ನನ್ ಟೈಮ್ ಸರಿಯಿಲ್ಲ ಅಷ್ಟೇ !

ನನ್ ಟೈಮ್ ಸರಿಯಿಲ್ಲ ಅಷ್ಟೇ !

ಟೈಮ್ ಸರಿಯಿಲ್ಲ, ಇದು ನಾವು ಕೇಳುವ ದೂರು . ನಮ್ಮ ಅರಿವುಗೇಡಿತನದಿಂದ ಅಥವಾ ಬೇರಾವುದಾರೂ ಕಾರಣದಿಂದ  ಬರುವ ಸಂಕಷ್ಟಗಳಿಗೆ ಸುಲಭ ಮತ್ತು ಪುಕ್ಕಟೆಯಾಗಿ ಸಮಯವನ್ನೂ ಜರೆಯುವುದು, ದೂರುವುದು ನಮ್ಮ ತಾತ ಮುತ್ತಾತಂದಿರು ನಮಗೆ ಬಳುವಳಿಯಾಗಿ ನೀಡಿದ ಜಾಯಮಾನ.  ಇಂದು ಬೆಳಿಗ್ಗೆ ನಮ್ಮ ಕಂಪೆನಿಯಲ್ಲಿ ಸೇಲ್ಸ್ ವಿಭಾಗದಲ್ಲಿ  ಕೆಲಸ ಮಾಡುವ ಒಬ್ಬರು ಬಂದು ಹೇಳಿದರು, ನಿನ್ನೆ ರಾತ್ರಿ ನನ್ನ ಲ್ಯಾಪ್ ಟಾಪ್ ಕಳುವಾಯಿತು. ಫ್ಲಾಟ್ ಹೊರಗೆ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಕಳ್ಳತನ ಮಾಡಿದರು ಎಂದು ಹೇಳಿ ಏನು ಮಾಡೋದು, ನನ್ನ ಟೈಮ್ ಸರಿಯಿಲ್ಲ ಅಷ್ಟೇ ಎಂದು ಮರುಗಿದರು. ಈ ರೀತಿಯ ಕಹಿ ಅನುಭವ ಈ ವ್ಯಕ್ತಿಗೆ ಮೊದಲನೆಯದಲ್ಲ. ಕಳೆದ ವರ್ಷ ಅವರ ಫ್ಲಾಟ್ ಒಳಕ್ಕೆ ನುಗ್ಗಿ ಪತ್ನಿಯ ಒಡವೆಗಳನ್ನು ಕದ್ದೊಯ್ದಿದ್ದರು ಕಳ್ಳರು.  ಆದರೆ ಈ ಕಳ್ಳತನದ ಬಗ್ಗೆ ಮಾತ್ರ ಅವರಿಗೆ ನಿಖರವಾದ ಮಾಹಿತಿ ಇತ್ತು. ಅವರಿಗೆ ಹೊಸತಾಗಿ ಪರಿಚಯವಾಗಿದ್ದ ವ್ಯಕ್ತಿ ಮಾಡಿದ್ದೆಂದು ಅವರಿಗೆ ಚೆನ್ನಾಗಿ ತಿಳಿದಿದ್ದರೂ ಪೊಲೀಸರಿಗೆ ದೂರು ಕೊಡಲು ಹೆದರಿದರು. ಏಕೆಂದರೆ ಇಲ್ಲಿನ ಪೊಲೀಸರು ಲಂಚ, ವಶೀಲಿ ಬಾಜಿಗೆ ಬೀಳದೆ ಮುಲಾಜಿಲ್ಲದೆ ಬಾಯಿ ಬಿಡಿಸಿ ಬಿಡುತ್ತಾರೆ. ಆ ವ್ಯಕ್ತಿಯ ವಿರುದ್ಧ ದೂರು ನೀಡಿದರೆ ನಾಳೆ ಭಾರತದಲ್ಲಿ ತನಗೆ ತೊಂದರೆ ಆಗಬಹುದು ಎಂದು ಹೆದರಿ ಪೊಲೀಸ್ ದೂರು ಕೊಡಲು ಒಪ್ಪಲಿಲ್ಲ. ಎಲ್ಲಾ ನನ್ ಟೈಮ್ ಅಷ್ಟೇ ಎಂದು ಕೈ ಚೆಲ್ಲಿ ಕೂತ ಅವರಿಗೆ ನಾನು ಹೇಳಿದೆ, ನಾವು ಟೈಮ್ ಅನ್ನು ದೂರುವುದು ಸರಿಯಲ್ಲ. ಜೀವನದಲ್ಲಿ ಅದೇನು ಸಂಭವಿಸಬೇಕೋ ಅದು ಆಗಿಯೇ ತೀರುತ್ತದೆ. ನಮ್ಮಿಂದ ಅದನ್ನು  ತಡೆಯಲು ಸಾಧ್ಯವಿಲ್ಲ. ಎಲ್ಲದಕ್ಕೂ ದೇವರ ಮೊರೆ ಹೋಗಬೇಕೆ ಹೊರತು ಸಮಯವನ್ನೂ ದೂರುವುದು ಸರಿಯಲ್ಲ ಎಂದು ನಯವಾಗಿ ಹೇಳಿದೆ. ಆದರೆ ಬೆಲೆ ಬಾಳುವ ವಸ್ತುಗಳನ್ನು ಕಳೆದು ಕೊಂಡ ಆತ ಮಾತ್ರ ‘ಸಮಯ’ ದ ಪರವಾಗಿ ನಿಂತ ನನ್ನ ನಿಲುವನ್ನು ಒಪ್ಪಿದಂತೆ ಕಾಣಲಿಲ್ಲ.


ಮೇಲೆ ಹೇಳಿದ ರೀತಿಯ ಘಟನೆಗಳನ್ನು ನಾವು ದಿನವೂ ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಒಂದರ ಹಿಂದೆ ಒಂದು ಅವಘಡಗಳು ಸಂಭವಿಸಿದರಂತೂ ಕೇಳಬೇಡಿ’ ಟೈಮ್’ ನ ಗೋಳು. ಸಮಯದ ಜನ್ಮ ಜಾಲಾಡುತ್ತಾರೆ. ಪರಿಹಾರ ಕಾಣಲೆಂದು ಜ್ಯೋತಿಷ್ಯರ,  ಮಂತ್ರವಾದಿಗಳ  ಮೊರೆಯೂ ಹೋಗುತ್ತಾರೆ. ತಂತ್ರ ಯಂತ್ರ ಕಟ್ಟಿಸಿ ಕೊಳ್ಳಲು ಎಂದು  ಮತ್ತಷ್ಟು ಕಳೆದುಕೊಳ್ಳುತ್ತಾರೆ. ಆದರೆ ನಮಗೆದುರಾಗುವ ಎಲ್ಲಾ ಪ್ರಾರಬ್ದ ಗಳಿಗೂ ನಿಜವಾಗಿಯೂ ‘ಟೈಮ್’’ ಅಥವಾ ಕೆಟ್ಟ ಘಳಿಗೆ ಕಾರಣವೇ?  


ಕಾಲವನ್ನು  ಸಂವತ್ಸರ ಎಂದು ಕರೆಯುತ್ತಾರೆ. ವತ್ಸರ ಎಂದರೆ ದೇವರು. ಅಂದರೆ ಕಾಲವೇ ದೇವರು. ಸಂವತ್ಸರ ಎಂದರೆ ವರ್ಷ ಎಂದಲ್ಲ. ಪ್ರತೀ ಕ್ಷಣ, ನಿಮಿಷ, ಘಂಟೆಗಳು ಸಂವತ್ಸರವೇ. ಏಕೆಂದರೆ ಈ ಕ್ಷಣ, ನಿಮಿಷ, ಘಂಟೆಗಳಿಂದ ದಿನಗಳು, ತಿಂಗಳುಗಳಾಗಿ ವರ್ಷ ಎಂದೆನ್ನಿಸಿ ಕೊಳ್ಳುತ್ತದೆ. ಅಂದರೆ ನಾವು ನಮಗೆ ಎದುರಾಗುವ ಕಷ್ಟ, ದುಃಖ ದುಮ್ಮಾನಗಳಿಗೆ  ಸಮಯವನ್ನು ಹಳಿದರೆ ದೇವರನ್ನು ತೆಗಳಿದಂತಾಗುತ್ತದೆ, ಅಲ್ಲವೇ?    


