ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ
ಇವತ್ತು ರಾಮು ಮನೆ ಬಿಟ್ಟು ಹೋದ. ದುಡ್ಡು ಕೇಳಲು ಬಂದಿದ್ದ. ನನ್ನ ಕೈಲಾದಷ್ಟು ಕೊಟ್ಟೆ. ಅದನ್ನು ಎಣಿಸಿಕೊಂಡು ಮತ್ತಷ್ಟು ಕೇಳಿದ. ಕೊಡಲು ನನ್ನ ಹತ್ತಿರ ಇದ್ದರೆ ತಾನೆ!! ನನ್ನ ಮರ್ಯಾದೆ ತೆಗೆಯುವಂಥ ಮಾತುಗಳನ್ನಾಡಿದ. ಅದೆಲ್ಲ ನನಗೆ ಕೇಳಿಸಿಯೇ ಇಲ್ಲದ ಹಾಗೆ ನಟಿಸಿದೆ. ನಿಜವಾಗಿ ನಾನು ಅವನನ್ನು ದೂರುವಂತೆಯೇ ಇರಲಿಲ್ಲ. ಬೇರೆ ನೌಕರಿ ಹುಡುಕಿಕೊಂಡು ಹೋಗುವುದಕ್ಕೆ ಬೇರೆ ದಾರಿಯೇ ಇಲ್ಲದೆ ಅವನು ಆತಂಕಗೊಂಡಿದ್ದ, ಹೆದರಿದ್ದ ಅನ್ನುವುದೂ ನನಗೆ ಗೊತ್ತು. ಆದರೆ ನನಗಾದರೂ ಅವನು ಹಿಂದೆ ಇದ್ದ ರೀತಿಯನ್ನೂ, ಈಗ ಮಾತಾಡಿದ ಧಾಟಿಯನ್ನೂ ಹೋಲಿಸದೆ ವಿಧಿಯಿರಲಿಲ್ಲ!! ಯಾವಗಲೂ ನನ್ನನ್ನು ಮೆಚ್ಚ್ಚಿಸೋಕ್ಕೆ ಕಾತರನಾಗಿರುತ್ತ, ನಯವಾಗಿ ಮುಗುಳ್ನಗುತ್ತ, ’ಎಸ್ ಸರ್, ಎಸ್ ಮೇಡಂ, ಪ್ಲೀಸ್" ಅನ್ನುತ್ತ ಇರುತ್ತಿದ್ದನಲ್ಲ!! ಮನೆಗೆ ಅತಿಥಿಗಳು ಬಂದಾಗ, ನಮ್ಮ ಕೈಲಿ ತೆಗೆಸಿಕೊಂಡ ಬಿಳಿಯ ಸ್ಪೆಷಲ್ ಕೋಟು ತೊಡುತ್ತಿದ್ದ. ಮನೆಯಲ್ಲಿ ಅಭ್ಯಾಗತರಿದ್ದಾಗಲೆಲ್ಲ ಪಾನೀಯಗಳನ್ನು ಬೆರೆಸುತ್ತ, ಹಂಚುತ್ತ, ಆಷ್ಟ್ರೇಗಳನ್ನು ಖಾಲಿಮಾಡುತ್ತ ಯಾವಾಗಲೂ ಸಂತೋಷವಾಗಿರುತ್ತಿದ್ದ. ಹೆಚ್ಚಿನ ಅತಿಥಿಗಳು ಬರಲಿಲ್ಲವೆಂದು ಪಿಚ್ಚೆನಿಸುತ್ತಿತ್ತೇನೋ ಅಂತಲೂ ಅನ್ನಿಸುತ್ತಿದೆ. ನೆರೆಯ Ford foundationನವರು ರಾತ್ರಿಯ ಭೋಜನಕೂಟಗಳನ್ನು ಮತ್ತು ಭಾನುವಾರದ ತಿಂಡಿಯೂಟಗಳನ್ನು ಏರ್ಪಡಿಸುತ್ತಿದ್ದರು. ಅವರ ಸೇವಕರೆದುರು ರಾಮುವಿಗೆ ತನ್ನ ಅಂತಸ್ತಿನ ಬಗ್ಗೆ ಕೀಳರಿಮೆ ಹುಟ್ಟಿರಬೇಕು. ಯಾಕೆಂದರೆ ನಮ್ಮಲ್ಲಿ ಅಂಥ ಕಾರ್ಯಕ್ರಮಗಳೇನೂ ಇರಲಿಲ್ಲ. ನಾನು ಬೇರೆಯವರಂತಿಲ್ಲದ್ದಕ್ಕೆ ಅವನ ಅಂತಸ್ತಿಗೆ ಧಕ್ಕೆ ಬಂದಿತ್ತೇನೋ!