ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 5)

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 5)

ಬೆಳಗ್ಗೆ ಇಡೀ ದೇವಸ್ಥಾನವನ್ನು ನೋಡಿ ಮುಗಿಸಿ ನಾವು ಉಪಾಹಾರಕ್ಕೆಂದು ಹೋಟೆಲಿಗೆ ಹೋದೆವು. ಸ್ವಲ್ಪ ಫ್ರೆಷ್‌ ಅಪ್ ಮಾಡಿಕೊಂಡು ನಂತರ ಪುರಿಯಿಂದ ವಾಯವ್ಯ ದಿಕ್ಕಿನಲ್ಲಿ ಕರಾವಳಿಯುದ್ದದ ರಸ್ತೆಯಲ್ಲಿ ಸುಮಾರು 35 ಕಿ.ಮೀ,ದೂರದಲ್ಲಿರುವ ಜಗತ್ಪ್ರಸಿದ್ಧ ಕೋನಾರ್ಕದ ಸೂರ್ಯದೇವಾಲಯವನ್ನು ನೋಡಲು ಹೋದೆವು. ಇದು ಕ್ರಿ.ಶ.13ನೆಯ ಶತಮಾನದಲ್ಲಿ ಕಟ್ಟಿದ ಹಿಂದೂ ದೇವಾಲಯ. ಪೂರ್ವ ಗಂಗ ವಂಶದ ಒಂದನೇ ನರಸಿಂಗ ದೇವನು ಕಟ್ಟಿಸಿದ ದೇವಾಲಯವಿದು. ದೇವಾಲಯದ ಸಂಕೀರ್ಣದಲ್ಲಿ 100 ಅಡಿ ಎತ್ತರದ ರಥದಾಕಾರದ ಕಟ್ಟಡವಿದೆ. ಈ ರಥಕ್ಕೆ 24 ಬೃಹತ್ ಗಾಲಿಗಳಿವೆ. ರಥವನ್ನೆಳೆಯುವ ಏಳು ಕುದುರೆಗಳಿವೆ. ಹಿಂದೆ 200 ಅಡಿಗಳಿಗಿಂತಲೂ ಹೆಚ್ಚು ಎತ್ತರವಾಗಿದ್ದ ಈ ದೇವಾಲಯವು ಇವತ್ತು ಅದರ ಶಿಖರ ಗೋಪುರವು ಮುರಿದು ಬಿದ್ದು ಹಾಳಾಗಿರುವುದರಿಂದ ತನ್ನ ಮೂಲ ಸೊಬಗನ್ನು ಕಳೆದುಕೊಂಡಿದೆ. ಕಳಿಂಗ ವಾಸ್ತು ಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಈ ದೇವಾಲಯ ನಿಂತಿದೆಯಾದರೂ ಈಗ ಇಲ್ಲಿ ಉಳಿದಿರುವುದು ಅವಶೇಷಗಳು ಮಾತ್ರ. ಇದು ನಾಶವಾಗಲು ನಿಖರವಾದ ಕಾರಣಗಳು ಇನ್ನೂ ಗೊತ್ತಿಲ್ಲ. ಗರ್ಭಗೃಹದಲ್ಲಿ ಬೃಹತ್ ಪ್ರಮಾಣದ ಅಯಸ್ಕಾಂತಗಳಿದ್ದವು, ಅವುಗಳ ಆಧಾರದ ಮೇಲೆ ಗೋಪುರವನ್ನು ಹೊತ್ತ ಕಂಬಗಳು ನಿಂತಿದ್ದವು. ಆಕ್ರಮಣಕಾರರು( ಪೋರ್ಚುಗೀಸರು ಎಂದು ನಮ್ಮ ಗೈಡ್ ಹೇಳಿದರು) ಎಲ್ಲ ಅಯಸ್ಕಾಂತಗಳನ್ನೂ ಕಿತ್ತುಕೊಂಡು ಹೋದಾಗ ಆಧಾರ ಸ್ತಂಭಗಳೆಲ್ಲವೂ ಕುಸಿದು ಬಿದ್ದವಂತೆ. ಯೂರೋಪಿನ ನಾವಿಕರ ವಿವರಣೆಯ ಪ್ರಕಾರ ಈ ಕಟ್ಟಡವು ಒಂದು ನಾವಿಕರಿಗೆ ದಾರಿ ತೋರಿಸುವ ಕಪ್ಪು ಪಗೋಡಾವಾಗಿತ್ತು. ಪುರಿಯ ಜಗನ್ನಾಥ ಕ್ಷೇತ್ರವನ್ನು ಬಿಳಿಯ ಪಗೋಡಾ ಅನ್ನುತ್ತಿದ್ದರಂತೆ. ಬಂಗಾಳ ಕೊಲ್ಲಿಯಲ್ಲಿ ಪ್ರಯಾಣಿಸುವ ಹಡಗುಗಳಿಗೆ ಇವು ಎರಡೂ ದಾರಿ ತೋರಿಸುವ ಚಿಹ್ನೆಗಳಾಗಿದ್ದವು. ಇಲ್ಲಿ ಈಗ ಅರ್ಧಾಂಶವಾದರೂ ಅವಶೇಷಗಳನ್ನು ಉಳಿಸಿದವರು ಬ್ರಿಟಿಷ್‌ ಇಂಡಿಯಾ ಕಾಲದ ಪುರಾತತ್ವ ಇಲಾಖೆಯವರು. ಪ್ರತಿ ವರ್ಷ ಇಲ್ಲಿ ನಡೆಯುವ ಚಂದ್ರಭಾಗಾ ಮೇಳದಲ್ಲಿ ಬೃಹತ್ ಸಂಖ್ಯೆಯ ಹಿಂದೂಗಳು ಬಂದು ಸೇರುತ್ತಾರೆ.

ಕೋನ(ಒಂದು ಮೂಲೆ) ಮತ್ತು ಅರ್ಕ(ಸೂರ್ಯ) ಎಂಬ ಎರಡು ಶಬ್ದಗಳು ಸೇರಿ ಕೋನಾರ್ಕವಾಯಿತು.. ಹಿಂದೂ ವೇದಗಳ ಪ್ರಕಾರ ಸೂರ್ಯದೇವನು ಬೆಳಗ್ಗೆ ಅರುಣನೆಂಬ ಸಾರಥಿಯಿಂದ ನಡೆಸಲ್ಪಡುವ ಏಳು ಕುದುರೆಗಳು ಎಳೆಯುವ ರಥವನ್ನೇರಿ ಮೂಡು ದಿಕ್ಕಿನಲ್ಲಿ ಉದಯಿಸುತ್ತಾನೆ. ಕೋನಾರ್ಕದಲ್ಲಿ ಅವನು ಎರಡೂ ಕೈಗಳಲ್ಲಿ ಕಮಲ ಪುಷ್ಪಗಳನ್ನು ಹಿಡಿದು ರಥದಲ್ಲಿ ಸವಾರಿ ಮಾಡುವಂತೆ ಚಿತ್ರಿಸಲ್ಪಟ್ಟಿದ್ದಾನೆ. ಈ ಏಳು ಕುದುರೆಗಳು ಸಂಸ್ಕೃತದ ಗಾಯತ್ರಿ, ಬೃಹತಿ, ಉಷಿತ, ಜಗತಿ, ತ್ರಿಸ್ತುಭ, ಅನುಸ್ತುಭ ಮತ್ತು ಪಂಕ್ತಿ ಎಂಬ ಏಳು ಛಂದಸ್ಸುಗಳ ಹೆಸರುಗಳಿಂದ ಕರೆಯಲ್ಪಡುತ್ತವೆ. ಸೂರ್ಯನಿಗೆ ಅಡ್ಡಲಾಗಿ ಉದಯದೇವತೆಗಳನ್ನು ಪ್ರತಿನಿಧಿಸುವ ಉಷಾ ಮತ್ತು ಪ್ರತ್ಯೂಷಾ ಎಂಬ ಸ್ತ್ರೀದೇವತೆಗಳಿದ್ದಾರೆ. ಅವರು ಕತ್ತಲನ್ನು ಓಡಿಸುತ್ತೇವೆಂದು ಸವಾಲು ಹಾಕಿದವರಂತೆ ಬಾಣ ಹೊಡೆಯುವ ಭಂಗಿಯಲ್ಲಿದ್ದಾರೆ. ರಥದ ಹನ್ನೆರಡು ಜತೆ ಗಾಲಿಗಳು ಹಿಂದೂ ಕ್ಯಾಲೆಂಡರಿನ 12 ತಿಂಗಳುಗಳು, ಮತ್ತು ಪ್ರತಿ ತಿಂಗಳ ಎರಡು ಪಕ್ಷಗಳನ್ನು ಸಂಕೇತಿಸುತ್ತವೆ. ಕೋನಾರ್ಕ ದೇವಾಲಯವು ಈ ವಿಶಿಷ್ಟ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೊರಿಸುತ್ತದೆ. 24 ಬೃಹತ್‌ಗಾತ್ರದ 12 ಅಡಿ ವ್ಯಾಸದಕಲ್ಲು ಗಾಲಿಗಳ ಒಳಭಾಗದಲ್ಲಿ ಹೆಣ್ಣಿನ ಋತುಚಕ್ರವನ್ನು ಪ್ರತಿನಿಧಿಸುವ ಗಾಲಿಕಡ್ಡಿಗಳಿವೆ. ಒಳ ಪ್ರದೇಶದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊತ್ತಿಗೆ ನೋಡಿದರೆ ರಥಾಕೃತಿಯ ದೇವಸ್ಥಾನವು ನೀಲಿ ಸಮುದ್ರದ ಆಳದಿಂದ ಸೂರ್ಯನನ್ನು ಹೊತ್ತು ತರುವಂತೆ ಕಾಣುತ್ತದೆ.

