ನನ್ನ ಮದುವೆ ಆಮಂತ್ರಣ

ನನ್ನ ಮದುವೆ ಆಮಂತ್ರಣ

                                                                                                                                                      ನನ್ನ ಮದುವೆ ಆಮಂತ್ರಣ

"ಈ ಮಾರುದ್ದದ ಸೀರೆ ಮಣಭಾರ ಕಣೋ, ಕಳಚಿ ರಾತ್ರಿ ಉಡುಪುಟ್ಟು ಬರ್ತೀನಿ " ಎಂದು ಸುಮ್ಮನಿದ್ದ ಮನಸ್ಸಿಗೆ ಮಂಡಕ್ಕಿ ತಿನ್ನುವ ಆಸೆ ಹಚ್ಚಿ ಹೋದವಳು "ಆಕಾಶ್ ಇದನ್ನ ನೋಡೋಣ್ವಾ?" ಎಂದು ಮೃದುವಾಗಿ ಉಲಿಯುತ್ತಾ ಕೋಣೆಯಿಂದ ಹೊರಬಂದಳು. 'ಅದೇನಿರಬಹುದೆಂದು' ಮುಖವರಳಿಸಿ ತಲೆಯೆತ್ತಿ ನೋಡಿದೆ. ಅರಳಿದ ಮುಖ ತಣ್ಣೀರೆರಚಿದಂತೆ ಮುದುಡಿತು. ಅವಳ ಬದಲಾದ ವಸ್ತ್ರವೂ ನನ್ನಲ್ಲಿ ರಸಿಕತೆ ಸೃಜಿಸಲಾರದೆ ಸೋತಿತ್ತು. ಹಾಗೆ ಮಾಡಿದ್ದು ಅವಳ ಕೈಲಿದ್ದ, ಇಂದಿಗೆ ಸರಿಯಾಗಿ ಒಂದು ವರ್ಷ ಹಳೆಯದಾದ ನಮ್ಮ ಮಾದುವೆ ಆಲ್ಬಮ್ !!!. 'ಅಂತದ್ದೇನಿರಬಹದು, ಸಿಹಿನೆನಪುಗಳಿರಬೇಕಾದ ಆಲ್ಬಮ್ ನಲ್ಲಿ?' ಎಂದು ನೀವು ಕೇಳಬಹುದು. ಅದಕ್ಕಾಗಿಯೇ ಸ್ವಾಮಿ ಈ ಲೇಖನ.

ಮದುವೆ ವರ್ಷಾಚರಣೆಯ ಸಂಭ್ರಮಕ್ಕಾಗಿ ಇವಳ ಮನಸ್ಸು ತುಂಬಲು ನನ್ನ ಜೇಬು ಖಾಲಿಯಾಗಬೇಕಾದದ್ದಂತೂ ನನಗೆ ಸಂಬ್ರಮದ ವಿಷಯವಲ್ಲ. ಇಷ್ಟಿದ್ದರೂ ಇವಳಣತಿಯಂತೆ 3D ಸಿನೆಮಾ ,4 ಟವರ್ಸ್ ಆಫ್ ಬೆಂಗಳೂರು ,5 ಸ್ಟಾರ್ ಹೋಟೆಲ್ಲೂ ಅಂತೆಲ್ಲಾ ದುಡ್ಡು ಸುರಿದದ್ದು ರಾತ್ರಿ ಕಾರ್ಯಕ್ರಮ ನನ್ನ ಅಣತಿಯಂತೆ ಆಗಬಹುದೆಂಬ ಒಳಮನದ ಹವಣಿಕೆಯಿಂದ. ಉದಾರ ಜೇಬಿನ ಉದಾರ ಮನಸ್ಸಿನ ಮೂಲೆಯಲ್ಲಿದ್ದ ಸಣ್ಣ ಸ್ವಾರ್ಥಕ್ಕೂ ಆ ಹಾಳು ಆಲ್ಬಮ್ ತೋರಿ ಮಣ್ಣೆರಚಿದ್ದು ಇವಳು ನನ್ನ ಉದಾರತೆಗೆ ಪ್ರತಿಯಾಗಿ ಎಸಗಬಹುದಾದ ದೊಡ್ಡ ಕ್ರೌರ್ಯವೇ ಆಗಿ ನನಗೆ ತೋರಿತು. ಹಳ್ಳಕ್ಕೆ ಬಿದ್ದ ಹೊತ್ತಿನ ಚಿತ್ರ ನೋಡುವುದು ಸಾಮಾನ್ಯವಾಗಿ ಎಲ್ಲ ಗಂಡಸರಿಗೂ ಬೇಸರದ ಸಂಗತಿಯೇ ಆದರೂ ನನಗೆ ಜಿಗುಪ್ಸೆ ಬರಿಸುವಷ್ಟು, ಕೊಪಬರಿಸುವಷ್ಟು, ಅಪಮಾನಿಸುವಷ್ಟುರ ಶಕ್ತಿ ಈ ಫೋಟೋ ಆಲ್ಬಮ್ ಗಿರಲು ಕಾರಣ ಇಲ್ಲದಿಲ್ಲ. ಅದು ಕೆದಕುವ ನೆನಪುಗಳು ಅಂತಾದ್ದು. ಅಂಥಾ ಆಟಮ್ ಬಾಂಬುಗಳ ಪೆಟ್ಟಿಗೆಯ ಮುಚ್ಚುಳ ತೆರೆದ ಇವಳು ನನ್ನಾತ್ಮ ಸ್ಥೈರ್ಯ ಇಂಚಿಂಚೇ ಸಿಡಿಸುವಂತೆ ಒಂದೊಂದೇ ಫೋಟೋ ತಿರುವುತ್ತಾ ಹೋದಳು.

"ಇವಳು ಸರಳಾ, ನೆನಪಿದೆಯೇನ್ರಿ? ಮದ್ವೆ ಆದ್ಮೇಲೆ ಊದಿ ಕುಂಬಳಕಾಯಿ ಆಗಿದಾಳಂತೆ, ಆಗ ಪಾಪ ಕಾಲೇಜ್ ಹುಡುಗರ್ನೆಲ್ಲಾ ಹೇಗ್ ಕವಡೆ ಹಾಗೆ ಆಡ್ಸ್ತಿದ್ಲು ಗೊತ್ತಾ?"

"ಆಕಾಶ್ ಇವಳು ಆಶಾ ಅಂತ. ಬುದ್ದಿವಂತೆ ಹಾಗೆ ಏನೋ ಕಂಪನಿ ಶುರು ಮಾಡ್ತಿದಾಳೆ ರೀ. ಅಪ್ಪನ್ ದುಡ್ಡು ಖರ್ಚು ಮಾಡ್ಬೇಕಲ್ಲಾ!"

