ನಮ್ಮೂರ ಗಣೇಶ ಹಬ್ಬ (ಭಾಗ -1)

ನಮ್ಮೂರ ಗಣೇಶ ಹಬ್ಬ (ಭಾಗ -1)

ಓಂ ನಮೋ ನಮಃಸ್ತುಭ್ಯಂ
ಗಣರಾಜ ಮಹೇಶ್ವರಃ
ಸರ್ವ ವಿಘ್ನ ಹರೋದೇವಾ
ಪ್ರಥಮಂ ತವ ವಂದನಾ||

ಈ ಶ್ಲೋಕ ನನ್ನ ಆಯಿ(ಅಮ್ಮ) ದಿನವೂ ದೇವರಿಗೆ ನಮಸ್ಕಾರ ಮಾಡುವಾಗ ಮೂರೊತ್ತೂ ಹೇಳುತ್ತಿದ್ದರು.
ದಿನವೂ ಕೇಳುವ ಕಿವಿಗಳು ನನ್ನ ಬಾಯಲ್ಲಿ ಉದುರಲು
ಪ್ರಾರಂಭವಾಗಿರೋದು ತೊದಲು ನುಡಿಗಳ ವಯಸ್ಸಿನಲ್ಲಿ. ಅದೂ ಆಯಿಯೊಂದಿಗೆ ಕ್ರಮೇಣ ದಿನವೂ ಲೊಚ ಲೊಚ ಭಾಷೆಯಲ್ಲಿ ಹೇಳುವಾಗ ಆಯಿಯ ಮುಖದಲ್ಲಿ ಗಿಕಿ ಗಿಕಿ ನಗು, ತನ್ನ ಮಗಳು ಮಹಾ ಬುದ್ಧಿವಂತೆ ಎಲ್ಲರೆದುರು ಕೊಚ್ಚಿಕೊಂಡಿದ್ದೆ ಕೊಚ್ಚಿಕೊಂಡಿದ್ದು.

ನನಗೇನು ಗೊತ್ತು ಈ ಶ್ಲೋಕ ಯಾಕೆ ಹೇಳುತ್ತಾರೆ? ಗೂಡಲ್ಲಿ ಅದೇನೇನೊ ಮೂರ್ತಿಗಳು, ಫೋಟೊಗಳು, ದಿನಾ ಗಂಟೆ ಭಾರಿಸುತ್ತಾರೆ, ತೊಳಿತಾರೆ,ಬೆಂಕಿ ಹಚ್ಚುತ್ತಾರೆ(ದೀಪ) ಮೇಲಿಂದ ಕೆಳಕ್ಕೆ ಕೈ ಆಡಿಸುತ್ತಾರೆ, ಹಾಲು ಮೊಸರು ಮುಂದೆ ಇಡ್ತಾರೆ ಹೀಗೆ ಹಲವಾರು ಅರ್ಥವಾಗದ ವಿಷಯಗಳು ತಲೆಯಲ್ಲಿ. ಅದಕೆ ಏನೇನೊ ಪ್ರಶ್ನೆ ಕೇಳಿ ಹೊಗಳಿಸಿಕೊಂಡು ಅಟ್ಟಕ್ಕೆ ಏರಿದ್ದೇನೆ ಬೇಡಾದ ಪ್ರಶ್ನೆ ಕೇಳಬಾರದು ಅಂದರೂ ಕೇಳಿ ಸಖತ್ ಬೈಯ್ಯಿಸಿಕೊಂಡಿದ್ದೇನೆ. ಆಗೆಲ್ಲ "ಹೋಗು ದೇವರ ಹತ್ತಿರ ಕ್ಷಮೆ ಕೇಳು " ಅಂತಿದ್ರು. ಮತ್ತೂ ಬಿಡದೆ "ಅಲ್ಲಿ ಯಾರ ಹತ್ತಿರ ಕೇಳಲಿ ತುಂಬಾ ದೇವರಿದೆ?" "ಅಯ್ಯೋ ! ನನ್ನ ತಲೆ ಬಡಕ ಬೇಕು ಹೋಗು ಆ ಗಣೇಶನ ಹತ್ತಿರ ಹೋಗಿ ಹೇಳು." "ಆಯಿ ಗಣೇಶ ಅಂದರೆ ಯಾವುದು?" " ಅದೆ ಸೊಂಡಿಲು ಇರೋದು ನೋಡೆ ಸಾಕು."(ಇವೆಲ್ಲ ನನಗೆ ತಿಳುವಳಿಕೆ ಬಂತಂತೆ ಆಯಿ ಆಗಾಗ ಹೇಳಿ ನಗುತ್ತಿದ್ದರು.)

