ನನ್ನ ಬಾಲ್ಯದಾ ಯುಗಾದಿ
ಬೀಸುಕಲ್ಲಿನ ಸದ್ದು, ಹುರಿಗಡಲೆಯ ಘಮ ಘಮ
ಎರೆಡೂ ಸೇರಿದ ದಿನವೇ ನನ್ನ ಬಾಲ್ಯದಾ ಯುಗಾದಿ
ಶ್ಯಾವಿಗೆ ಹಾಲಿನ ನಡುವೆ ಬೇವಿನ ಪುಡಿ ಸಕ್ಕರೆ
ತಟ್ಟೆಗೆ ಜಾರಿದ ದಿನವೇ ನನ್ನ ಬಾಲ್ಯದಾ ಯುಗಾದಿ
ಕಣ್ಣು ಮಂಜಿರುವವರಿಗೆ, ಕಾಣದಾ ಚಂದ್ರನಾ
ಬೆರೆಳಿಟ್ಟು ತೋರಿದ ದಿನವೇ ನನ್ನ ಬಾಲ್ಯದಾ ಯುಗಾದಿ
ಬಣ್ಣದಾ ರೆಕ್ಕೆಯ ಹೊತ್ತ ಲಂಡಿ ಪಟಕೆ, ಆಕಾಶ ಪುಟ್ಟಿಯಾ ಕಟ್ಟಿ
ಆಗಸದಿ ತೇಲಿಬಿಟ್ಟಾ ದಿನವೇ ನನ್ನ ಬಾಲ್ಯದಾ ಯುಗಾದಿ
ಕೆಲಸಕ್ಕೆ ಬಾರದವರಾದರೂ, ಹಿರಿಯರಾದರೆ ಸಾಕು
ಕಾಲು ಹಿಡಿದು ಹಣೆಗೊತ್ತಿದಾ ದಿನವೇ ನನ್ನ ಬಾಲ್ಯದಾ ಯುಗಾದಿ
ಬೇವು ಬೆಲ್ಲವ ಹಂಚಿ, ಬೆಲ್ಲದಂತಿರಿಯೆಂದು
ಸ್ನೇಹಿತರಿಗೆ ಹಾರೈಸಿದ ದಿನವೇ ನನ್ನ ಬಾಲ್ಯದಾ ಯುಗಾದಿ
ಕಳೆದುಹೋದ ಬಾಲ್ಯವಾ ನೆನೆದು ಮತ್ತೆ ಬರಲಿ ಎಂದು
ಕೊರಗುವ ಕವಿಗಳದಲ್ಲಾ ನನ್ನ ಹಾದಿ
ಹಳೆಯ ನೆನಪು ಮೆಲಕುಹಾಕಿ, ಈಘಳಿಗೆಗೆ ದನಿಗೊಟ್ಟು
ಬರೆದ ಈ ಹೊಸ ಕವನವೇ ಇಂದಿನ ನನ್ನ ಯುಗಾದಿ
ಆದಿ ಅಂತ್ಯಗಳ ನಡುವೆ ಸಾಗಿರುವ ನಮ್ಮೆಲ್ಲರ ಬದುಕಿನಲಿ
ಹೊಸತನವ ತರಲಿ ಈ ಯುಗಾದಿ.....ಈ ಯುಗಾದಿ..... ಪ್ರತಿ ಯುಗಾದಿ
ಶ್ರೀನಿವಾಸ ಮಹೇಂದ್ರಕರ್