ನಮ್ಮದೇ ಹೊಣೆ

ನಮ್ಮದೇ ಹೊಣೆ

ಕವನ

ಕಾಡಿನ ನಡುವಲಿ ಹಾದಿಯು ತಪ್ಪಿತು

ನಾಡಿಗೆ ಬಂದಿತು ನರಿಯ ಮರಿ

ತಾಯಿಯ ಕಾಣದೆ ಚಿಂತೆಯು ಕಾಡಿತು

ನೋಡಿತು ಸುತ್ತಲು ಅದು ಹೆದರಿ

 

ಉದರದ ಒಳಗಡೆ ಹಸಿವಿನ ವೇದನೆ

ಎಳೆಮರಿ ತಿನ್ನುವುದೇನನ್ನು

ಪರಿಚಯವಿಲ್ಲದ ಜಾಗದಿ ಸಿಲುಕಿದೆ

ಯಾರನು ಕೇಳಲಿ ತಿನಿಸನ್ನು

 

ಅಂಜಿಕೆಯಿಂದಲಿ ಮುಂದಡಿ ಇಡುತಿರೆ

ಪಕ್ಕದೆ ಕಂಡಿತು ಕಂದನನು

ಮಗುವಿನ ಮೊಗದಲಿ ಶುದ್ಧದ ನಗುವಿದೆ

ನೋಡುತಲಿದ್ದನು ಮರಿಯನ್ನು

 

ಇಬ್ಬರು ಎಳೆಯರು ಆದರು ಗೆಳೆಯರು

ನೀಡಿದ ತಿನಿಸಲಿ ಪಾಲನ್ನು

ಅನುದಿನ ಸೇರುತ ಅಡುತಲಿದ್ದರು

ಸ್ನೇಹವು ಬೆಸೆದಿದೆ ಅವರನ್ನು

 

ಪ್ರಾಣಿಯ ಪಕ್ಷಿಯ ಕಂಡರೆ ಚಿಣ್ಣರ

ಮನದಲಿ ಹರ್ಷವು ತುಂಬುವುದು

ಮೃಗಗಳೆ ಆಗಲಿ ಪಕ್ಷಿಗಳಾಗಲಿ

ರಕ್ಷಣೆ ಹೊಣೆಯದು ನಮಗಿಹುದು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್