ನನ್ನ ವೃತ್ತಿ ಜೀವನದ ನೆನಪುಗಳು

ನನ್ನ ವೃತ್ತಿ ಜೀವನದ ನೆನಪುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಇಂಗ್ಲಿಷ್ ಮೂಲ: ಸರ್. ಎಂ. ವಿಶ್ವೇಶ್ವರಯ್ಯ, ಕನ್ನಡಕ್ಕೆ : ಡಾ. ಗಜಾನನ ಶರ್ಮ
ಪ್ರಕಾಶಕರು
ಅಂಕಿತ ಪುಸ್ತಕ, ಗಾಂಧಿಬಜಾರ್ ಮುಖ್ಯ ರಸ್ತೆ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ರೂ. ೯೦.೦೦, ಮುದ್ರಣ: ೨೦೦೫

ಬದುಕಿದ್ದ ಸಮಯದಲ್ಲೇ ದಂತಕತೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಆತ್ಮಕಥೆ ‘Memoirs of my working life’ ಅನ್ನು ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ ಎಂವಿ ಅವರ ದೂರದೃಷ್ಟಿತ್ವದ ವ್ಯಕ್ತಿತ್ವ ಮತ್ತು ಸೃಜನಶೀಲತೆಯ ಪರಿಚಯ ಎಲ್ಲರಿಗೂ ಇದೆ. ಅವರ ಜೀವನದ ಬಗ್ಗೆ ಅವರದ್ದೇ ಮಾತುಗಳಲ್ಲಿ ಓದುವ ಬಯಕೆ ಇದ್ದರೆ ಈ ಪುಸ್ತಕವನ್ನು ಓದಬಹುದಾಗಿದೆ.

ಸರ್ ಎಂವಿ ಅವರು ಈ ಪುಸ್ತಕವನ್ನು ಬರೆದದ್ದು ೧೯೫೧ರಲ್ಲಿ. ಅವರು ಆ ಸಮಯದಲ್ಲಿ ಪುಸ್ತಕ ಪ್ರಕಟಣೆಯ ಮೊದಲ ಮುದ್ರಣದ ಸಮಯದಲ್ಲಿ ಬರೆದ ಮುನ್ನುಡಿಯಲ್ಲಿ ಬರೆಯುತ್ತಾರೆ. “ ಭಾರತ ದೇಶದ ಜನಸಂಖ್ಯೆಯು ನಾನು ಕಂಡಂತೆ ನನ್ನ ಜೀವಿತ ಕಾಲದಲ್ಲಿಯೇ ದ್ವಿಗುಣಗೊಂಡಿದೆ. ಹೇಳಿಕೊಳ್ಳುವುದಕ್ಕೆ ನಮ್ಮ ದೇಶವು ಕೃಷಿ ಪ್ರಧಾನ ದೇಶವೇ ಆಗಿದ್ದರೂ ಹೆಚ್ಚುತ್ತಿರುವ ಜನಸಂಖ್ಯೆಗೆ ಸರಿದೂಗುವಷ್ಟು ಆಹಾರೋತ್ಪಾದನೆ ನಡೆಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ದೇಶದ 'ಶ್ರಮಿಕ ಶಕ್ತಿ'ಯ ಮಟ್ಟವು ಗಾಬರಿ ಹುಟ್ಟಿಸುವಷ್ಟು ಕೆಳಮಟ್ಟದಲ್ಲಿದೆ. ಸ್ವಾತಂತ್ರ್ಯದಿಂದ ನಮಗೆ ಒಳಿತು ಲಭಿಸಬೇಕೆಂದರೆ, ಜನತೆಯ ಸ್ವಭಾವದಲ್ಲಿ, ಅದರಲ್ಲೂ ಮುಖ್ಯವಾಗಿ ರೂಢಿಗತ ವಾಡಿಕೆಗಳಲ್ಲಿ, ವಿದ್ಯಾಭ್ಯಾಸದಲ್ಲಿ, ಜಗತ್ತಿನ ಸಂಗತಿಗಳ ಜ್ಞಾನ ಸಂಪಾದನೆಯಲ್ಲಿ ಮತ್ತು ದುಡಿಮೆಯ ಸಾಮರ್ಥ್ಯದಲ್ಲಿ ಶೀಘ್ರ ಪರಿವರ್ತನೆ ಉಂಟಾಗಬೇಕಿದೆ. ಜನತೆಯು ಹೆಚ್ಚು ದುಡಿದು ಹೆಚ್ಚು ಉತ್ಪತ್ತಿ ಮಾಡಬೇಕಿದೆ.”