ಎಂದೆಲ್ಲ ತನ್ನ ಹಳೆ ಸ್ನೇಹಿತೆಯರ ಬಿದ್ದ ಪರಿಸ್ಥಿತಿಗೆ ಸಂತಾಪ ಸೂಚಿಸುತ್ತಾ, ಎದ್ದವರ ಬಗ್ಗೆ ಮತ್ಸರ ಅದುಮಿಟ್ಟು ಖುಷಿ ಸೂಚಿಸುತ್ತಾ ಹೊರಟಳು. ಸಹಜವಾಗೇ ಮನೆಯ ಹೆಚ್ಚಿನ ಹೊಣೆ ಹೊತ್ತ ಇವಳಿಗೆ ಇಂದಿನ ಸ್ನೀಹಿತರೆಂದರೆ ಅಕ್ಕ ಪಕ್ಕದ ಮನೆಯವರಷ್ಟೇ. ಕಚೇರಿ ಸಹವರ್ತಿಗಳನ್ನು ಸ್ನೀಹಿತರೆಂದು ಹೇಳಬರುವುದಿಲ್ಲ. ಮದುವೆಯಾಗಲೇ ಹುಟ್ಟಿರುವ ಹೆಣ್ಣುಗಳು ವಯಸ್ಸು ಮೀರಿತೆಂಬ ಅವಸರದಲ್ಲಿ ಅಪ್ಪ ತೋರಿಸಿದವನಿಂದಲೋ , ಬ್ರೋಕರ್ ಅಪ್ಪನಿಗೆ ತೋರಿಸಿದವನಿಂದಲೋ ಅರ್ಚಕರೆಂದಂತೆ ತಲೆಬಗ್ಗಿಸಿ ಕೊರಳಿಗೆ ಹರಿಶಿನದ ಹಗ್ಗ ಬಿಗಿಸಿಕೊಂಡು ಬಿಗಿದವನ ಊರಿಗೋ, ಪರವೂರಿಗೋ ಅಥವಾ ಕನಸು ನನಸಾದಂತೆ ಪರದೇಶಕ್ಕೋ ಸೇರಿದ ಇವಳ ಗೆಳತಿಯರು 'ಗೆಳತಿ' ಜೊತೆಗೆ 'ಹಳೆ' ವಿಷೇಶಣ ಸೇರಿಸಿಕೊಂಡು 'ಹಳೆಗೆಳತಿ'ಯಾರಾಗಿದ್ದರು. ಮಠದ ಸ್ವಾಮಿಗಳ ಪೂರ್ವಾಶ್ರಮದ ಬಂದುಗಳಂತೆ.

"ಆಕಾಶ್ ಇಲ್ನೂಡ್ರಿ, ಇವಳು ಪ್ರಿಯ ಅಂತ ಇವನ ಜೊತೆ ತಿರ್ಗಾಡ್ತಿದ್ದವಳು ಅವನಾದ್ಮೇಲೆ ಇನ್ನಬ್ಬರನ್ನೂ ಬಿಟ್ಟು ಮತ್ತೆ ಮೊದಲ್ನೇ ಬಾಯ್ಫ್ರೆಂಡ್ ನನ್ನೇ ಮದ್ವೆ ಆಗ್ತಿದಾಳಂತೆ, ಅದೂ ಅಂತೆ ಅಷ್ಟೆ, ಇನ್ನು ದಿನ ಬಾಕಿ ಇದ್ಯಲ್ಲ ಅಷ್ಟರಲ್ಲಿ ಏನಾಗುತ್ತೋ ಯಾರಿಗೊತ್ತು"

ಒಂದೆರಡು ಫೋಟೋಗಳ ಮೇಲೆ ಬೆರಳಾಡಿಸಿ ಪ್ರಿಯಾಳ ಹಳೆ ಪ್ರಿಯಕರರನ್ನು ಹೊಸದಾಗಿ ಗುರುತಿಸುತ್ತಾ ಒಂದೂ ಸರಿಯಾಗಿ ಗೊತ್ತಿರದ ಸುದ್ದಿಗೆ ಅಂತೆ ಕಂತೆಗಳ ಕಂತೆ ಕಟ್ಟಲು ಶುರುವಿಟ್ಟಳು. ಅವಳ ಸಮಾದಾನಕ್ಕೆಂದು ಫೋಟೋ ಮೇಲೆ ಕಣ್ಣಾಡಿಸಿದೆ. ಇದ್ದ ಕೊನೆ ಇಂಚಿನ ಸ್ಥೈರ್ಯ ಕೂಡ ಮಾಯವಾಯ್ತು. ಜೀವವಿಲ್ಲದೆ, ಅಲುಗಾಡದೇ ನಿಂತ ಫೋಟೋಗಳಿಗೇಕೆ ನಾನು ಹೆದರುತ್ತೇನೆಂದು ತಾನೇ ನಿಮ್ಮ ಪ್ರಶ್ನೆ . ಇದೊಂದು ಫೋಟೋದ ಚಿತ್ರವಿವರ ಕೇಳಿಸಿಕೊಂಡು ನೀವೇ ಹೇಳಿ ನನಗೆ ಅಂದು ಹೇಗಾಗಿರಬೇಡ ಎಂದು.

ವಿಶಾಲ ಮನಸ್ಸಿನ ಮಾವ ವೇದಿಕೆಯೂ ವಿಶಾಲವಾಗಿರುವಂತೆಯೇ ಎಚ್ಚರವಹಿಸಿ ಗೊತ್ತು ಮಾಡಿದ್ದ ಚೌಟ್ರಿ ಅದು. ಅಷ್ಟು ವಿಶಾಲ ವೇದಿಕೆಯ ಮೇಲೆ ನಾನೊಬ್ಬನೇ ಗಂಡು!! ಉಳಿದದ್ದೆಲ್ಲ ಇವಳ ಸ್ನೇಹಿತೆಯರ ದಂಡು! ಆ ದಂಡಿಗೆ ಹೆದರಿ ಈಗಷ್ಟೇ ರಾಮನವತಾರ ತಾಳಿದ ನಾನು ಸಂಕೋಚದಿಂದ ಇವಳೆಡೆಗೆ ಒತ್ತರಿಸಿ ನಿಂತೆ. ಒಂದೇ ತರಗತಿಯಲ್ಲಿ ಕಲಿತ ಈ ಹುಡುಗಿಯರು ಒಂದೇ ಫೋಟೋನಲ್ಲೇ ಕಾಣಬೇಕೆಂದು ತೀರ್ಮಾನಿಸಿದವರಂತೆ ಕಚ ಪಚನೆ ಜಾಗ ಮಾಡಿಕೊಳ್ಳುತ್ತಿದ್ದರು. ಅವರ ಶಾಲೆಯಲ್ಲಿ ಕಲಿಯದ ನನಗೆ ಮಗ್ಗುಲಿಗೆ ಜಾಗ ಕೊಡುವುದಿರಲಿ ನನ್ನನ್ನೇ ಹಿಂದೆ ತಳ್ಳಲೂ ಹಿಂಜರಿಯುತ್ತಿರಲಿಲ್ಲ ಎನ್ನಿ. ಸ್ತ್ರೀ ಪ್ರದಾನ ವೇದಿಕೆಯಲ್ಲಿ ಗಂಡಿನ ಅಸ್ಥಿತ್ವಕ್ಕೆ ಆದ ಗಣನೀಯ ಅಪಮಾನಕ್ಕೆ ಅಂಜಿ ಇವಳೆಡೆಗೆ ದಯನೀಯವಾಗಿ ನೋಡಿದೆ. ನನ್ನ ಮುಜುಗರದ ಮುಖ ನೋಡಿ ಇವಳ ಸ್ನೇಹಿತೆಯೊಬ್ಬಳು ಕಿಸಕಿಸನೆ ನಕ್ಕು ಅಷ್ಟಕ್ಕೇ ಸುಮ್ಮನಾಗದೇ ತಾನು ಕಂಡ ದೃಶ್ಯ ವೈಭವವನ್ನ ಪಕ್ಕದವಳ ಕಿವಿಯಲ್ಲರುಹಿದಳು. ಒಂದೊಂದಾಗಿ ಹುಡುಗಿಯರೆಲ್ಲ ನನ್ನೆಡೆಗೆ ನೋಡಿ ಕಿಸಕಿಸನೆ ನಗುತ್ತಿದ್ದರೆ ಫೋಟೋಗ್ರಾಫರ್ "ಸ್ಮೈಲ್ ಪ್ಲೀಸ್ "ನ ಅವಶ್ಯಕತೆಯೇ ಇಲ್ಲವೆಂದು ಕ್ಲಿಕ್ಕಿಸಿದ. ಕ್ಯಾಮೆರಾದಲ್ಲಿ ನನ್ನೆದೆಬಡಿತ ದಾಖಲಾಗದಿದ್ದದ್ದು ನನ್ನ ಪುಣ್ಯ .

