ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 2)

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 2)

ಗುಹೆಗಳ ವೀಕ್ಷಣೆಯ ನಂತರ ನಾವು ಭುವನೇಶ್ವರದ ರೈಲ್ವೇ ಸ್ಟೇಷನ್ ಬಳಿ ಇರುವ ಹೋಟೆಲ್‌ ತೆರಳಿ ಊಟವನ್ನು ಸಿಹಿಯೊಂದಿಗೆ ಮುಗಿಸಿ ಸ್ವಲ್ಪ ಹೊತ್ತು ವಿರಾಮ ತೆಗೆದುಕೊಂಡು ಮೂರು ಗಂಟೆಗೆ ಮತ್ತೆ ನಮ್ಮ ತಿರುಗಾಟ ಆರಂಭಿಸಿದೆವು. ಮೊದಲು ಹೋಗಿದ್ದು ಧವಳಗಿರಿಯಲ್ಲಿರುವ ಶಾಂತಿಯ ಸ್ತೂಪಕ್ಕೆ. ಇದರ ಸ್ಥಾಪನೆಯ ಹಿಂದೆ ಸಾಮ್ರಾಟ್ ಅಶೋಕನ ಕಥೆಯಿದೆ. ಅಶೋಕನು ಎಲ್ಲಾ ರಾಜ್ಯಗಳನ್ನು ವಶಪಡಿಸಿಕೊಂಡು ಕೊನೆಗೆ ಕಳಿಂಗದೇಶ (ಈಗಿನ ಒಡಿಶಾ)ವೊಂದು ಬಾಕಿ ಉಳಿದಿದೆಯಲ್ಲಾ ಎಂದು ಆ ಪುಟ್ಟದೇಶದ ಮೇಲೆ ದಾಳಿ ಮಾಡಿದ. ಸ್ವಾಭಿಮಾನಿ ಕಳಿಂಗದೇಶ ತನ್ನ ಹಿಡಿದ ಪಟ್ಟು ಬಿಡಲಿಲ್ಲ. ಘನ ಘೋರಯುದ್ಧದಲ್ಲಿ ಕಳಿಂಗರು ಸೋತರು. ಲಕ್ಷಾಂತರ ಹೆಣಗಳುರುಳಿದವು. ರಕ್ತದ ಹೊಳೆಯೇ ಹರಿಯಿತು. ಕಳಿಂಗರು ಸೋತ ಕೊನೆಯ ಸ್ಥಳ ಈ ಧವಳಗಿರಿ. ಅಲ್ಲಿ ಬೆಟ್ಟದ ತುದಿಯಲ್ಲಿ ನಿಂತು ಅಶೋಕ ಕೆಳಗೆ ನೋಡಿದ. ನೋಡಿದರೆ ಹೆಣಗಳ ರಾಶಿಯ ಹೃದಯ ವಿದ್ರಾವಕದೃಶ್ಯ..! ತಕ್ಷಣ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅಧಿಕಾರ-ಐಶ್ವರ್ಯ-ರಾಜ್ಯ ಎಲ್ಲವೂ ಶಾಶ್ವತವಲ್ಲ, ಬರೇ ಶೂನ್ಯ ಎಂಬ ಭಾವನೆ ಬಂತು. ಅವನು ತಕ್ಷಣವೇ ತನ್ನ ಸಾಮ್ರಾಜ್ಯ ವಿಸ್ತರಣೆಯ ಕೆಲಸವನ್ನು ನಿಲ್ಲಿಸಿ ಅಹಿಂಸೆಯನ್ನು ಬೋಧಿಸುವ ಬೌದ್ಧಧರ್ಮಕ್ಕೆ ಶರಣಾದ. ಇಡೀ ಜಗತ್ತಿನಲ್ಲಿಯೇ ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಅಲ್ಲಲ್ಲಿ ಈ ರೀತಿಯ ಶಾಂತಿಯ ಸ್ತೂಪಗಳನ್ನು ನಿರ್ಮಿಸಿದ.

