ನನ್ನ ಮೊದಲ ಶಿಕ್ಷಕಿ

ನನ್ನ ಮೊದಲ ಶಿಕ್ಷಕಿ

1990ರ ವರೆಗೆ ಬೇಸಾಯಗಾರರ ಮನೆಯ ಮಕ್ಕಳು ಹೊಲ ಮತ್ತು ಮನೆ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದುದು ಅನಿವಾರ್ಯವಾಗಿತ್ತು. ಆದ್ದರಿಂದ ಬೇಸಾಯಗಾರರ ಮನೆಯಲ್ಲಿ ಹಿರಿಯ ಮಗನಾಗಿ ಹುಟ್ಟಬಾರದು, ವೈದಿಕರ ಮನೆಯಲ್ಲಿ ಹಿರಿಯ ಮಗಳಾಗಿ ಹುಟ್ಟಬಾರದು ಎಂಬ ಗಾದೆಯೇ ಹುಟ್ಟಿಕೊಂಡಿತ್ತು. ನಾನೇನೂ ಹಿರಿಯ ಮಗನಲ್ಲ ಆದ್ದರಿಂದ ನನಗೆ ಅಂತಹ ಕಷ್ಟವೇನೂ ಇರಲಿಲ್ಲ. ಆದರೆ ಅಪ್ಪ ಅಮ್ಮನೊಡನೆ ಅತಿ ಹೆಚ್ಚು ದಿನ ಇದ್ದವನು ನಾನೇ. ಅದ್ದರಿಂದ ಅವರು ನನಗೆ ಕಲಿಸುತ್ತಾ ಹೋದರು ನಾನು ಕಲಿಯುತ್ತಾ ಹೋದೆ. ನನ್ನ ಅಪ್ಪನ ಗುರುತ್ವದ ಬಗ್ಗೆ ಕಳೆದ ವರ್ಷ ಬರೆದುಕೊಂಡಿದ್ದೆ. ಈ ವರ್ಷ ಅಮ್ಮನಿಗೆ.