ಇದೊಂದು ಫೋಟೋದಲ್ಲಿ ಮಾತ್ರ ಅಲ್ಲ ಸ್ವಾಮೀ ಇಡೀ ಮದುವೆ ಮನೆ ತುಂಬಾ ಹುಡುಗಿಯರೇ ತುಂಬಿ ತುಳುಕುತ್ತಿರುವಾಗ ಯಾವುದೋ ಒಂದೇ ಹುಡುಗಿಗೆ ಇಡೀ ಜೀವನವೇ ಗಂಟು ಬಿದ್ದಿರಬೇಕೆಂದು ವಚನ ಕೊಡಲು ಹೇಗೆ ತಾನೆ ಸಾಧ್ಯ ಸ್ವಾಮೀ? ನನ್ನ ಸ್ವಾಭಿಮಾನಕ್ಕೆ ಆಸರೆಯಾಗಿ, ಬಿಗುಮಾನಕ್ಕೆ ಒಂದಿಷ್ಟು ತೂಕ ತುಂಬಬಲ್ಲ ನನ್ನವರೆಂದು ಹೇಳಿಕೊಳ್ಳಲು ಕೆಲವು ಸ್ನೇಹಿತರೂ ಅಲ್ಲಿರದೇ 'ಇದು ನನ್ನ ಮದುವೆಯೇ?' ಎಂದು ಅನುಮಾನ ಬರುವಷ್ಟು ಬೇಸರಿಸಿ ಕೀಳರಿಮೆಯಾಗತೊಡಗಿತ್ತು. ಇಷ್ಟಾದರೂ ನನಗೆ ಸ್ನೇಹಿತರಿಲ್ಲವೆಂದಲ್ಲ. ನನ್ನ ಯಾವ ಸ್ನೇಹಿತರಿಗೂ 'ಹಳೆ' ವಿಶೇಷಣ ಸೇರುವುದು ಅತ್ತಗಿರಲಿ, ಅವರ ದಂಡು ಇಂದಿಗೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಇಂದಿಗೂ ಅಂತ ಒಂದು ದಂಡು ಮನೆಗೆ ಬಂದು ಹೆಂಡತಿ ತಂದು ಕೊಡುವ ತಿನಿಸುಗಳನ್ನೆಲ್ಲಾ ಚಪ್ಪರಿಸಿ ಹೊಟ್ಟೆ ತುಂಬಾ ತಿಂದು ತಮ್ಮ ಅತ್ತಿಗೆಯ ಕೈ ರುಚಿ ಹೊಗಳಿ ಹೋಗುತ್ತಾರೆ. ಅದನ್ನೆಲ್ಲ ನಾನೇ ಮಾಡಿದ್ದರೂ ಪ್ರಶಂಸೆ ಮಾತ್ರ ಇವಳಿಗೇ. ಪ್ರಸಂಸೆ ಬೇಕೆಂದರೆ "ಹೆಂಡತಿಯ ಸೆರಗು ಹಿಡಿದಿಯೇನೋ "ಎಂದು ಕಾಲೆಳೆಯುತ್ತಾರೆಂಬ ಅಳುಕು ಗೆಲ್ಲಬೇಕು. ಗೆಲ್ಲುವುದು ನನ್ನ ಕೈಲಾಗದ್ದೆಂದು ತಿಳಿದ ನಾನು "ನಿನ್ನ ಕೈ ರುಚಿ ಚಂದ ಕಣೆ " ಎಂದು ಇವಳ ಮೇಲೇ ವ್ಯಂಗ ಕಾರಿ ಸೋಲು ಗಂಟಲಲ್ಲೇ ನುಂಗುತ್ತೇನೆ. ಅದೂ ಸ್ನೇಹಿತರು ಹೋದ ಮೇಲೆ. ಇಷ್ಟು ಸ್ನೇಹಿತರಲ್ಲಿ ಅರ್ಧದಷ್ಟಾದರೂ ನನ್ನ ಮದುವೆಗೆ ಬರಲಿಲ್ಲವೆಂಬುದು ನನಗೆ ಕೋಪದ ವಿಷಯವಾದರೂ ಅವರು ಬರದಿರಲು ಕಾರಣೀಬೂತ ನನ್ನ ಮದುವೆ ಆಮಂತ್ರಣ ಪತ್ರಿಕೆ ಎಂದು ಎಲ್ಲ ಸ್ನೇಹಿತರೂ ಸಾಮೂಹಿಕವಾಗಿ ತೀರ್ಮಾನಿಸಿ ಹೇಳಿದ್ದರಿಂದ ಇಂದು ನಾನು ಅವರನ್ನು ದೂಷಿಸುವಂತಿಲ್ಲ. ಇದ್ದದ್ದನ್ನು ಇದ್ದಂತೆ ನಿಮ್ಮ ಮುಂದಿಡುತ್ತೇನೆ ಅಷ್ಟೇ.

