ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 4)
ಬೆಳಗ್ಗೆ ಐದು ಗಂಟೆಗೇ ರೆಡಿಯಾದ ನಾವು 5 ಕಿ.ಮೀ.ದೂರವಿದ್ದ ಜಗನ್ನಾಥ ದೇವಸ್ಥಾನಕ್ಕೆ ಬಸ್ಸು ಹೋಗಲು ಅನುಮತಿ ಇಲ್ಲದ್ದರಿಂದ ಅಟೊ ರಿಕ್ಷಾಗಳಲ್ಲಿ ಹೋದೆವು. ಗೈಡು ಅಲ್ಲಿ ನಮಗಾಗಿ ಕಾಯುತ್ತಿದ್ದರು. ಮೊದಲು ಪಶ್ಚಿಮ ದ್ವಾರದ ಮೂಲಕ ದೇವಸ್ಥಾನವನ್ನು ಪ್ರವೇಶಿಸಿದ ನಾವು ಗೈಡು ಸೂಚಿಸಿದಂತೆ ಒಂದೊಂದೇ ಮುಖ್ಯ ಗುಡಿಗಳನ್ನು ಸಂದರ್ಶಿಸುತ್ತ ನಡೆದೆವು. ಪೂರ್ವದ್ವಾರದಲ್ಲಿ ತುಂಬಾ ರಷ್ ಇರುತ್ತದೆ, ಆದ್ದರಿಂದ ಅಲ್ಲಿಗೆ ಆಮೇಲೆ ಹೋಗೋಣ ಅಂದರು. ಅಲ್ಲಿಗೆ ಪ್ರವೇಶಿಸುವಲ್ಲಿ ಒಂದು ಕಪ್ಪು ಶಿಲೆ(ಕಾಲಾಪತ್ಥರ್‌ಅಥವಾ ಯಮಶಿಲಾ) ಇದೆ, ಅದನ್ನು ಮೆಟ್ಟಬಾರದೆಂಬ ನಿಯಮವಿದೆ, ಯಾಕೆಂದರೆ ಮೆಟ್ಟಿದರೆ ದೇವಸ್ಥಾನ ದರ್ಶನ ಮಾಡಿದ ಪುಣ್ಯವೆಲ್ಲಾ ನಷ್ಟವಾಗಿ ಹೋಗುತ್ತದೆಂಬ ನಂಬಿಕೆಯಿದೆ ಅಂದರು.
ಜಗನ್ನಾಥ ದೇವಸ್ಥಾನವು ವಿಷ್ಣುವಿನ ಆವಾಸ ಸ್ಥಾನ. ದೇವಸ್ಥಾನದ ದಾಖಲೆಗಳ ಪ್ರಕಾರ ಇದನ್ನು ಆವಂತಿ ದೇಶದ ರಾಜಾ ಇಂದ್ರದ್ಯುಮ್ನನು ಕಟ್ಟಿಸಿದ. ಈಗಿರುವ ದೇವಸ್ಥಾನವನ್ನು 10ನೇ ಶತಮಾನದಿಂದ ತೊಡಗಿ ಆವರಣದಲ್ಲಿದ್ದ ಇತರ ದೇವಸ್ಥಾನಗಳ ಜತೆಗೆ ಪೂರ್ವ ಗಂಗವಂಶದ ಮೊದಲ ರಾಜ ಅನಂತವರ್ಮಚೋಡಗಂಗನು ಪುನರ್ನವೀಕರಣಗೊಳಿಸಿದನು. ದೇವಸ್ಥಾನದಲ್ಲಿ ಹೆಚ್ಚಿನ ಪೂಜಾ ವಿಧಿಗಳು ಮಹಾಯಾನ ತಂತ್ರದ ಪರಿಷ್ಕೃತ ರೂಪಗಳಾದ ಒಡಿಯಾನ ತಂತ್ರ ಹಾಗೂ ಬುಡಕಟ್ಟಿನ ಜನರು ನಂಬಿರುವ ಶಬರಿ ತಂತ್ರಗಳ ಮೇಲೆ ಆಧಾರಿತವಾಗಿವೆ. ಸ್ಥಳೀಯ ದಂತಕಥೆಗಳು ಇಲ್ಲಿನ ಮೂರ್ತಿಗಳನ್ನು ಆದಿವಾಸಿಗಳ ವಂಶದವರೊಂದಿಗೆ ತಳಕು ಹಾಕುತ್ತವೆ. ಈ ದೇವಸ್ಥಾನವು ವೈಷ್ಣವ ಪಂಥದ 108ಹೆಮ್ಮೆಯ ಕ್ಷೇತ್ರಗಳಲ್ಲಿ ಒಂದಾಗಿದೆ.
