, ಜಯವಿಜಯ ಗುಹೆ, ಅಲಕಾಪುರಿ ಗುಹೆ, ಮಂಚಗಿರಿ ಗುಹೆ, ವ್ಯಾಘ್ರ ಗುಹೆ, ಸರ್ಪಗಿರಿ ಗುಹೆ ಮಂತಾದ ಗುಹೆಗಳಿವೆ.
ಭಾರತೀಯ ಪುರಾತತ್ವ ಇಲಾಖೆಯವರು ಈ ಗುಹೆಗಳನ್ನು ಎಲ್ಲರೂ ನೋಡಲೇ ಬೇಕಾದ ಜಾಗವೆಂದು ಭಾರತೀಯ ಪರಂಪರೆಯ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇದೊಂದು ಆದರ್ಶ ಸ್ಮಾರಕವೆಂದು ಘೋಷಿಸಿದ್ದಾರೆ. ಹಾಥಿ ಗುಹೆಗಳು ಮತ್ತು ಗಣೇಶ ಗುಹೆಗಳು ತಮ್ಮ ಬೆಡಗಿನ ಶಿಲ್ಪಕಲೆಗೆ ಪ್ರಸಿದ್ಧವಾಗಿವೆ. ರಾಣಿ ಗುಹೆಯು ಸಾಕಷ್ಟು ವಿಶಾಲವಾಗಿ ಅರಮನೆಯಂತಿದ್ದು ಸುಂದರ ಕೆತ್ತನೆ-ಮತ್ತು ಕುಸುರಿ ವಿನ್ಯಾಸಗಳಿಂದ ಕೂಡಿದೆ. ಹಾಥಿ ಗುಹೆಯ ಪ್ರವೇಶದ್ವಾರದಲ್ಲಿ ಆರು ಆನೆಗಳ ಕೆತ್ತನೆಗಳಿವೆ. ಅಲಕಾಪುರಿ ಗುಹೆಯ ಪ್ರವೇಶದ್ವಾರದಲ್ಲಿ ಒಂದು ಸಿಂಹವು ತನ್ನ ಬಾಯಲ್ಲಿ ಕೊಳ್ಳೆಯನ್ನು ಕಚ್ಚಿ ಹಿಡಿದುಕೊಂಡಿರುವ ಶಿಲ್ಪವಿದೆ. ಗುಹೆಯ ಒಳಗೆ ಕಂಬಗಳೂ ರೆಕ್ಕೆಗಳಿರುವ ಮನುಷ್ಯರೂ ಇದ್ದಾರೆ. ಅದಲ್ಲಿ ಎರಡು ಅಂತಸ್ತುಗಳಿವೆ. ಜಯವಿಜಯ ಗುಹೆಯಲ್ಲ್ಲೂಎರಡು ಅಂತಸ್ತುಗಳಿವೆ. ಅದರೊಳಗೆ ದೊಡ್ಡಗಾತ್ರದ ಕಿವಿಯೋಲೆಗಳನ್ನು, ಪಟ್ಟಿಗಳನ್ನೂ ಹಾಕಿ ಕೇಶಾಲಂಕಾರ ಮಾಡಿಕೊಂಡ ಸ್ತ್ರೀಯ ಚಿತ್ರಗಳಿವೆ. ಅವಳು ಒಂದುಕೈಯಲ್ಲಿ ಗಿಳಿಯನ್ನು ಹಿಡಿದುಇನ್ನೊಂದುಕೈಯಿಂದ ಸೊಂಟವನ್ನು ಹಿಡಿದುಕೊಂಡಿದ್ದಾಳೆ. ಮಂಚಪುರಿ ಗುಹೆಯಲ್ಲೂ ಎರಡು ಅಂತಸ್ತುಗಳಿವೆ. ಇಬ್ಬರು ಪುರುಷರು ಮತ್ತು ಇಬ್ಬರು ಸ್ತ್ರೀಯರಿದ್ದಾರೆ. ಇಲ್ಲಿ ಖರವೇಲನು ಕಳಿಂಗದಿಂದ ತಂದ ಜಿನನನ್ನುಆರಾಧಿಸುವ ಚಿತ್ರಗಳಿವೆ. ಇಲ್ಲಿ ಮೂರು ಶಾಸನಗಳಿವೆ. ಒಂದು ಶಾಸನವು ಖರವೇಲನ ಪಟ್ಟದರಾಣಿಯ ಕುರಿತೂ ಇನ್ನೆರಡು ಅವನ ಉತ್ತರಾಧಿಕಾರಿಯ ಬಗೆಗೂ ಇನ್ನೊಂದು ಅವನ ಮಗನ ಬಗೆಗೂ ಮಾತನಾಡುತ್ತವೆ.