ಲೋಹಿಯಾವಾದ, ಜಾತಿ ನಿರ್ಮೂಲನೆ, ಲಿಂಗ ಸಮಾನತೆ, ಸಮಾಜವಾದ, ಸಮತಾವಾದಗಳಂತ ದೊಡ್ಡ ದೊಡ್ಡ ಆದರ್ಶಗಳ ಹಿಂದೆ ಬಿದ್ದ ನಾನು ಅವುಗಳನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೆನೋ ಗೊತ್ತಿಲ್ಲ ಆದರೆ ನನಗೆ ಅರ್ಥ ವಾದಷ್ಟನ್ನು ಮಾತ್ರ ಯವುದೇ ಮುಲಾಜಿಲ್ಲದೇ ಜೀವನಕ್ಕೆ ಅನ್ವಯಿಸಿಕೊಳ್ಳಲು ಹಾತೊರೆಯುತ್ತಿದ್ದೆ. 'ಇದು ಹೀಗೆ ಏಕೆ? ಹಾಗೇಕಿರಬಾರದು' ಎಂದು ಕೇಳುತ್ತಾ ಸಮಾಜದ ಜಡಗಟ್ಟಿದ ರೀತಿ ನೀತಿ ಎಲ್ಲವನ್ನೂ ಸಾರಾಸಗಟಾಗಿ ಒಂದೇ ಏಟಿಗೆ ದಿಕ್ಕರಿಸಿ ಅಲ್ಲೆಲ್ಲಾ ನಾವು ಸರಿಯಿರಬಹುದೆಂದು ನಂಬಿದ ಸಿದ್ದಾಂತ ಪ್ರತಿಪಾದಿಸುವುದು ಅರೆಬೆಂದ ಬುದ್ದಿಯ ಬಿಸಿರಕ್ತದ ನನ್ನಂತ ಯುವಕರ ರೀತಿಯಾಗಿತ್ತು. ಇದರ ಮದ್ಯ ಬಂದ ನನ್ನ ಮದುವೆಯನ್ನು ಈ ನವ್ಯಾದರ್ಶಗಳ ಪತಿಷ್ಟಾಪನೆಗೆ ಸಂಪುರ್ಣವಾಗಿ ಬಳಸಿಕೊಂಡದ್ದು ಎಷ್ಟೆಲ್ಲಾ ಅವಾಂತರಗಳಿಗೆ, ಎಡವಟ್ಟುಗಳಿಗೆ ಕಾರಣವಾಯಿತೆಂದು ಬರೆದರೆ ಒಂದು ಪುಸ್ತಕವೇ ಆಗಬಹುದು. ಅಥವಾ ಪುಸ್ತಕ ಸರಣಿಯೇ ಆದೀತು.ನನ್ನ ಮದುವೆಯ ಹುಚ್ಚಾಟ ಭಾಗ ೧, ಭಾಗ ೨..ಇತ್ಯಾದಿ. ಅದಿರಲಿ ಇಂದಿಗೆ ನನ್ನ ಸ್ನೇಹಿತರು ನನ್ನ ಮದುವೆಗೆ ಬಾರದೆ ಆ ದಿನವನ್ನು ಕೀಳರಿಮೆಯ ಕಹಿ ನೆನಪಾಗಿಸಿದ ಕಾರಣವನ್ನಷ್ಟೇ ಹೇಳುವೆ.

ಮದುವೆ ಆಮಂತ್ರಣದ ಮೇಲೆ ವಿದ್ಯಾರ್ಹತೆ, ವೃತ್ತಿ ನಮೂದಿಸುವುದು ರಾಜಕಾರಣಿಗಳ ಕಾರಿನ ಮೇಲಿನ ಸೈರನ್ ನಂತೆ ಕೆಲಸಕ್ಕೆ ಬಾರದ ಪ್ರತಿಷ್ಠೆಯ ಕರ್ಕಶ ಧ್ವನಿ ಎಂದು ತೀರ್ಮಾನಿಸಿ ತಗೆದಾಗಿತ್ತು.ಇನ್ನು ಪ್ರಶ್ನೆ ಗಂಡು ಹೆಣ್ಣು ಸಮವೆಂದ ಮೇಲೆ ಪತ್ರಿಕೆಯ ಮೇಲೆ ಮೊದಲು ನನ್ನ ಹೆಸರಿರಬೇಕೊ ಇವಳ ಹೆಸರಿರಬೇಕೊ ಎಂಬುದು. ಇದನ್ನೇ ನನ್ನ ಕ್ರಾಂತಿಯ ಹೋರಾಟಗಳಿಗೆ ಎಂದಿನಂತೆ ಬೆನ್ನುಲುಬಾಗಿದ್ದ ಆತ್ಮ ಸ್ನೇಹಿತ ರವಿಗೂ ಹೇಳಿದೆ. ಇಂತ ವಿಷಯಗಳನ್ನು 'ಸಿಂಬಾಲಿಕ್' ಆಗಿ ಬಳಸಿಕೊಂಡು ಹೆಚ್ಚು ಪರಿಣಾಮ ತರಬಹುದೆಂಬ ಕಾರಣಕ್ಕೆ 'ಯಾವುದೋ ಒಂದು' ಎಂದು ತಳ್ಳಿ ಹಾಕದೆ ಗಂಭೀರ ಸಮಸ್ಯೆಯಾಗಿಯೇ ಪರಿಗಣಿಸಿ ಏನು ಮಾಡುವುದೆಂದು ನನ್ನನ್ನೇ ನೋಡಿದ . ಇವಳ ಹೆಸರೇ ಇರಲಿ ಎಂದು ನಾನು ಅಂದರೂ ಅದು ನಾನು ತೋರುವ ಔದಾರ್ಯವಾಗುತ್ತದೇ ಹೊರತು ಇಬ್ಬರಿಗೂ ಸಲ್ಲಬೇಕಾದ ಸಮಾನತೆ ಸಲ್ಲಿದಂತಾಗುವುದಿಲ್ಲವೆಂದು

"ಇಬ್ಬರದೂ ಒಂದೇ ಸಾಲಿನಲ್ಲಿರಲಿ ಕಣೊ ಎಂದೆ"

"ಲೇ ಒಂದೇ ಸಾಲು ಅಂದ್ರೆ ಮೊದಲು ನಿಂದೋ? ಅತ್ತಿಗೆದೋ " ಎಂದು ಸಮಸ್ಯೆಯ ಜಟಿಲತೆ ಹೊರಹಾಕಿದ.

"ಹೌದಲ್ಲ ಮೊದಲು ನಂದೋ? ಅವಳದೋ ?" ಬರಿ ಒಂದು ಆಮಂತ್ರಣ ಪತ್ರಿಕೆಯ ರಚನೆ ಇಡೀ ಸಮಾಜದ ರಚನೆಯನ್ನೇ ಬದಲಿಸಬೇಕೆಂದಿದ್ದ ನಮಗೆ ಸವಾಲಾದದ್ದು ಎಳ್ಳಷ್ಟೂ ಸರಿಬರಲಿಲ್ಲ. ಬಹಳಷ್ಟುಯೋಚಿಸಿ

" ರವಿ ಒಂದು ಕೆಲಸ ಮಾಡು. ಒಂದು ಹೆಸರು ಕನ್ನಡದಲ್ಲಿ ಮತ್ತೊಂದು ಅರ್ಯಾಬಿಕ್ ನಲ್ಲಿ ಹಾಕ್ಸು" ಎಂದೆ. ಪರಿಹಾರ ಹುಡುಕಿದ ನನ್ನ ಬುದ್ದಿವಂತಿಕೆಗೆ ನನಗೇ ಖುಶಿಯಾಗಿ ದ್ವನಿ ಉಬ್ಬಿತ್ತು.