ಜಗನ್ನಾಥ ಕ್ಷೇತ್ರದ ರಥಯಾತ್ರಾ ಉತ್ಸವ ಪ್ರಸಿದ್ಧವಾಗಿದೆ. ಮೂರು ಮುಖ್ಯ ದೇವತೆಗಳನ್ನು ಅಲಂಕರಿಸಿ ರಥದಲ್ಲಿ ಕುಳ್ಳಿರಿಸಿ ಎಳೆಯುತ್ತಾರೆ. ಇಲ್ಲಿ ಪೂಜೆ ಮಾಡುವವರು ಭಿಲ್ಲ ಮತ್ತು ಶಬರ ಬುಡಕಟ್ಟು ಜನಾಂಗಕ್ಕೆ ಸೇರಿದ ಪುರೋಹಿತರು. ಇತರ ಹಿಂದೂ ದೇವಾಲಯಗಳಲ್ಲಿರುವಂತೆ ಇಲ್ಲಿಕಲ್ಲು ಅಥವಾ ಲೋಹಗಳಿಂದ ಮಾಡಿದ ಮೂರ್ತಿಗಳಿಲ್ಲ. ಬದಲಾಗಿ ಮರದ ಮೂರ್ತಿಗಳಿವೆ. ಮತ್ತು ಪ್ರತಿ 12-19 ವರ್ಷಗಳಿಗೊಮ್ಮೆ ತದ್ರೂಪಿ ಮೂರ್ತಿಗಳನ್ನು ತಯಾರಿಸಿ ಬದಲಾಯಿಸಿ ಇಡುವ ಪದ್ಧತಿ ಬೆಳೆದು ಬಂದಿದೆ. ಹಳೆಯ ಮೂರ್ತಿಗಳನ್ನು ಒಂದೆಡೆ ಸಮಾಧಿ ಮಾಡಿ ಇಡುತ್ತಾರೆ. ಆ ಸಮಾಧಿ ಪ್ರದೇಶ ಕೂಡಾ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಜಗನ್ನಾಥ ದೇವಾಲಯವು ದೇಶದ ಪವಿತ್ರ ಚತುರ್ಧಾಮಗಳಲ್ಲಿ ಒಂದು. ಅನೇಕ ದಂತ ಕಥೆಗಳ ಪ್ರಕಾರ ಕೃಷ್ಣನ ನಿರ್ವಾಣದ ನಂತರ ಅವನ ಹೃದಯವನ್ನು ಇಲ್ಲಿ ತಂದು ಇಡಲಾಗಿದೆ. ಪ್ರತಿ ಏಳು ವರ್ಷಗಳಿಗೊಮ್ಮೆ ಅದನ್ನೂ ಬದಲಾಯಿಸುತ್ತಾರೆ. ವೈಷ್ಣವ ಪರಂಪರೆಯ ಈ ದೇವಾಲಯದೊಂದಿಗೆ ವೈಷ್ಣವ ಸಂತರಾದ ರಾಮಾನುಜಾಚಾರ್ಯ, ಮಧ್ವಾಚಾರ್ಯ, ನಿಂಬರಕಾಚಾರ್ಯ, ವಲ್ಲಭಾಚಾರ್ಯ, ಮತ್ತು ರಮಾನಂದರು ನಿಕಟವಾಗಿದ್ದರು. ರಾಮಾನುಜರು ದೇವಾಲಯದ ಆಗ್ನೇಯ ದಿಕ್ಕಿನಲ್ಲಿನ ಏಮಾರು ಮಠವನ್ನೂ, ಆದಿ ಶಂಕರಾಚಾರ್ಯರು ಗೋವರ್ಧನ ಮಠವನ್ನೂಇಲ್ಲಿ ಸ್ಥಾಪಿಸಿದರು.
ದೇವಸ್ಥಾನವನ್ನು ಪುರ್ನವೀಕರಿಸಿದ ಅನಂತವರ್ಮಚೋಡಗಂಗನು ಒಬ್ಬ ಶೈವನಾಗಿದ್ದ. ದೇವಸ್ಥಾನವಿರುವ ಉತ್ಕಲ ದೇಶವನ್ನು ಸೋಲಿಸಿದ ನಂತರ ಅವನು ವೈಷ್ಣವನಾಗಿ ಪರಿವರ್ತಿತನಾದ. ಶಾಸನಗಳು ದೇವಾಲಯಕ್ಕೆ ಅವನ ಕೊಡುಗೆಯ ಬಗ್ಗೆ ಹೇಳುತ್ತವೆ. ದಾಖಲೆಗಳು ದೇವಸ್ಥಾನವು ಅನಂಗಭೀಮದೇವನಿಂದ ರಚಿತವಾಯಿತು ಎನ್ನುತ್ತವೆ. ಪುನರ್ನವೀಕರಣದ ಕೆಲಸವು 12ನೇ ಶತಮಾನದಲ್ಲಿ ಆರಂಭವಾಗಿ 13ನೇ ಶತಮಾನದಲ್ಲಿ-ಅಂದರೆ- ಅನಂಗಭೀಮನ ಕಾಲದಲ್ಲಿ ಕೊನೆಯಾಯಿತು. ದೇವಸ್ಥಾನದ ಉಳಿದ ಅಭಿವೃದ್ಧಿ-ವಿಸ್ತರಣಾ ಕಾರ್ಯಗಳು ಅವರ ನಂತರ ಬಂದ ಗಂಗವಂಶ ಮತ್ತು ಗಜಪತಿ ವಂಶದವರ ಕಾಲದಲ್ಲಿ ಆಯಿತು ಎನ್ನುತ್ತವೆ. ದೇವಸ್ಥಾನದ ಮೇಲೆ ಕಾಲಾಪಹಾಡ್ ಎಂಬ ಮುಸಲ್ಮಾನನಾಗಿ ಪರಿವರ್ತಿತನಾದ ಅಧಿಕಾರಿಯಿಂದ 18 ಬಾರಿ ಆಕ್ರಮಣ ಮತ್ತು ಲೂಟಿಗಳು ನಡೆದಿದ್ದವು.
ಜಗನ್ನಾಥ-ಸುಭದ್ರಾದೇವಿ ಮತ್ತು ಬಲಭದ್ರರು ಇಲ್ಲಿ ಪೂಜಿಸಲ್ಪಡುವ ತ್ರಿಮೂರ್ತಿ ದೇವತೆಗಳು. ಕಹಿಬೇವಿನ ಮರದಿಂದ(ದಾರುವೃಕ್ಷ) ಕೆತ್ತಲ್ಪಟ್ಟ ಈ ಮೂರ್ತಿಗಳು ರತ್ನವೇದಿ ಎಂಬ ಅಲಂಕೃತ ವೇದಿಕೆಯ ಮೇಲೆ ಸುದರ್ಶನ ಚಕ್ರ , ಮದನ ಮೋಹನ, ಶ್ರೀದೇವಿ ಮತ್ತು ವಿಶ್ವಧಾತ್ರಿ ಎಂಬ ದೇವತೆಗಳೊಂದಿಗೆ ನಿಲ್ಲಿಸಲ್ಪಟ್ಟಿವೆ. ಈ ಎಲ್ಲ ಮೂರ್ತಿಗಳಿಗೆ ವಸ್ತ್ರಾಭರಣಗಳನ್ನು ಋತುಮಾನಗಳಿಗೆ ಸರಿಹೊಂದುವಂತೆ ತೊಡಿಸಲಾಗುತ್ತದೆ. ಈ ದೇವತೆಗಳ ಪೂಜೆಯು ಪ್ರಾಚೀನ ಬುಡಕಟ್ಟು ಜನರಿಂದ ದೇವಸ್ಥಾನ ಕಟ್ಟುವುದಕ್ಕೆ ಮೊದಲೇ ಆರಂಭವಾಗಿರಬೇಕು.
ಜಗನ್ನಾಥ ಮೂರ್ತಿಯು ದ್ವಾಪರ ಯುಗದ ಕೊನೆಯಲ್ಲಿ ಒಂದು ಆಲದ ಮರದ ಸಮೀಪದಲ್ಲಿ ನದಿಯ ದಡದಲ್ಲಿ ಒಂದು ಇಂದ್ರನೀಲ ಮಣಿಯ ರೂಪದಲ್ಲಿ ಕಾಣಿಸಿಕೊಂಡಿತ್ತಂತೆ. ಅದು ಎಷ್ಟು ಕಾಂತಿಯುತವಾಗಿತ್ತೆಂದರೆ ಅದಕ್ಕೆ ತಕ್ಷಣವೇ ಮೋಕ್ಷ ದಯಪಾಲಿಸುವ ಶಕ್ತಿಯಿತ್ತು. ಆದ್ದರಿಂದ ಧರ್ಮದೇವತೆಯು ಅದನ್ನು ಭೂಮಿಯಿಂದ ಅಡಗಿಸಿಡಲು ಪ್ರಯತ್ನಿಸುವಲ್ಲಿ ಯಶಸ್ವಿಯಾಯಿತು. ಕಲಿಯುಗದಲ್ಲಿ ರಾಜಾಇಂದ್ರದ್ಯುಮ್ನನು ಅದನ್ನು ಪಡೆಯಲು ತಪಸ್ಸಿಗೆ ಕುಳಿತನು. ವಿಷ್ಣುವು ಪ್ರತ್ಯಕ್ಷನಾಗಿ ಅವನಿಗೆ ಪುರಿಯ ಸಮುದ್ರತೀರಕ್ಕೆ ಹೋಗಿ ಅಲ್ಲಿ ತೇಲುತ್ತಿರುವ ಒಂದು ಮರದ ದಿಮ್ಮಿಯನ್ನು ಕೆತ್ತಿಸಿ ಮೂರ್ತಿರಚಿಸಲು ಹೇಳಿದನು. ಆ ಪ್ರಕಾರ ಇಂದ್ರದ್ಯುಮ್ನನಿಗೆ ಆ ಮರದ ದಿಮ್ಮಿ ಸಿಕ್ಕಿತು. ಅವನು ಒಂದು ಯಜ್ಞವನ್ನು ಏರ್ಪಡಿಸಿದನು. ನರಸಿಂಹನು ಪ್ರತ್ಯಕ್ಷನಾಗಿ ನಾರಾಯಣನು ನಾಲ್ಕು ಪಟ್ಟುದೊಡ್ಡವನಾಗಿಯೂ (ವಾಸುದೇವ ಪರಮಾತ್ಮನಾಗಿ),ಅವನ ಸಂರಕ್ಷಕನಾಗಿ ಬಲಭದನ್ರೂ, ಯೋಗಮಾಯೆಯಾಗಿ ಸುಭದ್ರಾದೇವಿಯೂ, ಅವನ ಶಕ್ತಿಯು ಸುದರ್ಶನ ಚಕ್ರವಾಗಿಯೂ ಆಗಿರಲೆಂದು ಸೂಚನೆಯಿತ್ತ. ಅನಂತರ ವಿಶ್ವಕರ್ಮನು ಸ್ವತಃಕಲಾವಿದನಾಗಿ ಬಂದು ಬಲಭದ್ರ-ಸುಭದ್ರೆ-ಜಗನ್ನಾಥರ ಮೂರ್ತಿಗಳನ್ನು ಕೆತ್ತದನೆಂಬುದು ಕಥೆ.
ಸಮುದ್ರದಲ್ಲಿ ಮರದ ದಿಮ್ಮಿಯನ್ನು ನೋಡಿದಾಗ ಅದರ ಕಣ್ಣು ಕುಕ್ಕುವ ಕಾಂತಿಯನ್ನು ನೋಡಿ ನಾರದರು ಅದರಿಂದ ಮೂರು ಮೂರ್ತಿಗಳನ್ನು ಮಾಡಿ ವೇದಿಕೆಯ ಮೇಲೆ ಸ್ಥಾಪಿಸಲು ರಾಜನಿಗೆ ಹೇಳಿದರಂತೆ. ಆ ಪ್ರಕಾರ ರಾಜನು ವಿಶ್ವಕರ್ಮನನ್ನು ಕರೆತಂದನಂತೆ. ಆದರೆ ಸ್ವತಃ ವಿಷ್ಣುವೇ ಒಬ್ಬ ಬಡಗಿಯ ರೂಪದಲ್ಲಿ ಬಂದುತಾನು ಮೂರ್ತಿಯ ಕೆಲಸವನ್ನು ಮುಗಿಸುವ ತನಕ ಯಾರೂ ತನಗೆ ತೊಂದರೆ ಮಾಡಬಾರದು ಎಂದು ಷರತ್ತು ಹಾಕಿದನಂತೆ. ಎರಡು ವಾರಗಳ ನಂತರ ಕೋಣೆಯಿಂದ ಏನೂ ಸದ್ದು ಕೇಳಿಸದಿರಲು ಇಂದ್ರದ್ಯುಮ್ನನ ಪತ್ನಿಯು ಬಾಗಿಲು ತೆರೆದು ಇಣಿಕಿ ನೋಡಿದಳಂತೆ. ತಕ್ಷಣ ಬಡಗಿಯು ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಿ ಹೊರಟು ಹೋದನಂತೆ. ಹಾಗೆ ಜಗನ್ನಾಥನ ಮೂರ್ತಿಗೆ ಕೈಗಳು ಇಲ್ಲವಾದವು. ಹಾಗಿದ್ದರೂ ಆ ಮೂರ್ತಿಗಳನ್ನು ಸ್ಥಾಪಿಸಬೇಕೆಂದು ಅಶರೀರವಾಣಿ ಕೇಳಿಸಿತಂತೆ.