ಮೊಂಡು ಬುದ್ಧಿಯ ನನ್ನ ತಲೆಯಲ್ಲಿ ತಪ್ಪು ಮಾಡಿದರೆ ಗಣೇಶನಲ್ಲಿ ಹೇಳಬೇಕು, ದೇವರು ಅಂದರೆ ಅವನೆ ಇತ್ಯಾದಿ ತಲೆ ಹೊಕ್ಕಿಸಿದ್ದು ನನ್ನ ಹೆತ್ತಮ್ಮ. ಇಂದಿಗೂ ನನ್ನ ಆರಾಧ್ಯ ದೈವ ಆ ಶ್ರೀ ಗಣೇಶ. ಆ ಅಮ್ಮನೆಂಬ ಗುರುವಿನ ಮುಂದೆ ಇನ್ನಾರ ಕಾಣಲಿ! ಅದಕ್ಕೆ ನಮ್ಮೂರಿನ ಹವ್ಯಕರ ಮನೆಗಳಲ್ಲಿ ನಡೆಯುವ ವಿಜೃಂಭಣೆಯ "ಗಣೇಶ ಹಬ್ಬದ" ಕುರಿತು ಬರೆಯಲೇ ಬೇಕು ಅನಿಸಿತು.

ನನಗಂತೂ ಗಣೇಶ ಹಬ್ಬ ಅಂದರೆ ನಮ್ಮೂರಿಂದಪ್ಪಾ. ಅಲ್ಲಿದು ಬಿಟ್ಟರೆ ಬೇರೆಲ್ಲಿ ನೋಡಿದರೂ ಟುಸ್. ನನಗೆ ಬುದ್ಧಿ ಬಂದಾಗಿನ ನೆನಪಿನೊಂದಿಗೆ ಈ ಹಬ್ಬದ ಸಡಗರ ಹೇಳ್ತೀನಿ ಕೇಳಿ.

ಸೃಷ್ಟಿ ಸೌಂದರ್ಯದ ತವರೂರಾದ ಮಲೆನಾಡಿನ ಪುಟ್ಟ ಹಳ್ಳಿಯ ಮಡಿಲಲ್ಲಿ ಇದೆ ನಮ್ಮೂರು ಹೆಸರು ಕಲ್ಮನೆ, ಕಾರವಾರ ಜಿಲ್ಲೆ. ನಮ್ಮದು ಬ್ರಾಹ್ಮಣರಲ್ಲಿ ಹವ್ಯಕ ಕುಟುಂಬ. ಈ ಜಿಲ್ಲೆಯಾದ್ಯಂತ ನೂರಾರು ಹವ್ಯಕ ಕುಟುಂಬಗಳು ಅಲ್ಲಲ್ಲಿ ನಾಲ್ಕು ಐದು ಮನೆಗಳಿಂದ ಸಣ್ಣ ಸಣ್ಣ ಹಳ್ಳಿಗಳಾಗಿ ಪುರಾತನ ಕಾಲದಿಂದಲೂ ನೆಲೆ ನಿಂತಿವೆ. ಒಂದೊಂದು ಹಳ್ಳಿಗೂ ಒಂದೊಂದು ಹೆಸರು.

