ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಎರಡನೆಯ ಕಂತು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ಎರಡನೆಯ ಕಂತು

ಬರಹ

ತಾನು ಬರೆಯಬೇಕಾದ ಲೇಖನಗಳ ಸಂಬಂಧ ಹೆನ್ರಿ ದೇಶಾದ್ಯಂತ ತುಂಬಾ ಸುತ್ತಾಡಬೇಕಾಗಿ ಬರುತ್ತಿತ್ತು. ಮೊದಮೊದಲು ನಾನೂ ಅವನ ಜೊತೆ ಹೋಗುತ್ತಿದ್ದೆ. ಆದರೆ ಬರೀ ವಿಮಾನದಲ್ಲಿ ಹೋಗುವ, ದುಬಾರಿ ಹೋಟೆಲ್‌ಗಳಲ್ಲಿ ಇಳಿದುಕೊಳ್ಳುವ, ಬೇರೆ ಪತ್ರಕರ್ತರೊಂದಿಗೆ ಬಾರ್‌ಗಳಲ್ಲಿ ಕುಡಿಯುವ ಅವನ ಪ್ರವಾಸದ ರೀತಿ ನನಗೆ ಸರಿಬರುತ್ತಿರಲಿಲ್ಲ. ಅದಕ್ಕೆ ಅವನನ್ನು ಬಿಟ್ಟು ನಾನು ಒಬ್ಬಳೇ ಪ್ರವಾಸ ಹೋಗುತ್ತಿದ್ದೆ. ಎಲ್ಲಿಯಾದರೂ ಬಿಚ್ಚಿ ಮಲಗಬಹುದಾದಂಥ ಹಾಸಿಗೆಯ ಸುರುಳಿಯೊಂದಿಗೆ ಭಾರತದಲ್ಲಿ ಇಲ್ಲರೂ ಪ್ರಯಾಣ ಮಾಡುವಂತೆ ನಾನೂ ಮಾಡಿತ್ತಿದ್ದೆ. ಒಳಗೆ ಗಿಟ್ಟಿಗಿರಿದು ಪ್ರಯಾಣಿಕರನ್ನು ತುಂಬಿ, ಮೇಲೆ ಅಧ್ವಾನವಾಗಿ ಸಾಮಾನು ಹೇರಿಕೊಂಡು ತೆವಳಿ ಮುಕ್ಕಿರಿಯುವ, ಒಂದು ಊರಿನಿಂದ ಮತ್ತೊಂದು ಊರಿಗೆ ತೆರಳುವ ಅಡಾಸು ಬಸ್ಸು ಹಾಗೂ ಮೂರನೆಯ ದರ್ಜೆ ರೈಲು ಡಬ್ಬಿಗಳಲ್ಲಿ ಹೋಗುತ್ತಿದ್ದೆ. ಪ್ರಯಾಣ ಮುಗಿಯುವ ಹೊತ್ತಿಗೆ ಮೈ ತುಂಬಾ ಬೆವರು, ಕೊಳೆ, ಮಸಿಮಯವಾಗಿರುತ್ತಿತ್ತು. ಯಾವಾಗಲೂ ಯಾವ ಹೊತ್ತಿಗೆ ಏನನ್ನಾದರೂ ರಸ್ತೆಬದಿಯ ತಿಂಡಿಯಂಗಡಿಯ ಅರೆಬೆಂದ ಚಪಾತಿ, ಎಲೆ ಮೇಲೆ ಬಡಿಸಿದ ತರಕಾರಿ, ಹಾಗೂ ರಾಜ್‌ಮಾ ಕಾಳಿನ ಸಣ್ಣ ಗುಪ್ಪೆ, ಹೀಗೆ ಬಡವರು ತಿನ್ನುವ ಎಲ್ಲವನ್ನೂ, ಇಲ್ಲಿ ಎಲ್ಲರೂ ಮಾಡುವ ಹಾಗೆ ನನ್ನ ಕೈಬೆರಳುಗಳಿಂದಲೇ ತಿಂದುಬಿಡುತ್ತಿದ್ದೆ. ಅದರಲ್ಲಿ ಮಹಾಪ್ರವೀಣೆಯೂ ಆಗಿಬಿಟ್ಟೆ. ನನ್ನ ಹತ್ತಿರ ಏನೂ ಇಲ್ಲದಿದ್ದರೆ ಬೇರೆ ಯಾರಾದರೂ ತಮ್ಮ ತಿಂಡಿಯ ಗಂಟಿನಿಂದ ಏನಾದರೂ ತೆಗೆದುಕೊಡುತ್ತಿದ್ದರು. ರೋಗಾಣುಗಳೆಂದರೆ ಹೆದರಿ ಸಾಯುವ ಹೆನ್ರಿ, ಆ ರೀತಿ ತಿಂದರೆ ನಾನು ಸಾಯುವೆನೆಂದು ಹೇಳಿದ. ಆದರೆ ಎಂದೂ ಏನೂ ಆಗಲಿಲ್ಲ. ಒಂದು ಸಾರಿ ರಾಜಸ್ಥಾನ್‌ನ ಮರುಭೂಮಿಯ ಕೋಟೆಯೊಂದರಲ್ಲಿ ನನಗೆ ತೀರಾ ಬಾಯಾರಿಕೆಯಾಗಿ ಅಲ್ಲಿಯ ಮುದಿ ಮೇಲ್ವಿಚಾರಕನೊಬ್ಬನನ್ನು ಬಳಸದೆ ಬಿಟ್ಟಿದ್ದ ಹಾಳುಬಾವಿಯೊಂದರಿಂದ ನೀರು ಸೇದಿಕೊಡಲು ಕೇಳಿಕೊಂಡೆ. ಅದರ ನೀರು ಕಂದು ಬಣ್ಣವಾಗಿ ನಾತ ಹೊಡೆಯುತ್ತಿತ್ತು. ಯಾರಿಗೆ ಗೊತ್ತು?!! ಆ ಬಾವಿಯಲ್ಲಿ ಒಂದು ಹೆಣ ಇದ್ದರೂ ಇದ್ದಿರಬಹುದೇನೋ! ಆದರೆ ನನಗೆ ಬಾಯಾರಿದ್ದರಿಂದ ಅದನ್ನೇ ಕುಡಿದೆ. ಏನೂ ಆಗಲಿಲ್ಲ.

