ನನ್ನ ಬಾಲ್ಯದ ನೆನೆಪುಗಳು : ಭಯವೆಂಬ ಭ್ರಮೆ

ನನ್ನ ಬಾಲ್ಯದ ನೆನೆಪುಗಳು : ಭಯವೆಂಬ ಭ್ರಮೆ

ಬರಹ

ನನ್ನ ಬಾಲ್ಯದ ನೆನೆಪುಗಳು : ಭಯವೆಂಬ ಭ್ರಮೆ


ನಾನಾಗ ಪದವಿಪೂರ್ವ ತರಗತಿಗೆ ಸೇರಿದ್ದ ಸಮಯ , ತುಮಕೂರಿನ ಸಿದ್ದಗಂಗ ಕಾಲೇಜಿನಲ್ಲಿ ಓದು, ಅಲ್ಲಿಯ ಸೋಮೇಶ್ವರ ಬಡಾವಣೆಯಲ್ಲಿ ಒಬ್ಬನೇ ರೂಮಿನಲ್ಲಿ ವಾಸ. ಹಾಗಾಗಿ ಕಾಲೇಜ್ ಸಮಯದ ನಂತರ ಸ್ವಲ್ಪ ಬೇಸರವೆ. ಶನಿವಾರ,ಬಾನುವಾರಗಳು ಬಂದರೆ , ಬಸ್ಸು ಹತ್ತಿ ತುಮಕೂರಿನ ಸಮೀಪವೇ ಇದ್ದ ಹಳ್ಳಿ ದೊಡ್ಡನಾರುವಂಗಲಕ್ಕೆ ಹೊರಟುಬಿಡುತ್ತಿದ್ದೆ. ಅಲ್ಲಿ ನಮ್ಮ ಚಿಕ್ಕಪ್ಪನ ಮನೆ ಇತ್ತು, ಅವರಿಗು ನಮ್ಮ ಒಡನಾಟ ಜಾಸ್ತಿ , ಹಾಗಾಗಿ ಶನಿವಾರದ ಮದ್ಯಾನದ ನಂತರ ಅಲ್ಲಿಗೆ ಪ್ರಯಾಣ. ಆಗ ಊರಿಗೆ ನೇರವಾಗಿ ಬಸ್ಸಿನ ವ್ಯವಸ್ಥೆಯಿರಲ್ಲಿಲ್ಲ. ತುಮಕೂರು ಗುಬ್ಬಿ ಮಧ್ಯದ ನಾರುವಂಗಲ ಗೇಟ್ನಲ್ಲಿ ಇಳಿದು , ಸುಮಾರು ೩ ಕಿ.ಮಿ ನಷ್ಟು ನಡೆದು ಊರು ಸೇರಬೇಕಿತ್ತು.


ಹೀಗೆ ಒಂದು ಶನಿವಾರ ಸ್ವಲ್ಪ ತಡವಾಗೆ ತುಮಕೂರು ಬಿಟ್ಟೆ , ಬಸ್ಸಿನಿಂದ ಇಳಿದಾಗ ಸಂಜೆ ೬ ಗಂಟೆ ದಾಟಿತ್ತು.ಡಿಸೆಂಬರ್ ತಿಂಗಳಿರಬೇಕು ಆಗಲೆ ಕತ್ತಲಾಗುತ್ತಿತ್ತು. ಬೇಗ ಬೇಗ ನಡೆಯುತ್ತ ಹೊರಟೆ. ಬೇಸರ ಕಳೆಯಲು ಬಾಯಲ್ಲಿ ಯಾವುದೋ ಹಾಡುಗಳು. ಮದ್ಯೆ ಸಿಕ್ಕ ಕೆರೆಯ ಕೋಡಿಯನ್ನು ದಾಟಿ ಹೊಲಗಳ ನಡುವೆ ಕಾಲುದಾರಿಯಲ್ಲಿ ಹೋಗುತ್ತಿದ್ದೆ. ಮತ್ತೆ ಹತ್ತು ಹದಿನೈದು ನಿಮಿಷ ನಡೆದರೆ ಮನೆ. ಆಗ ದೂರದಲ್ಲಿ ಕಾಣಿಸಿತು ದೊಡ್ಡ ಆಲದಮರ. ಅದನ್ನು ಮುಸುಕು ಬೆಳಕಿನಲ್ಲಿ ನೋಡುತ್ತಿರುವಂತೆ , ಎದೆಯಲ್ಲೇನೊ ಝಲ್ ಎಂದಿತು. ಮನಸ್ಸು ಕಳೆದ ತಿಂಗಳಿಗೆ ಜಿಗಿಯಿತು.


