ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 3)

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 3)

ಮರು ದಿವಸ ಬೆಳಗ್ಗೆ ಏಳು ಗಂಟೆಗೇ ಹೊರಟು ನಾಲ್ಕು ಗಂಟೆ ಪ್ರಯಾಣ ಮಾಡಿ ನಾವು ಹೋಗಿದ್ದು ಪುರುಷೋತ್ತಮ ಪುರ ಎಂಬ ಹಳ್ಳಿಯಲ್ಲಿ ಕುಮಾರಿ ಬೆಟ್ಟದ ಮೇಲಿರುವ ತಾರಾತಾರಿಣಿ ಶಕ್ತಿಪೀಠಕ್ಕೆ. ಇದು ಋಷಿಕುಲ್ಯಾ ನದೀತಟದಲ್ಲಿ, ಕುಮಾರಿಬೆಟ್ಟದ ತುದಿಯಲ್ಲಿರುವ ಆದಿಶಕ್ತಿ ದೇವಸ್ಥಾನ. ಒಡಿಶಾ ದಗಂಜಮ್‌ ಜಿಲ್ಲೆಯಲ್ಲಿ ಬ್ರಹ್ಮಪುರ ಎಂಬ ನಗರದಿಂದ 28ಕಿ.ಮೀ ದೂರದಲ್ಲಿದೆ. ರಸ್ತೆಯಲ್ಲಿ ಮೇಲೇರಬೇಕಾದ್ದರಿಂದ ನಮ್ಮ ದೊಡ್ಡ ವಾಹನಗಳು ಹೋಗುವುದಿಲ್ಲ, ಸರಕಾರಿ ಸಿಟಿ ಬಸ್ಸಿನಲ್ಲೇ ಹೋಗಬೇಕು ಎಂದಾಯಿತು. ಆ ಬಸ್ಸಿನಲ್ಲೋ ಉಸಿರು ಕಟ್ಟುವಷ್ಟು ನೂಕು ನುಗ್ಗಲು. ಹೇಗೋ ಎರಡು ಕಿ.ಮೀ.ಪ್ರಯಾಣ ಮಾಡಿ ಗಮ್ಯವನ್ನು ತಲುಪಿದೆವು. ಆದರೆ ತುಂಬಾ ತಿರುವುಗಳ ಮೂಲಕ ಮೇಲೆ ಹತ್ತುವ ಆ ದಾರಿಯ ಇಕ್ಕೆಲಗಳಲ್ಲೂ ಹಸಿರು ಕಾಡುದಟ್ಟವಾಗಿದ್ದು ಚಾಮುಂಡಿ ಬೆಟ್ಟಕ್ಕೆ ಹೋಗುವ ದಾರಿಯನ್ನು ನೆನಪಿಸಿತು. ಶಕ್ತಿಪೀಠಗಳೆಂದರೆ ದಕ್ಷಯಜ್ಞದ ಸಂದರ್ಭದಲ್ಲಿ ತನಗಾದ ಅಪಮಾನವನ್ನು ಸಹಿಸಲಾರದೆ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಹಾರಿ ಸತ್ತಾಗ ಶಿವನು ಸಿಟ್ಟಾಗಿ ಅವಳನ್ನೆತ್ತಿಕೊಂಡು ರುದ್ರತಾಂಡವ ನೃತ್ಯ ಮಾಡಿ ಎಲ್ಲೆಂದರಲ್ಲಿ ತಿರುಗಾಡಿದಾಗ ಅವಳ ದೇಹದ ವಿವಿಧ ಭಾಗಗಳು ಅಲ್ಲಲ್ಲಿ ಬಿದ್ದು ಅಲ್ಲಿ ದೇವಸ್ಥಾನಗಳು ಹುಟ್ಟಿಕೊಂಡವು ಎನ್ನುವುದು ಕಥೆ. ಭಾರತದಾದ್ಯಂತ-ಮುಖ್ಯವಾಗಿ ಉತ್ತರ ಭಾರತದಲ್ಲಿ- ಒಟ್ಟು 51 ಶಕ್ತಿ ಪೀಠಗಳಿವೆಯಂತೆ. ತಾರಾತಾರಿಣಿಯಲ್ಲಿ ದೇವಿಯ ಸ್ತನಗಳು ಬಿದ್ದವೆಂದು ಪ್ರತೀತಿ. ಈ ಶಕ್ತಿಪೀಠವು ಪ್ರಮುಖವಾದ ನಾಲ್ಕು ಆದಿಶಕ್ತಿ ಪೀಠಗಳಲ್ಲೊಂದು. ಕಾಮಾಖ್ಯ ದೇವಾಲಯದಲ್ಲಿದೇ ವಿಯಯೋ ನಿಭಾಗ, ವಿಮಲಾ ದೇವಾಲಯದಲ್ಲಿ ಅವಳ ಪಾದಗಳು ಮತ್ತು ಕಾಳಿಘಾಟ್‌ನ ಕಾಳಿ ದೇವಾಲಯದಲ್ಲಿ ಅವಳ ಬಲಪಾದದ ಹೆಬ್ಬೆರಳು ಬಿದ್ದಿತ್ತೆಂದೂ ನಂಬಿಕೆಯಿದೆ. ತಾರತಾರಿಣಿ ಪೀಠದಗರ್ಭಗೃಹದಲ್ಲಿ ಕಲ್ಲುಗಳಿಂದಾದ ಸ್ತ್ರೀಮುಖಗಳು ಚಿನ್ನ-ಬೆಳ್ಳಿ ಆಭರಣಗಳಿಂದ ಅಲಂಕೃತವಾಗಿದೆ. ಅವರ ಜ್ವಲಂತ ಪ್ರತಿಮೆಗಳನ್ನು ಸಂಕೇತಿಸುವ ಎರಡು ಹಿತ್ತಾಳೆಯ ತಲೆಗಳು ಇವುಗಳ ಮಧ್ಯೆ ಇವೆ. ಗರ್ಭಗೃಹದಲ್ಲಿ ಒಂದು ಚಿಕ್ಕ ಬುದ್ಧನ ಪ್ರತಿಮೆಯಿದೆ.