ಗಣೇಶ ಗುಹೆಯು ಉದಯಗಿರಿಯ ಅತ್ಯಂತ ಹೆಚ್ಚು ಮಹತ್ವದ ಗುಹೆ. ಗುಹೆಯ ಬಲಬದಿಯಲ್ಲಿರುವ ಗಣೇಶನ ಕೆತ್ತನೆಯ ಮೂರ್ತಿಯಿಂದಾಗಿ ಆ ಹೆಸರು ಬಂತು. ಅದು ನಂತರದ ಕಾಲದಲ್ಲಿ ಕೆತ್ತಿದ್ದೂ ಆಗಿರಬಹುದು. ಇಲ್ಲಿ ಪ್ರವೇಶದ್ವಾರದಲ್ಲಿ ಎರಡು ಆನೆಗಳು ಹೂಮಾಲೆ ಹಿಡಿದು ನಿಂತ ಮೂರ್ತಿಗಳಿವೆ. ದ್ವಾರದಲ್ಲಿದ್ವಾರ ಪಾಲಕರ ಕೆತ್ತನೆಗಳಿವೆ. ಗುಹೆಯೊಳಗಿನ ಕೆತ್ತನೆಗಳು ವಾಸವದತ್ತೆಯು ತನ್ನ ಪ್ರಿಯಕರನಾದ ಕೋಸಾಂಬಿಯ ರಾಜಕುಮಾರ ಉದಯನನೊಂದಿಗೆ ಓಡಿಹೋದ ಕತೆಯನ್ನು ಚಿತ್ರಿಸುತ್ತದೆ. ವ್ಯಾಘ್ರಗುಹೆಯ ಪ್ರವೇಶದ್ವಾರವು ಹುಲಿಯ ಬಾಯಿಯ ಆಕಾರದಲ್ಲಿದೆ. ಒಳಗಿರುವ ಒಂದೇಕೋಣೆಯು ಹುಲಿಯ ಗಂಟಲಿನಂತಿದೆ. ಎಲ್ಲರೂ ತಮ್ಮ ಹೆಚ್ಚಿನ ಫೋಟೋಗಳನ್ನು ಇಲ್ಲಿ ತೆಗೆಯುತ್ತಾರೆ. ಹಾಥಿ ಗುಹೆಯು ಇಲ್ಲಿನ ಅತ್ಯಂತ ದೊಡ್ಡ ಗುಹೆ. ಇಲ್ಲಿ ಖರವೇಲನ ಶಾಸನವಿದೆ. ಅದು ಅವನ ಬಗಗೆ ಅನೇಕ ಮಾಹಿತಿಗಳನ್ನು ಒದಗಿಸುತ್ತದೆ. ಹೆಸರೇ ಸೂಚಿಸುವಂತೆ ಇದು ಆನೆಯ ಕೆತ್ತನೆಗಳಿರುವ ಗುಹೆ.
