ನಮ್ಮೆಲ್ಲರ ಆಹಾರ ಅನಿವಾರ್ಯವಾಗದೆ ಆಯ್ಕೆಗಳಾಗಲಿ...

ನಮ್ಮೆಲ್ಲರ ಆಹಾರ ಅನಿವಾರ್ಯವಾಗದೆ ಆಯ್ಕೆಗಳಾಗಲಿ...

ಬೆಳಗಿನ ಉಪಹಾರ 

೧) ಮೊದಲನೇ ಆಯ್ಕೆ

ಹಸಿ  ಮೊಳಕೆ ಕಾಳುಗಳು, ಬೇಯಿಸಿದ ಅಥವಾ ಹಸಿ ತರಕಾರಿಗಳು, ಹಣ್ಣುಗಳು, ಒಣ ಹಣ್ಣುಗಳು ( ಬಾದಾಮಿ ದ್ರಾಕ್ಷಿ ಗೋಡಂಬಿ ಪಿಸ್ತಾ ಅಂಜೂರ ವಾಲ್ ನಟ್ ) ( ಅಭ್ಯಾಸ ಇದ್ದವರಿಗೆ ಮೊಟ್ಟೆ ) ಕಾರ್ನ್ ಪ್ಲೆಕ್ಸ್, ಓಟ್ಸ್ ಬ್ರೆಡ್ ಹಾಲು.

೨) ಎರಡನೇ ಆಯ್ಕೆ

ಇಡ್ಲಿ, ವಡೆ, ದೋಸೆ, ಚಿತ್ರಾನ್ನ, ಪಲಾವ್, ಅವಲಕ್ಕಿ, ಉಪ್ಪಿಟ್ಟು, ಸಿರಿ ಧಾನ್ಯಗಳು ಮತ್ತು ಆಯಾ ಪ್ರದೇಶದ ಸ್ಥಳೀಯ ತಿಂಡಿಗಳು.

೩) ಮೂರನೇ ಆಯ್ಕೆ

ಇಂದಿರಾ ಕ್ಯಾಂಟೀನಿನ ೫ ರೂಪಾಯಿ ತಿಂಡಿ ಅಥವಾ ರಸ್ತೆ ಬದಿಯ ಅತ್ಯಂತ ಕಡಿಮೆ ಬೆಲೆಯ ಉಪಹಾರ ಅಥವಾ ಸ್ಥಳೀಯ ಪ್ರದೇಶದ ಗಂಜಿಗಳು.

ಮಧ್ಯಾಹ್ನದ ಊಟ

೧) ಮೊದಲನೇ ಆಯ್ಕೆ

ಬಗೆ ಬಗೆಯ ಸೂಪುಗಳು, ಮುದ್ದೆ, ಚಪಾತಿ, ರೋಟಿ, ರೊಟ್ಟಿ, ಅನ್ನ, ಸಾಂಬಾರ್, ದಾಲ್, ಸಿಹಿ, ತರಕಾರಿಗಳು, ಹಣ್ಣುಗಳು   (ಅಭ್ಯಾಸ ಇರುವವರಿಗೆ ಮೊಟ್ಟೆ, ಕೋಳಿ, ಮೀನು, ಮಾಂಸ )

೨) ಎರಡನೇ ಆಯ್ಕೆ

ಮುದ್ದೆ ಸಾಂಬಾರ್ ಅಥವಾ ರೋಟಿ ದಾಲ್ ಅಥವಾ ರೊಟ್ಟಿ ಪಲ್ಯ ಅಥವಾ ಚಪಾತಿ ಪಲ್ಯ ಅಥವಾ ಅನ್ನ ಸಾಂಬಾರ್ ಅಥವಾ ಮೊಸರನ್ನ ಅಥವಾ ಗಂಜಿ ಅಥವಾ ಸ್ಥಳೀಯ ಆಹಾರ.

೩) ಮೂರನೇ ಆಯ್ಕೆ

ಇಂದಿರಾ ಕ್ಯಾಂಟೀನ್ ಅಥವಾ ಧರ್ಮ ಛತ್ರ ಅಥವಾ ಅತ್ಯಂತ ಕಡಿಮೆ ಬೆಲೆಯ ಯಾವುದೋ ಒಂದು ಆಹಾರ.

ರಾತ್ರಿ ಊಟ

೧) ಮೊದಲನೇ ಆಯ್ಕೆ

ಬಗೆಬಗೆಯ ಸೂಪುಗಳು, ಒಣ ಹಣ್ಣುಗಳ ಕಿಚಡಿ, ತರಕಾರಿಗಳು, ಹಣ್ಣುಗಳು, ಕೇಕುಗಳು ( ಅಭ್ಯಾಸ ಇದ್ದವರಿಗೆ ಮಾಂಸಾಹಾರದ ತುಣುಕುಗಳು.)