ಶಕ್ತಿಪೀಠದ ಆರಾಧನೆಯು ಇಲ್ಲಿ ತಲೆತಲಾಂತರಗಳಿಂದ ನಡೆಯುತ್ತಲೇ ಬಂದಿದೆ. ಚೈತ್ರ ಮಾಸದ ಮಂಗಳವಾರಗಳಲ್ಲಿ ಇಲ್ಲಿ ಚೈತ್ರ ಜಾತ್ರೆ ಅಥವಾ ತಾರಾ ತಾರಿಣಿ ಜಾತ್ರೆ ನಡೆಯುತ್ತದೆ. ಈ ಅವಧಿಯಲ್ಲಿ ಮಕ್ಕಳ ತಲೆಗಳನ್ನು ಬೋಳಿಸಿದರೆ ಶುಭವೆಂದು ತಿಳಿಯಲಾಗುತ್ತದೆ. ಆದ್ದರಿಂದ ಚೈತ್ರ ಮಾಸದಲ್ಲಿ ಇಲ್ಲಿಗೆ ನೂರಾರು ಮಂದಿ ಕ್ಷೌರಿಕರನ್ನು ಕರೆಸಲಾಗುತ್ತದೆ. ಉತ್ಸವದ ಸಮಯದಲ್ಲಿ ವಿಶೇಷ ಖಿಚಡಿ ನೈವೇದ್ಯವನ್ನು ದೇವಿಗೆ ಅರ್ಪಿಸಲಾಗುತ್ತದೆ. ಪ್ರತಿ ತಿಂಗಳ ಸಂಕ್ರಾಂತಿಯಂದು ಇಲ್ಲಿ ಸಂಕ್ರಾಂತಿ ಮೇಳವನ್ನು ಆಚರಿಸುತ್ತಾರೆ. ಇದು ತಂತ್ರ ಸಾಧಕರಿಗೆ ಶುಭತರುವ ದಿನ. ಒಡಿಶಾದ ಮನೆಮನೆಗಳಲ್ಲಿ ತಾರಾ ತಾರಿಣಿದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ.

ಕುಮಾರಿ ಪರ್ವತವು ಹೆಚ್ಚು ಕಡಿಮೆ 708 ಅಡಿ ಎತ್ತರವಾಗಿದೆ. ಈ ಪ್ರದೇಶದ ಸುತ್ತಮುತ್ತಲ ಭೂಮಿ ಸುಮಾರು 180 ಎಕರೆ ಇದೆ. ಈ ಪರ್ವತ ಪ್ರದೇಶದ ಪ್ರಕೃತಿ ಸೌಂದರ್ಯ ಅನುಪಮವಾಗಿದೆ. ನಿಸರ್ಗದ ಸೊಬಗೂ ದೇವಿಯ ದಿವ್ಯತೆಯೂ ನೋಡುಗನಿಗೆ ಅನನ್ಯ ಅನುಭವ ನೀಡುತ್ತದೆ. ಬೆಟ್ಟದ ಮೇಲೆ ಹೋಗಲು ರಸ್ತೆ ಇರುವುದರೊಂದಿಗೆ 999 ಮೆಟ್ಟಲುಗಳೂ ಇವೆ. ದೇವಸ್ಥಾನದ ಸುತ್ತುಮುತ್ತ ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳೂ ಇವೆ.