ಜಗನ್ನಾಥನಿಂದ ತೊಡಗಿ ಇಲ್ಲಿನ ಎಲ್ಲ ದೇವತೆಗಳು ಬುಡಕಟ್ಟು ಜನರಾದ ಭಿಲ್ಲರು ಮತ್ತು ಶಬರರಿಂದ ಅಲಂಕರಿಸಲ್ಪಡುತ್ತಾರೆ. ಜಗನ್ನಾಥನು ನಾರಾಯಣನ ಸಂಕೇತ. ಇನ್ನೊಂದು ಕಥೆಯ ಪ್ರಕಾರ ಜಗನ್ನಾಥನು ನೀಲಮಾಧವ. ನೀಲ ಹರಳುಗಳಿಂದ ಮಾಡಲ್ಪಟ್ಟ ನಾರಾಯಣ. ಬುಡಕಟ್ಟು ಜನರಿಂದ ಬಲಭದ್ರ-ಸುಭದ್ರೆಯರ ಜತೆಗೆ ಪೂಜಿಸಲ್ಪಡುವವನು. ಮೂರ್ತಿಗಳನ್ನು ಮಾಡಿದ ಮರಗಳೂ ವನವಾಸಿಗಳೊಂದಿಗೆ ಸಂಬಂಧ ಇರುವುದನ್ನು ಹೇಳುತ್ತವೆ. ಮಾತ್ರವಲ್ಲ ದೈತಪತಿಗಳು( ಗುಡ್ಡಗಾಡು ಜನಾಂಗದವರು) ಕೂಡಾ ದೇವಸ್ಥಾನದೊಳಗೆ ನಡೆಯುವ ಪೂಜಾ ಚರಣೆಗಳಲ್ಲಿ ಹಕ್ಕಿರುವವರು. ಆದ್ದರಿಂದ ಒಡಿಶಾದ ಸಾಂಸ್ಕೃತಿಕ ರಾಜದಾನಿಯೆಂದು ಕರೆಯಲ್ಪಡುವ ಈ ಕ್ಷೇತ್ರವು ಹಿಂದೂ ಬುಡಕಟ್ಟು ಜನಾಂಗಗಳ ಮೇಲೆ ನಿಂತಿದೆ. ಇಲ್ಲಿನ ದೇವತೆಗಳು ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್ ಚರಿತೆಗಳೆಂಬ ರತ್ನತ್ರಯಗಳ ಸಂಕೇತಗಳಾಗಿದ್ದು(ಇವು ಜೈನ ಸಂಸ್ಕೃತಿಯ ಮೂರು ರತ್ನಗಳು) ಇವುಗಳನ್ನು ಅಳವಡಿಸಿಕೊಂಡರೆ ಸರ್ವಾಂತರ್ಯಾಮಿತ್ವ ಮತ್ತು ಮೋಕ್ಷಗಳ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ದೇವಸ್ಥಾನದ ಆವರಣವು ಒಟ್ಟು 37,000 ಚದರಮೀಟರ್ ವಿಸ್ತೀರ್ಣವಿದ್ದು 6,1 ಮೀಟರ್ ಎತ್ತರದ ಆವರಣ ಗೋಡೆಗಳಿವೆ. ಮುಖ್ಯ ದೇವಸ್ಥಾನದ ಸುತ್ತಮುತ್ತ ಸುಮಾರು 120 ಗುಡಿಗಳಿವೆ. ಕಳಿಂಗ ಶಿಲ್ಪಕಲೆಯ ಸೌಂದರ್ಯದಿಂದ ಕಂಗೊಳಿಸುವ ಇದು ಇಡೀ ಭಾರತದಲ್ಲೇ ಅತ್ಯಂತ ಸುಂದರವಾದ ಕ್ಷೇತ್ರ. ಇದರ ಮುಖ್ಯ ಗೋಪುರವು ಕಲ್ಲಿನಿಂದ ಮಾಡಲ್ಪಟ್ಟಿದ್ದು ಇದನ್ನು 214 ಅಡಿ ಎತ್ತರದ ವೇದಿಕೆಯಲ್ಲಿ ಗರ್ಭಗುಡಿಯ ಮೇಲೆ ಕಟ್ಟಲಾಗಿದೆ. ಗೋಪುರದ ತುದಿಯಲ್ಲಿ ವಿಷ್ಣುವಿನ ನೀಲ ಚಕ್ರವಿದೆ. ಇದು ಅಷ್ಟ ಲೋಹಗಳಿಂದ ಮಾಡಲ್ಪಟ್ಟಿದ್ದು ಅತ್ಯಂತ ಪವಿತ್ರವೆನ್ನಿಸಲ್ಪಟ್ಟಿದೆ. ಇದು ಒಂದು ಟನ್ ಭಾರವಿದೆಯೆಂದು ಹೇಳುತ್ತಾರೆ. ಅಷ್ಟು ಭಾರದ ಚಕ್ರವನ್ನು ಅಷ್ಟು ಎತ್ತರದಲ್ಲಿ ಹೇಗೆ ತೆಗೆದುಕೊಂಡು