ಇಂಡಿಯಾದಲ್ಲಿ ಎಲ್ಲರೂ ನಿಮ್ಮನ್ನು ಮಾತನಾಡಿಸುವವರೇ! ಬಸ್ಸೋ, ಟ್ರೈನೋ, ಎಲ್ಲಿಯಾದರೂ ಸರಿಯೇ! ಅವರಿಗೆ ನಿಮ್ಮ ಎಲ್ಲ ವಿಷಯಗಳು ಬೇಕು. ಎಲ್ಲ ಥರದ ವ್ಯಕ್ತಿಗತ ಪ್ರಶ್ನೆಗಳನ್ನು ಕೇಳುತ್ತಾರೆ. ನಾನೇನೂ ಅಷ್ಟೊಂದು ಹಿಂದಿ ಮಾತನಾಡುತ್ತಿರಲಿಲ್ಲ. ಆದರೆ ಯಾವಾಗಲೂ ಹೇಗೋ ನಿಭಾಯಿಸುತ್ತಿದ್ದೆ. ಆದಷ್ಟು ಮಟ್ಟಿಗೂ ಅವರ ಪ್ತಶ್ನೆಗಳಿಗೆ ಉತ್ತರಿಸಲು ನನ್ನ ಅಭ್ಯಂತ್ರವೇನಿರಲಿಲ್ಲ. ಸುಮಾರು ಬಾರಿ ಹೆಂಗಸರು ನನ್ನ್ನನ್ನು ಮುಟ್ಟಿ ನನ್ನ ಚರ್ಮ ಹೇಗಿದೆಯೆಂದು ತಿಳಿಯಲು ಅದರ ಮೇಲೆ ಕೈಯಾಡಿಸುತ್ತಿದ್ದರು. ಅದರಲ್ಲೂ ಉದ್ದವಾಗಿ ಚಿನ್ನದ ಬಣ್ಣಕ್ಕಿರುವ ನನ್ನ ಕೂದಲನ್ನು ಮುಟ್ಟುವುದು ಅವರಿಗೆ ವಿಶೇಷ ಇಷ್ಟವಾಗುತ್ತಿತ್ತು. ಕೆಲವು ಸಾರಿ ಕೆಲವರು ಒಂದೇ ಬಾರಿಗೆ ಕೂದಲ ಜೊಂಪೆಯನ್ನು ಹಿಡಿದೆತ್ತಿ ಹಾಗೆ ಹೀಗೆ ಎಳೆದಾಡುತ್ತ ವಿಪರೀತ ನಗುತ್ತ ಅರಚುತ್ತ ಉದ್ರೇಕದಿಂದ ಒಬ್ಬರಿಗೊಬ್ಬರು ಅಭಿಪ್ರಾಯವಿನಿಮಯ ಮಾಡಿಕೊಳ್ಳುತ್ತಿದ್ದರು. ನನಗೂ ಅವರ ಜೊತೆ ಕಿರುಚಿ ನಕ್ಕು ಮಾಡದೆ ದಾರಿಯಿರಲಿಲ್ಲ. ಇಂಡಿಯಾದ ಜನರು ಎಷ್ಟು ಸತ್ಕಾರಪ್ರಿಯರು! ರೈಲಲ್ಲಿ ನಿಮ್ಮ ಪಕ್ಕ ಕೂತ ತೀರ ಅಪರಿಚಿತರೂ "ದಯವಿಟ್ಟು ನಮ್ಮ ಮನೆಗೆ ಬಂದು ಇರಿ" ಎಂದು ಯಾವಾಗಲೂ ಹೇಳುತ್ತಾರೆ. ನನಗೆ ಬೇರೆ ಯಾವ ಕೆಲಸದ ಒತ್ತಡವೂ ಇಲ್ಲದಿದ್ದಾಗ ಅಥವಾ ಅವರು ಕುತೂಹಲಕಾರಿ ಸ್ಥಳಗಳಲ್ಲಿ ವಾಸಿಸುತ್ತಿರಬಹುದೆಂದು ತೋರಿದಾಗ ನಾನು " ಆಗಲಿ, ಥ್ಯಾಂಕ್ಸ್" ಎಂದು ಅವರ ಜೊತೆಯಲ್ಲಿ ಹೋಗುತ್ತಿದ್ದೆ. ಹಾಗೆ ನಾನು ಕೆಲವು ಕುತೂಹಲಕಾರಿ ಸಾಹಸಗಳನ್ನು ಮಾಡಿದೆ.