ಸರ್ ಎಂವಿ ಇವರು ೭೦ ವರ್ಷಗಳ ಹಿಂದೆ ಬರೆದ ಈ ಮಾತುಗಳು ಈಗಿನ ಕಾಲಕ್ಕೂ ಅನ್ವಯವಾಗುವಂತಿವೆ. ನಮ್ಮ ಜನಸಂಖ್ಯೆಯ ಪ್ರಮಾಣ ಈಗಲೂ ಜಾಸ್ತಿಯೇ ಇದೆ. ಕೊರತೆಗಳ ಸರಮಾಲೆ ಈಗಲೂ ಇವೆ. ವಿಶ್ವೇಶ್ವರಯ್ಯನವರು ಬೆನ್ನುಡಿಯಲ್ಲಿ ಒಂದು ಮಾತು ಹೇಳಿದ್ದಾರೆ. ಅದು ಎಲ್ಲರ ಕಣ್ಣು ತೆರೆಸುವ ಮಾತು. “ಯಾವುದೇ ವ್ಯಕ್ತಿ -ವ್ಯವಹಾರಗಳಲ್ಲಿ ಯಶಸ್ವಿಯಾಗುವುದು ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಮುಂದಾಲೋಚನೆಗಳನ್ನು ಆಧರಿಸಿರುತ್ತದೆ. ಮನುಷ್ಯನ ಬದುಕಿನ ಯಶಸ್ಸಿಗೆ ಅವನ ಪರಿಶ್ರಮವೇ ಆಧಾರ. ಯಾವ ಮನುಷ್ಯನ ಬದುಕಿನ ಸಿದ್ಧಾಂತವು ನೋವನ್ನು ತಪ್ಪಿಸಿಕೊಂಡು ಕೇವಲ ಸಂತಸ ಅನುಭವಿಸುವುದಾಗಿದೆಯೋ ಆತ ಅಪಯಶಸ್ಸು ಗಳಿಸುವುದು ಶತಃಸಿದ್ಧ. ಸುಖ ದುಃಖಗಳೆರಡನ್ನೂ ಸಮನಾಗಿ ಸ್ವೀಕರಿಸುವುದು ಬದುಕಿನ ನಿತ್ಯ ನಿರಂತರ ಯಶಸ್ಸಿನ ಸಿದ್ಧಸೂತ್ರ.”

ಸರ್ ಎಂವಿಯವರ ಜೀವನದ ಪ್ರಮುಖ ಘಟ್ಟಗಳನ್ನು ಪುಸ್ತಕದ ಪ್ರಾರಂಭದಲ್ಲೇ ಪಟ್ಟಿ ಮಾಡಿದ್ದಾರೆ. ಪರಿವಿಡಿಯಲ್ಲಿ ೧೯ ಅಧ್ಯಾಯಗಳಿವೆ. ಸರ್ ಎಂವಿ ಅವರು ಸರಕಾರಿ ಸೇವೆಗೆ ಪ್ರಥಮ ಪ್ರವೇಶ ಮಾಡುವ ಅಧ್ಯಾಯದಿಂದ ಪುಸ್ತಕ ಪ್ರಾರಂಭವಾಗುತ್ತದೆ. ಅವರ ಹಲವಾರು ನೆನಪುಗಳು ಈ ಪುಸ್ತಕದಲ್ಲಿ ಅಡಕವಾಗಿವೆ. ಅಂದಿನ ಕಾಲದ ಸರಕಾರಿ ಕಾರ್ಯಾಲಯಗಳು, ಅಲ್ಲಿ ನಡೆಯುವ ಕೆಲಸದ ವಿವರಗಳು ಎಲ್ಲವೂ ಈ ಪುಸ್ತಕ ಓದುವುದರಿಂದ ನಮಗೆ ತಿಳಿದು ಬರುತ್ತದೆ.

ಇಂಗ್ಲಿಷ್ ಭಾಷೆಯಲ್ಲಿ ಸರ್ ಎಂವಿ ಇವರು ಸುಮಾರು ಐದು ದಶಕಗಳ ಹಿಂದೆ ಬರೆದ ಪುಸ್ತಕವನ್ನು ೨೦೦೫ರಲ್ಲಿ ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸುಮಾರು ೧೮೦ ಪುಟಗಳಿರುವ ಈ ಪುಸ್ತಕದಲ್ಲಿ ಸರ್ ಎಂವಿ ಅವರ ವೃತ್ತಿ ಜೀವನದ ಸಮಯದ ಹಳೆಯ ಭಾವಚಿತ್ರಗಳು ಇದ್ದಿದ್ದರೆ ಪುಸ್ತಕಕ್ಕೆ ಇನ್ನಷ್ಟು ಕಳೆ ಬರುತ್ತಿತ್ತು. ಖ್ಯಾತ ಕಲಾವಿದ ಹಾದಿಮನಿಯವರು ಪುಸ್ತಕದ ಮುಖಪುಟಕ್ಕೆ ಸುಂದರವಾದ ಚಿತ್ರವನ್ನು ಬಿಡಿಸಿಕೊಟ್ಟಿದ್ದಾರೆ.