ತೃಣಮಪಿ ನಃ ಚಲತಿ. ದೇವನ ಅಪ್ಪಣೆಯಿಲ್ಲದೆ ಹುಲ್ಲೂ ಕೂಡ ಚಲಿಸದು ಎನ್ನುವ ಅರ್ಥದ ಈ ಮಾತು ಇಸ್ಲಾಂ ಧರ್ಮೀಯರ “ಪವಿತ್ರ ಕುರ್’ಆನ್” ನಲ್ಲಿಯೂ ಇದೆ. ಪ್ರತೀ ಕಾರ್ಯವೂ, ಪ್ರತೀ ಘಟನೆಯೂ, ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಘಟನೆಗಳು ದೇವನ ಅಪ್ಪಣೆಯಿಲ್ಲದೆ ನಡೆಯುವುದಿಲ್ಲ ಎಂದು ಆಸ್ತಿಕರು ಬಲವಾಗಿ ನಂಬುವರು. ಅದರಲ್ಲೂ ಮುಸ್ಲಿಮರಲ್ಲಿ ಈ ನಂಬಿಕೆ ಹೆಚ್ಚು. ಯಾವುದೇ ತೆರನಾದ ಅವಘಡಕ್ಕೂ ಕಾಲವನ್ನಾಗಲಿ, ದುರದೃಷ್ಟ ವನ್ನಾಗಲೀ ಟೀಕಿಸಲು, ಶಪಿಸಲು ಹೋಗದೆ ಎಲ್ಲಾ ದೈವೇಚ್ಛೆ ಎಂದು ಇರುವುದರಲ್ಲೇ ತೃಪ್ತಿ ಕಾಣುತ್ತಾರೆ. ಒಮ್ಮೆ ಪಾಶ್ಚಾತ್ಯ ದೇಶವೊಂದರ ಯಾತ್ರಿಯೊಬ್ಬ (ನೆದರ್ ಲ್ಯಾಂಡ್ಸ್ ನ van der post ಎಂದು ನನ್ನ ನೆನಪು) ಸಹರಾ ಮರುಭೂಮಿಯ ಮುಖಾಂತರ ಪ್ರಯಾಣ ಬೆಳೆಸಿದಾಗ ಮೊರಾಕ್ಕೋ ದೇಶಕ್ಕೆ ಸೇರಿದ ಮರುಭೂಮಿಯಲ್ಲಿ ಒಂದು ದೃಶ್ಯ ಕಾಣಲು ಸಿಗುತ್ತದೆ.  ಮರುಭೂಮಿಯಲ್ಲಿ ವಾಸಿಸುವ ಬೆದೂಯಿನ್ (bedouin) ಬುಡಕಟ್ಟಿನವರು ಒಂದು ಕಡೆ ತಾತ್ಕಾಲಿಕ ಡೇರೆ ಹಾಕಿದ್ದನ್ನು ಈತ ಕಾಣುತ್ತಾನೆ. ಅವರೊಂದಿಗೆ ಹರಟುತ್ತಾ ಇದ್ದಾಗ ಒಮ್ಮೆಗೆ ಈ ಬಿರುಗಾಳಿ ಅಪ್ಪಳಿಸಿ ಕುರಿ, ಕೋಳಿ, ಒಂಟೆ, ಡೇರೆ, ಸಾಮಾನು ಪಾತ್ರೆ ಪಗಡಿ ಎಲ್ಲವನ್ನೂ ಬಾಚಿಕೊಂಡು ಹೋಗಿ ಬಿಡುತ್ತದೆ. ಮರುಭೂಮಿಯ ಬಿರುಗಾಳಿ (sand storm) ಗೊತ್ತೇ ಇದೆಯಲ್ಲಾ. ತನ್ನ ಹಾದಿಗೆ ಅಡ್ಡ ಬರುವ ಯಾವುದನ್ನೂ ಬಿಡದೆ ಬಾಚಿಕೊಂಡು ಹೋಗುವ ಬಿರುಗಾಳಿ. ನಮಗೆ ಪರಿಚಯವಿರುವ ಸುಂಟರ ಗಾಳಿಯಂತೆ. ಸಾವಿರ ಸುಂಟರ ಗಾಳಿ ಕೂಡಿಕೊಂಡು ಧಾಳಿ ಮಾಡಿದರೆ ಹೇಗಿರುತ್ತೋ ಹಾಗಿರುತ್ತದೆ ಮರುಭೂಮಿಯ ಬಿರುಗಾಳಿ. ಸುಮಾರು ಹೊತ್ತಿನ ನಂತರ ಬಿರುಗಾಳಿಯ ಅಬ್ಬರ ನಿಂತ ಮೇಲೆ ಒಂದೇ ಒಂದು ಶಬ್ದವನ್ನೂ ಆಡದೆ, ತುಟಿ ಪಿಟಿಕ್ಕನ್ನದೆ ತಮ್ಮ ಕೆಟ್ಟ ಘಳಿಗೆಯನ್ನು ತೆಗಳದೆ, ಇದೊಂದು ಸಾಮಾನ್ಯ ಘಟನೆ ಎನ್ನುವ ಭಾವದಿಂದ  ಸಿಕ್ಕಿದ್ದೇ ಶಿವ ಎಂದು ಬೀಸಿದ ಬಿರುಗಾಳಿ ಅಳಿದುಳಿಸಿದ ಸಾಮಾನುಗಳನ್ನು ಅತ್ಯಂತ ಶ್ರದ್ಧೆಯಿಂದ, ಜೋಪಾನದಿಂದ, ಸಂಯಮದಿಂದ ಹೆಕ್ಕುತ್ತಿದ್ದನ್ನು ನೋಡಿದ ಈ ಪಾಶ್ಚಾತ್ಯ ದಂಗಾಗಿ ನಿಲ್ಲುತ್ತಾನೆ. ಕೆಲವೇ ಕ್ಷಣಗಳಲ್ಲಿ ತಮ್ಮ ಬದುಕನ್ನೇ ಮೂಲೋತ್ಪಾಟನೆ ಮಾಡಿದ ಬಿರುಗಾಳಿಯನ್ನು ಶಪಿಸದೇ, ಅತ್ಯಂತ ಸಮಯದಿಂದ ಸಹಿಸಿ, ಶಾಂತ ಚಿತ್ತತೆಯಿಂದ ಅಳಿದುಳಿದುದದನ್ನು ಆರಿಸಿ ಕೊಳ್ಳುತ್ತಿದ್ದ ಬೆದೂಯಿನ್ ರನ್ನು ಕಂಡು ಆತನಿಗೆ ತನ್ನ ಕಣ್ಣುಗಳ ನ್ನು ನಂಬಲಾಗಲಿಲ್ಲ. ಅಲ್ಲಿದ್ದ ಒಬ್ಬನಿಗೆ ಈ ಕುರಿತು ಕೇಳಿದಾಗ ಅವನು ಹೇಳಿದ್ದು, ನಮಗೆ ಈ ಸ್ಥಿತಿ ತಂದ ಬಿರುಗಾಳಿಯನ್ನು ನಾನು ಶಪಿಸಿ ಪಡೆಯುವುದಾದರೂ ಏನನ್ನು? ಹೋದ ಸಾಮಾನುಗಳು, ಆದ ನಷ್ಟ, ತಿರುಗಿ ಬರುತ್ತದೆಯೇ? ಹೆಚ್ಚು ವಿಳಂಬ ಮಾಡದೇ “ಅಲ್ಹಂದು ಲಿಲ್ಲಾಹ್’” (ದೇವರಿಗೆ ಸರ್ವಸ್ತುತಿ) ಎಂದು ಇರುವುದನ್ನು ಆರಿಸಿ ಕೊಂಡು ಮುಂದಿನ ದಾರಿ ನೋಡುವುದು ತಾನೇ ಜಾಣತನ ಎಂದು ಆತನಿಗೆ ಮರು ಪ್ರಶ್ನೆ ಹಾಕಿದಾಗ ಬಿಳಿಯ ಆ ಪ್ರಶ್ನೆಗೆ ಉತ್ತರ ಕಾಣದೆ ತನ್ನ ದೇಶದಲ್ಲಾಗಿದ್ದರೆ ಏನು ಮಾಡುತ್ತಿದ್ದರು ಎಂದು ಯೋಚಿಸುತ್ತಾ ತನ್ನ ದಾರಿ ಹಿಡಿಯುತ್ತಾನೆ.  


