ನನ್ನ ಮಾತು ಒಂದಿಷ್ಟು ಕೇಳಿ!

ನನ್ನ ಮಾತು ಒಂದಿಷ್ಟು ಕೇಳಿ!

ನಾನು ನಿಮ್ಮೆಲ್ಲರನ್ನೂ ಕಾಯುತ್ತಿರುವ, ಸಾಕುತ್ತಿರುವ, ಪ್ರತಿ ಕ್ಷಣವೂ ನಿಮ್ಮನ್ನು ಉಳಿಸಿಕೊಳ್ಳುತ್ತಿರುವ ಮೂಕ ರಕ್ಷಕನಾಗಿದ್ದೇನೆ. ನೀವು ಉಸಿರಾಡುತ್ತಿರುವ ಆಮ್ಲಜನಕದಿಂದ ಹಿಡಿದು ಕುಡಿಯುವ ನೀರಿನವರೆಗೆ, ಮನೆ ಕಟ್ಟಲು ಬೇಕಾಗುವ ಕಚ್ಚಾ ವಸ್ತುಗಳಿಂದ ಹಿಡಿದು, ಓಡಾಡಲು ಬೇಕಾದ ರಸ್ತೆಯವರೆಗೂ ಎಲ್ಲವನ್ನು ಒದಗಿಸಿರುವೆ. ನನ್ನೊಡಲ ಸರ್ವಸ್ವವನ್ನೂ ನಿಮಗೆ ಅರ್ಪಿಸಿದ್ದೇನೆ. ನಾನು ನಿಮ್ಮ ಭೂಮಿ.

ಹಾಗಿದ್ದರೂ, ಮೇಲೂ ನಿಮಗೆ ಯಾಕಿಷ್ಟು ದುರಾಸೆ ನನ್ನ ಮೇಲೆ ಯಾಕಿಷ್ಟು ದೌರ್ಜನ್ಯ? ನನ್ನ ದೇಹದ ಪ್ರತಿಯೊಂದು ಅಂಗವನ್ನು ಅಗೆದು ಬಗೆದು ಮುಗಿಸುವರೆಗೂ ನಿಮಗೆ ಸಮಾಧಾನ ಆಗುವಂತೆ ಕಾಣುತ್ತಿಲ್ಲ. ನನ್ನ ದೇಹದ ಬಹುಮುಖ್ಯ ಭಾಗವಾದ ಅರಣ್ಯ ನಿಮಗೇನು ಕಡಿಮೆ ಮಾಡಿದೆ? ವಿಷದಂತಿರುವ ಕಾರ್ಬನ್ ಡೈಆಕ್ಸೆನ್ನು ಹೀರಿಕೊಂಡು ನಿಮಗೆ ಉಸಿರಾಡಲೂ ಬೇಕಾದ ಪ್ರಾಣವಾಯು ಆಮ್ಲಜನಕ ನೀಡಿದೆ. ಹಲವು ರೀತಿಯ ತಿನಿಸುಗಳನ್ನು, ಹಣ್ಣು, ಕಾಯಿ, ಬೇರು ಮತ್ತು ಆಹಾರ ಮೂಲಗಳನ್ನು ಒದಗಿಸಿದೆ. ನೀವಿರುವ ಪರಿಸರವನ್ನು ಸಮತೋಲಿತವಾಗಿಡಲು ಬೇಕಾದ ಎಲ್ಲವನ್ನೂ ನೀಡಿದರೂ ನಿಮ್ಮ ದುರಾಸೆ ಮಾತ್ರ ಅಂತ್ಯಗೊಂಡಿಲ್ಲ.

ನರನೆ ಇರಲಿ ನನ್ನ ಮೇಲೆ ಸ್ವಲ್ಪವಾದರೂ ಕರುಣೆ: ಧರೆಯೆ ಹತ್ತಿ ಉರಿಯತೊಡಗೆ ಬದುಕಲೆಲ್ಲಿ ಓಡುವೆ? ಪರಿಣಾಮವಾಗಿ ನೀವು ಸಧ್ಯಕ್ಕೆ ಅನುಭವಿಸುತ್ತಿರುವ ಪ್ರವಾಹ ಮತ್ತು ಭೂಕೂಸಿತಗಳೇ ಇದಕ್ಕೆ ಮೂಕ ಸಾಕ್ಷಿ. ನೀವು ನನ್ನನ್ನು ಬಹು ಲಘುವಾಗಿ ಪರಿಗಣಿಸಿದ್ದೀರಿ. ಅರಣ್ಯ ನಾಶದಿಂದ ನಮ್ಮ ಸೂಕ್ಷ್ಮ ಸಮತೋಲನತನಕ್ಕೆ ಧಕ್ಕೆಯಾಗಿ ಹವಾಮಾನ ವೈಪರೀತ್ಯ ಮೀತಿ ಮೀರಿರುವುದರ ಪರಿಣಾಮವೇ ಇದು. ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಕೊನೆಗೆ, ಅಂದರೆ ಎಲ್ಲವೂ ಕೈ ಮೀರಿ ಹೋದಾಗ 'ಪ್ರಾಕೃತಿಕ ವಿಕೋಪ' 'ಮುನಿದ ಪ್ರಕೃತಿ' 'ಭೂತಾಯಿಗೆ ಕೋಪ' ಎನ್ನುತ್ತಾ ವಿವಿಧ ವಿಶೇಷಣಗಳನ್ನು ಬಳಸಿ, ನನ್ನನ್ನೇ ತೆಗಳುತ್ತೀರಿ.