ತಾರಾ ತಾರಿಣಿದೇವಿಯನ್ನು ಶಕ್ತಿದೇವತೆಯನ್ನಾಗಿ ಪರಿವರ್ತಿಸಿದ್ದು ಒಂದು ಬುಡಕಟ್ಟುಜನಾಂಗ ಎಂದು ಹೇಳಲಾಗುತ್ತದೆ. ತಾರಾ ಬೌದ್ಧರ ಮಹಾಯಾನ ಪಂಥದ ಒಂದು ಮುಖ್ಯದೇವತೆಯ ಹೆಸರು. ಇದು ತಾರಾತಾರಿಣಿಯ ಮೇಲೆ ಬೌದ್ಧಧರ್ಮದ ಪ್ರಭಾವವನ್ನು ಸೂಚಿಸುತ್ತದೆ. ಬುಡಕಟ್ಟು ಸಂಸ್ಕೃತಿಯು ಬೌದ್ಧ ಸಂಸ್ಕೃತಿಯೊಂದಿಗೆ ಬಹಳ ಹಿಂದೆಯೇ ಬೆರೆತಿತ್ತು ಅನ್ನುವುದನ್ನುಇದು ಸೂಚಿಸುತ್ತದೆ.

ಬೌದ್ಧಧರ್ಮದ ನಂಬಿಕೆಯೊಂದಿಗೆ ತಾಂತ್ರಿಕ ಆಚರಣೆಗಳು ಹೇಗೆ ಸೇರಿಕೊಂಡವು ಅನ್ನುವುದಕ್ಕೆ ಐತಿಹಾಸಿಕ ದಾಖಲೆಗಳಿಲ್ಲ. ಚೀನಾ, ಟಿಬೆಟ್, ಸಿಂಹಳ, ನೇಪಾಳ ಮತ್ತು ಭಾರತಗಳಲ್ಲಿ ದೊರಕಿದ ಕೆಲವು ದಾಖಲೆಗಳಿಂದ ಕೆಲವು ವಿಚಾರಗಳನ್ನು ತರ್ಕಿಸಬಹುದು. ಹಾಗೆ ನೋಡಿದಾಗ ಅಶೋಕನ ಕಾಲದಲ್ಲಿ ಒಡಿಶಾದ ಗಂಜಮ್ ಎಂಬ ಈ ಜಿಲ್ಲೆಯಲ್ಲಿ ಬೌದ್ಧಧರ್ಮದ ಪ್ರಭಾವ ಬಹಳವಾಗಿತ್ತು. ಕಳಿಂಗದ ರಾಜಧಾನಿಯಾಗಿದ್ದ ಸಂಪಾ (ಈಗಿನ ಜಾವಗಢ) ಎಂಬಲ್ಲಿ ತಾರಾತಾರಿಣಿ ಬೆಟ್ಟದಿಂದ ಸುಮಾರು 4 ಕಿ.ಮೀ. ದೂರದಲ್ಲಿ ಅಶೋಕನ ವಿಶೇಷ ಕಲ್ಲಿನ ಸ್ತಂಭದಲ್ಲಿ ಇದು ಸ್ಪಷ್ಟವಾಗುತ್ತದೆ. ತಾರಾ ಬೌದ್ಧರ ದೇವತೆ.
ವಿಮಲ ಪಾದಖಂಡಂ ಚ/ಸ್ತನ ಖಂಡಂ ಚ ತಾರಿಣಿ/ಕಾಮಾಖ್ಯಾಯೋನಿ ಖಂಡಂ ಚ/
ಮುಖ ಖಂಡಂ ಚ ಕಾಳಿಕಾ/ ಅಂಗ ಪ್ರತ್ಯಂಗ ಸಂಗೇನ /ವಿಷ್ಣು ಚಕ್ರಕ್ಷತೇ ನ ಚ
ಮೇಲಿನ ಶ್ಲೋಕದ ಪ್ರಕಾರದೇವಿಯದೇಹದ ಭಾಗಗಳು ಛಿದ್ರವಾಗಿದ್ದು ವಿಷ್ಣುವಿನ ಸುದರ್ಶನಚಕ್ರದಿಂದ ಎಂಬ ಕಥೆ ವ್ಯಕ್ತವಾಗುತ್ತದೆ.