ರವಿ ಮಾತ್ರ ಎನೂ ಅರ್ಥವಾಗಲಿಲ್ಲವೆಂಬಂತೆ ನನ್ನ ಮುಖವನ್ನೇ ನೋಡತೊಡಗಿದ.

ನನ್ನ ಬುದ್ದಿವಂತಿಕೆಗೆ ಇದೆಲ್ಲ ಸಣ್ಣ ವಿಷಯವೆಂದು ತೋರಿಸಿಕೊಳ್ಳಲು ಮನಸಾಗಿ ಉಬ್ಬಿದ ದ್ವನಿ ಸಹಜ ಧಾಟಿಗೆ ತಂದು ವಿವರಿಸತೊಡಗಿದೆ .

"ಹೆಸರು ಮೊದಲು ಎಂದು ಹೇಗೆ ಗುರುತಿಸುತ್ತೇವೆ?"

ನಾನು ಕೇಳಿದ ರೀತಿಯಿಂದ ಇದು ಸಮಸ್ಯೆಯೇ ಅಲ್ಲವೆಂದೂ ತಾನು ದಡ್ದನೆಂದು ನಿರೂಪಿಸಲೇ ಹೀಗೆ ನೇರವಾಗಿ ಉತ್ತರಿಸದೆ ಮರುಪ್ರಶ್ನೆ ಕೀಳುತ್ತಿರುವೆನೆಂದು ರೇಗಿದ ಅವನು

"ಇದು ಕಾಮನ್ ಸೆನ್ಸ್ ಅಲ್ವಾ ಮಾರಾಯ ಮೊದಲು ಬರೆದ್ರೆ ಮೊದಲು ಆಮೇಲೆ ಬರೆದ್ರೆ ಆಮೇಲೆ ಅಷ್ಟೇ. ಯಾಕ್ ಹೀಗ್ ಕೇಳ್ ತಿದೀಯಾ?" ಎಂದು ತನಗೆ ಕಾಮನ್ ಸೆನ್ಸ್ ಇರುವುದಾಗಿ ತಾನೇ ದೃಢಪಡಿಸಿಕೊಂಡ.

"ಅದೇ.. ಮೊದಲು ಅಂದ್ರೆ ಹೇಗೆ?" ಮರುಪ್ರಶ್ನಿಸಿದೆ.

ಇಷ್ಟರಲ್ಲಿ ಉರಿದುಹೋದ ಅವನು

"ಏನು ತಲೆ ನೋವು ಮಾರಾಯ ನಿಂದು. ಮೊದಲು ಅಂದ್ರೆ ಬಲಗಡೆ ಬರೆದದ್ದು ,ನೀನ್ ಏನು ಸಾಬ್ರಾ ಉಲ್ಟಾ ಬರೆಯೋಕೆ?" ಅಂತ ತನ್ನ ಕೋಪವೆಲ್ಲಾ ಹೊರಹಾಕಿದ.

"ಎಗ್ಸಾಟ್ಲಿ ದಿ ಪಾಯಿಂಟ್ " ಅಂದು ಅವನ ಮಖವನ್ನೇ ದಿಟ್ಟಿಸಿದೆ.

ಕ್ಷಣದಲ್ಲೇ ಎಲ್ಲಾ ಹೊಳೆದವನಂತೆ ಕೋಪವೆಲ್ಲಾ ಕರಗಿ ತನಗೆ ಅರ್ಥವಾದುದನ್ನು ವಿವವರಿಸುತ್ತಾ

"ಎಕ್ಸಲೆಂಟ್ ಮ್ಯಾನ್. ಏನ್ ತಲೇನೋ ನಿಂದು. ಒಂದ್ ಹೆಸರು ಕನ್ನಡದಲ್ಲಿ ಪತ್ರಿಕೆ ಬಲಗಡೆ ಬರೆದ್ರೆ, ಕನ್ನಡನ ಬಲಗಡೆಯಿಂದ ಓದೋದ್ರಿಂದ ಮೊದಲಾದಂಗ್ ಆಯ್ತು. ಆದ್ರೆ ಉರ್ದು ಓದೋದು ಎಡಗಡೆ ಇಂದ. ಅದಕ್ಕೆ ಇನ್ನೊದು ಹೆಸರು ಉರ್ದು ನಲ್ಲಿ ಎಡಗಡೆ ಬರೆದ್ರೆ ಆಯ್ತು. ಅದೂ ಮೊದಲೇ ಬಂದಂಗಾಯ್ತು. ಬೋತ್ ಆರ್ ಈಕ್ವಲ್ ಏನ್ ಐಡಿಯಾ ಮಾರಾಯ ನಿಂದು. ಸೂಪರ್ ಮಗ" ಅಂತ ಹೊಗಳಿ ತನ್ನ ಪರಿಭಾಷೆಯಲ್ಲಿ ನಾನು ಬುದ್ದಿವಂತನೆಂದು ಸರ್ಟಿಫಿಕೇಟ್ ಕೊಟ್ಟ. ಇಬ್ಬರೂ ಒಬ್ಬರಿಗೊಬ್ಬರು ಬೆನ್ನು ಚಪ್ಪರಿಸಿ ಮದುವೆ ಆಮಂತ್ರಣ ಪತ್ರಿಕೆ ಮೂಲಕ ಕ್ರಾಂತಿ ಕಹಳೆ ಊದಿದೆವೆಂದು ಉಬ್ಬಿದೆವು.