ಸುಮಾರು 1970-71ನೇ ಇಸವಿ ಇರಬಹುದು. ಇನ್ನೂ ಫ್ರಾಕ್ ಹಾಕಿಕೊಂಡು ಥೈ ಥೈ ಜಿಗಿಯೊ ವಯಸ್ಸು. ಮುಕ್ತ ಮನಸ್ಸಿನಿಂದ ಹಬ್ಬಗಳಲ್ಲಿ ಸಂಭ್ರಮ ಪಟ್ಟಿದ್ದು ಆಗಲೆ. ಅದರಲ್ಲೂ ಈ ಚೌತಿ ಹಬ್ಬಕ್ಕೆ (ಗಣೇಶನ ಹಬ್ಬ ಹೀಗೆ ಹೇಳೋದು) ಒಂದು ವಾರಕ್ಕೆ ವೊದಲೆ ನಮ್ಮ ಮಕ್ಕಳ ಗುಂಪು ನಮ್ಮೂರ ಓಣಿ ಬಾಗಿಲ (ಊರ ಎಂಟ್ರೆನ್ಸ) ರಸ್ತೆ ಪಕ್ಕದಲಿರೊ ಊರ ಪಟೇಲನ ಭತ್ತದ ಗೊಣಬೆ ಹಾಕೊ ಕಣದಲ್ಲಿ ಮೀಟಿಂಗು ಸೇರುತ್ತಿತ್ತು.

ಚೌತಿ ಹಬ್ಬಕ್ಕೆ ಎಷ್ಟು ದೊಡ್ಡ ಗಣೇಶ ತರತಾರೆ? ಕೆಂಪದ ಅಥವಾ ಗುಲಾಭಿ ಕಲರಿಂದ? ಬಲಮುರಿನ ಎಡಮುರಿನ? ಯಾವ ರೀತಿ ಶೃಂಗಾರ ಮಾಡಬೇಕು? ಗಣೇಶನನ್ನು ಯಾವ ಹೊಳೆಯಲ್ಲಿ ಬಿಡೋದು? ಹೊಸಾ ಬಟ್ಟೆಗೆ ಸ್ಕೆಚ್, ತಿಂಡಿಗಳ ನೆನಪಲ್ಲಿ ಬಾಯಿ ಚಪ್ಪರಿಸೋದು, ಪಟಾಕಿ ಇತ್ಯಾದಿ ಎಲ್ಲ ಚರ್ಚೆಯೊಂದಿಗೆ ತೀರ್ಮಾನ ನಮ್ಮ ನಮ್ಮಲ್ಲಿ ನಡೆಯುತ್ತಿತ್ತು. ಎಲ್ಲ ಜವಾಬ್ದಾರಿ ಹಿರಿಯರದೆ ಆದರೂ ಮನೆಯಲ್ಲಿ ನಮಗೆ ಬೇಕಂತೆ ಹಠ ಮಾಡಲು ಇದು ಪೂರ್ವ ತಯಾರಿಯ ವೇದಿಕೆ ಅಷ್ಟೆ.

ಆದರೆ ಈ ಗಣೇಶ ಹಬ್ಬಕ್ಕೆ ತಲೆ ತಲಾಂತರದಿಂದ ಮನೆತನದಲ್ಲಿ ನಡೆದುಕೊಂಡು ಬಂದಂತೆ ಹಲವು ಪದ್ಧತಿಗಳನ್ನು ನಡೆಸಿಕೊಂಡು ಬರಬೇಕಾಗಿತ್ತು. ಅದು ಈಗಲೂ ಮುಂದುವರೆದಿದೆ. ಆದರೆ ಚಿಕ್ಕವರಾದ ನಮಗೆ ಇದೆಲ್ಲ ಗೊತ್ತಾಗುತ್ತಿರಲಿಲ್ಲ. ಮನಸಿಗೆ ಅನಿಸಿದ್ದು ಬೇಕು, ಮಾಡಬೇಕು ಅಷ್ಟೆ. ಹಠದಲ್ಲಿ ಗೆಲ್ಲಲಾಗದಿದ್ದರೆ ಅಳೋದು ಇದ್ದಿದ್ದೆ. ಆದರೆ ಇದು ಅರೆ ಕ್ಷಣ. ಮಕ್ಕಳ ಮನಸ್ಸು ಹಾಗೆ ಅಲ್ಲವೆ?

