ನಮ್ಮೊಳಗೆ ನಾವು...
ಹಿಂದೆ ನೋಡಿ - ಅನುಭವ ಪಡೆ
ಮುಂದೆ ನೋಡಿ - ಭವಿಷ್ಯ ನಿರ್ಧರಿಸು
ಸುತ್ತಲೂ ನೋಡಿ - ವಾಸ್ತವ ತಿಳಿ
ನಿನ್ನೊಳಗೆ ನೋಡಿ - ನಿನ್ನನ್ನು ತಿಳಿ
ಸಾರ್ಥಕ ಬದುಕಿನ ನಾಲ್ಕು ಪರಿಣಾಮಕಾರಿ ಅಡಿಪಾಯಗಳಿವು. ವಾಹನಕ್ಕೆ ಚಕ್ರಗಳಿದ್ದಂತೆ ನಮ್ಮ ಬದುಕನ್ನು ಮುನ್ನಡೆಸುವ ಆಧಾರ ಸ್ತಂಭಗಳಿವು. ಚಕ್ರಕ್ಕೆ ಗಾಳಿ ಕಡಿಮೆಯಾದಾಗ ಆಗಾಗ ಗಾಳಿ ಹಾಕಿ ಮರಳಿ ಸುಸ್ಥಿತಿಗೆ ತರುವಂತೆ ಮೇಲಿನ ಅಂಶಗಳನ್ನು ಆಗಾಗ ನೆನಪಿಸುತ್ತಾ.. ಅನುಸರಿಸುತ್ತಿದ್ದರೆ ಸಂತೃಪ್ತ ಬದುಕು ನಮ್ಮದಾಗುತ್ತದೆ
ನಾವು ಈವರೆಗೆ ಹೇಗೆ ಬದುಕಿದ್ದೇವೆ ಎಂಬುದನ್ನು ತಿಳಿದರೆ ಅದುವೇ ಅನುಭವವಾಗಿ ಮುಂದಿನ ದೃಢ ಹೆಜ್ಜೆಯನ್ನು ಇಡಲು ಮಾರ್ಗದರ್ಶಕವಾಗಿ ಸದಾ ನಮ್ಮ ಜತೆಯಿರುತ್ತದೆ. ಈ ಹಿಂದಿನ ಸೋಲಿನಿಂದ, ಮುಂದೆ ಬರಬಹುದಾದ ಸೋಲನ್ನು ತಪ್ಪಿಸುವ ದಾರಿ ತಿಳಿಯುತ್ತವೆ. ಈಗಿನ ಗೆಲುವಿನಿಂದ ಮುಂದಿನ ಗೆಲುವಿನ ದಾರಿಯ ಸೂತ್ರದ ಅರಿವು ಮೂಡುತ್ತದೆ. ಮುಂದೆ (ಭವಿಷ್ಯ) ನೋಡಿ, ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಿಸಿ, ಆ ಬಳಿಕ ತನ್ನದೇ ಆದ ಗಟ್ಟಿ ನಿರ್ಧಾರ ತೆಗೆದುಕೊಂಡರೆ ಉತ್ತಮ ಭವಿಷ್ಯವನ್ನು ನಿರ್ಧರಿಸಬಹುದು.
ತನ್ನ ