ನನ್ನ ಪ್ರೀತಿಯ ಯುವ ಸಮುದಾಯವೇ....

ನನ್ನ ಪ್ರೀತಿಯ ಯುವ ಸಮುದಾಯವೇ....

ಇನ್ನೂ ಮುಗಿಯದ ಕೊರೋನಾ ವೈರಸ್ ಹಾವಳಿ ನಿಮ್ಮ ಬದುಕು ಬಸವಳಿಯುವಂತೆ  ಮಾಡಬಹುದು. ನಿಮ್ಮ ಬದುಕಿನಲ್ಲಿ ಮೊದಲ ಬಾರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಆತಂಕಮಯ ವಾತಾವರಣ  ಎದುರಾಗಿದೆ. ಅಡೆತಡೆಗಳಿಲ್ಲದ ಜೀವನದಲ್ಲಿ ಬಹುದೊಡ್ಡ ಗೋಡೆ ನಿಮ್ಮ ಕನಸುಗಳಿಗೆ ಅಡ್ಡ ಬಂದಿದೆ. ಇದನ್ನು ಎದುರಿಸುವುದು ಹೇಗೆ....?

ಸರ್ಕಾರಗಳು ಏನೇ ಭರವಸೆ ನೀಡಿದರು ಮುಂದಿನ ಕೆಲವು ತಿಂಗಳುಗಳು ನಿರುದ್ಯೋಗ ಸಮಸ್ಯೆ ನಿಮ್ಮಲ್ಲಿ ಬಹುತೇಕರನ್ನು ಕಾಡುವುದು ಖಚಿತ. ಅದು ಕೇವಲ ನಿರುದ್ಯೋಗವಾಗಿರದೆ ನಿಮ್ಮ ಬದುಕಿನ ಅಂತಃಸತ್ವವನ್ನೇ ಅಡಗಿಸಿಬಿಡಬಹುದು. ಶ್ರೀಮಂತರು ಮತ್ತು ಕಡು ಬಡವರಿಗಿಂತ ಮಧ್ಯಮ ವರ್ಗದ ಜನರು ತೀರಾ ಒತ್ತಡಕ್ಕೆ ಸಿಲುಕುವುದು ನಿಶ್ಚಿತ.

ಹೌದು, ದಿಡೀರನೇ ನಿಮ್ಮನ್ನು ಕೆಲಸದಿಂದ ತೆಗೆಯಬಹುದು. ನಿಮ್ಮ ಮನೆಯ ಬಾಡಿಗೆ, ವಾಹನ ಸಾಲದ ಕಂತುಗಳ, ಕೈಸಾಲದ ಬಡ್ಡಿ, ಮಕ್ಕಳ ಶಾಲಾ ಫೀಜು, ಪೋಷಕರ ಆರೋಗ್ಯ ಸಮಸ್ಯೆ, ಅಕ್ಕ ತಂಗಿಯರ ಮದುವೆ, ಮದುವೆಯಾಗಿರದಿದ್ದರೆ ಸ್ವತಃ ನಿಮ್ಮ ಮದುವೆ ಮುಂತಾದ ಅನೇಕ ಮತ್ತು ಕೆಲವು ಊಹಿಸಲಾಗದ ಸಮಸ್ಯೆಗಳು ನಿಮ್ಮ ಮುಂದೆ ನಿಲ್ಲುತ್ತವೆ. ಏನು ಮಾಡುವುದು ಮತ್ತು ಹೇಗೆ ಎದುರಿಸುವುದು ಈ ಪರಿಸ್ಥಿತಿಯನ್ನು..?

ಮೊದಲಿಗೆ  ಅರ್ಥಮಾಡಿಕೊಳ್ಳಿ ಇದು ನಿಮ್ಮೊಬ್ಬರ ವೈಯಕ್ತಿಕ ಸಮಸ್ಯೆಯಲ್ಲ. ಇಡೀ ವ್ಯವಸ್ಥೆಯ ಸಮಸ್ಯೆ ಮತ್ತು ಒಂದು ರೀತಿಯ ಪ್ರಾಕೃತಿಕ ವಿಕೋಪ ಎಂದು ಮನಸ್ಸಿನಲ್ಲಿ ಒಪ್ಪಿಕೊಳ್ಳಿ. ಮುಖ್ಯವಾಗಿ ಹಣದ ವಿಷಯಗಳಲ್ಲಿ ಮನೆಯವರಿಂದ, ಸಂಬಂಧಿಕರಿಂದ, ಹೊರಗಿನ ಸಾಲಗಾರರಿಂದ ಸಾಕಷ್ಟು ಅವಮಾನವಾಗುವ ಸಾಧ್ಯತೆ ‌ಇದ್ದೇ ಇದೆ. ಅದನ್ನು ಸಹಿಸಿಕೊಳ್ಳಲು ಮನಸ್ಸನ್ನು ಗಟ್ಟಿ ಮಾಡಿಕೊಳ್ಳಿ.