ಹೋಗಿ ಇಟ್ಟರು ಎನ್ನುವುದೇ ಒಂದು ಸೋಜಿಗ. ದೇವಸ್ಥಾನದ ಪಿರಮಿಡ್ ಆಕೃತಿಯ ಮಾಡುಗಳಿಂದ ಮೇಲೆ ಹೋಗಲು ಮೆಟ್ಟಲುಗಳಿವೆ. ಗೋಪುರದ ಶಿಖರದಲ್ಲಿ ನೀಲಚಕ್ರವಿದೆ. ಈ ಚಕ್ರದ ಮೇಲಿನಿಂದ ಧ್ವಜವನ್ನು ಹಾರಿಸುತ್ತಾರೆ. ಧ್ವಜವನ್ನು ಪ್ರತಿದಿನ ಸಂಜೆ ಬದಲಾಯಿಸುತ್ತಾರೆ. ಈ ರೀತಿ ಧ್ವಜವನ್ನು ಬದಲಾಯಿಸುವುದನ್ನು ನೋಡಲು ಕೆಳಗೆ ಜನಜಾತ್ರೆ ನೆರೆಯುತ್ತದೆ. ಈ ಚಕ್ರಕ್ಕೆ ಪತಿತ ಪಾವನ ಎಂಬ ಹೆಸರಿದೆ. ಇದು ಗರ್ಭಗೃಹದಲ್ಲಿರುವ ದೇವತೆಗಳಷ್ಟೇ ಪವಿತ್ರವಾದದ್ದಾಗಿದೆ. ಈ ನೀಲಚಕ್ರದ ಹೊರ ಪರಿಧಿಯಲ್ಲಿ ನವಗುಂಜಾರವಿದೆ( ಹಿಂದೂ ಧರ್ಮದಲ್ಲಿ ಹೇಳುವ ಒಂಬತ್ತು ಪ್ರಾಣಿಗಳು ಬೆಸೆದಚಿತ್ರ). ಎಲ್ಲವೂ ಧ್ವಜಸ್ತಂಭಕ್ಕೆ ಮುಖಮಾಡುತ್ತವೆ.
ದೇವಸ್ಥಾನಕ್ಕೆ ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರ ದಿಕ್ಕುಗಳಲ್ಲಿ ಪ್ರವೇಶದ್ವಾರಗಳಿವೆ. ಪೂರ್ವದ್ವಾರದಲ್ಲಿ ಎರಡೂ ಬದಿಯಲ್ಲಿ ಎರಡು ಸಿಂಹಗಳ ಬಾಗು ಭಂಗಿಯ ಮೂರ್ತಿಗಳಿವೆ. ಇದನ್ನು ಸಿಂಹದ್ವಾರವೆಂದು ಕರೆಯುತ್ತಾರೆ. ಇಲ್ಲಿಂದ 22 ಮೆಟ್ಟಲುಗಳನ್ನು ಹತ್ತಿ ಆವರಣದೊಳಗೆ ಪ್ರವೇಶಿಸಬೇಕು. ಪ್ರವೇಶದ್ವಾರದ ಬಲಬದಿಯಲ್ಲಿ ಪತಿತ ಪಾವನನ ವರ್ಣಮಯ ಮೂರ್ತಿಯಿದೆ. ಪ್ರಾಚೀನಕಾಲದಲ್ಲಿ ಅಸ್ಪೃಶ್ಯರಿಗೆ ದೇವಸ್ಥಾನ ಪ್ರವೇಶ ಇಲ್ಲದಿದ್ದ ಕಾಲದಲ್ಲಿ ಅವರು ಈ ಪತಿತ ಪಾವನನನ್ನು ಪ್ರಾರ್ಥಿಸಿ ಹೋಗುತ್ತಿದ್ದರು. ಬಾಗಿಲಿನ ಎರಡೂ ಬದಿಗಳಲ್ಲಿ ಜಯ-ವಿಜಯರ ಮೂರ್ತಿಗಳಿವೆ. ರಥಯಾತ್ರೆಯ ಸಮಯದಲ್ಲಿ ದೇವತಾ ಮೂರ್ತಿಗಳನ್ನು ಈ ದ್ವಾರದ ಮೂಲಕವೇ ಹೊರಗೆ ಕರೆ ತರುತ್ತಾರೆ. ಈ ದ್ವಾರದ ಮುಂಭಾಗದಲ್ಲಿ 16 ಬದಿಗಳಿರುವ ಏಕ ಶಿಲಾ ಸ್ತಂಭವಾದ ಅರುಣ ಸ್ತಂಭವಿದೆ. ಅದರಲ್ಲಿ ಸೂರ್ಯದೇವನ ಸಾರಥಿ ಅರುಣನ ಚಿತ್ರವಿದೆ. ಮೊದಲು ಇದು ಕೋನಾರ್ಕದ ಸೂರ್ಯ ದೇವಾಲಯದಲ್ಲಿತ್ತಂತೆ. ವೈರಿಗಳ ಆಕ್ರಮಣದ ಬಗ್ಗೆ ತಿಳಿಯುತ್ತಲೇ ಮರಾಠಾಗುರು ಬ್ರಹ್ಮಚಾರಿ ಗೋಸಾಯಿನ್ ಅದನ್ನು ಇಲ್ಲಿಗೆ ತಂದು ಸ್ಥಾಪಿಸಿದರಂತೆ.