ಸೂರ್ಯದೇವಾಲಯದ ಯೋಜನೆಯು ಒಂದು ಹಿಂದೂ ದೇವಾಲಯದ ಚೌಕಾಕಾರದ ನಕಾಶೆ ಯಲ್ಲಿ ಜೋಡಿಸಲ್ಪಟ್ಟಿದೆ. ಕಪಿಲ ವಾತ್ಸ್ಯಾಯನನ ಪ್ರಕಾರ ನೆಲ ಅಂತಸ್ತಿನ ಯೋಜನೆ ಮತ್ತು ಶಿಲ್ಪ ವಿನ್ಯಾಸಗಳು ಚೌಕ ಮತ್ತು ವೃತ್ತ ಜ್ಯಾಮಿತಿಯನ್ನು ಅನುಸರಿಸುತ್ತವೆ. ಕೋನಾರ್ಕ ದಡ್ಯೂಲಾ ಎಂದು ಕರೆಯಲ್ಪಡುವ ವಿಶಿಷ್ಟ ಶಿಲ್ಪ ವಿನ್ಯಾಸವು ಈಗ ಇಲ್ಲ. ರಥಾಕೃತಿಯ ಸುತ್ತ ಹಿಂದೂ ದೇವತೆಗಳನ್ನು ಚಿತ್ರಿಸುವ ಕಿಂಡಿಗಳಿರುವ, ಸೂರ್ಯನ ವಿವಿಧ ಅಂಶಗಳನ್ನು ಚಿತ್ರಿಸುವ ಸಣ್ಣ ಸಣ್ಣ ಗುಡಿಗಳಿವೆ. ಡ್ಯೂಲಾವನ್ನು ಅತ್ಯಂತ ಎತ್ತರದಲ್ಲಿ ಕಟ್ಟಲಾಗಿತ್ತು. ಮೂಲತಃ ಈ ದೇವಾಲಯವು ರೇಖಾಡ್ಯೂಲಾ( ಸರಳ ರೇಖೆಯಲ್ಲಿ ಮೇಲಕ್ಕೆ ನೇರವಾಗಿ ಹೋಗುವ) ಮತ್ತು ಬಡಾ ಡ್ಯೂಲಾಗಳಿಂದ ಮಾಡಿದ ಮುಖ್ಯಗರ್ಭಗೃಹವನ್ನು ಹೊಂದಿದ ಒಂದು ಸಂಕೀರ್ಣವಾಗಿತ್ತು. ಅದರ ಎದುರಿಗೆ ಜಗಮೋಹನ(ಸಭಾಭವನ), ಅದಕ್ಕೆ ಜೋಡಿಸಿದ ಪೀಡಾಡ್ಯೂಲಾ( ಚೌಕಾಕೃತಿಯ ಮಂಟಪ ಮತ್ತು ಪಿರಮಿಡ್‌ ಆಕೃತಿಯ ಮಾಡು)ಗಳಿವೆ. ಈ ಎಲ್ಲಾ ರಚನೆಗಳೂ ಒಳತನಕ ಚೌಕಾ ಕೃತಿಯಲ್ಲಿದ್ದು ವೈವಿಧ್ಯಮಯ ಬಾಹ್ಯ ಭಾಗಗಳೊಂದಿಗೆ ಪಂಚರಥ ಯೋಜನೆಯನ್ನು ಹೊಂದಿವೆ. ಕೇಂದ್ರದ ಉಬ್ಬು(ರಾಹ)ಬದಿಯ ಉಬ್ಬುಗಳಿಗಿಂತ ದೊಡ್ಡದಾಗಿದ್ದು ಕಾನಿಕಾ-ಪಾಗಾ ಎಂದು ಕರೆಯಲ್ಪಡುವ ಸೂರ್ಯನ ನೆರಳು-ಬೆಳಕುಗಳ ಆಟವೇ ಇದರ ಗುರಿ. ಇದು ಇಡೀ ದಿನ ನೋಡುಗರ ಕಣ್ಣುಗಳಿಗೆ ಹಬ್ಬವುಂಟು ಮಾಡುತ್ತದೆ. ಈ ರಚನಾ ವಿನ್ಯಾಸದ ವಿವರಗಳನ್ನು ಪ್ರಾಚೀನ ಒಡಿಶಾದ ಶಿಲ್ಪ ಶಾಸ್ತ್ರದಲ್ಲಿ ಕಾಣಬಹುದು.