ನನ್ನ ಅಮ್ಮ ಬಹಳವೇನೂ ಓದಿಲ್ಲ. ಆದರೆ ಆ ಕಾಲದಲ್ಲಿ ಏಳನೆಯ ತರಗತಿ ಓದಿರಬೇಕು. ನಾನು ನಿಖರವಾಗಿ ಕೇಳಿಲ್ಲ. ಏಕೆಂದರೆ ನನಗೆ ಅಮ್ಮ ಒಬ್ಬಳು ಗುರುವಾದ ಕಾರಣ ನನಗೆ ಅಮ್ಮನ ಡಿಗ್ರಿಯ ಅಗತ್ಯ ಕಂಡಿಲ್ಲ. ಅಪ್ಪನ ಹಾಗೆ ಅಮ್ಮನೂ ನನಗೆ ವಿಜ್ಞಾನ ಶಿಕ್ಷಕಿ.  ನನ್ನ ಪ್ರೌಢ ಶಿಕ್ಷಣದ ಕಾಲದಲ್ಲಿ ಸತ್ಯನಾರಾಯಣ ಸರ್ ಪೆಟ್ರೋಲಿಯಂನ ಆಂಶಿಕ ಅಸವನ (fractional distillation) ಬಗ್ಗೆ ಹೇಳುತ್ತಿದ್ದರು. ನನಗೆ ಅರ್ಥವಾಗಿರಲಿಲ್ಲ. ಅಧ್ಯಾಪಕರ ಕೊಠಡಿಗೆ ಹೋಗಿ ಕೇಳಿದೆ. ಸರ್ ಆಂಶಿಕ ಅಸವನ ಹೇಗೆ ನಡೆಯುತ್ತದೆ ಎಂದು. ಆಗ ಅವರು ಹೇಳಿದ್ದರು "ಏಯ್ ಅದು ಅಮ್ಮ ಉಪ್ಪಿಟ್ಟಗೆ ಒಗ್ಗರಣೆ ಹಾಕಿದ ಹಾಗೆ". ಮನೆಗೆ ಬಂದು ಒಗ್ಗರಣೆ ಹಾಕುವಂತೆ ಒತ್ತಾಯಿಸಿದೆ. ಅಮ್ಮ ಎಲ್ಲಾ ಸಿದ್ದ ಮಾಡಿಕೊಂಡಳು. ಎಣ್ಣೆ ಕಾಯಲಿಟ್ಟಳು. ಅಮ್ಮ ಎಣ್ಣೆ ಬಿಸಿಯಾಯ್ತು ಒಗ್ಗರಣೆ ಹಾಕು ಎಂದೆ. ಆಗುವುದಿಲ್ಲ ಎಣ್ಣೆ ಹೊಗೆಯಾಡಬೇಕು (fuming temperature) ಎಂದಳು. ಅದು ಕುದಿಯುವುದು ಬೇಡವೇ? ಎಂದು ಕೇಳಿದೆ. ಇಲ್ಲ ಅಡುಗೆ ಎಣ್ಣೆ ಕುದಿದರೆ ನೀಲಿ ಆವಿ ಬರುತ್ತದೆ ಅದು ಅಪಾಯಕಾರಿ ಎಂದಿದ್ದಳು. ಇದನ್ನು ಡಿಗ್ರಿ ಓದುತ್ತಿದ್ದಾಗ ರಸಾಯನಶಾಸ್ತ್ರದಲ್ಲಿ ಕೃಷ್ಣ ಭಟ್ಟರು essential ಮತ್ತು non essential oil ಗಳ ಬಗ್ಗೆ ಕಲಿಸುವಾಗ ತಳಹದಿಯಾಯಿತು. ಎಣ್ಣೆ ಹಬೆಯಾಡಲು ಆರಂಭವಾದ ಕೂಡಲೇ ಸಾಸಿವೆ, ಸಾಸಿವೆ ಸಿಡಿದಾಗ ಬೇಳೆ, ಬೇಳೆ ಗರಿಗರಿಯಾದಾಗ ಬೇವು, ಬೇವು ಬಾಡಿದಾಗ, ಹಸಿ ಮೆಣಸು, ಮೆಣಸು ಬಾಡಿದಾಗ ಈರುಳ್ಳಿ, ಈರುಳ್ಳಿ ಪಾರದರ್ಶಕವಾದಾಗ ನೀರು ಹಾಕಿದಳು. ನಾನು ಅಮ್ಮನಲ್ಲಿ ಎಲ್ಲ ಒಟ್ಟಿಗೆ ಹಾಕಿದರೆ ಏನು ತಪ್ಪು ಎಂದು ಕೇಳಿದ್ದೆ. ನೋಡು ಒಂದೊಂದೇ ಹಾಕಿದ ಹಾಗೆ ಎಣ್ಣೆಯ ಬಿಸಿ (ಉಷ್ಣತೆ) ಕಡಿಮೆಯಾಗುತ್ತಾ ಹೋಗುತ್ತದೆ. ಈರುಳ್ಳಿ ಹಾಕಿದ ಮೇಲೆ ಸಾಸಿವೆ ಸಿಡಿಯುವುದಿಲ್ಲ ಎಂದಿದ್ದಳು. ಆಗ ನನಗೆ ಸರಿಯಾಗಿ ಅರ್ಥವಾದದ್ದು ಆಂಶಿಕ ಅಸವನದಲ್ಲಿ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಪೆಟ್ರೋಲಿಯಂ ನ ಘಟಕಗಳು ಏಕೆ ಸಿಗುತ್ತವೆ ಎಂದು. 