ಹಬ್ಬಕ್ಕೆ ಹದಿನೈದು ದಿನಗಳಿರುವಾಗಲೆ ಹಬ್ಬದ ತಯಾರಿ ಶುರುವಾಗುತ್ತದೆ. ಭಾದ್ರಪದ ಶುಕ್ಲ ತೃತೀಯ ದಿನ ಸ್ವರ್ಣ ಗೌರಿ ವೃತವಾದರೆ ಮಾರನೆ ದಿನ ಚತುರ್ಥಿ ಚೌತಿಯ ದಿನ ಈ ಹಬ್ಬ ಆಚರಿಸುವ ಪದ್ಧತಿ. ಮಳೆಗಾಲ ಅಲ್ಪ ಸ್ವಲ್ಪ ಇರುತ್ತದೆ. ಅಡಿಕೆ ತೋಟದ ಕೆಲಸ ಹಬ್ಬದ ತಯಾರಿಗೆ ಅಡ್ಡಿ ಆಗದಂತೆ ಪೂರೈಸಿಕೊಳ್ಳುವ ಜವಾಬ್ದಾರಿ ಬೇರೆ.

ನಮಗೊ ಹಬ್ಬಕ್ಕೆ ತಂದ ಪಟಾಕಿ ಎಲ್ಲಿ ಬಿಸಿಲಿದೆ ನೋಡಿ ಅಲ್ಲಿ ಒಣಗಿಸೋದು, ಮಳೆ ಮೋಡವಾದರೆ ಮುಗೀತು ; ಕಂಬಳಿ ಒಣ ಹಾಕಲು ಮಾಡಿರುವ ಬೆಂಕಿಯ ಹೊಡತಲದ ಪಕ್ಕದಲ್ಲಿ ಒಣಗಿಸೊ ಪ್ರಯತ್ನ ಬಿಸಿ ಭೂದಿಯ ಶಾಖದಲ್ಲಿ. ಸುರ್ ಸುರ್ ಬತ್ತಿ,ಆನೆ ಪಟಾಕಿ,ಕುಡಿಕೆ,ನೆಲಚಕ್ರ, ಸರ್ ಪಟಾಕಿ, ಕೇಪು ಹೀಗೆ ಹಲವಾರು ಪಟಾಕಿ ಹೊಡೆಯುವ ಸಡಗರ ಹಬ್ಬದ ನಾಲ್ಕು ದಿನದಿಂದಲೆ. " ಕೊಟ್ಟಿಗೆಯಲ್ಲಿ ಹಸುಗಳೆಲ್ಲ ಹೆದರತ,ಈಗಲೆ ಹೊಡೆಯಡದ್ರೆ, ಎಮ್ಮೆ ಹಾಲು ಕೊಡ್ತಿಲ್ಲೆ" ಅಜ್ಜಿ ಒಂದೆ ಸಮ ಗಲಾಟೆ ಮಾಡುತ್ತಿದ್ದರೂ ನಮಗೆ ಕಿವಿಗೆ ಬೀಳುತ್ತಿರಲಿಲ್ಲ.

ಈ ಹಬ್ಬಕ್ಕೆ ಚಕ್ಕುಲಿ ವಿಶೇಷ ತಿಂಡಿ.

ಹಳೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ನೆರಳಲ್ಲಿ ಒಣಗಿಸಿ ಹುರಿದು ಅಳತೆಗೆ ತಕ್ಕಂತೆ ಉದ್ದಿನ ಬೇಳೆ ಅದೂ ಕೂಡಾ ಹುರಿದು ಓಂ ಕಾಳು ಹಾಕಿ ಮನೆಯಲ್ಲೆ ಬೀಸುವ ಕಲ್ಲಿನಲ್ಲಿ ನುಣ್ಣಗೆ ಹಿಟ್ಟು ಮಾಡಿ ಜರಡಿ ಹಿಡಿದು ಎಳ್ಳು, ಉಪ್ಪು ಬೆರೆಸಿ ಹದವಾದ ಹಿಟ್ಟು ರೆಡಿ ಮಾಡುವುದು ಹೆಂಗಸರ ಕೆಲಸ ; ಕಲೆಸುವಾಗ ಗಂಡಸರ ಕೈ ಜೋಡಣೆಯೊಂದಿಗೆ. ಮನಸಲ್ಲಿ "ನಿಮ್ಮನೆ ಚಕ್ಲಿ ಭರ್ತಿ ಚೋಲೊ ಆಜೆ" ಎಂದು ಎಲ್ಲರ ಬಾಯಲ್ಲಿ ಹೊಗಳಿಕೆಯ ನಿರೀಕ್ಷೆಯಲ್ಲಿ.

ಈ ಹಿಟ್ಟಿನಲ್ಲಿ ಮಾಡುವ ಕೈ ಸುತ್ತಿನ ಚಕ್ಕುಲಿ ವಿಶೇಷ. ಊರಲ್ಲಿ ಇರುವ ಐದಾರು ಮನೆಗಳಲ್ಲಿ ಒಬ್ಬೊಬ್ಬರ ಮನೆಯಲ್ಲಿ ನಡೆಯುವ ಚಕ್ಕುಲಿ ಸಂಭ್ರಮಕ್ಕೆ "ಚಕ್ಕಲಿ ಕಂಬಳಾ" ಎಂದು ಹೆಸರು. ಹತ್ತಿರದ ನೆಂಟರು,ಅಕ್ಕಪಕ್ಕದ ಮನೆಯವರು ಒಬ್ಬರಿಗೊಬ್ಬರು ನೇರವಾಗಿ, ಸಾಲಾಗಿ ಕುಳಿತು ಚಕ್ಕುಲಿ ಸುತ್ತುತ್ತಿದ್ದರು. ಈ ಕೆಲಸ ಗಂಡಸರು ಮಾತ್ರ ಮಾಡುತ್ತಿದ್ದರು. ದೊಡ್ಡ ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಕಟ್ಟಿಗೆ ಒಲೆ ಉರಿಯಲ್ಲಿ ರಾತ್ರಿ ಹನ್ನೆರಡು ಒಂದು ಗಂಟೆಯವರೆಗೂ ಸುತ್ತಿದ ಚಕ್ಕುಲಿ ಬೇಯಿಸುತ್ತಿದ್ದರು. ಇನ್ನು ಚಕ್ಕುಲಿ ಸುತ್ತುವ ಕೈಗಳು ಎಷ್ಟು ಪಳಗಿರುತ್ತಿದ್ದವೆಂದರೆ ಒಮ್ಮೆ ಎಣ್ಣೆ ಹಚ್ಚಿದ ಹಿಟ್ಟು ನಾದಿ ಅಂಗೈಯಲ್ಲಿ ಹಿಡಿದು ಹೆಬ್ಬೆರಳು ಹಾಗೂ ತೋರು ಬೆರಳಲ್ಲಿ ರಿಂಗ್ ರಿಂಗ್ ಡಿಸೈನ್ ನಲ್ಲಿ ಮರದ ಮಣೆಯ ಮೇಲೆ ಸುತ್ತಲು ಪ್ರಾರಂಭಿಸಿದರೆಂದರೆ ಕಣ್ಣು ಮಿಟುಕಿಸದೆ ನೋಡುವಂತಿತ್ತು.

