ನಮ್ಮೂರ ಮಳೆ

ನಮ್ಮೂರ ಮಳೆ

      ಈಗ ಕರ್ನಾಟಕ ರಾಜ್ಯದಲ್ಲಿ ಮಳೆಯಿಲ್ಲ, ಬರ. ಆದರೂ ನಮ್ಮೂರಿನಲ್ಲಿ ಸಾಕಷ್ಟು ಮಳೆಯಾಗಿದೆ. ಇಲ್ಲಿಯ ಮಳೆಗಾಲ ಒಂದು ವಿಶೇಷರಿತಿಯದ್ದಾಗಿದೆ.. ನಾವು ಇದನ್ನು ಅನೇಕ ಸಾಹಿತಿಗಳ ಬರಹಗಳಲ್ಲಿ  ಕಾಣಬಹುದು. ನನಗೆ ಪ್ರತಿ ಮಳೆಗಾಲವೂ ಹೊಸಹೊಸ ಅನುಭವಗಳನ್ನು ಕೊಡುತ್ತಿದೆ.

      ಈ ವರ್ಷ ಜೂನ್ ಹತ್ತರಂದು ನಮ್ಮಲ್ಲಿ ಮಳೆ ಪ್ರಾರಂಭವಾಯಿತು. ನಾಲ್ಕೈದು ದಿನದ ಸತತ ಮಳೆಗೆ ನಮ್ಮ ಬಾವಿ, ಕೆರೆ ತುಂಬಿ ತುಳುಕಿತು. ಈ ತಿಳಿಯಾದ ಹೊಸ ನೀರು ಕುಡಿಯುವುದೇ ಸಂತಸ. ಎಲೆಲ್ಲೂ ಹಸಿರೋ ಹಸಿರು. ವಿವಿಧ ರೀತಿಯ ಅಣಬೆಗಳ, ಹೂವುಗಳ, ಬಳ್ಳಿಗಳ, ಗಿಡಗಳ ಜನನ ನೋಡಲು ಎರಡು ಕಣ್ಣು ಸಾಲದು. ಅವುಗಳ ಫೋಟೋ ತೆಗೆದು ಅದರ ಹೆಸರೇನು ಎಂದು ತಿಳಿಯುವುದೇ ದೊಡ್ಡ ಕೆಲಸ. ನವಿಲು, ಮಿಂಚುಳ್ಳಿ, ದರಲೆ ಹಕ್ಕಿ, ಮರಕುಟಿಕ, ಭಾರದ್ವಾಜ, ಬೆಳ್ಳಕ್ಕಿ ಮುಂತಾದ ಹಕ್ಕಿಗಳು ಮನೆಯ ಸುತ್ತ ಹಾರಾಡುತ್ತಿರುವುದೇ ಚೆಂದ. ಬಗೆ ಬಗೆಯ ಕೀಟಗಳ,ಕಪ್ಪೆಗಳ, ನರಿಗಳ ಕೂಗಾಟ ರಾತ್ರಿಯಿಡಿ ನಮಗೆ ಜೋಗುಳ. ಕಡಲ ಕೂಗು ಭೀಕರ. ಇದರ ಮಧ್ಯೆ ಹೊಸ ಹೊಸ ಹೂವಿನಗಿಡಗಳನ್ನು, ಬೆಂಡೆ, ಬದನೆ(ಗುಳ್ಳ), ಅಳಸಂದೆ, ಪಡವಲ ಗಿಡ ನೆಡುವ ಸಂಭ್ರಮ. ಹಿತ್ತಲಲ್ಲಿ ಹುಲುಸಾಗಿ ಬೆಳೆದಿರುವ ಹೊನೆಗೊನೆ, ಎಲೆಯುರುಗ, ನರೋಳಿ, ಚಕ್ರಮುನಿ, ಒಂದೆಲಗ, ಕೆಸ ಇವುಗಳಿಂದ ರುಚಿರುಚಿಯಾದ ಅಡುಗೆ ಮಾಡುವ ಗಡಿಬಿಡಿಯಲ್ಲಿ ದಿನ ಕಳೆಯುವುದೇ ತಿಳಿಯುವುದಿಲ್ಲ.
       ನಮ್ಮೂರ ಮಳೆ ಈ ಎಲ್ಲ ಸಂತೋಷ ನೀಡುವುದರ ಜೊತೆಗೆ ಅನೇಕ ಅನಾಹುತಗಳನ್ನೂ ಮಾಡುತ್ತದೆ. ತೋಡುಗಳು ತುಂಬಿ ನೀರು ಮನೆಯತ್ತ ನುಗ್ಗುವುದು, ಗುಡುಗು ಸಿಡಿಲಿನಿಂದ ವಿದ್ಯುತ್ ಉಪಕರಣಗಳು ಹಾಳಾಗುವುದು, ವಿದ್ಯುತ್ ಮತ್ತು ಟೆಲಿಫೋನ್ ಕಂಬಗಳು ಧರೆಗುರುಳುವುದನ್ನು ನೋಡಿದಾಗ ಸಾಕಪ್ಪಾ ಸಾಕು ಮಳೆಗಾಲ ಎಂದೆನಿಸುತ್ತದೆ. ಮನೆಯ ಸುತ್ತಮುತ್ತ ಬೆಳೆಸಿದ ಮರಗಿಡಗಳು ಉರುಳಿ ಮನೆಯ ಕಟ್ಟಡವೂ ಹಾಳಾಗಿ ಬೆಳೆಯೂ ಹಾನಿಯಾಗಿ ಅಪಾರ ನಷ್ಟವುಂಟಾಗುತ್ತದೆ.
       ಹೀಗೆ ನಮ್ಮೂರ ಮಳೆ ಪ್ರತಿವರುಷ ಹಾನಿಮಾಡಿದರೂ ಮಾರ್ಚ್, ಏಪ್ರಿಲ್ ಸುಡುಬಿಸಿಲು ಸಹಿಸಲಾಗದೆ ಮಳೆ ಯಾವಾಗ ಬರುತ್ತೇ ಎಂದು ನನ್ನ ಮನಸ್ಸು ಚಡಪಡಿಸುತ್ತದೆ.
ನಮ್ಮೂರ ಮಳೆಗಾಲ ನಮ್ಮ ಆಧುನಿಕ ಜೀವನ ಶೈಲಿಗೆ ತೊಂದರೆಯೆನಿಸಿದರೂ ಪ್ರಕೃತಿಯೊಂದಿಗೆ ಬೆರೆತು, ಅರಿತು ಬದುಕುವುದು ಎಷ್ಟು ಚೆಂದ ಎಂದೂ ಅನಿಸುತ್ತದೆ. ಆದ್ದರಿಂದ ನನ್ನ ಮನಸ್ಸು ಮಳೆ ಬರಲಿ, ಮಳೆ ಬರಲಿ, ಪ್ರಕೃತಿಯ ಹೊಸ ವಿಸ್ಮಯ ನೋಡುವ ಭಾಗ್ಯ ನನಗಾಗಲಿ ಎಂದೆನಿಸುತ್ತದೆ. ನಿಮಗೆ?!