ಧವಳಗಿರಿಯು ಭುವನೇಶ್ವರ ನಗರದಿಂದ ಪುರಿಗೆ ಹೋಗುವ ದಾರಿಯಲ್ಲಿ ಸುಮಾರು 7 ಕಿ.ಮೀ.ದೂರದ ದಯಾ ನದಿಯ ದಡದಲ್ಲಿದೆ. ಇಲ್ಲಿ ಅತ್ಯಂತ ಹಳೆಯದಾದ ದೊಡ್ಡದೊಂದು ಬುದ್ಧನ ಮೂರ್ತಿಯಿದೆ. ಶಿಲೆಯಿಂದ ಕೆತ್ತಿದ ಒಂದು ಆನೆಯ ಮೂರ್ತಿಯೂ ಇದೆ. ಇಡೀ ಸ್ತೂಪವು ಅರ್ಧ ಗೋಳಾಕೃತಿಯಲ್ಲಿದೆ. ಕಲ್ಲಿನ ಹಲಗೆಗಳಲ್ಲಿ ಬುದ್ಧನ ಹೆಜ್ಜೆ ಗುರುತುಗಳು ಮತ್ತು ಬೋಧಿ ವೃಕ್ಷಗಳಿವೆ. ಅದೇ ರೀತಿ ಅಶೋಕನು ಬುದ್ಧನಿಗೆ ಶರಣಾಗಿ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ಚಿತ್ರವೂ ಇದೆ. ಶಾಂತಿಯ ಸ್ತೂಪವನ್ನು ಶಾಂತಿ-ಸಂಪತ್ತುಗಳ ಸಂಕೇತವಾಗಿ ಮತ್ತು ಬೌದ್ಧಧರ್ಮ ಸ್ಥಾಪನೆಯಾಗಿ 2500 ವರ್ಷಗಳಾದ ನೆನಪಿಗಾಗಿ ಸ್ಥಾಪಿಸಿದ್ದಾರೆ. ಇದು ಜಪಾನ್-ಭಾರತಗಳ ನಡುವಣ ಸೌಹಾರ್ದ ಸಂಬಂಧದ ಸಂಕೇತವೂ ಆಗಿದೆ. ಇಲ್ಲಿ ಸಂಜೆ ಹೊತ್ತು ಸುಡುಮದ್ದು -ಬೆಳಕುಗಳ ಪ್ರದರ್ಶನವಿರುತ್ತದೆ. ಈ ಸ್ತೂಪದ ಬಲ ಬದಿಯಲ್ಲಿ ಹಿಂದೆ ಒಂದು ಶಂಕರಲಿಂಗ ದೇವಸ್ಥಾನವೂ ಇದೆ. ಇಲ್ಲಿಗೆ ಹಿಂದೂಗಳೂ ಬೌದ್ಧರೂ ಎಲ್ಲರೂ ಹೋಗುತ್ತಾರೆ. ಇಲ್ಲಿಗೆ ಸಾವಿರಾರು ಶರಣರು ಬರುತ್ತಿರುತ್ತಾರೆ. ಇಲ್ಲಿ ಶಾಂತಿಯ ಸ್ತೂಪವನ್ನು ಕಟ್ಟುವಲ್ಲಿ ಅಶೋಕನಿಗೆ ಜಪಾನಿನ ಗುರೂಜಿಯೊಬ್ಬರು ಸಹಾಯ ಮಾಡಿದರು. ಇಲ್ಲಿ ಅಶೋಕನ ಬಹಳ ಮುಖ್ಯವಾದ ಒಂದು ಶಾಸನವೂ ಇದೆ. ಇಲ್ಲಿಗೆ ಎಲ್ಲ ಧರ್ಮಗಳ ಎಲ್ಲ ತಲೆಮಾರುಗಳ ಅನುಯಾಯಿಗಳೂ ಬರುತ್ತಾರೆ.