ನಾನು ಮಾಡಿದ ಅಂಥ ಅನೇಕ ಸಾಹಸಗಳು ಲೈಂಗಿಕವಾದವೆಂದು ನೇರವಾಗಿ ಹೇಳಿಬಿಡುತ್ತೇನೆ. ಇಂಡಿಯಾದ ಗಂಡಸರಿಗೆ ಪಶ್ಚಾತ್ಯ ಹುಡುಗಿಯರೊಂದಿಗೆ ಮಲಗುವುದೆಂದರೆ ವಿಪರೀತ ಕುತೂಹಲ, ಕಾತರ. ಹಾಗೆ ನೋಡಿದರೆ ಬೇರೆ ದೇಶದ ಗಂಡಸರೂ ಪಾಶ್ಚಾತ್ಯ ಹುಡುಗಿಯರೊಂದಿಗೆ ಮಲಗಲು ಆಸಕ್ತರೇ! ಆದರೆ ಇಂಡಿಯಾದ ಗಂಡಸರು ಹುಡುಗಿಯರನ್ನು ಸಮೀಪಿಸುವುದರಲ್ಲಿ ವಿಶೇಷ ಉದ್ರೇಕವಿರುತ್ತದೆ. ಉದ್ರೇಕ ಮತ್ತು ನಾಚಿಕೆ ಸಹ. ಕಾಮಸೂತ್ರ ಹಾಗೂ ಎಲ್ಲ ಭಂಗಿಗಳಲ್ಲೂ ಇರುವ ಶಿಲ್ವಸಂಪ್ರದಯದ ಇತಿಹಾಸ ಇರುವ ಅವರು ರತಿಯಲ್ಲಿ ಅತಿನಿಪುಣರೂ ದಕ್ಷರೂ ಇರಬಹುದೆಂದು ನೀವೆಣಿಸಿದರೆ ಕೆಟ್ಟಿರಿ! ಎಲ್ಲ ತದ್ವಿರುದ್ಧ! ಮಧ್ಯವಯಸ್ಸಿನ ಗಂಡಸರೂ ಹದಿನೈದು ವರ್ಷದ ಹುಡುಗನಂತೆ ಉದ್ರೇಕಿತರಾಗುತ್ತಾರೆ. ಆಮೇಲೆ ಅವರು ಕಾಯಲಾರರು! ಮೇಲೆ ಬಿದ್ದು, ನಿಮಗೆ ಏನಾಗುತ್ತಿದೆಯೆಂದು ಗೊತ್ತಾಗುವ ಮೊದಲೇ ಮಹಾಧಾವಂತದಲ್ಲಿ ಎಲ್ಲ ಮುಗಿದಿರುತ್ತದೆ. ಮುಗಿಯಿತೆಂದರೆ........ ಮುಗಿದೇ ಹೋಯಿತು!! ಆಮೇಲಿನ ಅವರ ಕಾಳಜಿ ಎಂದರೆ ಯಾರಾದರೂ ತಮ್ಮನ್ನು ಗುರುತಿಸಿಬಿಡುವ ಮೊದಲೇ ನುಣುಚಿಕೊಳ್ಳುವುದು. ( ಅವರಿಗೆ ಯಾವಾಗಲೂ ಸಿಕ್ಕಿಬೀಳುವ ಭಯ). ಜೊತೆಗಾತಿಯ ವಿಷಯದಲ್ಲಿ ಯಾವುದೇ ಕೋಮಲತೆ, ಸೂಕ್ಷ್ಮತೆಗಳಿಲ್ಲ, ಬರಿಯ ಪ್ರಶ್ತೆಗಳು- ಬಸ್ಸಿನಲ್ಲಿ ಕೂತಾಗ ನಿಮ್ಮನ್ನು ಕೇಳುವ ಸಾಮಾನ್ಯ ಪ್ರಶ್ನೆಗಳು- " ನಿನಗೆ ಮದುವೆಯಾಗಿದೆಯಾ? ಮಕ್ಕಳಿವೆಯಾ? ಮಕ್ಕಳೇಕೆಲ್ಲ?ನಮ್ಮ ಇಂಡಿಯಾದ ಉಡುಪು ಧರಿಸುವುದು ನಿನಗೆ ಇಷ್ಟವೇ" ಇಂಥವೇ ಪ್ರಶ್ನೆಗಳು!

(ಮುಂದುವರೆಯುತ್ತದೆ)