ನಮಗೆ ಒಂದು ಪಾಠ ಮತ್ತು ಎಚ್ಚರಿಕೆ ಆಗಬೇಕು…!
ರೈತರ ಪ್ರತಿಭಟನೆ ಮತ್ತು ಆಕ್ರೋಶ ಒಂದು ಕಡೆ, ಮುಸ್ಲಿಮರ ಆಕ್ರೋಶ ಪ್ರತಿಭಟನೆ ಮತ್ತು ರೊಚ್ಚು ಮತ್ತೊಂದು ಕಡೆ, ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಮತ್ತು ಕಿಚ್ಚು ಮಗದೊಂದು ಕಡೆ, ಬೆಲೆ ಏರಿಕೆಯ ಬಿಸಿ ಇನ್ನೊಂದು ಕಡೆ....ಪಠ್ಯ ಪುಸ್ತಕ ಕೇಸರಿಕರಣದ ವಿರುದ್ಧ ಹೋರಾಡುತ್ತಿರುವ ಇನ್ನೊಂದು ಸಂಘರ್ಷ... ಅದಕ್ಕೆ ವಿರುದ್ಧವಾಗಿ,
ಮಸೀದಿ ಕೆಡವಿ ಮಂದಿರ ಕಟ್ಟುವ ಸಾಂಪ್ರದಾಯಿಕ ಸಂಘಟನೆಗಳ ಹೋರಾಟ, ಹಿಜಾಬ್, ಹಲಾಲ್, ಅಜಾನ್ ಗಳ ವಿರುದ್ಧ ಸಿಡಿಯುತ್ತಿರುವ ಕೆಲವು ಕೇಸರಿ ಪಡೆ, ಪಠ್ಯ ಪುಸ್ತಕ ಸಂಪೂರ್ಣ ಪರಿಷ್ಕರಿಸುತ್ತಿರುವ ಸಮಿತಿ ಮತ್ತೊಂದು ಕಡೆ, ಹಿಂದುತ್ವ ಭಾರತಕ್ಕಾಗಿ ತುಡಿಯುತ್ತಿರುವ ಮತ್ತೊಂದಿಷ್ಟು ಸಂಸ್ಥೆಗಳು...
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಕರೆ ಕೊಡುತ್ತಿರುವ ಪ್ರಧಾನ ಮಂತ್ರಿಗಳು, ಎರಡು ರೀತಿಯಲ್ಲಿ ಇದನ್ನು ಅರ್ಥೈಸಲಾಗುತ್ತದೆ. ಈಗಿನ ಸರ್ಕಾರ ತಮ್ಮ ವಿರೋಧಿಗಳ ವಿರುದ್ಧ ಸೇಡಿನ ಮನೋಭಾವದ ಪ್ರದರ್ಶಿಸುತ್ತಿದೆ. ಅಥವಾ ಹಿಂದಿನ ತಪ್ಪುಗಳನ್ನು ಸರಿಪಡಿಸುತ್ತಿದೆ, ಎಲ್ಲೋ ವ್ಯವಸ್ಥೆ ದಾರಿ ತಪ್ಪುತ್ತಿದೆ ಎನಿಸುತ್ತಿಲ್ಲವೇ ?
ಆಡಳಿತ ಮಾಡುವವರಿಗೆ ಹಠ - ಪ್ರತಿಷ್ಠೆಗಿಂತ ಸಂಯಮ ಬಹಳ ಮುಖ್ಯ. ವಿರೋಧ ಪಕ್ಷಗಳಿಗಿಂತ ಹೆಚ್ಚು ಜವಾಬ್ದಾರಿ ಇರಬೇಕು. ಈಗ ನೋಡಿದರೆ ಆಡಳಿತ ಪಕ್ಷದ ಪ್ರಚೋದನೆ - ಅದಕ್ಕೆ ವಿರೋಧ ಪಕ್ಷಗಳ ಉದ್ವೇಗದ ಪ್ರತಿಕ್ರಿಯೆ ಎರಡೂ ಸೇರಿ ರಾಜಕೀಯ ಮತ್ತು ಅಭಿವೃದ್ಧಿಯ ಬಗ್ಗೆ ಜಾಗೃತರಾಗಿರುವ ಬಹಳಷ್ಟು ಜನರಿಗೆ ಒಂದು ರೀತಿಯ ಜಿಗುಪ್ಸೆ ಮೂಡಿದೆ. ಒಂದು ದೇಶದ ನಿಜವಾದ ಅಭಿವೃದ್ಧಿ ಎಂದರೆ… ಆ ದೇಶದ ಗಾಳಿ ನೀರು ಆಹಾರವನ್ನು ಒದಗಿಸುವ ಪ್ರಾಕೃತಿಕ ಸಂಪನ್ಮೂಲಗಳನ್ನು ಶುಧ್ದವಾಗಿ ಮತ್ತು ಯಥೇಚ್ಛವಾಗಿ ಉಳಿಸುವ ಮತ್ತು ಉಪಯೋಗಿಸುವ ವ್ಯವಸ್ಥೆ ರೂಪಿಸುವುದು…