ಮುಖ್ಯ ದೇವಾಲಯದ ಪೂರ್ವ ದಿಕ್ಕಿನಲ್ಲಿ ನಾಟ್ಯ ಪ್ರದರ್ಶನಕ್ಕಾಗಿ ನಟ ಮಂದಿರವಿದೆ, ಅದುಕೆತ್ತನೆಯ ವಿನ್ಯಾಸಗಳಿರುವ ಒಂದು ವೇದಿಕೆಯ ಮೇಲೆ ನಿಂತಿದೆ. ಈ ವೇದಿಕೆಯ ಎತ್ತರಕ್ಕಿಂತ ಇಮ್ಮಡಿ ಅಗಲವಿರುವ ಜಗಮೋಹನದ ಗೋಡೆಗಳು 100 ಅಡಿ ಎತ್ತರ ಇವೆ. ಈಗ ಉಳಿದಿರುವ ರಚನೆಯಲ್ಲಿ ಆರು ಪೀಠಗಳಿರುವ ಮೂರು ಅಂತಸ್ತುಗಳಿವೆ. ಇವು ಮೇಲಿನಿಂದ ಕೆಳಗೆ ಕಡಿಮೆಯಾಗುತ್ತ ಬಂದು ಕೆಳಗಿನ ಮಾದರಿಗಳು ಪುನರಾವರ್ತನೆಗೊಳ್ಳುತ್ತವೆ. ಪೀಠಗಳು ತಾರಸಿಗಳಾಗಿ ವಿಭಾಗಿಸಲ್ಪಟ್ಟಿವೆ. ಈ ಪ್ರತಿ ತಾರಸಿಗಳ ಮೇಲೆ ಸಂಗಿತಗಾರರ ಮೂರ್ತಿಗಳಿವೆ.

ದೇವಾಲಯದ ಗೋಡೆಗಳನ್ನು ತುಂಬಿರುವ ಶಿಲ್ಪಗಳಲ್ಲಿ ಅಂದಿನ ಕಾಲದ ಜೀವನ ಕ್ರಮ ಮತ್ತು ಸಂಸ್ಕೃತಿಗಳ ವಿವರವಾದ ಚಿತ್ರಗಳಿವೆ. ಶೃಂಗಾರ ಭರಿತ ಕಾಮ ಮತ್ತು ಮಿಥುನ ಶಿಲ್ಪಗಳಿವೆ. ಮನುಷ್ಯ ಜೀವನದ ವಿವಿಧ ಹಂತಗಳು, ಅವರ ಸ್ವಭಾವ ವೈಚಿತ್ಯ್ರಗಳು, ಸಂಬಂಧಗಳು, ಅವರು ಮಾಡುವ ವಿವಿಧ ವೃತ್ತಿಗಳು, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಚಟುವಟಿಕೆಗಳು. ವಿವಿಧ ರೀತಿಯ ವಸ್ತ್ರ ವಿನ್ಯಾಸ ಮತ್ತು ಕೇಶ ವಿನ್ಯಾಸಗಳು- ಎಲ್ಲವನ್ನೂ ನೋಡಿದಾಗ ಅವುಗಳನ್ನು ನಿರ್ಮಿಸಿದ್ದ ಶಿಲ್ಪಿಗಳ ಕಲ್ಪನಾ ಶಕ್ತಿಯ ಬಗ್ಗೆ ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ.