ಆದರೆ ಹೆಣ್ಣು ಮಕ್ಕಳಿಗೆ ಚಕ್ಕುಲಿ ಹಿಟ್ಟಿನ ಉಂಡೆ ಕಟ್ಟಿ ಕೊಡಲು ಮಾತ್ರ ಹೇಳುತ್ತಿದ್ದರು. " ಚಕ್ಕುಲಿ ಸುತ್ತಲು ನಿಂಗಕ್ಕೆಲ್ಲ ಬರ್ತಿಲ್ಲೆ ಸುಮ್ನೆ ಹಿಟ್ಟು ಹಾಳಾಗ್ತು ಉಂಡೆ ಕಟ್ಟಿ ಸಾಕು" ಎಂದು ಹಿರಿಯರು ನುಡಿದಾಗ ಗತಿ ಇಲ್ಲದೆ ಮಾಡುತ್ತಿದ್ದೆವು. ಕೊನೆ ಕೊನೆಗೆ ಬೇಜಾರಾಗಿ ಎಷ್ಟು ಕಟ್ಟಿದರೂ ಮುಗಿಯದ ಚಕ್ಕುಲಿ ಹಿಟ್ಟು ಹಿರಿಯರ ಕಣ್ಣು ತಪ್ಪಿಸಿ ಬಾವಿಗೆ ಎಸೆದು ಮಾರನೆ ದಿನ ನೀರು ಸೇದುವಾಗ ಭಾವಿ ನೀರ್ಯಾಕೊ ಬೆಳ್ಳಗೆ ಬರುತ್ತಿದೆ ಯಾಕೆ ಎಂದು ಹಿರಿಯರು ಪರಿಶೀಲಿಸಿದಾಗ ಗೊತ್ತಾಗಿ ಚೆನ್ನಾಗಿ ಬಯ್ಯಿಸಿಕೊಂಡಿದ್ದೂ ಇದೆ.

ಇನ್ನು ಚಕ್ಕುಲಿ ತುಂಬಿಡಲು ದೊಡ್ಡ ದೊಡ್ಡ ಎಣ್ಣೆಯ ಟಿನ್ ಡಬ್ಬ ಮೇಲ್ಭಾಗ ಕೊರೆಸಿ ಮುಚ್ಚಳವಿರುವ ಡಬ್ಬವಾಗಿ ಪರಿವರ್ತಿಸಿಕೊಳ್ಳಲಾಗುತ್ತಿತ್ತು. ಏಕೆಂದರೆ ಇದರಲ್ಲಿ ಇಟ್ಟರೆ ಆರು ತಿಂಗಳಾದರೂ ಗರಿಮುರಿಯಾಗಿ ಇರುತ್ತದೆ.

ಚಕ್ಕುಲಿ ಕಂಬಳ ಮುಗಿದ ಮೇಲೆ ಕೊನೆಯ ದಿನ ಆಗಿನ ಗಂಡಸರ ಪೊಗದಸ್ತ ಆಟ ಅಂದರೆ ಇಸ್ಪೀಟ್ ಆಟ. ಸುಮಾರು ಎಂಟು ಹತ್ತು ಜನ ಕಂಬಳಿಯ ನೆಲ ಹಾಸಿನ ಮೇಲೆ ರೌಂಡಾಗಿ ಕೂತು ಮಂತ್ರ ಮುಗ್ದರಾಗಿ ಬೀಡಿ, ಸಿಗರೇಟು,ಕವಳ, ಚಾ ಸೇವನೆಯೊಂದಿಗೆ ಅಹೋ ರಾತ್ರಿ ಇಸ್ಪೀಟ್ ಆಟ. ಮಾತು, ಹಾಸ್ಯ ಚಟಾಕಿ ಗೆದ್ದವರ ಅಟ್ಟಹಾಸದ ನಗೆಯ ವೈಖರಿಯೊಂದಿಗೆ ನಡೆಯುತ್ತಿತ್ತು. ಮನೆಯ ಹೆಂಗಸರು ಮಾತಾಡುವಂತಿಲ್ಲ. ಊಟ ತಿಂಡಿ ವ್ಯವಸ್ಥೆ ಮಾಡುವುದಷ್ಟೆ ಅವರ ಕೆಲಸ. ಇದು ಮಾತ್ರ ನೆನಪಿಸಿಕೊಂಡರೆ ಈಗಲೂ ಮೈಯ್ಯೆಲ್ಲ ಉರಿಯುತ್ತದೆ.