ಆದರೆ ನಮ್ಮ ಸಮಸ್ಯೆ ಇನ್ನೂ ಬಗೆ ಹರಿದಿರಲಿಲ್ಲ! ನಮ್ಮ ಆಲೋಚನೆ ಇವಳಿಗೆ ಹೇಳುತ್ತಿದ್ದಂತೆ "ನಿಮ್ಮ ಹುಚ್ಚಾಟಗಳಿಗೆಲ್ಲಾ ನನ್ನ ಸಹಕಾರವಿಲ್ಲ " ಎಂದು ಹೇಳಿ ಎತ್ತರದ ದ್ವನಿಯಲ್ಲಿ ಹಾರಾಡಿ ನಾವು ತೆಗೆದುಕೊಂಡದ್ದು ಏಕಪಕ್ಷೀಯ ನಿರ್ದಾರವೆಂದು ಸಾರಾಸಗಟಾಗಿ ದಿಕ್ಕರಿಸಿ ಸ್ತ್ರೀ ದ್ವನಿ ಮುಂದೆ ನಮ್ಮದೆಲ್ಲ ಬೆಬ್ಬೆಬ್ಬೆ ಎನ್ನುವಂತೆ ಮಾಡಿದಳು.ನಾವು ಇಷ್ಟು ದೊಡ್ಡದಾಗಿ ಹೋರಾಟದ ಹಾದಿ ಹಿಡಿದು ಸಾದಿಸಬೇಕೆಂದುಕೊಂಡದ್ದನ್ನು ಇವುಗಳ ಅವಶ್ಯಕತೆಯೇ ಇಲ್ಲದಂತೆ ಅವಳ ದ್ವನಿ ಸಾದಿಸಿ 'ನಮ್ಮದೆಲ್ಲಾ ಔಟ್ ಡೇಟೆಡ್ ಹೋರಾಟ, ಪ್ರಪಂಚ ಆಗಲೇ ಬಹಳ ಮುಂದಿದೆ' ಎನ್ನುವಂತೆ ತೋರಿಸಿದ್ದು ಒಪ್ಪಲಾಗದೇ "ಸರಿ, ನಿಮ್ಮ ಹೆಸರು ಎನಾದರೂ ಮಾಡಿಕೊಳ್ಳಿ ನನ್ನದಂತೂ ಕನ್ನಡಲ್ಲೇ ಇರಲಿ" ಎನ್ನುವಷ್ಟು ಕರುಣೆ ತೋರಿಸುವಷ್ಟರಮಟ್ಟಿಗೆ ಓಪ್ಪಿಸಿದೆವು.

ಪತ್ರಿಕೆ ಪ್ರಿಂಟ್ ಮಾಡಿಸುವುದು ಮರ ಕಡಿದು ಪರಿಸರಕ್ಕೆ ಹಾನಿಮಾಡಿದಂತೆ, ಹಂಚುವುದು ಸಮಯ ವ್ಯರ್ಥ, ದೂರವಾಣಿ ಕರೆ ಅವಶ್ಯವಿಲ್ಲದ ಹಣ ವ್ಯರ್ಥ ಎಂಬೆಲ್ಲಾ ಕಾರಣಗಳಿಂದ ಇವುಗಳಿಗೆ ಪರ್ಯಾಯ 'ಟೆಕ್ನಿಕಲ್ ಸೆಲ್ಯೂಷನ್' ಹುಡುಕಿದೆವು. ಆಮಂತ್ರಣ ಪತ್ರಿಕೆಯ ಸಾಫ್ಟ್ ಕಾಪಿ ರೆಡಿ ಮಾಡಿ, ವಾಟ್ಸಾಪ್ ಬ್ರಾಡ್ ಕ್ಯಾಸ್ಟ್ ಲಿಸ್ಟ್ ಮಾಡಿ ಸಮಸ್ತ ಸ್ನೇಹಿತರಿಗೂ ಕೇವಲ ಒಂದೇ ಕ್ಷಣಕ್ಕೆ ಕೇವಲ ಒಂದೇ ಒಂದು ಗುಂಡಿಯೊತ್ತಿ ಆಮಂತ್ರಣ ಪತ್ರಿಕೆ ರವಾನಿಸಿದೆ. ಇದರಿಂದಾಗಿ ಎಷ್ಟು ಮರ ಉಳಿಸಿದೆವು, ಎಷ್ಟು ಸಮಯ ಉಳಿಸಿದೆವು, ಎಷ್ಟು ಪೆಟ್ರೋಲ್ ಉಳಿಸಿದೆವು ಲೆಕ್ಕ ಮಾಡಿ ಮರಗಳು ನಮಗೆ ಋಣಿಯಾಗಿರುವಂತೆ, ಪೆಟ್ರೋಲ್ ಬಳಸದಿದ್ದಕ್ಕೆ ಸರ್ಕಾರ ನಮಗೆ ಋಣಿಯಾಗಿರುವಂತೆ ಕಲ್ಪಿಸಿ ಖುಶಿಪಟ್ಟೆವು. ಅದಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬರ ವಿಳಾಸ ಹುಡುಕುವುದು, ಅವರು ಕೇಳುವ ನನಾತರದ ಬೇಕು ಬೇಡದ ಅವೇ ಪ್ರಶ್ನೆಗಳಿಗೆ ಉತ್ತರಿಸುವಾಗಿನ ಮುಜುಗರವೆಲ್ಲವನ್ನೂ ತಪ್ಪಿಸಿಕೊಂಡೆನೆಂದು ಯೋಚಿಸಿ ಖುಶಿ ದುಪ್ಪಟ್ಟುಗೊಳಿಸಿಕೊಂಡೆ. ಇದನ್ನೆಲ್ಲಾ ಇವಳಿಗೂ ಹೇಳಿ ಅವರ ಕಡೆಯವರಿಗೂ ಹೀಗೇ ಹಂಚಲು ಹೆಳಬೇಕೆನಿಸಿದರೂ ಇವಳು ನನ್ನನು ಒಪ್ಪಿರುವುದೇ ದೊಡ್ಡ ವಿಷಯವಾಗಿರುವಾಗ ಅವಳ ಪರಿಭಾಷೆಯಲ್ಲಿನ 'ನನ್ನ ಹುಚ್ಚಾಟ' ಗಳನ್ನೂ ಇಷ್ಟು ಅವಸರದಲ್ಲಿ ಒಪ್ಪುವಳೆಂದು ನೀರೀಕ್ಷಿಸುವುದು ಸರಿಯಲ್ಲವೆಂದು ಅವಳಿಗೆ ಹೇಳದೇ ಕ್ರಾಂತಿ ಕಹಳೆಯ ತುದಿ ಮುಚ್ಚಿ ಹಿಡಿದೆ.