ಅಲ್ಲಿಂದ ಮುಂದೆ ನಾವು ಜಗತ್ಪ್ರಸಿದ್ಧವೂ ಭವ್ಯವೂ ಆದ ಲಿಂಗರಾಜ ದೇವಸ್ಥಾನವನ್ನು (ಚಿತ್ರ ನೋಡಿ) ನೋಡಲು ಹೋದೆವು. ಇಲ್ಲಿ ಯಾತ್ರಿಕರನ್ನು ತನ್ನ ನೂರಾರು ವೈಶಿಷ್ಟ್ಯಗಳಿಂದ ಸೆಳೆಯುವ ಶಿವ ದೇವಾಲಯವಿದೆ. ಶಿವನ ಪತ್ನಿ ಪಾರ್ವತಿ ದೇವಿಗೂ ಒಂದು ಗುಡಿಯಿದೆ. ಪಾರ್ವತಿಗೆ ಇಲ್ಲಿ ಅನ್ನಪೂರ್ಣೆ ಮತ್ತು ಗಿರಿಜೆ ಎಂಬ ಹೆಸರುಗಳಿವೆ. ದೇವಸ್ಥಾನದ ಕೇಂದ್ರ ಗೋಪುರದ ಎತ್ತರ 180 ಅಡಿ. ಕಳಿಂಗ ಶೈಲಿಯಲ್ಲೇ ದೇವಸ್ಥಾನವು ಕಟ್ಟಲ್ಪಟ್ಟಿದೆ. ಮಧ್ಯಕಾಲೀನ ಯುಗದಲ್ಲಿ ತನ್ನ ಶಿಖರವನ್ನು ತಲುಪಿದ ವಾಸ್ತು ಪರಂಪರೆ ಇಲ್ಲಿದೆ. ಇದನ್ನು ಸೋಮವಂಶಿ ರಾಜವಂಶದ ರಾಜರು ಮತ್ತು ಮುಂದೆ ಗಂಗರಸರು ಕಳಿಂಗ ವಿಶಿಷ್ಟವಾದ ದ್ಯೂಲಾ ಶೈಲಿಯಲ್ಲಿ ಕಟ್ಟಿಸಿದರು. ವಿಮಾನ( ಗರ್ಭಗೃಹದ ರಚನೆ). ಜಗಮೋಹನ( ಸಭಾ ಭವನ), ನಟ ಮಂದಿರ ( ಉತ್ಸವ ಭವನ), ಭೋಗಮಂಡಪ( ಪ್ರಸಾದ ಭವನ)ಎಂದು ಹೀಗೆ ನಾಲ್ಕು ವಿಭಾಗಗಳು ಇಲ್ಲಿವೆ. ಪ್ರತಿಯೊಂದು ಅಂಶವೂ ತನ್ನ ಹಿಂದಿನದ್ದಕ್ಕಿಂತ ಹೆಚ್ಚು ಎತ್ತರವಿದೆ. ದೇವಸ್ಥಾನದ ಆವರಣದಲ್ಲಿ 108 ಇತರ ಗುಡಿಗಳಿವೆ. ಸುತ್ತಲೂ ಬೃಹತ್‌ ಆವರಣಗೋಡೆಯಿದೆ.

13ನೆಯ ಶತಮಾನದ "ಏಕಾಮ್ರ ಪುರಾಣ" ಎಂಬ ಒಂದು ಸಂಸ್ಕೃತ ಬರಹದ ಪ್ರಕಾರ ಲಿಂಗರಾಜನು ಮೂಲತಃ ಒಂದು ಮಾವಿನ ಮರದಲ್ಲಿ ಇದ್ದುದರಿಂದ ಭುವನೇಶ್ವರಕ್ಕೆ ಏಕಾಮ್ರ ಕ್ಷೇತ್ರವೆಂಬ ಹೆಸರೂ ಇದೆ. ಪೂಜೆಗಳ ಆಚರಣೆಯಲ್ಲಿ ದೇವಸ್ಥಾನವು ಭುವನೇಶ್ವರದ ಇತರ ದೇವಸ್ಥಾನಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಸಕ್ರಿಯವಾಗಿದೆ. ದೇವಸ್ಥಾನದಲ್ಲಿ ವಿಷ್ಣುವಿನ ಮೂರ್ತಿಯೂ ಇದೆ. ಪುರಿಯ ಜಗನ್ನಾಥ ಕ್ಷೇತ್ರವನ್ನು ಕಟ್ಟಿಸಿದ ಗಂಗರಸರು ಶ್ರೀವೈಷ್ಣವ ಪಂಥದ ಉದಯಕ್ಕೋಸ್ಕರ ಇಲ್ಲಿ ವಿಷ್ಣುಮೂರ್ತಿಯನ್ನು ಸ್ಥಾಪಿಸಿದ್ದಾಗಿರಬಹುದು. ಕ್ಷೇತ್ರದ ಕೇಂದ್ರವಾದ ಲಿಂಗರಾಜ ದೇವಾಲಯದಲ್ಲಿ ಶಿವರಾತ್ರಿ ಹಬ್ಬವನ್ನು ಪ್ರಮುಖ ಹಬ್ಬವನ್ನಾಗಿ ಆಚರಿಸುತ್ತಾರೆ.