ಋಷಿ ಕುಲ್ಯಾ ನದಿಗೆ "ಗಂಗಯಾ ಶ್ರೇಷ್ಠ ಭಗಿನಿ" ಎಂಬ ಹೆಸರಿದೆ. ನೀಲ ಹೊದಿಕೆ ಹೊದ್ದುಕೊಂಡ ತಾರಿಣಿ ಪರ್ವತ ಒಂದು ಜೀವಂತ ಪ್ರತಿಮೆ. ಇಲ್ಲಿ ಪೂಜೆ ಮಾಡಿದರೆ ಚತುರ್ವಿಧ ಪುರುಷಾರ್ಥಗಳನ್ನು ಹೊಂದಬಹುದು ಎಂಬ ನಂಬಿಕೆಯಿದೆ. ತಾರಾತಾರಿಣಿ ಶಕ್ತಿಪೀಠದಲ್ಲಿ ದೇವಿಯ ದರ್ಶನಕ್ಕೆ ಮಧ್ಯಾಹ್ನ ಹೊತ್ತು ತುಂಬಾ ದೊಡ್ಡ ಕ್ಯೂ ಇತ್ತು. ತುಂಬಾ ಹೊತ್ತು ಕಾದ ನಂತರ ಒಳಗೆ ಹೊಗುವ ಅವಕಾಶ ಸಿಕ್ಕಿತು. ನಾವು ಸ್ವಲ್ಪ ಹೊತ್ತು ದೇವಸ್ಥಾನದ ಆವರಣದಲ್ಲಿ ಸುತ್ತಾಡಿ ಮುಗಿಸಿ ಬಸ್ಸಿಗೆ ಕಾದೆವು. ಬಸ್ಸಿನಲ್ಲಿ ಬೆಟ್ಟ ಇಳಿದು ಅಲ್ಲೇ ಸಮೀಪವಿದ್ದ ಒಂದು ಹೋಟೆಲಿನಲ್ಲಿ ನಮ್ಮಅಡುಗೆಯವರು ಬಸ್ಸಿನಲ್ಲಿ ತಂದಿದ್ದ ಊಟ ಮಾಡಿದೆವು. ಊಟ ಮುಗಿಸಿ ಮತ್ತೆ ಪುರಿಯ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಹಸಿರು ತುಂಬಿದ ಬತ್ತದ ಗದ್ದೆಗಳು. ಅಂಚುಗಳಲ್ಲಿ ಹೆಚ್ಚಾಗಿ ತಾಳೆ ಮರಗಳು. ಅಪರೂಪಕ್ಕೆ ತೆಂಗಿನ ಮರಗಳೂ ಇಲ್ಲದಿಲ್ಲ. ಪುರಿ ತಲುಪಿದಾಗ ಆರು ಗಂಟೆಯಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಪುರಿ ಜಗನ್ನಾಥ ದೇವಸ್ಥಾನವನ್ನು ನಮಗೆ ತೋರಿಸುವ ಓರ್ವ ಅರ್ಚಕ ಗೈಡ್ ಬಂದು ಮರುದಿನ ನಾವು ದೇವಸ್ಥಾನದಲ್ಲಿ ಮಾಡಬೇಕಾದ ಅನ್ನದಾನ ಸೇವೆ ಮತ್ತು ಸೂಖಾ ಪ್ರಸಾದಗಳ ಬಗ್ಗೆ ನಮಗೆ ತಿಳಿಹೇಳಿದರು. ಪುರಿಗೆ ಬಂದ ನಂತರ ದೇವರ ದರ್ಶನ, ಅನ್ನದಾನ, ಸಮುದ್ರಸ್ನಾನಗಳನ್ನು ಮಾಡಲೇ ಬೇಕು ಎಂದು ಸಲಹೆ ನೀಡಿದರು. ಮರುದಿನ ಭಾನುವಾರವಾದ್ದರಿಂದ ಎಂದಿಗಿಂತ ರಷ್ ಹೆಚ್ಚಿರಬಹುದು, ಬೆಳಗ್ಗೆ ಬೇಗ ಎದ್ದು ಹೊರಡಬೇಕು ಅಂದರು.

(ಇನ್ನೂ ಇದೆ)

ಚಿತ್ರ- ಬರಹ : ಪಾರ್ವತಿ ಜಿ.ಐತಾಳ್, ಬೆಂಗಳೂರು

(ಕೆಲವು ಚಿತ್ರಗಳನ್ನು ಇಂಟರ್ನೆಟ್ ನಿಂದ ಬಳಸಿಕೊಳ್ಳಲಾಗಿದೆ)