ನನ್ನ ಹೆತ್ತವಳು

ನನ್ನ ಹೆತ್ತವಳು

ಬರಹ

ಕಣ್ತೆರೆದೊಡನೆ ತಬ್ಬಿ ಆಶ್ರಯಿಸಿದಳು,
ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು,
ನಗುತ್ತ ಕೇಕೆ ಹಾಕುವಾಗ ನಲಿದವಳು
ನನ್ನ ಹೆತ್ತವಳು.

ತೆವಳುತ್ತಾ ಬರುವಾಗ ’ಬಾ’ ಎಂದು ಕೈ ಚಾಚಿದವಳು,
ತೊದಲುತ್ತಾ ನುಡಿದಾಗ ತಿದ್ದಿ ಮಾತು ಕಲಿಸಿದವಳು,
ಉಣ್ಣಲು ಅತ್ತಾಗ ಚಂದದಾ ಕಥೆಕಟ್ಟಿ ಹಸಿವ ತೊರೆಸಿದವಳು,
ನನ್ನ ಹೆತ್ತವಳು

ಕಲಿಕೆಗೆ ಸ್ಪೂರ್ತಿಯಾಗಿ ಕಲಿಯಲು ಪ್ರೇರೇಪಿಸಿದವಳು
ಕಲಿತೊಡನೆ ಮೆಚ್ಚಿ ಬಿರುದುಗಳ ಮಳೆ ಸುರಿದವಳು
ಕುಣಿಯೆಂದು ಹೇಳಿ ಕುಣಿಯದಿದ್ದಾಗ ತಾನೂ ಕುಣಿದವಳು
ನನ್ನ ಹೆತ್ತವಳು

ನನ್ಹೆತ್ತು ಹೊತ್ತು,ಹೊತ್ತೊತ್ತಿಗೆ ಆರೋಗ್ಯ ಮಾಡಿದವಳು
ಎಂದೂ ಬಾರದ ಜ್ವರಬಂದಾಗ ಕಂಬನಿಯಿಟ್ಟು ಮದ್ದು ನೀಡಿದವಳು
ನೂರೂರ ಚಂದಮಾಡಿ ನೀನೆ ಚಂದವೆಂದು ಹೊಗಳಿದವಳು
ನನ್ನ ಹೆತ್ತವಳು

ಅರಿಯದೆ ತಪ್ಪಾಗಿ ನಡೆದಾಗ ಕೊಂಕಾಡಿ ಕೆಣಕಿ ರೇಗಿದವಳು
ಮತ್ತೆ ,ಯವ್ವನದಿ ಇದು ಸಹಜವೆಂದು ತನ್ನ ಭುಜಗಳಲ್ಲಿ ತಲೆಯಿಡಿಸಿ ಮುದ್ದಿಸಿದವಳು
ಎಂದೆಂದೂ ಸಿಗದ ಮಮತೆಯ ನೀಡಿದವಳು
ನನ್ನ ಹೆತ್ತವಳು

ಎಲ್ಲವೂ ಮುಗಿಯಿತು ಇನ್ನು ನಿನ್ನದೇ ಹೊಣೆ ಎಂದು ಕೈ ಸೋತಳು
ಅದೇಕೋ ಅಂದು ತನ್ನಲ್ಲಿಯೆ ಇರೆಂದು ಹಠಮಾಡಿದವಳು
ಬರುವೆನೆಂದು ಹೊರಟೊಡನೆ ಕಂಬನಿಯಿಟ್ಟು ,
ಬದುಕು ಬಂಗಾರವಾಗಲಿ ಎಂದು ಹರಸಿದಳು
ನನ್ನ ಹೆತ್ತವಳು

ಅದೇಕೋ ಇಂದು ಎಲ್ಲರಿಂದ ಮರೆಯಾಗಿರುವಳು
ಕಾಣದ ಊರಿಗೆ ಅತಿಥಿಯಾಗಿ ಪ್ರಯಾಣ ಬೆಳೆಸಿರುವಳು
ತನ್ನೂರಿಗೆ ತನ್ನವರನ್ನು ಬಿಟ್ಟು ತಾನೊಬ್ಬಳೇ ಹೊರಟಳು
ಕೊನೆಗೆರೆಡು ಮಾತನ್ನೂ ಆಡದೆ ಕಣ್ಮರೆಯಾದಳು
ನನ್ನ ಹೆತ್ತವಳು

ಸಿಗುತಿಲ್ಲ ಪದಗಳಿಂದು ಆಕೆಯ ಬಣ್ಣಿಸಲು
ಬಾಳ ಚೇತನ ಇವಳು
ಕೊನೆಗೆರಡೇ ಮಾತು ನನ್ನವು
ನನ್ನ ಮೌನವೇ ಅವಳಿಗೆ ನಮನಗಳು
ಸದಾ ಮನದಿ ಚಿಲುಮೆ ಅವಳು
ನನ್ನ ಹೆತ್ತವಳು!!!