ಲಿಂಗರಾಜ ದೇವಾಲಯದ ಆಡಳಿತವನ್ನು ವಿಶ್ವಸ್ಥ ಮಂಡಳಿ ಮತ್ತು ಭಾರತೀಯ ಪುರಾತತ್ವ ಇಲಾಖೆಯವರು ಜಂಟಿಯಾಗಿ ನೋಡಿಕೊಳ್ಳುತ್ತಾರೆ. ದೇವಸ್ಥಾನದ ಆವರಣದೊಳಕ್ಕೆ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ. ಆದರೆ ಗೋಡೆಯ ಬದಿಯಲ್ಲಿ ಒಂದು ವೀಕ್ಷಕ ವೇದಿಕೆಯನ್ನು ಕಟ್ಟಿದ್ದಾರೆ. ಅಲ್ಲಿ ನಿಂತರೆ ದೇವಸ್ಥಾನದ ಪ್ರಮುಖ ಭಾಗಗಳು ಕಾಣಿಸುತ್ತವೆ. ಈ ವೇದಿಕೆಯನ್ನು ಹಿಂದೆ ಬ್ರಿಟಿಷ್ ವೈಸೆರಾಯ್‌ ಆಗಿದ್ದ ಲಾರ್ಡ್ಕರ್ಝನ್ ಬಂದಾಗ ಕಟ್ಟಲಾಗಿತ್ತು. ದೇವಸ್ಥಾನವನ್ನು 11ನೆಯ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳಿದರೂ 7ನೆಯ ಶತಮಾನದ ಕೆಲವು ಸಂಸ್ಕೃತ ಬರಹಗಳ ಪ್ರಕಾರ ಇದನ್ನು 6ನೇ ಶತಮಾನದಲ್ಲೇ ಕಟ್ಟಲಾಗಿತ್ತು ಅನ್ನುವ ಪ್ರತೀತಿಯೂ ಇದೆ. ಸಭಾ ಭವನ, ಗರ್ಭಗೃಹ ಮತ್ತು ಗೋಪುರಗಳನ್ನು 11ನೆಯ ಶತಮಾನದಲ್ಲೂ ಭೋಗ ಮಂಟಪವನ್ನು 12ನೆಯ ಶತಮಾನದಲ್ಲೂ ಕಟ್ಟಿದರೆಂದು ಹೇಳುತ್ತಾರೆ. ಲಿಂಗರಾಜ ದೇವಸ್ಥಾನವು ಕಟ್ಟಿ ಮುಗಿಯುವ ಹೊತ್ತಿಗೆ ಆ ಪ್ರದೇಶದಲ್ಲಿ ವೈಷ್ಣವ ಪಂಥ ಬೆಳವಣಿಗೆ ಸಾಧಿಸಿಯಾಗಿತ್ತು. ಹಾಗೆ ವಿಷ್ಣು ಮತ್ತು ಶಿವರು ಜತೆಯಾಗಿ ಅಸ್ತಿತ್ವಕ್ಕೆ ಬಂದಿದ್ದರು. ಗಂಗರಸರು ಶೈವ, ವೈಷ್ಣವ ಮತ್ತು ಶಕ್ತಿ ಪಂಥಗಳ ಅನುಯಾಯಿಗಳಾಗಿದ್ದರು. ಪುರಿಯಲ್ಲಿ ಕೂಡಾ 12ನೆಯ ಶತಮಾನದಲ್ಲಿ ಜಗನ್ನಾಥ ಕ್ಷೇತ್ರವು ಅಸ್ತಿತ್ವಕ್ಕೆ ಬಂತು.