ನನ್ನ ಲಿಸ್ಟ್ ನಲ್ಲಿದ್ದ ಅರ್ಧದಷ್ಟು ಸ್ನೇಹಿತರು ಬಂದರೂ ಅರ್ದ ಮದುವೆ ಮನೆ ತುಂಬಿದಂತೆ ಎಂದು ತಿಳಿದಿದ್ದೆ. ಆದರೆ ಮುಕ್ಕಾಲು ಮೂರು ಪಾಲು ನನಗೆ ಗೊತ್ತೇ ಇರದ ಮುಖಗಳು ತುಂಬಿ ನಾನು ಪ್ರಮುಖ ಆಕರ್ಷಣೆಯಾಗಬೇಕಾಗಿದ್ದ ನನ್ನದೇ ಮದುವೆಯಲ್ಲಿ ನನಗೇ ಅನಾಮಿಕ ಪ್ರಜ್ಞೆ ಕಾಡುವುದೆಂದು ಎಣಿಸಿರಲಿಲ್ಲ. ಇವಳ ಸೀರೆ ನರಿಗೆ ಸರಿಮಾಡಲು ಒಬ್ಬಳು ವೇದಿಕೆಗೆ ಬಂದು ಹೋದರೆ, ಮತ್ತೊಬ್ಬಳು ಮೇಕ್ಅಪ್ ಕೆಟ್ಟಿದೆಯೆಂದು ಗುರುತಿಸಿ ಸರಿಮಾಡಿ ತನ್ನ ಸೌಂದರ್ಯ ಪ್ರಜ್ಞೆ ಎಲ್ಲರಿಗೂ ಜಾಹಿರುಗೊಳಿಸಿದಳು. ಅದಕ್ಕೆ ಸಿಕ್ಕ ಪ್ರಶಂಸೆ ಕಂಡ ಇನ್ನೊಬ್ಬಳು ಎದ್ದು ಬಂದು "ಮುಖ ಹೀಗೆ ತಿರುಗಿಸಿ ದೇಹ ಓರೆ ಮಾಡಿ ನಿಲ್ಲೇ, ಫೋಟೋದಲ್ಲಿ ಸಣ್ಣ ಕಾಣ್ತೀಯಾ" ಎಂದು ಹೇಳಿ ಬೇರೆಯವರಿಂದ ಚುರುಕು ಬುದ್ದಿಯವಳೆನಿಸಿಕೊಂಡಳು. ಮತ್ತೊದು ಗುಂಪು ಬಂದು ಇವಳೊಂದಿಗೆ ಏನೂ ಹೇಳಿ ಕಿಸ ಕಿಸನೇ ನಗುತ್ತಾ ಹೋದರು. ಅದೇನೆಂದು ನಾನಿವಳನ್ನು ಕೇಳಿದ್ದಕ್ಕೆ "ಅದು ನಮ್ಮ ಗುಂಪಿನ ಹಳೇ ಜೋಕು ನಿಮಗೆ ಅರ್ಥ ಆಗೋಲ್ಲ ಈಗ ಸುಮ್ಮನೆ ನಿಲ್ಲಿ" ಎಂದಾಗ ನನಗೆ ಅಳು ಬರುವುದೊಂದೇ ಬಾಕಿ. ನಿಮಗೆ ನಿಜ ಹೇಳಬೇಕೆಂದರೆ ಅಲ್ಲಿಂದ ಓಡಿ ಹೋಗಬೇಕೆಂದೂ ಅನಿಸತೊಡಗಿತ್ತು. "ಇದೊಂದ್ ಸಾರಿ ಬಿಲ್ ಕಟ್ಟು ಮಗ, ಜೀವಕ್ಕೆ ಜೀವಾನೇ ಕೊಡ್ತೀನಿ" ಎನ್ನುತಿದ್ದ ಸ್ನೇಹಿತರೆಲ್ಲಾ ಹೀಗೆ ನನ್ನನು ಅಬ್ಬೇಪಾರಿಯಾಗಿ ಮಾಡುತ್ತಾರೆಂದು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಪ್ರತಮ ರಾತ್ರಿಗೂ ಇದೇ ಕನಸು ಬಿದ್ದು ಮನಸು ಕೆಡಿಸಿ ನಿದ್ದೆ ಇರೆದೆ ಕೋಪದ ಕಂಗಣ್ಣಿನಲ್ಲಿ ಎದ್ದು ಬಂದವನಿಗೆ ಮನೆಯವರು 'ನಿದ್ದೆ ಇರದೇ ಆಗಿರಬಹುದಾದದ್ದನ್ನೆಲ್ಲಾ ಊಹಿಸಿ' ರೇಗಿಸಿದ್ದು ಇನ್ನಷ್ಟು ಕೋಪ ಉದ್ರೇಕಿಸಿತ್ತು .ಅದೇ ಬೇಜಾರಲ್ಲೆ ಸಿಕ್ಕ ಸಿಕ್ಕ ಸ್ನೇಹಿತರಿಗೆಲ್ಲಾ ಉಗಿದು ಕೇಳಿದ್ದಕ್ಕೆ ಅವರಿತ್ತ ಉತ್ತರ ನನ್ನನ್ನೇ ತತ್ತರಿಸಿತು.

ಉರ್ದು ಬಾರದ ಬಹಳಷ್ಟು ಸ್ನೇಹಿತರು ಉರ್ದುವಿನಲ್ಲಿದ್ದ ನನ್ನ ಹೆಸರನ್ನು ಓದಲಾಗದೆ ಕೈ ಚೆಲ್ಲಿದ್ದರು. ವರ-ವಧುವೇ ಗೊತ್ತಿರದ ಮೇಲೆ ಮದುವೆ ಆಮಂತ್ರಣದಲ್ಲಿ ಉಳಿದ ವಿಷಯಕ್ಕೇನು ಮಹತ್ವ ಎಂದು ಬಿಟ್ಟಿದ್ದರಿಂದ ಅಲ್ಲಿಂದ ಗುರುತು ಸಿಕ್ಕಬಹುದಾದ ಸಾಧ್ಯತೆಯೂ ಇರಲಿಲ್ಲ. ಒಂದಷ್ಟು ಜನ ಪತ್ರಿಕೆ ತಲುಪಿಯೇ ಇಲ್ಲವೆಂದು ವಾದಿಸಿ ಮೆಸೇಜ್ ತೋರಿಸಿದ ಮೇಲೆ ಒಪ್ಪಿಕೊಂಡರು. ಎಲ್ಲಾ ವಿವರಿಸಿದ ಮೇಲೆ "ಅಲ್ಲಾ ಒಂದ್ ಕಾಲ್ ಮಾಡೋದಲ್ವಾ ಮಾರಾಯ ಅಷ್ಟೂ ಇಲ್ಲದೆ ಯಾರ್ ಬರ್ತಾರೆ" ಎಂದು ಮತ್ತೊಂದಿಷ್ಟು ಮಂದಿ ಸಮಾದಾನ ಪಡಿಸಿದರು. "ನಿಜವಾಗಲೂ ಮದ್ವೆ ಆಯ್ತೇನೋ, ಏನಾದ್ರೂ ಆಗ್ಲಿ ಪಾರ್ಟಿ ಕೊಡ್ಸು ನಡಿ" ಎಂದು ಜೋಬು ಲೂಟಿ ಮಾಡಿ ತಾವು ಬರದಿದ್ದರೂ ಅಪರಾದಿಗಳು ಅಲ್ಲವೇ ಅಲ್ಲ ಎಂದು ಸಾಲೀಸಾಗಿ ಸಾದಿಸಿದರು. ಅಂತೂ ಬಹಳಷ್ಟು ಜನ ಪ್ರಮಾಣಿಕರಾಗೆ ಉತ್ತರಿಸಿದರೆಂದು ನಾನೂ ಒಪ್ಪಲೇಬೆಕು. ಅಲ್ಲಿ ಇಲ್ಲಿ ಸಿಕ್ಕವರನ್ನೆಲ್ಲ ಪ್ರಶ್ನಿಸಿ ಆದದ್ದು 'ಸಂವಹನದ ತೊಂದರೆಯಷ್ಟೇ' ಎಂದು ಖಾತ್ರಿ ಮಾಡಿಕೊಳ್ಳುತಿದ್ದವನು ಸಂಜಯ್ ಜೊತೆ ಮಾತನಾಡಿದ ನಂತರವಂತೂ ಮತ್ತಿನ್ನಾರನ್ನೂ ಇದರ ಬಗ್ಗೆ ಕೇಳುವ ಗೋಜಿಗೆ ಹೋಗಲಿಲ್ಲ. ರವಿ ಮಾತ್ರ ಒಂದಷ್ಟು ದಿನ ಈ ರಗಳೆ ಇಂದ ರೋಸಿ 'ಹಳೆ' ಸ್ನೇಹಿತನಾಗಿ ಮತ್ತೊಂದು ಕ್ರಾಂತಿಯ ಹುಚ್ಚಾಟದೊಂದಿಗೆ ಬಂದು, ಸೇರಿಕೊಂಡ 'ಹಳೆ' ವಿಶೀಷಣ ಅಳಿಸಿಕೊಂಡ. ಯಾವ ಮಾತಿಗೂ ಮುಂಚೆ ಹಾಸ್ಯ ಚಟಾಕಿ ಹಾರಿಸಿ ನಂತರ ಮಾತಿಗಿಳಿಯುವುದು ಸಂಜಯನ ಗುಣ. ಯಾವುದೋ ಕೆಲಸಕ್ಕೆಂದು ಅವನ ಬಳಿ ಹೋದಾಗ ಮುಖ ಕಂಡವನೇ

