ನಮಾಮಿ ಗಂಗೆ
“ಪರಿಸರ ಮಾಲಿನ್ಯದಲ್ಲಿ ಸರ್ಕಾರದ ಪಾತ್ರ ಎಷ್ಟಿದೆ, ಯಾವ ಯಾವ ಹಂತದಲ್ಲಿ ಯಾರು ಯಾರು ಎಷ್ಟು ಕಮಿಷನ್ ತಿನ್ನುತ್ತಾರೆ, ಮತ್ತೆ ಒಂದು ಸಣ್ಣ ಸಮಸ್ಯೆ ನಿರ್ಲಕ್ಷಿಸಿದರೆ ಅದು ಮುಂದೆ ಹೇಗೆ ಒಂದು ಸರ್ಕಾರದ ಪತನಕ್ಕೆ ಕಾರಣಾವಾಗುತ್ತೆ ಎಂಬುದನ್ನು ತೀರಾ ಸಾಮಾನ್ಯವಾಗಿ, ನೇರವಾಗಿ ಅರ್ಥವಾಗುವಂತೆ ಕೆ.ಆರ್. ಚಂದ್ರಶೇಖರ್ ಅವರು ಬರೆದಿದ್ದಾರೆ" ಎನ್ನುವುದು ನನ್ನ ಅನಿಸಿಕೆ.
ʻನಮಾಮಿ ಗಂಗೆʼ ಪುಸ್ತಕ ನನ್ನ ಕೈ ಸೇರಿ ಸುಮಾರು ತಿಂಗಳುಗಳೇ ಕಳೆದಿದ್ದರೂ, ಎರಡು ಬಾರಿ ಅರ್ಧ ಓದಿ ಅನಿವಾರ್ಯ ಮತ್ತು ಅಗತ್ಯ ಕೆಲಸಗಳಿಂದ ಮುಂದೆ ಓದಲು ಸಾಧ್ಯವಾಗಿರಲಿಲ್ಲ. ಈ ವಾರ ಓದಲೇಬೇಕೆಂದು ಹಟದಿಂದ ಓದಿ ಮುಗಿಸಿದೆ. ಮತ್ತೊಮ್ಮೆ ಮೊದಲಿನಿಂದ ಕೊನೆಯವರೆಗೂ ಪೂರ್ತಿಯಾಗಿ. ಬೆಂಗಳೂರಿನ ಕೊಳಚೆ ನೀರು, ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಮತ್ತು ದಿನನಿತ್ಯ ಬಳಸುವ ನೀರು, ಬಳಸಿದ ನಂತರ ಆ ನೀರು ಏನಾಗುತ್ತದೆ, ಅದರಿಂದಾಗಿ ಅನಾನುಕೂಲಗಳು, ಹರಡುವ ರೋಗಗಳು, ಎದುರಿಸಬೇಕಾದ ಸಮಸ್ಯೆಗಳು ಯಾವುವು ಎಂಬುದನ್ನು ಅಚ್ಚುಕಟ್ಟಾಗಿ ಬರೆದಿದ್ದಾರೆ.