ಕೋನಾರ್ಕದಿಂದ ಎಲ್ಲವನ್ನೂ ನೋಡಿ ಹೊರಟಾಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಹೋಟೆಲಿಗೆ ಬಂದು ಊಟ ಮುಗಿಸಿದೆವು. ಜಗನ್ನಾಥ ಕ್ಷೇತ್ರದ ಅನ್ನ ಪ್ರಸಾದಕ್ಕೆಂದು ನಾವು ದುಡ್ಡು ಕೊಟ್ಟಿದ್ದರೂ ಅದು ಸಿಗುವಾಗ ಮೂರು ಗಂಟೆಯಾದೀತು ಎಂದಿದ್ದರು. ಮೂರೂವರೆಗೆ ನಾವು ಮತ್ತೆ ಜಗನ್ನಾಥ ದೇವಸ್ಥಾನಕ್ಕೆ ಗೋಪುರದ ತುದಿಯ ಧ್ವಜ ಬದಲಾಯಿಸುವುದನ್ನು ನೋಡಲೆಂದು ಹೋದೆವು. ಎರಡು-ಮೂರು ಮಂದಿ ಆಗಲೇ ಗೋಪುರದತುದಿ ತಲುಪಿಯಾಗಿದ್ದನ್ನು ನೋಡಿದೆವು. ಅಷ್ಟು ಎತ್ತರದ ಗೋಪುರದ ಮೇಲೆ ಹತ್ತಿ ಅಲ್ಲಿ ಇದ್ದ ಧ್ವಜವನ್ನು ಬಿಡಿಸಿ ಹೊಸತನ್ನು ಕಟ್ಟುವ ಕೆಲಸ ಸಣ್ಣ ಸಾಹಸವೇನಲ್ಲ. ನಾವು ಆ ದೃಶ್ಯವನ್ನು ನೋಡಿ ಕಣ್ಣು ತುಂಬಿಕೊಂಡೆವು. ಒಂದಷ್ಟು ಹೊತ್ತು ದೇವಸ್ಥಾನದ ಸುತ್ತ ಮುತ್ತ ಷಾಪಿಂಗ್ ಮಾಡಿ ಮತ್ತೆ ಹೋಟೆಲಿಗೆ ಮರಳುವಾಗ ಆರು ಗಂಟೆಯಾಗಿತ್ತು. ರಾತ್ರಿಯ ಊಟಕ್ಕೆ ಪ್ರಸಾದವೇ ಬೇಕಾದಷ್ಟು ಇತ್ತು. ನೆಲದ ಮೇಲೆಯೇ ಕುಳಿತು ಊಟ ಮಾಡಬೇಕು ಮತ್ತು ಎಲೆಗೆ ಹಾಕಿಕೊಂಡ ಅನ್ನವನ್ನಾಗಲೀ, ಧಾಲ್-ಪಲ್ಯ-ಸಿಹಿಯನ್ನಾಗಲಿ ಸ್ವಲ್ಪವೂ ಬಿಸಾಕ ಕೂಡದು ಎನ್ನುವುದು ಅವರ ಕಟ್ಟು ನಿಟ್ಟಾದ ಸೂಚನೆಯಾಗಿತ್ತು.

