ನಮ್ಮನ್ನು ನಾವು ಪುನರ್ ಪ್ರತಿಷ್ಟಾಪಿಸಿಕೊಳ್ಳುವ ಆಶಯದೊಂದಿಗೆ...

ನಮ್ಮನ್ನು ನಾವು ಪುನರ್ ಪ್ರತಿಷ್ಟಾಪಿಸಿಕೊಳ್ಳುವ ಆಶಯದೊಂದಿಗೆ...

ಬದುಕಿರುವುದೇ ಒಂದು ಸಾಧನೆಯಾಗಿರುವ ಸಮಯದಲ್ಲಿ, ದುಗುಡ ತುಂಬಿದ ಮನಸ್ಸುಗಳೇ ಎಲ್ಲೆಲ್ಲೂ ಹರಿದಾಡುತ್ತಿರುವ ಸನ್ನಿವೇಶದಲ್ಲಿ, ಭವಿಷ್ಯದ ಕನಸುಗಳೇ ಮಸುಕಾಗುತ್ತಿರು ಭಾವನೆಗಳ ಸಂದರ್ಭದಲ್ಲಿ, ಹೊಸ ಸವಾಲುಗಳು ನಮ್ಮ ಮುಂದಿವೆ. ಇದೀಗ ನಮ್ಮ ಬದುಕಿನ ಅಗ್ನಿ ಪರೀಕ್ಷೆ ಎದುರಾಗಿದೆ, ಗೋಡೆ ಬರಹಗಳು ಈಗ ವಾಸ್ತವವಾಗಬೇಕಿದೆ, ಪುಸ್ತಕಗಳು ಈಗ  ಬದುಕಿನ ಭಾಗವಾಗಬೇಕಿದೆ, ಮಹಾತ್ಮರ ಚಿಂತನೆಗಳು ಈಗ ನಮ್ಮ ಜೀವನದ ನಡವಳಿಕೆಗಳಾಗಬೇಕಿದೆ, ಅನುಭವದ ಸಂದೇಶಗಳು ಅರ್ಥವಾಗಬೇಕಿದೆ, ಉಪನ್ಯಾಸ, ಚರ್ಚೆ, ಸಂವಾದಗಳು ನಮ್ಮನ್ನು ಬಡಿದೆಬ್ಬಿಸಬೇಕಿದೆ.

ಹಿರಿಯರು ಗುರುಗಳು ಚಿಂತಕರ ಮಾತುಗಳು ದಾರಿ ದೀಪವಾಗಬೇಕಿದೆ, ನಮ್ಮೆಲ್ಲರ ಸಾಮರ್ಥ್ಯ ಈಗ ಹೊರ ಬರ ಬೇಕಾಗಿದೆ, ನಮ್ಮೊಳಗೆ ಅಡಗಿರುವ ಎಲ್ಲಾ ಧೈರ್ಯವನ್ನು ಒಟ್ಟುಗೂಡಿಸಿ ಕೊಳ್ಳೋಣ, ಮಾನಸಿಕ ಏಕಾಗ್ರತೆಯನ್ನು ಗಟ್ಟಿಗೊಳಿಸಿಕೊಳ್ಳೋಣ, ಕಣ್ಣ ಮುಂದಿನ ಸಾವುಗಳಿಗೆ ವಿಚಲಿತರಾಗದಿರೋಣ, ಏಕೆಂದರೆ ಈಗ ಹೆಚ್ಚು ಕಡಿಮೆ ದೂರದ ಸುದ್ದಿಗಳು ಹತ್ತಿರವಾಗುತ್ತಿವೆ, ಲಾಕ್ ಡೌನ್ ಮತ್ತಷ್ಟು ಒತ್ತಡ ಹೆಚ್ಚಿಸುತ್ತದೆ, ಮಾಧ್ಯಮಗಳು ಇನ್ನಷ್ಟು ಭಯ ಸೃಷ್ಟಿಸುತ್ತವೆ, ಮೌನ ಮತ್ತು ಏಕಾಂತ ಮಗದಷ್ಟು ಅಸಹನೀಯತೆ ಉಂಟುಮಾಡುತ್ತದೆ. 

ಇಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಿದೆ, ಎಲ್ಲವನ್ನೂ ಒಳಗೊಂಡ ಸಮಗ್ರ ಮತ್ತು ವಿಶಾಲ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ, ಸ್ಥಿತಪ್ರಜ್ಞತೆ ಮೈಗೂಡಿಸಿಕೊಳ್ಳಬೇಕಿದೆ, ದುರಂತ ಸುದ್ದಿಗಳನ್ನು ಕೇಳಿಯೂ ಒಳ್ಳೆಯ ಸುದ್ದಿಗಳ ಭರವಸೆಯನ್ನು ಕಲ್ಪಿಸಿಕೊಳ್ಳಬೇಕಿದೆ, ಅನಿರೀಕ್ಷಿತ ಘಟನೆಗಳು ಸಹ ನಿರೀಕ್ಷಿತವೇ ಎಂದು ಭಾವಿಸಿ ಮುಂದಿನ ಜವಾಬ್ದಾರಿ ನಿರ್ವಹಿಸಬೇಕಿದೆ, ಎಲ್ಲೆಲ್ಲೂ ಹಾಹಾಕಾರ ದುಗುಡ ತುಂಬಿದ ಮಾತು ಚರ್ಚೆ ಮನಸ್ಸುಗಳೇ ತುಂಬಿರುವಾಗ ನಾವು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಯೋಚಿಸಬೇಕಾಗಿದೆ, ಬದುಕಿರುವುದೇ ಒಂದು ಸಾಧನೆ ಎಂದು ಭಾವಿಸಿ ನಮ್ಮನ್ನು ನಾವು ಉಳಿಸಿಕೊಳ್ಳುವ, ಇತರರನ್ನು ಉಳಿಸುವ, ಪ್ರೇರೇಪಿಸುವ, ಆತ್ಮವಿಶ್ವಾಸ ತುಂಬುವ, ಮನದ ಕಲ್ಮಶಗಳನ್ನು ಅಳಿಸಿ ಹಾಕುವ, ಮಾನವೀಯ ಮೌಲ್ಯಗಳನ್ನು ಮೆಲುಕು ಹಾಕುವ, ಒಳ್ಳೆಯತನವನ್ನು ಬೆಳೆಸುವ, ಈ ಕೆಟ್ಟ ಪರಿಸ್ಥಿತಿಯನ್ನು ಒಳ್ಳೆಯ ಸಮಯವಾಗಿ ಪರಿವರ್ತಿಸುವ ಎಲ್ಲಾ ಪ್ರಯತ್ನ ಮಾಡೋಣ.

ನಮ್ಮನ್ನು ನಾವು ಪುನರ್ ಪ್ರತಿಷ್ಟಾಪಿಸಿಕೊಳ್ಳುವ ಆಶಯದೊಂದಿಗೆ.... ‌

ಎಲ್ಲರಿಗೂ ಒಳ್ಳೆಯದಾಗಲಿ,

ಹೊಸ ದಿನದ ಉದಯ ನಿಮ್ಮ ಮನಸ್ಸನ್ನು ಚೇತೋಹಾರಿಯಾಗಿ ಮಾಡಲಿ ಎಂದು ಆಶಿಸುತ್ತಾ....

  • ಜ್ಞಾನ ಭಿಕ್ಷಾ ಪಾದಯಾತ್ರೆಯ 189 ನೆಯ ದಿನ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಲೇಖನ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ ಹೊನ್ನಾವರ ಸಮೀಪ ಕಂಡು ಮನೋಹರ ದೃಶ್ಯ