ಕೆಲವು ಅಂಕಿ-ಅಂಶಗಳ ಪ್ರಕಾರ ಲಿಂಗರಾಜ ದೇವಸ್ಥಾನವನ್ನು ಸೋಮವಂಶಿ ರಾಜಯಯಾತಿ (1015-1040) 11ನೆಯ ಶತಮಾನದಲ್ಲಿಕಟ್ಟಿದ. ಯಯಾತಿಕೇಶರಿ ತನ್ನ ರಾಜಧಾನಿಯನ್ನು ಜೈಪುರದಿಂದ ಏಕಾಮ್ರ ಪುರವೆಂಬ ಭುವನೇಶ್ವರಕ್ಕೆ ವರ್ಗಾಯಿಸಿದ. ಬ್ರಹ್ಮ ಪುರಾಣದಲ್ಲಿ ಏಕಾಮ್ರ ಕ್ಷೇತ್ರವು ಒಂದು ಪ್ರಾಚೀನ ನಗರ. ಸೋಮವಂಶಿ ವಂಶದ ಒಬ್ಬ ರಾಣಿ ಅದನ್ನು ಈ ದೇವಸ್ಥಾನಕ್ಕೆ ಕೊಡುಗೆಯಾಗಿತ್ತಳು. ದೇವಸ್ಥಾನಕ್ಕೆ ಸೇರಿದ ಬ್ರಾಹ್ಮಣರಿಗೆ ತುಂಬಾ ಅನುದಾನ ಸಿಕ್ಕಿತು. ಶಕವರ್ಷ 1094ರಲ್ಲಿ ಎರಡನೆಯ ರಾಜ ರಾಜನಿಂದ ಧಾರಾಳ ಚಿನ್ನದ ನಾಣ್ಯಗಳು ಉಡುಗೊರೆಯಾಗಿ ಸಿಕ್ಕಿದ್ದವೆಂದು ಒಂದು ಶಾಸನ ಹೇಳುತ್ತದೆ.

ಲಿಂಗರಾಜ ದೇವಸ್ಥಾನವು ಹಿಂದೂ ದೇವಸ್ಥಾನಗಳಲ್ಲೇ ಅತಿ ಸುಂದರವಾದದ್ದು ಎಂದು ಹೇಳುತ್ತಾರೆ. ಇದರ ಆವರಣ ಗೋಡೆಯು ಕೆಂಪು ಇಟ್ಟಿಗೆಯದ್ದಾಗಿದ್ದು ಗೋಡೆ ಏಳೂವರೆ ಅಡಿಯಷ್ಟು ದಪ್ಪವಿದೆ. ಗಡಿ ಗೋಡೆಯ ಒಳಮುಖದಲ್ಲಿ ವೈರಿಗಳ ದಾಳಿಯಿಂದ ರಕ್ಷಣೆಗಾಗಿ ಒಂದು ತಾರಸಿ ಇದೆ. 148 ಅಡಿ ಎತ್ತರದ ಗೋಪುರದಲ್ಲಿ ಪ್ರತಿ ಇಂಚೂ ಶಿಲ್ಪಕಲೆಯಿಂದ ತುಂಬಿಕೊಂಡಿದೆ. ಪ್ರವೇಶದ್ವಾರದ ಬಾಗಿಲನ್ನು ಶ್ರೀಗಂಧದಿಂದ ಮಾಡಲಾಗಿದೆ.

ದೇವಸ್ಥಾನವು ಪೂರ್ವಕ್ಕೆ ಮುಖ ಮಾಡಿದ್ದು ಅದನ್ನು ಮರಳುಕಲ್ಲು ಮತ್ತು ಇಟ್ಟಿಗೆಗಳಿಂದ ಕಟ್ಟಲಾಗಿದೆ. ಮುಖ್ಯದ್ವಾರ ಪೂರ್ವಕ್ಕಿದೆ. ಉತ್ತರ ಮತ್ತು ದಕ್ಷಿಣಗಳಲ್ಲಿ ಚಿಕ್ಕ ದ್ವಾರಗಳಿವೆ. ನೃತ್ಯ ಭವನವು ಆ ಕಾಲದಲ್ಲಿ ದೇವದಾಸಿ ಪದ್ಧತಿಗೆ ಸಿಗತೊಡಗಿದ ಮಹತ್ವವನ್ನು ತಿಳಿಸುತ್ತವೆ. ಭೋಗ ಮಂಟಪದಿಂದ ಗರ್ಭಗೃಹದ ಮೇಲಿನ ಗೋಪುರಕ್ಕೆ ಎತ್ತರವು ಹೆಚ್ಚುತ್ತ ಹೋಗುತ್ತದೆ. ಗರ್ಭಗೃಹದ ಒಳಬದಿಯಲ್ಲಿ ಗೋಪುರದ ಗೋಡೆಗಳ ತುಂಬಾ ಸ್ತ್ರೀಯರ ವಿವಿಧ ಭಂಗಿಗಳ ಕೆತ್ತನೆಗಳಿವೆ. ದೇವಸ್ಥಾನದ ಅಂಗಳವು ವಿಶಾಲವಾಗಿದ್ದು ಅಲ್ಲಿ ಹಲವಾರು ಸಣ್ಣ ಸಣ್ಣ ಗುಡಿಗಳಿವೆ.