ದೇವಸ್ಥಾನದ ಉಳಿದ ಮೂರು ಪ್ರವೇಶ ದ್ವಾರಗಳಲ್ಲಿ ದ್ವಾರಪಾಲಕರಾಗಿ ಪ್ರಾಣಿಗಳಿವೆ. ಆದ್ದರಿಂದ ಅವುಗಳನ್ನು ಹಾಥಿದ್ವಾರ, ವ್ಯಾಘ್ರದ್ವಾರ ಮತ್ತು ಅಶ್ವ ದ್ವಾರಗಳೆಂದು ಆ ಪ್ರಾಣಿಗಳ ಹೆಸರಿನಿಂದಲೇ ಕರೆಯುತ್ತಾರೆ. ಗಣೇಶಗುಡಿ, ವಿಮಲಾ ಮಾತೆಯ ಗುಡಿ, ಸರಸ್ವತಿ, ಶಿವ, ಸೂರ್ಯ, ನೀಲಮಾಧವ , ಭುವನೇಶ್ವರಿ, ಹನುಮ, ಗೋಪಾಲವಲ್ಲಭ, ಮಹಾಲಕ್ಷ್ಮಿ ಮೊದಲಾದ ಗುಡಿಗಳು ಸುತ್ತ ಮುತ್ತ ಇವೆ. ವಿಮಲಾದೇವಿಯ ಗುಡಿಯು ಬಹಳ ಮಹತ್ವವುಳ್ಳ ಶಕ್ತಿ ಪೀಠವೂ ಹೌದು.
ದೇವಸ್ಥಾನದಲ್ಲಿ ಪ್ರತಿದಿನ ಆರು ಬಾರಿ ನೈವೇದ್ಯ ಅರ್ಪಣೆ ಮಾಡಲಾಗುತ್ತದೆ. ಇಲ್ಲಿನ ಅಡುಗೆ ಮನೆ ಬಹಳ ವಿಶಿಷ್ಟವಾದದ್ದು. ಇದಕ್ಕೆ ಪ್ರಪಂಚದಲ್ಲಿ ಎರಡನೇ ಸ್ಥಾನವಿದೆ. ಇಲ್ಲಿಕಟ್ಟಿಗೆ ಉರಿಸಿ ಬೇಯಿಸುವ 752 ದೊಡ್ಡ ದೊಡ್ಡ ಒಲೆಗಳಿವೆ. ಇಲ್ಲಿ ತಯಾರಾಗುವ ಅನ್ನ ಪ್ರಸಾದವನ್ನು ಸ್ವತಃದೇವಿ ಲಕ್ಷ್ಮಿಯೇ ನೋಡಿಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಯಾಕೆಂದರೆ ಇಲ್ಲಿ ಒಂದು ಪವಾಡ ನಡೆಯುತ್ತದೆ. ಏಳು ಮಡಕೆಗಳಲ್ಲಿ ಅಕ್ಕಿ ತುಂಬಿಸಿ ನೀರು ಹಾಕಿ ಒಂದರ ಮೇಲೆ ಒಂದು ಜೋಡಿಸಿ ಒಲೆಯ ಮೇಲೆ ಇಟ್ಟರೆ ಅತ್ಯಂತ ಮೇಲೆ ಇರುವ ಮಡಕೆಯಲ್ಲಿ ಅನ್ನ ಮೊದಲು ಬೇಯುತ್ತದೆಯಂತೆ. ತಯಾರಿಸಿದ ನೈವೇದ್ಯದಲ್ಲಿ ಏನಾದರೂ ದೋಷವಿದ್ದರೆ ಒಂದು ಛಾಯಾ ಶ್ವಾನವು ತನ್ನ ಅಸಮಾಧಾನವನ್ನು ತೋರಿಸಲು ಬಾಗಿಲಲ್ಲಿ ಬಂದು ನಿಲ್ಲುತ್ತದೆಂದೂ ಒಂದು ವೇಳೆ ಹಾಗೆ ಬಂದು ನಿಂತರೆ ಮಾಡಿದ ಅಡುಗೆ ಎಲ್ಲವನ್ನೂ ಹುಗಿದು ಹಾಕಿ ಹೊಸತನ್ನು ಬೇಯಿಸಲಾಗುತ್ತದೆಯೆಂದೂ ನಮ್ಮಗೈಡ್ ಹೇಳಿದರು. ಬೆಳ್ಳುಳ್ಳಿ-ಈರುಳ್ಳಿಗಳನ್ನು ಹಾಕದ, ಸಸ್ಯಾಹಾರಿ ಆಹಾರವನ್ನೇ 56 ವೈವಿಧ್ಯ ಪದಾರ್ಥಗಳೊಂದಿಗೆ ದೇವರಿಗೆ ಅರ್ಪಿಸಲಾಗುತ್ತದೆಯಂತೆ.