ಎಂಥದ್ದೇ ಗಂಭೀರವಾದ, ಕ್ಲಿಷ್ಟಕರವಾದ, ದಬ್ಬಾಳಿಕೆಗೆ ಒಳಗಾದಾಗ, ಮಾನಸಿಕ ಕ್ಲೇಶ, ದೈಹಿಕ ನೋವು, ಅಗಲಿಕೆ ಬಂದಾಗಲೂ ಅರಬರು ಹೇಳುವುದು “ಅಲ್ಹಂದು ಲಿಲ್ಲಾಹ್”, ಅಥವಾ “ನಿನ್ನಿಂದಲೇ ಬಂದೆವು, ನಿನ್ನಲ್ಲಿಗೇ ನಾವು ಮರಳುವೆವು, (ಇನಾ ಲಿಲ್ಲಾಹಿ ವಯಿನ್ನಾ ಇಲೈಹಿ ರಾಜಿಊನ್) ಎನ್ನುವ ಮಾತನ್ನು ಹೇಳುತ್ತಾರೆ. ವಿಶೇಷವಾಗಿ ನಿಧನದ ವಾರ್ತೆ ಕೇಳಿದಾಗ ಈ ಮಾತನ್ನು ಹೇಳಲೇ ಬೇಕು. ಅಯ್ಯೋ ಪಾಪ, ಯಾವಾಗ ಸತ್ರು, ಪಾಪ, ಎಷ್ಟು ಚೆನ್ನಾಗಿದ್ರು, ಚಿಕ್ಕ ವಯಸ್ಸು, ಸ್ವಲ್ಪ ಮೊದಲು ತಾನೇ  ಮಾತನಾಡಿಸಿದ್ದೆ.... ಎಂದೆಲ್ಲಾ ಬಡಬಡಿಸುವ ಗೋಜಿಗೆ ಅರಬರು ಹೋಗುವುದಿಲ್ಲ. ಏಕೆಂದರೆ ಎಲ್ಲವೂ ವಿಧಿಯ ಕೈಯ್ಯಲ್ಲಿ, ಆ ವಿಧಿಯನ್ನು ಕಾರ್ಯಗತ ಗೊಳಿಸುವವನೇ ಮೇಲೆ ಕೂತಿರುವ ಆ ಪರಮಾತ್ಮ. ಮತ್ತೊಂದು ಹದೀಸ್ ಸೂಕ್ತದಲ್ಲಿ “ಆದಮನ (ಆದಿ ಮಾನವ) ಮಗ ತಪ್ಪು ತಿಳಿದಿದ್ದಾನೆ. ಘಳಿಗೆಯನ್ನು ಅವನು ಶಪಿಸುತ್ತಾನೆ ಆದರೆ ನಾನೇ ಆಗಿದ್ದೇನೆ ಆ ಘಳಿಗೆ. ಒಳಿತು ಮತ್ತು ಎಲ್ಲವೂ ನನ್ನ ಕೈಗಳಿಂದಲೇ ಬರುತ್ತವೆ. ಮತ್ತು ಹಗಲನ್ನು ಹಿಂಬಾಲಿಸುವ ಇರುಳು ಸಹ ನನ್ನಿಂದಲೇ” ಎಂದು ದೇವರು ಹೇಳುತ್ತಾನೆ.       


ನಮ್ಮ ಅಜಾಕರೂಕತೆಯಿಂದ ಉಂಟಾಗುವ ಅನಾಹುತಗಳಿಗೆ ಸುಖಾ ಸುಮ್ಮನೆ ಸಮಯವನ್ನು ಶಿಲುಬೆಗೆ ಏರಿಸದೆ ಹೆಚ್ಚು ಜಾಗರೂಕರಾಗೋದೇ ಲೇಸು ಅಲ್ಲವೇ?

Comments