ನಾವು ಅನ್ನೋದಕ್ಕಿಂತ ನಾನು ಹಾಗಿರಲಿಲ್ಲ. ಮೊದಲಿಂದ ಭಾರತೀಯ ಬಟ್ಟೆಗಳನ್ನೇ ಉಡುತ್ತಿದ್ದು ಸರಿಯಾದ ಮೇಮ್ ಸಾಹಿಬ್ಳಂತೆ ಕಾಣುತ್ತಿರಲಿಲ್ಲ. ಹಾಗೆ ಆಡುತ್ತಲೂ ಇರಲಿಲ್ಲ. ರಾಮು ಅದಕ್ಕೆ ಸೊಪ್ಪುಹಾಕುತ್ತಿರಲಿಲ್ಲವೇನೋ. ಸೇವಕರ ಇಷ್ಟ ಅಂದ್ರೆ ಮಾಲೀಕರು ಸಾಂಪ್ರದಾಯಿಕರಾಗಿದ್ದು ಬೇರೆ ಸೇವಕರು ತಮ್ಮನ್ನು ಗೌರವಿಸುವಂತೆ ಜರ್ಬು ತೋರಿಸುವುದು ಅಂತ ಕಾಣತ್ತೆ. ಇವತ್ತು ಬೆಳಿಗ್ಗೆ ರಾಮು ಹೇಳಿದ ಮಾತುಗಳಲ್ಲಿ ಹೇಗೆ ಎಲ್ಲರೂ ನನ್ನನ್ನು ತಮ್ಮ ದೇಶದ ಜಲಗಾರರಂಥ ನಿಕೃಷ್ಟ ಜಾತಿಯವಳೆಂದು ತಿಳಿದಿರುವಳೆಂದೂ; ನನ್ನ ಚಾಕರಿ ಮಾಡಬೇಕಾಗಿ ಬಂದಿದ್ದಕ್ಕೆ ಅವರೆಲ್ಲ ಹೇಗೆ ತಮ್ಮ ಬಗ್ಗೆ ಮರುಕಪಟ್ಟುಕೊಳ್ಳುತ್ತಾರೆ ಅನ್ನುವಂಥ ಕೀಳು ಅಭಿಪ್ರಾಯಗಳೂ ಇದ್ದವು.
ಸಾಹೇಬರು ನನ್ನನ್ನು ಬಿಟ್ಟು ಓಡಿಹೋದದ್ದು ಆಶ್ಚರ್ಯವೇನಲ್ಲ ಅಂತಲೂ ರಾಮು ಹೇಳಿದ. ವಾಸ್ತವವಾಗಿ ಹೆನ್ರಿ ಓಡಿಹೋಗಿರಲಿಲ್ಲ. ಆದರೆ ನಮ್ಮ ನಡುವಣ ಸಂಬಂಧ ಹಳಸಿತ್ತು ಅನ್ನುವುದೇನೋ ನಿಜ. ನನಗನ್ನಿಸುವಂತೆ ಭಾರತ ನಾವಿಬ್ಬರೂ ಮೂಲಭೂತವಾಗಿ ಪರಸ್ಪರ ಎಷ್ಟು ಭಿನ್ನರು ಅನ್ನುವುದನ್ನು ಮನದಟ್ಟು ಮಾಡಿತು. ಮೊದಲು ನಾವಿಲ್ಲಿಗೆ ಬಂದಾಗ ನಮ್ಮಲ್ಲಿ ಒಂದೇ ತರದ ವಿಚಾರಗಳಿರುತ್ತಿದ್ದವು. ಹನ್ರಿಯ ಪ್ರಬಂಧ ಅವನನ್ನು ನಮ್ಮ ದೇಶದಿಂದ ಹೊರಗೆ- ಇಂಡಿಯಾಕ್ಕೆ ಕಳಿಸಿತೆಂದು ಇಬ್ಬರೂ ಸಂತೋಷಪಟ್ಟಿದ್ದೆವು. ಅವನ ವೃತ್ತಿಯ ದೃಷ್ಟಿಯಿಂದ ಅವನಿಗೆ ಇದೊಂದು ಅದ್ಭುತ ಅವಕಾಶ ಒದಗಿಸಿದ್ದಲ್ಲದೆ ನಮ್ಮಿಬ್ಬರಿಗೂ ಅಂಥದೇ ಆಧ್ಯಾತ್ಮಿಕ ಅವಕಾಶವನ್ನು ನೀಡಿದೆ ಎಂದು ಇಬ್ಬರೂ ಅಂದುಕೊಂಡಿದ್ದೆವು. ನಮ್ಮಿಬ್ಬರಿಗೂ ಸಾಕು ಸಾಕೆನಿಸಿದ್ದ ಪಾಶ್ಚಾತ್ಯ ಭೌತಿಕತೆಯಿಂದ ತಪ್ಪಿಸಿಕೊಳ್ಳಲು ಇಲ್ಲೊಂದು ದಾರಿ ಇತ್ತು. ಒಮ್ಮೆ ಇಲ್ಲಿಗೆ ಬಂದು ಮೊದಲ ಉಬ್ಬರವೆಲ್ಲ ಇಳಿದ ಮೇಲೆ ನಾವು ಬಿಟ್ಟೋಡಿಬಂದಥ ಬದುಕಿನ ಧಾಟಿಗೇ ಮತ್ತೆ ಮರಳುವುದಕ್ಕೆ ಹೆನ್ರಿಗೆ ಆಕ್ಷೇಪವಿದ್ದಂತಿರಲಿಲ್ಲ. ಮೊದಮೊದಲು ಮಹಾ ವಿಶೇಷವಾಗಿದ್ದ ಭಾರತೀಯರೊಂದಿಗಿನ ಭೇಟಿಯ ಬಗ್ಗೆ ಈಗ ಅವನಿಗೆ ಯಾವ ಅಸ್ಥೆಯೂ ಇಲ್ಲವಾಗಿತ್ತು. ಕೇವಲ ವಿದೇಶದ ಪತ್ರಕರ್ತರು ಕೊಡುತ್ತಿದ್ದ ಪಾರ್ಟಿಗಳಿಗೆ ಹೋಗಿ ನಮ್ಮ ದೇಶದಲ್ಲಿ ಮಾಡುತ್ತಿದ್ದ ಹಾಗೆ ಕೂತು, ಕುಡಿದು, ಹರಟಿ ಬರುವುದೆಲ್ಲ ಈಗ ಅವನಿಗೆ ಸೇರತೊಡಗಿತು. ಕೆಲವು ದಿನಗಳಾದ ಮೇಲೆ ನನಗೆ ಅವನ ಜೊತೆ ಹೋಗುವುದು ಸಹಿಸುತ್ತಿರಲಿಲ್ಲ. ಜಗಳ ಶುರುವಾಯಿತು. ಆಮೇಲೆ ಅವನ ಪಾಡಿಗೆ ಅವನು ಹೋಗಿ ಬರುತ್ತಿದ್ದ. ನನಗೆ ಅದೊಂದು ಬಿಡುಗಡೆ. ಮಹಾ ಅಭಿರುಚಿಯಿಂದ ಸಜ್ಜುಗೊಳಿಸಿದ ಏರ್ಕಂಡೀಷನ್ಡ್ ಅಪಾರ್ಟ್ಮೆಂಟ್ಗಳಲ್ಲಿ ಪೆದ್ದು ಪೆದ್ದಾಗಿ ಮಾತಾಡುವಂಥ ಯಾರ ಜೊತೆಯಲ್ಲೂ ಇರುವುದು ನನಗೆ ಬೇಕಿರಲಿಲ್ಲ. ನಾನು ಭಾರತಕ್ಕೆ ಬಂದಿದ್ದು ಇಲ್ಲಿರುವುದಕ್ಕೆ. ನನಗೆ ನಾನೇ ಬದಲಾಗುವುದು ಬೇಕಿತ್ತು. ಹೆನ್ರಿಗೆ ಹಾಗಲ್ಲ. ಅವನಿಗೆ ಕೇವಲ ಒಂದು ಬದಲಾವಣೆ ಬೇಕಿತ್ತು. ಅಷ್ಟೆ! ತಾನು ಬದಲಾಗುವುದಲ್ಲ. ಹಾಗಾಗಿ ಹೆನ್ರಿ ನನಗೆ ಪರಕೀಯನಾದ. ನನಗೆ ನಾನು ಒಬ್ಬಂಟಿ ಅನ್ನಿಸತೊಡಗಿತು- ಈಗ ನಾನು ನಿಜಕ್ಕೂ ಒಬ್ಬಂಟಿಯಾಗ್ರಿರುವ ಹಾಗೆ!
(ಮುಂದುವರೆಯುವುದು)