ನೀರಿನ ಸಮಸ್ಯೆ ವಿಷಯಾಧಾರಿತ ಪುಸ್ತಕಗಳು ಬಹಳವೇ ಬಂದಿದ್ದರೂ ಕೂಡ ಈ ಪುಸ್ತಕ ವಿಶೇಷವಾಗಿ ನಿಲ್ಲುವುದು, ಬೆಂಗಳೂರಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವುದರಿಂದ. ಎಷ್ಟೆಲ್ಲ ಸಮಸ್ಯೆಗಳನ್ನು ನಮಗೆ ನಾವೇ ತಂದುಕೊಳ್ಳುತ್ತಿದ್ದೇವೆ. ಬೆಳ್ಳಂದೂರು ಕೆರೆ, ಪೀಣ್ಯ, ಬೈರಮಂಗಲ, ಹೀಗೆ ಕಸವನ್ನು ಹಾಕಲೆಂದೇ ಇರುವ ಕೆರೆಗಳ ಬಗ್ಗೆ ಮತ್ತು ಅದರಿಂದ ಉಂಟಾಗುತ್ತಿರುವ ಪರಿಸರ ಹಾನಿ, ಮತ್ತು ಅದೇ ನೀರಿನಲ್ಲಿ ಬೆಳೆಯುತ್ತಿರುವ ನಾವು ದಿನ ನಿತ್ಯ ಬಾಯಿ ಚಪ್ಪರಿಸಿಕೊಂಡು ತಿನ್ನುವ ಬೇಬಿ ಕಾರ್ನ್, ಎಷ್ಟು ವಿಷಪೂರಿತ ನೀರಿನಲ್ಲಿ ಬೆಳೆಯುತ್ತಿವೆ ಮತ್ತು ಕ್ಯಾನ್ಸರ್ ಸಮೇತ ಇನ್ನು ಅದೆಂತಹ ದೈತ್ಯ ಖಾಯಿಲೆಗಳು ಹರಡುತ್ತಿವೆ. ಈ ಎಲ್ಲ ಅಂಶಗಳನ್ನು ಚಂದ್ರಶೇಖರ್ ಅವರು ತುಂಬಾ ಚೆನ್ನಾಗಿ ಮತ್ತು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ.
ಮೊದಮೊದಲು ಹಾಸ್ಯದಿಂದ ಶುರುವಾಗಿ, ವಿಡಂಬನೆಯಲ್ಲಿ ಮುಂದುವರೆಯುತ್ತಾ, ಕೊನೆಯಲ್ಲಿ ವಿಷಯವನ್ನು ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಪ್ರೀತಿಯಿಂದ ಸಾಕುವ ಪ್ರಾಣಿ ನಾಯಿಗೂ ಸಹ ವಿಸ್ಕಿ ಎಂಬ ಹೆಸರನ್ನು ಇಡಬಹುದೆಂದು ಊಹಿಸಿಯೂ ಇರಲಿಲ್ಲ. ಪರಿಸರ ಮಾಲಿನ್ಯದಲ್ಲಿ ಸರ್ಕಾರದ ಪಾತ್ರ ಎಷ್ಟಿದೆ, ಯಾವ ಯಾವ ಹಂತದಲ್ಲಿ ಯಾರು ಯಾರು ಎಷ್ಟು ಕಮಿಷನ್ ತಿನ್ನುತ್ತಾರೆ, ಮತ್ತೆ ಒಂದು ಸಣ್ಣ ಸಮಸ್ಯೆ ನಿರ್ಲಕ್ಷಿಸಿದರೆ ಅದು ಮುಂದೆ ಹೇಗೆ ಒಂದು ಸರ್ಕಾರದ ಪತನಕ್ಕೆ ಕಾರಣಾವಾಗುತ್ತೆ ಎಂಬುದನ್ನು ತೀರಾ ಸಾಮಾನ್ಯವಾಗಿ, ನೇರವಾಗಿ ಅರ್ಥವಾಗುವಂತೆ ಬರೆದಿದ್ದಾರೆ.
ಈ ಊರಿನಲ್ಲಿ ಜೀವವಿದೆ, ಜೀವನವಿದೆ ಮತ್ತು ಜೀವ ತೆಗೆಯುವ ಹಲವಾರು ಸಮಸ್ಯೆಗಳು ನಮ್ಮ ಮಧ್ಯೆ ಜೀವಂತವಾಗಿವೆ. ಒಳಗಣ್ಣಿಂದ ಸೂಕ್ಷ್ಮವಾಗಿ ಗಮನಿಸಿ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಈ ಪುಸ್ತಕವನ್ನು ಒಮ್ಮೆ ಓದಿ, ಮತ್ತದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
-ನಂದೀಶ ದೇವ್, ಬೆಂಗಳೂರು