ಕಾರಣ ಇಷ್ಟೆ ; ಆಗೆಲ್ಲ ಹೆಂಗಸರು ಪ್ರತಿಯೊಂದು ಕೆಲಸ ಶ್ರಮವಹಿಸಿ ಮಾಡಬೇಕಾಗಿತ್ತು. ಈಗಿನಂತೆ ಮಿಕ್ಸಿ, ಗ್ಯಾಸ್, ವಾಷಿಂಗ್ ಮಿಷನ್, ನಲ್ಲಿ ನೀರು, ಕರೆಂಟ್ ಲೈಟು ಇತ್ಯಾದಿ ಯಾವುದೂ ಇರಲಿಲ್ಲ. ಕೊಟ್ಟಿಗೆ ಕೆಲಸವನ್ನೂ ಮಾಡಿಕೊಳ್ಳಬೇಕಿತ್ತು. ಪ್ರತಿ ನಿತ್ಯ ನೆಲಕ್ಕೆ ಸಗಣಿ ಹಾಕಿ ಸಾರಿಸಿಕೊಳ್ಳಬೇಕು. ಇನ್ನು ಹಬ್ಬ ಬಂತೆಂದರೆ ತಲೆಗೊಂದು ಬಟ್ಟೆ ಸುತ್ತಿಕೊಂಡು ದೊಡ್ಡ ಮನೆಯ ಬಲೆ ಧೂಳು ತೆಂಗಿನ ಪೊರಕೆಯಲ್ಲಿ ಜಾಡಿಸಿ ಅಲ್ಲಲ್ಲಿ ಹರಡಿದ ತೋಟದ ಪರಿಕರ ಅದೂ ಇದೂ ಎಲ್ಲ ಜೋಡಿಸಿ ಗುಡಿಸಿ ಮೊದಲಿನ ದಿನ ತಯಾರಿಸಿಟ್ಟುಕೊಂಡ ಅಣಲೆ ಕಾಯಿ ಕಪ್ಪು ನೀರು ಸಗಣಿಯಲ್ಲಿ ಬೆರೆಸಿ ಅಡಿಕೆಯ ಹಾಳೆಯಲ್ಲಿ ತಯಾರಿಸಿದ್ದ ವಿಶಿಷ್ಟ ಪರಿಕರದಲ್ಲಿ ಸಾರಿಸಬೇಕಿತ್ತು. ಮನೆ ಮುಂದಿನ ಅಂಗಳಕ್ಕೂ ಸಗಣಿ ನೀರು ಹಾಕಿ ತೆಂಗಿನ ಪೊರಕೆಯಲ್ಲಿ ತೊಡೆಯಬೇಕಿತ್ತು. ಎಷ್ಟೋ ಮನೆಗಳು ಅಡಿಕೆಯ ಸೋಗೆ (ಅಡಿಕೆ ಗರಿ)ಯಿಂದ ಮೇಲ್ಚಾವಣಿ ಮುಚ್ಚಿದ ಮನೆಗಳಾಗಿದ್ದವು. ಸೋಗೆಯನ್ನು ಪ್ರತೀ ವರ್ಷ ಬದಲಾಯಿಸಲಾಗುತ್ತಿತ್ತು. ಇಂಥಾ ಮನೆಯಲ್ಲಿ ಸ್ವಚ್ಛತೆ ಇನ್ನೂ ಕಷ್ಟ.