ಕುಕ್ಕರನ್ನು ಬೇಗನೇ ತೆರೆಯಲು ನನ್ನ ಹೆಂಡತಿ ಒಂದು ಸೌಟಿನ ಸಹಾಯದಿಂದ ಅದರ ಭಾರವನ್ನು ಎತ್ತುತ್ತಾಳೆ. ಮೊದಲು ಬುಸ್ಸೆಂದು ಬರುವ ಉಗಿ ನಂತರ ಗಂಜಿಯಾಗಿ ಹೊರ ಚಿಮ್ಮಿ ರಾಡಿಯಾಗುತ್ತದೆ. ಆದರೆ ನನ್ನಮ್ಮ ಕುಕ್ಕರ್ ಲಿಡ್ ನ ಮೇಲೆ ಒಂದು ಬಟ್ಟೆ ಹಾಕಿ ಅದರ ಮೇಲೆ ನೀರು ಸುರುವುತ್ತಾಳೆ. ಆಗ ಕುಕ್ಕರ್ ನ ಒತ್ತಡ ಇಳಿದು ಹೋಗುತ್ತದೆ. ಇದನ್ನು ನೋಡಿದೆ ಮೇಲೆ ನನಗೆ ರಸಾಯನ ಶಾಸ್ತ್ರದ ಆದರ್ಶ ಅನಿಲಗಳ ವರ್ತನೆಯ (behavior of ideal gasses) ಅರ್ಥವಾದದ್ದು ನನ್ನ ಹೆಂಡತಿಯದ್ದು ಬಾಯ್ಲನ ನಿಯಮ (Boyle's law) ಮತ್ತು ಅಮ್ಮನದ್ದು ಚಾರ್ಲ್ಸನ ನಿಯಮ (Charlie's law) ಎಂದು.

ಮಕ್ಕಳಿಗೆ ಸಿಹಿ ಎಂದರೆ ಇಷ್ಟವಿದ್ದ ಕಾಲ ಅದು. ಆಗ ಪಾಯಸವೇ ದೊಡ್ಡ ಸಿಹಿ. ಅಮ್ಮ ಪಾಯಸ ಮಾಡುವಾಗ ನಾನು ಒಲೆಯ ಬಳಿಯಲ್ಲಿಯೇ ಕಾದಿರುತ್ತಿದ್ದೆ. ಏಕೆಂದರೆ ನನಗೆ ಸಿಹಿ ಸರಿಯಾಗಿದೆಯೇ ನೋಡಲು ಅವಕಾಶವಿತ್ತು. ಆಗ ಅಮ್ಮ ಬೆಲ್ಲ ಸೇರಿಸಿದ ಕೂಡಲೇ ಪಾಯಸ ಕುದಿಯುವುದು ನಿಂತು ಹೋಗುತ್ತಿತ್ತು. ಅದು ಏಕೆ ಎಂದು ಅಮ್ಮನ ಬಳಿ ಕೇಳಿದರೆ ಸಕ್ಕರೆ ಮಾತ್ರವಲ್ಲ ಉಪ್ಪು ಹಾಕಿದರೂ ಕುದಿಯುವುದು ನಿಲ್ಲುತ್ತದೆ ಎಂದು ಆಸಕ್ತಿ ಕೆರಳಿಸಿದ್ದಳು. ಆ ಮೇಲೆ ನಾನು ಪದವಿಯಲ್ಲಿ ಕುದಿಯುವ ಮತ್ತು ಕರಗುವ ಬಿಂದುವಿನ ಮೇಲೆ ಕಲ್ಮಶಗಳ ಪಾತ್ರ (influence of impurities on melting and boiling point) ತಿಳುವಳಿಕೆಗೆ ಕಾರಣ ನನ್ನಮ್ಮ.

ಒಮ್ಮೆ ನಾನು ಫ್ರಿಟ್ಜ್ ನ ಫ್ರೀಜರ್ ನಲ್ಲಿರುವ ಅಂಟಿಕೊಂಡ ಪಾತ್ರೆಯನ್ನು ಎತ್ತಲು ಹೋದಾಗ ಅಲ್ಲಿಯೇ ಇದ್ದ ಅಮ್ಮ ಅದನ್ನು ಎತ್ತಬೇಡ ಒತ್ತಿ ತೆಗೆ ಎಂದಿದ್ದಳು. ಆಗಲೇ ನಾನು ಅಧ್ಯಯನ ಶುರುಮಾಡಿದ್ದು ಕರಗುವ ಬಿಂದುವಿನ ಮೇಲೆ ಒತ್ತಡದ ಪ್ರಭಾವದ (influence of pressure on melting or freezing point) ಬಗ್ಗೆ.