೨) ಎರಡನೇ ಆಯ್ಕೆ

ಬಹುತೇಕ ಮಧ್ಯಾಹ್ನ ಉಳಿದ ಪದಾರ್ಥಗಳು ಅಥವಾ ಅದೇ ರೀತಿಯ ಆಹಾರ 

೩) ಮೂರನೇ ಆಯ್ಕೆ

ಇಂದಿರಾ ಕ್ಯಾಂಟೀನ್ ಅಥವಾ ದೇವಸ್ಥಾನ ಅಥವಾ ಧರ್ಮ ಛತ್ರ ಅಥವಾ ಅತ್ಯಂತ ಕಡಿಮೆ ಬೆಲೆಯ ಆಹಾರ ಅಥವಾ ಉಪವಾಸ.

ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ.

೧ ನೇ ನಂಬರಿನ ಆಹಾರ ಸಾಮಾನ್ಯವಾಗಿ ಶ್ರೀಮಂತರದು,

೨ ನೇ ನಂಬರಿನ ಆಹಾರ ಮಧ್ಯಮ ವರ್ಗಗಳದು ಮತ್ತು ೩ ನೇ ನಂಬರಿನ ಆಹಾರ ಕಡು ಬಡವರದು.

ಶ್ರೀಮಂತರಿಗೆ ಆಯ್ಕೆಗಳಿರುತ್ತದೆ. ಮಧ್ಯಮ ವರ್ಗದವರಿಗೆ ಅನಿವಾರ್ಯ ಮತ್ತು ಬಡವರಿಗೆ ಆಯ್ಕೆಗಳೇ ಇರುವುದಿಲ್ಲ. ವಾಸ್ತವದಲ್ಲಿ ಶ್ರೀಮಂತರ ಮೊದಲನೇ ನಂಬರಿನ ಆಹಾರವೇ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿನಿತ್ಯ ಸೇವಿಸಬೇಕಾದ ಅತ್ಯಂತ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರ. ( ವೈದ್ಯಕೀಯ ಕಾರಣ ಹೊರತುಪಡಿಸಿ )

ಎರಡನೆಯ ನಂಬರಿನ ಆಹಾರ ಹಣದ ಕೊರತೆಯಿಂದ ಅನಿವಾರ್ಯವಾಗಿ ಸೇವಿಸಬೇಕಾದ ಆಹಾರ. ಅಷ್ಟೊಂದು ಉತ್ತಮ ಅಲ್ಲ. ಆದರೆ ಬೇರೆ ದಾರಿ ಇಲ್ಲ.

ಮೂರನೇ ನಂಬರಿನ ಆಹಾರ ಬದುಕಲು ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ಸಿಕ್ಕುವ ಯಾವುದೇ ಆಹಾರವನ್ನು ಅದರ ಗುಣಮಟ್ಟ ಪ್ರಶ್ನಿಸದೆ ತಿನ್ನುವ ಕಡು ಬಡತನದ ಪರಿಸ್ಥಿತಿ.

ಬಡತನ ಒಂದು ಶಾಪ. ಅದು ಅನಿವಾರ್ಯವಾದಾಗ ಅದನ್ನು ಒಪ್ಪಿ ಜೀವಿಸಬೇಕೆ ಹೊರತು ಅದೇ ನಮ್ಮ ಆಯ್ಕೆ ಆಗಬಾರದು.  ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಆಯ್ಕೆಯ ಆಹಾರ ತಮ್ಮ ಜೀವಿತದ ಸಂಪೂರ್ಣ ಕಾಲವೂ ನಿರಂತರ ಸಿಗುವಂತೆ ಮಾಡಬೇಕು ಎಂಬುದು ನಮ್ಮ ಕನಸು. ಬಡತನದ ಕಾರಣದಿಂದ ಊಟಕ್ಕೆ ಅಲೆದಾಡಿದ ದಿನಗಳು ಮತ್ತು ಸಮಾರಂಭಗಳಲ್ಲಿ ಆಸೆ ಕಣ್ಣುಗಳಿಂದ ನೋಡುತ್ತಿದ್ದ ಭಕ್ಷ್ಯ ಭೋಜನಗಳ ನಡುವಿನ ಅಂತರ ಸದಾ ನನ್ನನ್ನು ಕಾಡುತ್ತಿದೆ.

  • ಜ್ಞಾನ ಭಿಕ್ಷಾ ಪಾದಯಾತ್ರೆಯ 248 ನೆಯ ದಿನ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಹೋಬಳಿಯಿಂದ ಸುಮಾರು 25 ಕಿಲೋಮೀಟರ್ ದೂರದ ಸಖರಾಯಪಟ್ಟಣ ಹೋಬಳಿ ತಲುಪಿ ಅಲ್ಲಿ ವಾಸ್ತವ್ಯ ಹೂಡಿತು.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