ನೀವು ನನ್ನ ಮಕ್ಕಳಾಗಿದ್ದು, ನನಗೆ ನಿಮ್ಮ ಮೇಲೆ ಸಿಟ್ಟಿಲ್ಲ. ನನ್ನಲ್ಲಿ ಆಗಾಧವಾದ ತಾಳ್ಮೆ ಇದೆ. ಅದು ಕಟ್ಟೆಯೊಡೆದಾಗ ಮಾತ್ರ ಹೀಗಾಗುತ್ತದೆ. ನಾನಾದರೂ ಎಷ್ಟು ಸಹಿಸಿಕೊಳ್ಳಲಿ? ನೀವು ನನ್ನನ್ನು ರಕ್ಷಿಸುವುದೆಂದರೆ ನಿಮ್ಮನ್ನು ನೀವೆ ರಕ್ಷಿಸಿಕೊಳ್ಳುವುದು ಎಂದರ್ಥ. ಈ ಸತ್ಯ ನಿಮಗ್ಯಾಕೆ ಅರ್ಥವಾಗುತ್ತಿಲ್ಲ? ಸ್ವಯಂ ಪ್ರೇರಣೆಯಿಂದ ನೀವೆಲ್ಲ ಒಗ್ಗಟ್ಟಾಗಿ ನನ್ನ ಒಳಿತಿಗಾಗಿ ನಿಂತಾಗ ಮಾತ್ರ ನಿಮಗೆ ಒಳಿತಾಗಬಲ್ಲದು.

ನನ್ನ ನೈಸರ್ಗಿಕ ಆವಾಸ ಸ್ಥಾನಗಳನ್ನು ಸಂರಕ್ಷಿಸಿ, ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯುವುದನ್ನು ಕೈಬಿಡಿ; ಅನಗತ್ಯ ಎನಿಸುವ ಅಭಿವೃದ್ಧಿ ಕೆಲಸಗಳ ನೆವ ಮಾಡಿಕೊಂಡು ದಡ್ಡರಂತಾಡುವುದನ್ನು ಬಿಡಿ. ತಿಳಿದೂ ತಪ್ಪು ಮಾಡಬೇಡಿ. ನನ್ನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಗೌರವಿಸಿ, ನನ್ನ ಒಡಲನ್ನು ಬರಿದು ಮಾಡಬೇಡಿ. ನಿಮ್ಮ ಮುಂದಿನ ಪೀಳಿಗೆಗೆ ನನ್ನಲ್ಲಿನ ಸಂಪತ್ತಿನ ಸ್ವಲ್ಪ ಭಾಗವನ್ನಾದರೂ ಉಳಿಸಿ. ಮುಂದಿನ ಜನರೂ ನಿಮ್ಮ ರೀತಿ ಸುಖವಾಗಿರಬೇಕೆಂಬ ವಿಚಾರ ನಿಮ್ಮ ಮನದಲ್ಲಿರಲಿ, ಅದನ್ನು ಗಮನದಲ್ಲಿಟ್ಟುಕೊಂಡೇ ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನು ಹತ್ತಿ. ಈ ಮೂಲಕ ನಿಮ್ಮ 'ಸುಸ್ಥಿರ ಅಭಿವೃದ್ಧಿ'ಯೂ ಸಾಧ್ಯವಾಗುವುದು. ಕೊನೆ ಮಾತು, ನನ್ನ ತಾಳ್ಮೆ ಪರೀಕ್ಷಿಸಬೇಡಿ. ಏಕೆಂದರೆ, ನಿಮ್ಮೆಲ್ಲರನ್ನೂ ನನ್ನ ಒಡಲಲ್ಲಿ ಹಾಕಿಕೊಂಡು ನಿಮ್ಮನ್ನು ಪಳೆಯುಳಿಕೆಗಳನ್ನಾಗಿ ಮಾಡುವ ತಾಕತ್ತು ನನಗಿದೆ. ನಿಮಗೆಲ್ಲ ಒಳ್ಳೆಯದಾಗಲಿ.

-ಚಿದಾನಂದ ಪರದಾಳೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