ಎರಡು ಮೂರು ದಿನ ನಡೆದ ಚಕ್ಕುಲಿ ಕಂಬಳದ ಕೆಲಸದಲ್ಲಿ ಹೈರಾಣಾದ ಹೆಂಗಸರಿಗೆ ರಾತ್ರಿ ಹಾಸಿಗೆ ಕಂಡರೆ ಸಾಕಾಗುತ್ತಿತ್ತು. ಇದರ ಮಧ್ಯ ಈ ಆಟ ಬೇರೆ. ನಾನು ಎಷ್ಟೋ ಸಾರಿ ನನ್ನಪ್ಪನಿಗೆ ಬೈದಿದ್ದಿದೆ. "ಅಪ್ಪಾ ನೀವೆಲ್ಲ ಮಾಡ್ತಿರೋದು ಸರಿಗಿಲ್ಲ " ನನಗೆ ಸ್ವಲ್ಪ ತಿಳುವಳಿಕೆ ಬಂದ ಮೇಲೆ. ಆಗೆಲ್ಲ ಅಪ್ಪ ದೊಡ್ಡ ಕಣ್ಣು ಬಿಟ್ಟಾಗ ಮುದುರಿಕೊಳ್ಳುತ್ತಿದ್ದೆ.

ಹಳ್ಳಿ ಕಡೆ ಹಬ್ಬಕ್ಕೆ ಒಬ್ಬರನ್ನೊಬ್ಬರು ಕರೆಯುವ ರೂಢಿ " ಹ್ವಾ ಯಮ್ಮನಿಗೆ ಹಬ್ಬಕ್ಕೆ ಬರವು". ಇನ್ನು ಮನೆ ಮಕ್ಕಳು ಕೆಲಸದ ನಿಮಿತ್ತ ಊರಿಂದ ಹೊರಗೆ ಎಲ್ಲೇ ಇರಲಿ ಸಂಸಾರ ಸಮೇತ ಹುಟ್ಟಿದೂರಿಗೆ ಬಂದು ಹಿರಿಯರೊಂದಿಗೆ ಹಬ್ಬ ಆಚರಿಸಬೇಕು. ಇದು ಎಲ್ಲರಲ್ಲೂ ಸ್ನೇಹ ಸೌಹಾರ್ದ ಬೆಳೆಸಿ ಹಬ್ಬಕ್ಕೆ ಮೆರುಗು ತರುತ್ತಿತ್ತು.

ಮದುವೆಯಾದ ಮನೆಯ ಹೆಣ್ಣು ಮಕ್ಕಳನ್ನು ನೆಂಟರಿಷ್ಟರನ್ನು ಖುದ್ದಾಗಿ ಹೋಗಿ ಕರೆಯಬೇಕಿತ್ತು. ಈಗಿನಂತೆ ಫೋನು, ಮೊಬೈಲು ಇರಲಿಲ್ಲ. ಕರೆಯದಿದ್ದರೆ ಆಡಿಕೊಳ್ಳುತ್ತಿದ್ದರು. ಹಳ್ಳಿಯ ಜನರಲ್ಲಿ ಮರ್ಯಾದೆಗೆ ಹೆಚ್ಚು ಪ್ರಾಶಸ್ತ್ಯ. ಯಾವುದೆ ಹಬ್ಬ ವಿಶೇಷ ದಿನಗಳಿಗೆ ಖುದ್ದಾಗಿ ಕರೆಯಲೇ ಬೇಕು. ಹಬ್ಬದ ಮಾರನೆ ದಿನ ಬಂದು ಹೋಗುವ ವಾಡಿಕೆ.

ಮುಂದುವರಿಯುವುದು..