ನಮ್ಮೂರ ಶಿವಪಾರ್ವತಿ ಹಾಗೂ ಹಾರಿ ಹೋದ ಹಕ್ಕಿ
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘ಪುಸ್ತಕ ಪ್ರಾಧಿಕಾರ'ವಾಗಿ ಬೆಳೆದು, ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಳ್ಳಲೆಂದು ಸದ್ಯದ ಆಶಯ.
‘ನಮ್ಮೂರ ಶಿವಪಾರ್ವತಿ ಹಾಗೂ ಹಾರಿ ಹೋದ ಹಕ್ಕಿ' ಕಥಾ ಸಂಕಲನದ ಲೇಖಕಿ ಲೀಲಾಬಾಯಿ ಕಾಮತ್ ಅವರು. ಇವರು ತಮ್ಮ ‘ಮೊದಲ ಮಾತು' ಎಂಬ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ನಾನು ಸ್ವತಂತ್ರವಾಗಿ ಬರೆದ ಕತೆಗಳನ್ನು ಓದಿದ ನನ್ನ ಹಲವಾರು ಬಂಧುಭಗಿನಿಯರು ನನ್ನ ಕತೆಗಳನ್ನೆಲ್ಲಾ ಒಟ್ಟುಗೂಡಿಸಿ ಪುಸ್ತಕ ರೂಪವಾಗಿ ಪ್ರಕಟಿಸಬೇಕೆಂದು ಒತ್ತಾಯ ಪಡಿಸುತ್ತಿದ್ದರು. ನಾನು ಬರೆದ ಕತೆಗಳು ಹಲವಾರು ಮಾಸಪತ್ರಿಕೆ ಹಾಗೂ ಸಾಪ್ತಾಹಿಕಗಳಲ್ಲಿ ಆಗಾಗ್ಗೆ ಪ್ರಕಟವಾದವುಗಳೇ. ಕೇವಲ ‘ತೂಗಾಡುವ ಅಸ್ಥಿಪಂಜರ' ಮತ್ತು ‘ಮಗು ಹೆಣ್ಣಾದರೆ' ಈ ಎರಡು ಕತೆಗಳು ಇಷ್ಟರ ತನಕ ಬೆಳಕನ್ನು ಕಂಡಿಲ್ಲ. ‘ಪ್ಲೇಗ್ ಇಲಿ' ಎಂಬ ಕತೆ ಬೊಂಬಾಯಿ ಬಾನುಲಿಯಿಂದ ಪ್ರಸಾರವಾಗುವ ಹಳ್ಳಿಗಳ ಕಾರ್ಯಕ್ರಮದಲ್ಲಿ ಬಿತ್ತರಿಸಲ್ಪಟ್ಟದ್ದಾಗಿದೆ.”
ಈ ಕಥಾ ಸಂಕಲನದ ಮುಖ್ಯ ಅಂಶವೆಂದರೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು ಬರೆದ ಮುನ್ನುಡಿ. ಅವರು ತಮ್ಮ ಮುನ್ನುಡಿಯಲ್ಲಿ ಇಲ್ಲಿರುವ ಎಲ್ಲಾ ಕಥೆಗಳನ್ನು ಪುಟ್ಟದಾಗಿ ಓದುಗರಿಗೆ ಪರಿಚಯಿಸುತ್ತಾ ಹೋಗುತ್ತಾರೆ. ಇದರಿಂದ ಓದುಗರಲ್ಲಿ ಈ ಕಥೆಗಳನ್ನು ಓದಲೇ ಬೇಕೆಂಬ ತುಡಿತ ಉಂಟಾಗುವುದರಲ್ಲಿ ಸಂಶಯವಿಲ್ಲ. ಮಂಜೇಶ್ವರ ಗೋವಿಂದ ಪೈ ಅವರ ಪ್ರಕಾರ “ಲೀಲಾಬಾಯಿ ಕಾಮತರು ಕೆಲಕಾಲದಿಂದ ಈಚೆ ತಾವು ಬರೆಯುತ್ತಿರುವ ಸೊಗಸಾದ ಕಥೆಗಳಿಂದ ಈಗಾಗಲೇ ಕನ್ನಡ ಕಥಾ ಪ್ರಪಂಚದಲ್ಲಿ ತುಂಬ ಹೆಸರುವಾಸಿಯಾಗಿದ್ದಾರೆ. ಇದುವರೆಗೆ ಆಯಾ ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಕಥೆಗಳನ್ನು ಊರು-ಪರವೂರುಗಳಲ್ಲಿ ಎಷ್ಟೋ ಮಂದಿ ಓದಿ ಮೆಚ್ಚಿದ್ದಾರೆ. ಮೆಚ್ಚಿ ಓದುತ್ತಿದ್ದಾರೆ. ಇವರು ಹುಟ್ಟಾ ಕತೆಗಾರ್ತಿ. ಕಥೆಗಳನ್ನು ಕೋಯುವಲ್ಲಿ ಇವರಿಗೆ ಕೆಯ್ವಾಡವಿದೆ. ತುಂಬಾ ಓಜೆ ಇದೆ. ಪ್ರಸ್ತುತ ಗ್ರಂಥವು ಅವರ ಲೇಖನಿಯಿಂದ ಹೊರವಂಟ ಮೊತ್ತ ಮೊದಲನೆಯ ಗಲ್ಪಗುಚ್ಛ. ಇದರಲ್ಲಿ ಒಟ್ಟಿಗೆ ೧೧ ಕಥೆಗಳಿವೆ. ಇವೆಲ್ಲ ಸಣ್ನ ಕಥೆಗಳೆಂಬ ಹೆಸರಿಗೆ ಒಪ್ಪುವಂತೆ ಸಣ್ಣವೆ ಇವೆ. ಯಾವುದೂ ಬಹಳ ಉದ್ದವಾಗಿಲ್ಲ. ಎಲ್ಲವೂ ಚಲೋದಾಗಿದೆ. ಚಿಕ್ಕ ಬಕ್ಕೆ ಹಲಸಿನ ತೊಳೆಗಳಂತಿವೆ. ಸವಿಯುವಾಗಲೂ ಸಿಹಿ, ಸವಿದ ಮೇಲೂ ಸಿಹಿ. ಇಂಥಾ ಚೆನ್ನ ಕಥೆಗಳನ್ನು ಕನ್ನಡ ಸಾಹಿತ್ಯಕ್ಕೆ ಒದಗಿಸಿರುವ ಶ್ರೀಮತಿಯವರನ್ನು ಅಭಿನಂದಿಸುತ್ತೇನೆ" ಎಂದಿದ್ದಾರೆ.
ಇದು ‘ಜನಪ್ರಿಯ ಪುಸ್ತಕ ಮಾಲೆ'ಯ ಎರಡನೆಯ ಸರಣಿ. ಸುಮಾರು ೧೭೦ ಪುಟಗಳ ಈ ಕಥಾ ಸಂಗ್ರಹದ ಪುಸ್ತಕವು ಮಾರುಕಟ್ಟೆಯಲ್ಲಿ ಅಲಭ್ಯವಾಗಿದ್ದರೂ ಆಸಕ್ತರಲ್ಲಿ ಅಥವಾ ಗ್ರಂಥಾಲಯದಲ್ಲಿ ಸಿಕ್ಕಿದರೆ ಅವಶ್ಯ ಓದಿ.