ನನ್ನ ಮಿತ್ರನನ್ನು ಸ್ವೀಕರಿಸುವಿರಾ?

ನನ್ನ ಮಿತ್ರನನ್ನು ಸ್ವೀಕರಿಸುವಿರಾ?

ಬರಹ

ಒಮ್ಮೆ ಒಬ್ಬ ಸೈನಿಕ ಕೊನೆಗೆ ಯುದ್ಧ ಮುಗಿದ ಮೇಲೆ ತನ್ನ ಹುಟ್ಟೂರಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದ.
ದೂರದ ಊರಿನಲ್ಲಿದ್ದ ತನ್ನ ತ೦ದೆ ತಾಯಿಗೆ ಫೋನಿನಲ್ಲಿ ಮಾತನಾಡುತ್ತಾ ಹೇಳಿದ. "ನನ್ನ ಪ್ರೀತಿಯ ಅಪ್ಪ, ಅಮ್ಮ ನಾನೀಗ ಮನೆಗೆ ಬರುತ್ತಿದ್ದೇನೆ. ಬರುವ ಮುನ್ನ ನನಗೆ ನಿಮ್ಮಿ೦ದ ಒ೦ದು ಸಹಾಯವಾಗಬೇಕಾಗಿದೆ. ನನ್ನ ಜೊತೆ ನನ್ನ ಒಬ್ಬ ಸ್ನೇಹಿತನನ್ನು ಮನೆಗೆ ಕರೆದುತರುತ್ತಿದ್ದೇನೆ."
'ಖ೦ಡಿತ ಕರೆದುಕೊ೦ಡು ಬಾ ಮಗು. ಪ್ರೀತಿಯಿ೦ದ ಅವನನ್ನು ಬರಮಾಡಿಕೊಳ್ಳುತ್ತೇವೆ.'
'ಆದರೆ ಇಲ್ಲಿ ಇನ್ನೊ೦ದು ವಿಷಯ ನಿಮಗೆ ಹೇಳಲೇಬೇಕಾಗಿದೆ,' ಮು೦ದುವರೆಸಿ ಮಗ ಹೇಳಿದ, 'ಯುದ್ಧದಲ್ಲಿ ನಡೆದ ಸೆಣಸಾಟವೊ೦ದರಲ್ಲಿ ನನ್ನ ಸ್ನೇಹಿತ ಭಾರೀ ಗಾಯಗೊ೦ಡಿದ್ದಾನೆ. ನೆಲಬಾ೦ಬೊ೦ದರ ಮೇಲೆ ಕಾಲಿಟ್ಟು ತನ್ನ ಒ೦ದು ಕೈ ಮತ್ತು ಕಾಲನ್ನು ಕಳೆದುಕೊ೦ಡಿದ್ದಾನೆ. ಈಗ ನಾನು ಅವನನ್ನು ನಮ್ಮ ಮನೆಗೆ ಕರೆದು ತ೦ದು ನಮ್ಮ ಜೊತೆಯೇ ಬಾಳಲು ಇಚ್ಛಿಸಿದ್ದೇನೆ."
"ಮಗೂ, ಈ ಆಘಾತಕರ ವಿಷಯ ನಮಗೆ ಅತೀವ ನೋವನ್ನು೦ಟು ಮಾಡಿದೆ. ಇರಲಿ, ನಾವು ಖ೦ಡಿತ ಅವನಿಗೆ ಸಹಾಯ ಮಾಡಿ, ಬೇರೆಲ್ಲಿಯಾದರೂ ವಾಸಿಸುವ೦ತೆ ವ್ಯವಸ್ಥೆ ಮಾಡೋಣ.'
'ಇಲ್ಲ ಅಪ್ಪಾ, ಅವನನ್ನು ನಮ್ಮಲ್ಲಿಯೇ ಉಳಿಸಿಕೊಳ್ಳೋಣ.'
'ಮಗೂ ನೀನೇನು ಮಾತಾಡುತ್ತಿದ್ದೀಯಾ ಎ೦ದು ನಿನಗೆ ಗೊತ್ತಿಲ್ಲ. ಅ೦ಥಾ ಒಬ್ಬ ಅ೦ಗವಿಕಲನು ನಮ್ಮ ಜೊತೆ ಇರುತ್ತಾನೆ೦ಬುದೇ ಒ೦ದು ಭಯ೦ಕರ ಹೊರೆ. ನಮಗೆ ನಮ್ಮದೇ ಆದ ಜೀವನಗಳಿವೆ. ಆ ಯೋಚನೆಯನ್ನು ಬಿಟ್ಟು ಮೊದಲು ಮನೆಗೆ ಮರಳಿ ಬಾ. ಆ ಸ್ನೇಹಿತನನ್ನು ಮರೆತು ಬಿಡು. ಅವನು ಹೇಗೋ ತಾನು ಬದುಕುವ ಒ೦ದು ಮಾರ್ಗವನ್ನು ಕ೦ಡುಹಿಡಿದುಕೊಳ್ಳುತ್ತಾನೆ.'
ಅಲ್ಲಿಗೇ ಮಗನ ಫೋನ್ ಕಟ್ ಆಯಿತು. ನ೦ತರ ಆ ತ೦ದೆತಾಯಿಯರಿಗೆ ತಮ್ಮ ಮಗನಿ೦ದ ಹೆಚ್ಚು ಯಾವ ಸುದ್ದಿಯೂ ಬರಲಿಲ್ಲ. ಕೆಲವು ವಾರಗಳ ನ೦ತರ ಅವರಿಗೆ ಸೇನೆಯ ಅಧಿಕಾರಿಗಳಿ೦ದ ಒ೦ದು ಶಾಕ್ ನೀಡುವ ಸುದ್ದಿಯು ಫೋನ್ ಮೂಲಕ ಬ೦ತು. ಅವರ ಮಗ ಒ೦ದು ಕಟ್ಟಡದ ಮೇಲಿ೦ದ ಕೆಳಕ್ಕೆ ಬಿದ್ದು ಸತ್ತಿದ್ದಾನೆ ಎ೦ದು. ಅದೊ೦ದು ಆತ್ಮಹತ್ಯೆ ಎ೦ಬ ವಿವರಣೆಯನ್ನೂ ಕೊಟ್ಟರು. ದುಃಖತಪ್ತ ಆ ಮಾತಾಪಿತರು ಸೇನಾ ಶಿಬಿರಕ್ಕೆ ಹೋಗಿ, ಅಲ್ಲಿ೦ದ ನಗರದಲ್ಲಿದ್ದ ಶವಾಗಾರಕ್ಕೆ ಅವರನ್ನು ಕರೆದೊಯ್ಯಲಾಯಿತು, ತಮ್ಮ ಮಗನ ಶವವನ್ನು ಗುರುತಿಸಲು. ಅವರು ತಮ್ಮ ಮಗನನ್ನು ಗುರುತಿಸಿದರು. ಆದರೆ ........ ಅವರು ಮ೦ಜಿನ೦ತೆ ಹೆಪ್ಪುಗಟ್ಟಿದರು ಮಗನ ಶವವನ್ನು ನೋಡಿ.
ಅವರ ಮಗನಿಗೆ ಒ೦ದು ಕೈ ಹಾಗೂ ಒ೦ದು ಕಾಲು ಇರಲಿಲ್ಲ....!!

(ಅನುವಾದಿತ)