ಮಿಶ್ರಣದ ಘಟಕಗಳನ್ನು ಬೇರ್ಪಡಿಸುವ ಅಮ್ಮನ ಕ್ರಮಗಳಾದ ಮೊಸರು ಕಡೆಯುವುದು, ಕೇರುವುದು, ಅಕ್ಕಿ ಮತ್ತು ನುಚ್ಚನ್ನು ಬೇರ್ಪಡಿಸುವುದು, ನೀರನ್ನು ಬಳಸಿಕೊಂಡು ಅಕ್ಕಿಯಿಂದ ಕಲ್ಲನ್ನು ಬೇರ್ಪಡಿಸುವುದು, ಹೊಟ್ಟಿನಿಂದ ಕಾಳುಗಳನ್ನು ಬೇರ್ಪಡಿಸುವುದು. ಎಲ್ಲವೂ ನನ್ನಮ್ಮನ ಪಕ್ಕಾ ವೈಜ್ಞಾನಿಕ ಕ್ರಮಗಳು. ನಾನು ತರಗತಿಯಲ್ಲಿ ವಿನ್ಹೋವಿಂಗ್, ಸೆಂಟ್ರಿಫ್ಯಗೇಶನ್, ಓರ್ ಕಾನ್ಸೆಂಟ್ರೇಶನ್ ಗಳ ಬಗ್ಗೆ ವಿವರಿಸುವಾಗ ನನ್ನೊಳಗೆ ನನ್ನ ಅಮ್ಮ ಇರುತ್ತಾಳೆ. ಇದಲ್ಲದೇ ಅಡುಗೆಯಲ್ಲಿ ಹುಳಿಯ ಬಳಸಬೇಕಾದ ಪ್ರಮಾಣವನ್ನು ತಿಳಿಸುವ ನನ್ನಮ್ಮನಿಗೆ ಈ ತಟಸ್ಥೀಕರಣ (neutralisation), ದ್ರಾವಣಗಳ ಪ್ರಬಲತೆಯ ಬಗ್ಗೆ ತಿಳಿಸಿದ ಶಾಲೆ ಯಾವುದು ಎಂದು ನನಗೆ ಇವತ್ತಿಗೂ ತಿಳಿದಿಲ್ಲ.

ಶ್ರೇಷ್ಠ ಶಿಕ್ಷಣ ತಜ್ಞ ಜಾನ್ ಡ್ಯೂಯಿ Education ಶಬ್ದ educere ನಿಂದ ಬಂದಿದೆ ಎನ್ನುತ್ತಾರೆ. ಅಂದರೆ ಹೊರತರವುದು ಎಂದರ್ಥ. Education ಎಂದರೆ ಹೆರಿಗೆ ಅದನ್ನು ಹೆರುವುದು ವಿದ್ಯಾರ್ಥಿ ಸೂಲಗಿತ್ತಿ ಶಿಕ್ಷಕ ಎನ್ನುತ್ತಾರೆ ಡಾ. ಬಿ. ಎಂ ಹೆಗ್ಡೆ. the manifestation of the divine perfection already existing in man, not the acquisition of external facts ಎನ್ನುತ್ತಾರೆ ಸ್ವಾಮಿ ವಿವೇಕಾನಂದ. ಇಲ್ಲಿ ಕಲಿಕೆಯನ್ನುಂಟು ಮಾಡುವ ಸೂಲಗಿತ್ತಿಯಾದ ನನ್ನಮ್ಮನನ್ನು ನನ್ನ ಮೊದಲ ಶಿಕ್ಷಕಿ ಎಂದು ಪರಿಚಯಿಸಲು ನನಗೆ ಹಿಂಜರಿಕೆ ಖಂಡಿತವಾಗಿಯೂ ಇಲ್ಲ. ನನ್ನ ಜೀವನದ ಮೊದಲ ಮತ್ತು ನಿರಂತರ ಗುರುವಾದ ನನ್ನ ಅಮ್ಮ ಮತ್ತು ಎಲ್ಲಾ ಎಲ್ಲ ಗುರುಗಳಿಗೂ ಶಿಕ್ಷಕ ದಿನಾಚರಣೆಯ ಶುಭಾಶಯಗಳು.

-ದಿವಾಕರ ಶೆಟ್ಟಿ ಎಚ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