"ಹೇಯ್! ಏನ್ ಮೆಸೇಜ್ ಕಳ್ಸಿದ್ದೆ ಮಗ. ಸೂಪರ್! ಯವಾನೋ ಮ್ಯಾರೇಜ್ ಇನ್ವಿಟೇಷನ್ ಮೇಲೆ ಉರ್ದುನಲ್ಲಿ ಹೆಸ್ರಾಕ್ಸವ್ನಲ್ಲಾ? ಇಲ್ಲಾ ಕನ್ನಡದಲ್ಲಿರ್ಬೇಕು ಇಲ್ಲಾ ಉರ್ದುನಲ್ಲಿರ್ಬೇಕು ಇವನ ಯಾರೋ ಮಿಕ್ಸೆಡ್ ಬ್ರೀಡ್ ?" ಎಂದು ಕೇಳಿ ಕಾಮಿಡಿ ಕ್ಲಿಕ್ ಆದಂತೆ ಕಿಸಕಿಸನೆ ನಕ್ಕ. ಕೆಲಸಕ್ಕೆ ಮಣ್ಣು ಹಾಕೆಂದುಕೊಂಡು ಉರಿಯುತ್ತಿದ್ದ ಮೈ ಬಿಗಿ ಮಾಡಿ ತೆಲೆ ನೆಲಕ್ಕಂಟಿಸಿದವನಂತೆ ಅಂದು ವಾಪಾಸ್ ಆದವನು ಇನ್ನೆಂದಾದರೂ ಯಾರೊಂದಿಗಾದರೂ ಆ ವಿಷಯವೆತ್ತಿದ್ದರೆ ಕೇಳಿ.

--------------------------------------------------------------------------------------------------------------------------------------------------------------------

ಈ ಲೇಖನದ  ಬಗೆಗಿನ ತಮ್ಮ ವಿಮರ್ಶೆ /ಅಭಿಪ್ರಾಯವನ್ನು ಈ ಲಿಂಕ್ ನಲ್ಲಿನ ಫಾರಂ ಮೂಲಕ ತಿಳಿಸಿ. ಉತ್ತಮ ವಿಮರ್ಶೆಗೆ ಸೂಕ್ತ ಬಹುಮಾನವಿದೆ.  http://goo.gl/forms/co4uXhT4Ld

ಲೇಖಕರ ವಿಳಾಸ :cs.ravikumar89@gmail.com

ಮೊಬೈಲ್ ಸಂಖ್ಯೆ: 7795561838

 

 

Comments

Submitted by ವಿಶ್ವ ಪ್ರಿಯಂ Tue, 11/04/2014 - 18:06

Nice one Ravi. The way you have woven the entire story is very nice. The sentence formation is good enough to hold the reader for a while. Enjoyed everything until I came across "there will be a prize for a good review". Review is not to impress the writer but to reveal the fact. when there is an award, people try to hide the reality. (or they just don't bother about reality).

Submitted by ravics89 Tue, 11/04/2014 - 18:36

In reply to by ವಿಶ್ವ ಪ್ರಿಯಂ

ನಮಸ್ತೇ ವಿಶ್ವ ಪ್ರಿಯ. ತಮ್ಮ ಪ್ರೂತ್ಸಾಹಬರಿತ ಅಭಿಪ್ರಾಯಕ್ಕಾಗಿ ಮನಃಪೂರ್ವಕ ಧನ್ಯವಾದಗಳು. ಇದು ನನ್ನ ಪ್ರಥಮ ಲೇಖನವಾಗಿದ್ದು ಓದುಗರ ದೃಷ್ಟಿಕೋನದಿಂದ ಯಾವ ರೀತಿಯ ಸಾಲುಗಳು ಮುದ ನೀಡುತ್ತವೆ, ಯಾವುದನ್ನು ಉತ್ತಮಪಡಿಸಬಹುದು, ಕತೆ ಕಟ್ಟುವ ಪ್ರಯತ್ನದಲ್ಲಿ ಪರಿಗಣಿಸಬೇಕಾದ ಅಂಶಗಳು ಯಾವುವು ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಬಯಸಿ ಪ್ರತಿಕ್ರಿಯೆ ಕೇಳಿದೆ. ಇದರ ಸಂಪೂರ್ಣ ವಿಮರ್ಶೆಗೆ ಓದುಗರೂ ಸ್ವಲ್ಪ ಸಮಯ ವಿನಿಯೋಗಿಸಬೇಕಾದ್ದರಿಂದ ಪ್ರತಿಯಾಗಿ ಏನನ್ನಾದರೂ ಕೊಡಬಯಸಿದೆ. ವಿಮರ್ಶೆ ಲೇಖಕನನ್ನು ಮೆಚ್ಚಿಸಲು ಇರದೇ ಲೇಖನದ ಉತ್ತಮ, ಕೆಟ್ಟ ಅಂಶಗಳೆಲ್ಲವನ್ನೂ ಅವಲೋಕಿಸಿ ಉತ್ತಮ ಬರವಣಿಗೆಗಾಗಿ ಮಾರ್ಗಸೂಚಿಯಾಗಲು ಸಹಕರಿಸುತ್ತದೆಂದು ಈ ಸೂತ್ರ ಅಷ್ಟೇ.