ಸಂಪಾದನೆ ಮಾಡುವಾಗ ಸಂಬಂಧಗಳಲ್ಲಿ ಇದ್ದ ಆತ್ಮೀಯತೆ ಪ್ರೀತಿ ಗೌರವ ನಿಧಾನವಾಗಿ ಕಡಿಮೆಯಾಗುತ್ತದೆ. ನಿಮ್ಮ ವಿರುದ್ಧ ಸಿಡುಕು ಪ್ರಾರಂಭವಾಗುತ್ತದೆ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಇಲ್ಲಿಯವರೆಗೆ ಯಾವುದನ್ನು ನಿಮ್ಮ ‌ಸಾಮರ್ಥ್ಯ ಎಂದು ಹೊಗಳಲಾಗುತ್ತಿತ್ತೋ ಅದು ನಿರುದ್ಯೋಗದ ಸಮಯದಲ್ಲಿ ವೀಕ್ ನೆಸ್ ಅಥವಾ ಸೋಮಾರಿತನ ಎಂದು ಹೇಳುತ್ತಾರೆ. ಅದನ್ನು ಸ್ವೀಕರಿಸಿ.

ಊಟ ತಿಂಡಿ ನಿದ್ದೆಗಳಲ್ಲಿ ಒಂದಷ್ಟು ವ್ಯತ್ಯಾಸವಾಗುತ್ತದೆ. ಅದನ್ನು ನಿರ್ಲಕ್ಷಿಸಿ. ಬದುಕಿನ ಬಗ್ಗೆ ಆಗಾಗ ಬೇಸರ ಜಿಗುಪ್ಸೆ ಉಂಟಾಗುತ್ತದೆ. ಆಗ ಯಾವುದೇ ಕೆಟ್ಟ ಆಲೋಚನೆ ಸುಳಿಯದಂತೆ ನೋಡಿಕೊಳ್ಳಿ. ಒಂದು ವೇಳೆ ಸುಳಿದರೂ ಇದೊಂದು ತಾತ್ಕಾಲಿಕ ಸಮಸ್ಯೆ ಒಳ್ಳೆಯ ದಿನಗಳು ಮುಂದಿವೆ ಎಂದು ನಿಮಗೆ ನೀವೆ ಸಮಾಧಾನ ಮಾಡಿಕೊಳ್ಳಿ. ಎಷ್ಟೇ ಅವಮಾನವಾದರೂ ಬದುಕುವ ಛಲ ಬಿಡದೆ ಹೋರಾಡುವ ಧೈರ್ಯ ಮೈಗೂಡಿಸಿಕೊಳ್ಳಿ. ಮಾನಕ್ಕಿಂತ ಪ್ರಾಣ ಮುಖ್ಯ ಎಂದು ಒಳ ಮನಸ್ಸಿಗೆ ಹೇಳಿಕೊಳ್ಳಿ. ನಿಮಗೆ ಬರಬೇಕಾದ ಬೇರೆ ಮೂಲದ ಹಣ ಸಹ ಬರದೇ ಹೋಗಬಹುದು ಅಥವಾ ನಿಧಾನವಾಗಬಹುದು. ಕಾರಣ ಅವರೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುತ್ತಾರೆ. ಅದನ್ನು ತಾಳ್ಮೆಯಿಂದ ನಿಭಾಯಿಸಿ. ನೀವು ಈಗ ಮಾಡುತ್ತಿರುವ ಉದ್ಯೋಗದಲ್ಲಿಯೇ ಅದರ ಮಾಲೀಕರು ಕಡಿಮೆ ಸಂಬಳದ ಆಫರ್ ಕೊಡಬಹುದು. ಅದನ್ನು ದಯವಿಟ್ಟು ನಿರಾಕರಿಸಬೇಡಿ. ಇದು ಗಂಭೀರವಾದ ಸಮಯ.

ನಿಮಗೆ ಬೇರೆ ಕಡೆ ಉದ್ಯೋಗ ದೊರಕಿದರೂ ಅದು‌ ಮೊದಲಿನ ದರ್ಜೆಗಿಂತ ಕಡಿಮೆ ದರ್ಜೆಯದಾಗಿರಬಹುದು. ಅದನ್ನು ಮಾಡಲು ಮನಸ್ಸು ಒಪ್ಪದಿದ್ದರೂ ಅನಿವಾರ್ಯವಾಗಿ ಒಪ್ಪಿಕೊಳ್ಳಿ. ಕೆಲಸವೇ ಸಿಗದೆ ಸಾಕಷ್ಟು ತಿಂಗಳು ಅದಕ್ಕಾಗಿ ಅಲೆದಾಡಬೇಕಾಗಬಹುದು. ಆಗಲೂ ನಿರಾಶರಾಗದೆ ಮರಳಿ ಪ್ರಯತ್ನವ ಮಾಡುತ್ತಲೇ ಇರಿ.