ಕಳೆದ ತಿಂಗಳು ಬಂದಿದ್ದಾಗ ಹೀಗೆ ಮನೆಯಲ್ಲಿ ಮದ್ಯಾನ ಊಟಕ್ಕೆ ಕುಳಿತ್ತಿದ್ದೆ , ಹೊರಗೆ ಚಿಕ್ಕಪ್ಪನ ಹತ್ತಿರ ಮಾತನಾಡುತ್ತಿರುವುದು ಕೇಳಿಸಿತು. ದ್ವನಿಯೇನು ಸಣ್ಣದಾಗಿರಲ್ಲಿಲ್ಲ. ವಿಷಯವಿಷ್ಟೆ , ಯಾರೋ ಹಳ್ಳಿಯ ಹೆಂಗಸೊಬ್ಬಳು ಆತ್ಮಹತ್ಯೆ ಮಾಡಿಕೊಂದಿದ್ದಾಳೆ , ಅದೇ ಊರ ಮುಂದಿನ ಆಲದಮರಕ್ಕೆ ನೇಣು ಬಿಗಿದುಕೊಂಡು ಸತ್ತಿದ್ದಾಳಂತೆ,ಅಲ್ಲದೆ ಆಕೆ ಗರ್ಬಿಣೀ ಬೇರೆ. ಚಿಕ್ಕಪ್ಪ ಅವನಿಗೆ ಹೇಳುತ್ತಿದ್ದರು ತಾನು ಜೊತೆಗೆ ಬರುತ್ತೇನೆ ಎಂದು. ನಾನು ಕೂಗಿದೆ 'ನಾನು ಬರುತ್ತಿದ್ದೇನೆ' ಅಂತ. ಅವರು ಬೇಡವೆಂದರು ನಂತರ ಒಪ್ಪಿಕೊಂಡರು. ಅವರ ಜೊತೆಯಲ್ಲಿ ಹೋಗಿ ದೂರದಿಂದಲೆ ನೋಡಿ ಬಂದಿದ್ದೆ. ನಂತರ ಚಿಕ್ಕಮ್ಮನ ಆಕ್ಷೇಪಣೆಯನ್ನು ಕೇಳಬೇಕಾಯಿತು ಚಿಕ್ಕಪ್ಪ , ಈ ಹುಡಗನನ್ನು ಏಕೆ ಕರೆದೊಯ್ಯಬೇಕಾಗಿತ್ತು ಅಂತ. ನನಗೆ ನಾನಗಲೆ ದೊಡ್ಡವನಾಗಿಲ್ವೆ ಅಂತ ಉಡಾಫೆ.