ಖಂಡಗಿರಿ ತುಸು ಎತ್ತರವಾಗಿದ್ದು ಭುವನೇಶ್ವರದಿಂದ ಬರುವಾಗ ರಸ್ತೆಯ ಎಡಬದಿಯಲ್ಲಿದೆ. ಅದರ ತುದಿಯಲ್ಲಿ ನಿಂತರೆ ಇಡೀ ಭುವನೇಶ್ವರದ ನಗರದ ನೋಟವು ಕಾಣಿಸುತ್ತದೆ. ಇಲ್ಲಿ 15 ಗುಹೆಗಳಿವೆ. ಸೋಮವಂಶಿ ವಂಶದರಾಜ ಉದ್ಯೋತ ಕೇಶರಿಯ ಆಡಳಿತ ಕಾಲದಲ್ಲಿ ಈ ಗುಹೆಗಳ ಪುನ ರ್ನಿರ್ಮಾಣಕಾರ್ಯ ನಡೆಯಿತು ಅನ್ನುತ್ತಾರೆ.
ತತೋಫ ಗುಹೆಯ ಮೇಲ್ಬಾಗದಲ್ಲಿ ಗಿಳಿಯ ಕೆತ್ತನೆಗಳಿವೆ. ಎರಡುದ್ವಾರ ಪಾಲಕರ ಚಿತ್ರಗಳೂ ಇವೆ. ಗುಹೆಯೊಳಗೆ ಸರಳು, ಕಮಾನು-ಕಳಸಗಳು ಇವೆ. ಒಳಗೆ ನಾಯಕಿಯರು, ಗಂಧರ್ವರು, ಬೇರೆ ಬೇರೆ ಪ್ರಾಣಿ-ಪಕ್ಷಿಗಳು, ಚೈತ್ಯ, ಕಮಾನು ಮತ್ತು ಇತರ ವಿನ್ಯಾಸಗಳೂ ಇವೆ. ತೊಲೆಗಳು ಮತ್ತು ಬಾಗಿದ ಕಮಾನುಗಳೂ ಇವೆ. ಅನಂತ ಗುಹೆಯಲ್ಲಿ ಹೆಂಗಸರು, ಆನೆಗಳು ಮತ್ತು ಬಾತುಕೋಳಿಗಳ ಚಿತ್ರಗಳಿವೆ. ತೆಂತೂಲಿ ಗುಹೆಯಲ್ಲಿ ಕಲ್ಲಿನಿಂದ ನಿರ್ಮಿಸಿದ ಏಕಮಾತ್ರ ಕೋಣೆಯಿದೆ. ಇಲ್ಲಿ ಎರಡು ಮಾಳಿಗೆಗಳಿವೆ. ಲಲಾಟೇಂದು ಕೇಶರೀ ಗುಹೆಯಲ್ಲಿ ರಿಷಭನಾಥನ ಎರಡು ಮೂರ್ತಿಗಳು ಮತ್ತು ಪಾರ್ಶ್ವ ನಾಥನ ಎರಡು ಮೂರ್ತಿಗಳಿವೆ. ಇಲ್ಲಿಕಲ್ಲಿನಿಂದ ನಿರ್ಮಿಸಿದ ಕಂಬದ ಮೇಲೆ ನಿಂತ ಒಂದೇ ಕೋಣೆಯಿದೆ. ಇದನ್ನು 11ನೆಯ ಶತಮಾನದಲ್ಲಿ ಸೇರಿಸಲಾಯಿತು ಎನ್ನುತ್ತಾರೆ. ಖಂಡಗಿರಿಯ ತುದಿಯಲ್ಲಿ ಒಂದು ಬೃಹತ್ ಜೈನ ದೇವಾಲಯವಿದೆ. ಅದರ ಜೀರ್ಣೋದ್ಧಾರ ಕ್ರಿಯೆ ನಡೆಯುತ್ತ ಇದ್ದುದರಿಂದ ದೇವಸ್ಥಾನದ ಒಳಗನ್ನು ನಮ್ಮಿಂದ ನೋಡಲಾಗಲಿಲ್ಲ.
(ಇನ್ನೂ ಇದೆ)
ಚಿತ್ರ- ಬರಹ : ಪಾರ್ವತಿ ಜಿ.ಐತಾಳ್, ಬೆಂಗಳೂರು