ಮಾನಸಿಕ ಒತ್ತಡದ ಸಂದರ್ಭದಲ್ಲಿ ಬಹಳಷ್ಟು ಬಾರಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅದನ್ನು ‌ಸಹಜವೆಂಬಂತೆ ಸ್ವೀಕರಿಸಿ. ತೀರಾ ಆತ್ಮೀಯ ಸಂಬಂಧಗಳಿಂದ ನಿಮ್ಮ ಸ್ವಾಭಿಮಾನಕ್ಕೆ ಬಲವಾದ ಪೆಟ್ಟು ಬೀಳಬಹುದು. ತುಂಬಾ ನೋವು ಮಾಡಿಕೊಳ್ಳಬೇಡಿ. ಇದು ಬದುಕಿನ ಪಾಠ ಎಂದು ಸಕಾರಾತ್ಮಕವಾಗಿ ಸ್ವೀಕರಿಸಿ. ದುಡಿಯಲೇ ಬೇಕು ಎಂಬ ಒತ್ತಡದಲ್ಲಿ ನಿಮಗೆ ಅನುಭವವಿರದ ಸಣ್ಣ ಪುಟ್ಟ ವ್ಯವಹಾರಗಳಲ್ಲಿ ಹಣತೊಡಗಿಸಬೇಡಿ.

ಇರುವ ಹಣ ಸಹ ಕಳೆದುಕೊಳ್ಳಬಹುದು. ಒಂದು ವೇಳೆ ಯಾವುದೇ ಹೊಸ ಸ್ವಂತ ವ್ಯವಹಾರ ಮಾಡಬೇಕಾದರೂ ತುಂಬಾ ಯೋಚಿಸಿ ಪ್ರಾರಂಭದ ಉತ್ಸಾಹ ನಿರಂತರವಾಗಿ ಇರುವಂತೆ ನೋಡಿಕೊಂಡು ತಕ್ಷಣದ ಲಾಭ ನಷ್ಟಗಳನ್ನು ಸಮಚಿತ್ತದಿಂದ ಸ್ವೀಕರಿಸಿ. ಗಾಬರಿಯಾಗಬೇಡಿ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವುದರಲ್ಲಿ ಒಳ್ಳೆಯದು ಮತ್ತು ಮೋಸ ಎರಡೂ ಇರುತ್ತದೆ. ಅದನ್ನು ನಿರೀಕ್ಷಿಸಿ ಮುಂದುವರಿಯಿರಿ.

ಮುಂದಿನ ದಿನಗಳಲ್ಲಿ ಕೆಲವರು ಕೆಳಮಟ್ಟದಿಂದ ಮೇಲ್ಮಟ್ಟಕ್ಕೂ ಹಲವರು ಮೇಲ್ಮಟ್ಟದಿಂದ ಕೆಳಮಟ್ಟಕ್ಕೂ ಜಾರಬಹುದು. ಅದರಲ್ಲಿ ನೀವು ಒಬ್ಬರಾಗಿರಬಹುದು. ದಯವಿಟ್ಟು ಇತರರೊಂದಿಗೆ ಹೋಲಿಕೆ ಮಾಡಿಕೊಂಡು ಕೊರಗಬೇಡಿ. ಇದು ಈ ಕ್ಷಣದಲ್ಲಿ ನೆನಪಾದ ಕೆಲವು ಸಲಹೆಗಳು. ಇದನ್ನು ಮೀರಿ ಸಹ ನಿಮ್ಮ ಸ್ವಂತ ಅನುಭವದಲ್ಲಿ ಹಲವಾರು ಪಾಠಗಳು ಇರುತ್ತವೆ. ಒಬ್ಬೊಬ್ಬರ ಪರಿಸ್ಥಿತಿ ಒಂದೊಂದು ತರಹ ಇರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಿರಿ. ಆದರೆ ಯಾವುದೇ ಕಾರಣಕ್ಕೂ ಬದುಕನ್ನು ಕೊನೆಗಾಣಿಸಿಕೊಳ್ಳುವ ಯೋಚನೆ ಮಾಡಬೇಡಿ. ಮುಂದಿನ ದಿನಗಳಲ್ಲಿ ಕಷ್ಟಗಳು ಕರಗಿ ಸುಖದ ದಿನಗಳು ಖಂಡಿತ ಬರುತ್ತದೆ. ಅದನ್ನು ಎಂಜಾಯ್ ಮಾಡಲು ಬದುಕುಳಿಯೋಣ......

  • ಜ್ಞಾನ ಭಿಕ್ಷಾ ಪಾದಯಾತ್ರೆಯ 166 ನೆಯ ದಿನ ಹಾವೇರಿ ಜಿಲ್ಲೆಯ ಹೊಸ ತಾಲ್ಲೂಕು ರಟ್ಟೆಹಳ್ಳಿಯಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಲೇಖನ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ : ಇಂಟರ್ನೆಟ್ ತಾಣ