ವೇಗವಾಗಿ ನಡೆಯುತ್ತಿದ್ದ ನನ್ನ ನಡೆ ಇದ್ದಕ್ಕಿದಂತೆ ನಿಧಾನವಾಯಿತು. ದೂರದಲ್ಲಿ ಕಾಣುತ್ತಿದ್ದ ಆ ಮರ ಈಗ ಹತ್ತಿರ ಹತ್ತಿರವಾಗುತ್ತಿದೆ. ಕಾಲುದಾರಿ ಆ ಮರದಕೆಳಗೆ ಹೋಗುವದರಿಂದ ನಾನಂತು ಆ ಮರದ ಕೆಳಗೆ ಸಾಗಬೇಕು.ಈಗ ಮರದ ಎದುರಿಗೆ ನಿಂತಿದ್ದೆ , ಕತ್ತಲೆಯಲ್ಲಿ ನನ್ನನ್ನು ನುಂಗುವ ದೈತ್ಯನಂತೆ ಕಾಣುತ್ತಿತ್ತು ಮರ. ತಲೆಯೆತ್ತಿ ಕೊಂಬೆಗಳ ಸಂದಿಗಳಲ್ಲಿ ದಿಟ್ಟಿಸಿದೆ. ಕಳೆದತಿಂಗಳು ಯಾರೋ ಹಳ್ಳಿಯಾಕೆ ನೇತಾಡುತ್ತಿದ್ದ ಕೊಂಬೆಗಳಡೆ ಕಣ್ಣು ಕೀಲಿಸಿ ನೋಡಿದೆ. ಏಕೋ ಪುನಃ ನೇತಾಡುತ್ತಿರುವ ಆ ಶವ ಕಾಣಿಸತೊಡಗಿತು , ಎಲ್ಲವು ಅಸ್ವಷ್ಟ ಆದರು ನಿಜವೆಂಬಂತೆ ಆಕೆಯ ನೇತಾಡುವ ಶವವನ್ನು ನೋಡಲಾರದೆ ಕಣ್ಣು ಮುಚ್ಚಿದೆ. ನನ್ನ ಎದೆಯ ಬಡಿತ ನನಗೆ ಕೇಳಿಸುವಷ್ಟು ಜೋರಾಗಿತ್ತು. ತೊಡೆಗಳಲ್ಲಿ ನಡುಕ ನಿಲ್ಲಲಾರದಷ್ಟು ಸುಸ್ತು. ಈಗೇನು ಕುಸಿದು ಬೀಳುತ್ತೇನ? ನಿದಾನವಾಗಿ ನನ್ನಲ್ಲಿದ್ದ ವಿವೇಕ ಎಚ್ಚರಗೊಂಡಿತು. ಈಗ ಕಾಣಿಸುತ್ತಿರುವ ನೇತಾಡುವ ಶವ ನನ್ನ ಭ್ರಮೆಯಷ್ಟೆ ನನ್ನಲ್ಲಿರುವ ಹೆದರಿಕೆ ನನ್ನ ಮುಂದೆ ನಿಂತಿದೆ, ಈ ಸನ್ನಿವೇಶವನ್ನು ದಾಟಲೇಬೇಕು ಅಂತ ನಿಶ್ಚಯಿಸಿದೆ. ತಲೆ ತಗ್ಗಿಸಿ ವೇಗವಾಗಿ ನಡೆಯುತ್ತ ಮರದಕೆಳಗಿನಿಂದ ಕಾಲುದಾರಿಯಲ್ಲಿ ಸಾಗಿ ಸ್ವಲ್ಪದೂರ ಹೋದೆ. ನಂತರ ಪುನಃ ಹಿಂದೆ ತಿರುಗಿ ನೋಡಿದೆ , ಅದೇ ಮರದ ಅದೇ ಕೊಂಬೆ ಈಗ ಅಲ್ಲಿ ಏನು ಇಲ್ಲ. ಕತ್ತಲೆಯಲ್ಲಿ ನಿಶ್ಚಲವಾಗಿ ನಿಂತಿರುವ ಮರವಷ್ಟೆ. ಮತ್ತೆ ನಿದಾನವಾಗಿ ನಡೆಯುತ್ತ ಮನೆ ತಲುಪಿದೆ.


----------------------------------------------------------------------------------------------


ಇಂದ್ರೀಯಗಳಿಗೆ ಒಡೆಯನಾದ ಮನಸ್ಸೆ ನೀನೇಕೆ ಸದಾ ಭಯ ಮಾಯೆಯ ಅದೀನದಲ್ಲಿರುತ್ತಿ ???


-----------------------------------------------------------------------------------------------


  


<<ಅವಳು ಯಾರು>> <<ಹಾವು ತುಳಿದೆನಾ>> <<ಬೆಳಕುಕತ್ತಲೆಯಾ ಆಟ>>