ಏಕಾಮ್ರ ಪುರಾಣದ ಪ್ರಕಾರ ಇಲ್ಲಿನ ಪ್ರಧಾನ ದೇವತೆ ಲಿಂಗ ರೂಪಿಯಾಗಿ ಕಾಣಿಸಿಕೊಂಡದ್ದಲ್ಲ. ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿ ಯುಗಗಳಲ್ಲಷ್ಟೇ ಲಿಂಗರೂಪದಲ್ಲಿ ಬಂತು ಅನ್ನುತ್ತದೆ. ಆರಂಭದಲ್ಲಿ ಅದು ಪ್ರಾಕೃತಿಕವಾಗಿ ಆಕಾರವಿಲ್ಲದ ಒಂದು ಕಲ್ಲಿನ ರೂಪದಲ್ಲಿತ್ತಂತೆ. ಅಂಥ ಲಿಂಗವನ್ನು ಕೃತಿವಾಸ ಅಥವಾ ಸ್ವಯಂಭೂ ಎಂದು ಕರೆಯುತ್ತಾರೆ. ಇಂಥ ಲಿಂಗವು ದೇಶದ 64 ಕಡೆಗಳಲ್ಲಿ ಇವೆ. ಗಂಗ ವಂಶದವರು 12ನೆಯ ಶತಮಾನದಲ್ಲಿ ಆಳ್ವಿಕೆಗೆ ಬಂದ ನಂತರ ಅಲ್ಲಿಗೆ ವೈಷ್ಣವ ಪಂಥವರು ಜಗನ್ನಾಥನನ್ನು ಕೊಂಡುತಂದರು. ಗಂಗರಸರು ದೇವಸ್ಥಾನವನ್ನು ಪುನರ್ನವೀಕರಣ ಮಾಡಿ ಜಯ ಮತ್ತು ಪ್ರಚಂಡರೆಂಬ ದ್ವಾರಪಾಲಕರ ಮೂರ್ತಿಗಳನ್ನು ಸ್ಥಾಪಿಸಿದರು. ದೇವಸ್ಥಾನದ ಧ್ವಜವು ಸಾಮಾನ್ಯವಾಗಿ ಶಿವದೇವಾಲಯಗಳಲ್ಲಿರುವಂತೆ ತ್ರಿಪಿಠಕದ ಮೇಲೆ ನಿಲ್ಲದೆ ಒಂದು ಪಿನಾಕ ಧನುಸ್ಸಿನ ಮೇಲೆ ನಿಂತಿದೆ.

ನಮ್ಮಗೈಡ್‌ ಇಷ್ಟೆಲ್ಲ ವಿವರಿಸಿ ನಮ್ಮೆಲ್ಲರನ್ನು ದೇವಸ್ಥಾನಕ್ಕೆ ಒಂದು ಸುತ್ತು ಹಾಕಿಸಿ ಒಳಗೆ ಕರೆದುಕೊಂಡು ಹೋಗಿ ಎಲ್ಲವನ್ನೂ ತೋರಿಸಿದರು. ಅಲ್ಲಿಂದ ಹೊರಗೆ ಬರುವಾಗಲೇ ಗಂಟೆ ಆರಾಗಿತ್ತು. ಭುವನೇಶ್ವರದಲ್ಲಿ ಸಂಜೆ ಐದು ಗಂಟೆಗೆಲ್ಲಾ ಕತ್ತಲಾಗಿ ಬಿಡುತ್ತದೆ. ನಾವು ಬೇಗ ಬೇಗನೆ ಬಸ್ಸು ಹತ್ತಿ ಹೋಟೆಲಿಗೆ ಬಂದು ಊಟ ಮಾಡಿ ಮಲಗಿದೆವು. 

(ಇನ್ನೂ ಇದೆ)

ಚಿತ್ರ- ಬರಹ : ಪಾರ್ವತಿ ಜಿ.ಐತಾಳ್, ಬೆಂಗಳೂರು

(ಕೆಲವು ಚಿತ್ರಗಳನ್ನು ಇಂಟರ್ನೆಟ್ ನಿಂದ ಬಳಸಿಕೊಳ್ಳಲಾಗಿದೆ)