ಆ ದೇಶದ ಪ್ರಜೆಗಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಅತ್ಯಂತ ಉತ್ತಮ ಗುಣಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುವುದು. ದೇಶದ ಎಲ್ಲಾ ಪ್ರಜೆಗಳಿಗೆ ಗರಿಷ್ಠ ಮಟ್ಟದ ರಕ್ಷಣೆ ನೀಡಿ ಅವರು ನೆಮ್ಮದಿಯಾಗಿ ನಿದ್ರಿಸುವಂತೆ ಮಾಡುವುದು. ದೇಶದ ಜನರಿಗೆ ವಸತಿ, ಆರೋಗ್ಯ, ಶಿಕ್ಷಣ, ಉದ್ಯೋಗ ಮುಂತಾದ ವಿಷಯಗಳಲ್ಲಿ ಅವರ ಬೇಡಿಕೆ ಮತ್ತು ಆಸಕ್ತಿಗೆ ತಕ್ಕಂತೆ ಅವಕಾಶ ಕಲ್ಪಿಸಿಕೊಡುವುದು. ದೇಶದ ಎಲ್ಲಾ ಜಾತಿ ಧರ್ಮ ಪಕ್ಷ ಭಾಷೆ ಸಮುದಾಯಗಳ ನಡುವೆ ಸಮನ್ವಯ ಸಾಧಿಸಿ ಸಾಮಾಜಿಕ ಸಾಮರಸ್ಯ ಸಾಧಿಸುವುದು. ದೇಶದ ಯುವ ಸಮುದಾಯ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ವಿಶ್ವ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಲು ಎಲ್ಲಾ ರೀತಿಯ ಅನುಕೂಲಗಳನ್ನು ಒದಗಿಸುವುದು. ಭ್ರಷ್ಟಾಚಾರ - ಸ್ವಜನ ಪಕ್ಷಪಾತಗಳಿಗೆ ಅವಕಾಶ ಇಲ್ಲದಂತ ಸಾಮುದಾಯಿಕ ಪ್ರಜ್ಞೆ ಜಾಗೃತಗೊಳಿಸುವುದು.
ಎಲ್ಲಕ್ಕಿಂತ ಮುಖ್ಯವಾಗಿ ಆ ದೇಶದ ಸಂವಿಧಾನವನ್ನು ಅದರ ಮೂಲ ಆಶಯವನ್ನು ಸಂಪೂರ್ಣ ಜಾರಿಗೊಳಿಸಲು ಆಡಳಿತ ವ್ಯವಸ್ಥೆ ಸಂಪೂರ್ಣ ಪ್ರಯತ್ನವನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಬದ್ದತೆಯಿಂದ ಮಾಡುವುದು. ಈ ನಿಟ್ಟಿನಲ್ಲಿ ಈಗಿನ ಸರ್ಕಾರ ಸರಿಯಾದ ಮಾರ್ಗವನ್ನು ಅನುಸರಿಸುತ್ತಿದೆಯೇ ಎಂಬುದನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ. ಹಿಂದಿನ ಸರ್ಕಾರಗಳದು ಈಗ ಮುಗಿದ ಅಧ್ಯಾಯ. ನಾವು ವಿಮರ್ಶಿಸಬೇಕಾಗಿರುವುದು ಈಗಿನ ಸರ್ಕಾರದ ರೀತಿ ನೀತಿಗಳನ್ನು. ಏಕೆಂದರೆ ಅದು ಮುಂದಿನ ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತದೆ. ಒಂದು ರೀತಿಯ ಹೊಂದಾಣಿಕೆ ಅಥವಾ ಸಮನ್ವಯ ಸಾಧಿಸದೆ ಸದಾ ಒಂದಲ್ಲ ಒಂದು ಸಂಘರ್ಷಗಳಲ್ಲಿ ಜನರ ಮನಸ್ಸುಗಳನ್ನು ತೊಡಗಿಸಿದರೆ ಆ ದೇಶ ನಿಧಾನವಾಗಿ ವಿನಾಶದ ಅಂಚಿಗೆ ಸಾಗುತ್ತದೆ ಎಂಬುದಕ್ಕೆ ವಿಶ್ವದಲ್ಲಿ ಅನೇಕ ಉದಾಹರಣೆಗಳಿವೆ. ಅದು ನಮಗೆ ಒಂದು ಪಾಠ ಮತ್ತು ಎಚ್ಚರಿಕೆ ಆಗಬೇಕು. ಎಲ್ಲವೂ ಮುಗಿದ ನಂತರ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಮೊದಲು ಬುದ್ದಿವಂತರಾದವರು ಮೊದಲೇ ಮುಂಜಾಗ್ರತೆ ವಹಿಸುವುದ ಜಾಣತನ. ದಯವಿಟ್ಟು ದೀರ್ಘವಾಗಿ ಮತ್ತೊಮ್ಮೆ ಯೋಚಿಸಿ ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ...
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