ಶ್ರೀಜಗನ್ನಾಥ ಕಾರಿಡಾರ್ ಎಂಬ ಶ್ರೀಮಂದಿರ ಪರಿಕ್ರಮದ ಉದ್ದ 75 ಮೀಟರ್. ಭಕ್ತಾದಿಗಳಿಗೆ ಸರಿಯಾದ ರೀತಿಯಲ್ಲಿ ದೇವರ ದರ್ಶನವನ್ನು ಮಾಡಿಸುವ ಉದ್ದೇಶದಿಂದ ವಾರಣಾಸಿಯಂತೆಯೇ ಇಲ್ಲೂ ಕಾರಿಡಾರನ್ನು ನಿರ್ಮಿಸಲಾಗಿದೆ. ವ್ಯವಸ್ಥೆಗಳು ಎಷ್ಟೇ ಇದ್ದರೂ ದೇವರ ದರ್ಶನಕ್ಕೆ ಕಾಯುವ ಜನರ ನೂಕು ನುಗ್ಗಲು ನೋಡಿದಾಗ ಎಲ್ಲಿ ಕಾಲ್ತುಳಿತಕ್ಕೊಳಗಾಗಿ ಬಿದ್ದು ಬಿಡುತ್ತೇವೆಯೋ ಎಂದು ನಮಗೆಲ್ಲರಿಗೂ ಭಯವಾಗಿದ್ದಂತೂ ನಿಜ. ದುಡ್ಡು ಕೊಟ್ಟವರಿಗೆ ಸ್ಪೆಷಲ್ ದರ್ಶನ ಎಂಬ ವ್ಯವಸ್ಥೆ ಇಲ್ಲಿಲ್ಲ. ಎಲ್ಲರೂ ಕಾದು ಕಷ್ಟಪಟ್ಟೇ ದೇವರ ದರ್ಶನ ಪಡೆಯಬೇಕು. ಇತರ ನೂರಾರು ದೊಡ್ಡ ಕ್ಷೇತ್ರಗಳಂತೆ ದುಡ್ಡಿದ್ದವರಿಗೆ ಮಣೆ ಹಾಕುವ ದೇವಸ್ಥಾನ ಇದಲ್ಲವೆಂದು ತಿಳಿದು ನನಗೆ ತುಂಬಾ ಖುಷಿಯಾಯಿತು. ಮತ್ತು ವೈದಿಕರಿಂದಷ್ಟೇ ದೇವರ ಪೂಜೆ ಸಾಧ್ಯವೆಂದು ನಂಬಿಕೊಂಡ ಮತ್ತು ಜಾತಿಪದ್ಧತಿಯ ಅನಿಷ್ಟಗಳಿಂದ ಛಿದ್ರಗೊಂಡ ನಮ್ಮ ದೇಶದಲ್ಲಿ ಬುಡಕಟ್ಟು ಜನಾಂಗದವರಿಂದಲೂ ದೇವಸ್ಥಾನದೊಳಗಿನ ಪೂಜಾಚರಣೆಗಳು ಅತ್ಯಂತ ವ್ಯವಸ್ಥಿತವಾಗಿ ಮತ್ತು ಶಿಸ್ತುಬದ್ಧವಾಗಿ ನಡೆಯುತ್ತಿರುವುದನ್ನು ನೋಡಿ ಶ್ರೀನಾರಾಯಣಗುರುಗಳು ಹೇಳಿದ "ಒಂದೇಜಾತಿ, ಒಂದೇ ಮತ, ಒಂದೇದೈವ" ಎಂಬ ಮಾತುಗಳು ಇಲ್ಲಿ ನಿಜವಾಗಿಯೂ ಅನುಷ್ಠಾನಗೊಂಡಿವೆ ಅನ್ನಿಸಿತು.
(ಇನ್ನೂ ಇದೆ)
ಚಿತ್ರ- ಬರಹ : ಪಾರ್ವತಿ ಜಿ.ಐತಾಳ್, ಬೆಂಗಳೂರು
(ಕೆಲವು ಚಿತ್ರಗಳನ್ನು ಇಂಟರ್ನೆಟ್ ನಿಂದ ಬಳಸಿಕೊಳ್ಳಲಾಗಿದೆ)