ಮರುದಿನ ನಮ್ಮ ಪ್ರವಾಸದ ಕೊನೆಯ ದಿನ. ಜಗನ್ನಾಥಕ್ಕೆ ಬಂದ ಮೇಲೆ ದೇವರ ದರ್ಶನ, ಅನ್ನಪ್ರಸಾದ ಸೇವನೆ, ಸಮುದ್ರ ಸ್ನಾನಗಳನ್ನು ಮಾಡಿಯೇ ಹೋಗಬೇಕು ಎಂಬ ನಿಯಮದಂತೆ ನಮ್ಮ ಸಮುದ್ರ ಸ್ನಾನ ಬಾಕಿಯಾಗಿದ್ದನ್ನು ಬೆಳಗ್ಗೆ ಬೇಗ ಎದ್ದು ಹೋಟೆಲಿಗೆ ಕೇವಲ ಇನ್ನೂರು ಮೀಟರ್‌ ದೂರದಲ್ಲಿದ್ದ ಸಮುದ್ರತೀರಕ್ಕೆ ಹೋಗಿ ಸ್ನಾನ ಮಾಡಿ ಬಂದೆವು. ಏಳು ಗಂಟೆಗೆ ಉಪಾಹಾರ ಮುಗಿಸಿ ಚೆಕ್‌ ಔಟ್ ಮಾಡಿ ಮತ್ತೆ ಬಸ್ಸಿನಲ್ಲಿ ಕುಳಿತೆವು. ಅವತ್ತು ಮೊದಲು ಹೋಗಿದ್ದು ಭುವನೇಶ್ವರದ ದಾರಿಯಲ್ಲಿದ್ದ ಜಗತ್ಪ್ರಸಿದ್ಧ ಚಿಲಿಕಾ ಸರೋವರಕ್ಕೆ. ತುಂಬಾ ಸುಂದರವೂ ವಿಶಾಲವೂ ಆಗಿದ್ದಚಿಲಿಕಾ ಸರೋವರದಲ್ಲಿ ದೋಣಿ ವಿಹಾರಕ್ಕೆ ಎರಡು ಗಂಟೆಗಳೇ ಬೇಕಾದವು. ನಮ್ಮಟೂರಿನ ಸಂತೋಷಕ್ಕೆ ಕಳಶ ಪ್ರಾಯವಾದಂಥ ಮಿರಿ ಮಿರಿ ಮಿಂಚುವ ನೀರ ಮೇಲಣ ಆ ವಿಹಾರ ಎಂದಿಗೂ ಮರೆಯುವಂತಿಲ್ಲ. ಅಲ್ಲೇ ಊಟ ಮುಗಿಸಿ ಬಸ್ಸು ಭುವನೆಶ್ವರದತ್ತ ಚಲಿಸಿತು. ದಾರಿಯಲ್ಲಿ ಸಿಕ್ಕಿದ ಸಾಕ್ಷಿ ಗೋಪಾಲ ದೇವಸ್ಥಾನ ಮತ್ತು ಮುಕ್ತೇಶ್ವರ ದೇವಸ್ಥಾನಗಳ ಬಗ್ಗೆ ನಾವು ಹೆಚ್ಚೇನೂ ಕೇಳಿರದಿದ್ದರೂ ಪ್ರಶಾಂತ ಪ್ರಕೃತಿಯ ಮಧ್ಯೆ ಸುತ್ತಮುತ್ತ ತುಂಬಿದ ಹಲವಾರು ಚಿಕ್ಕ-ಪುಟ್ಟ ಗುಡಿಗಳ ಜತೆಗೆ ಅವುಗಳ ಸುಂದರ ನೋಟವು ಮನಸ್ಸಿಗೆ ಮುದ ನೀಡಿದವು.

ಆಗಲೇ ನಾಲ್ಕು ಗಂಟೆಯಾಗಿತ್ತು. ನಾವು ಸೀದಾ ವಿಮಾನ ನಿಲ್ದಾಣಕ್ಕೆ ಬಂದು ಅಗತ್ಯವಿರುವ ಎಲ್ಲ ತಪಾಸಣೆಗಳಿಗೊಳಗಾಗಿ ವಿಮಾನ ಹೊರಡುವ ಗೇಟನ್ನುತಲುಪಿದೆವು. ವಿಮಾನ ಒಂದು ಗಂಟೆ ತಡವಾಗಿ ಬಂದರೂ ಸವಿ ನೆನಪುಗಳ ಬುತ್ತಿಯನ್ನು ಹೊತ್ತುಕೊಂಡು ಮನೆಗೆ ಹೋಗುವ ಸಂಭ್ರಮದಲ್ಲಿ ಅದು ಗೊತ್ತಾಗಲೇ ಇಲ್ಲ.

(ಮುಗಿಯಿತು)

ಚಿತ್ರ- ಬರಹ : ಪಾರ್ವತಿ ಜಿ.ಐತಾಳ್, ಬೆಂಗಳೂರು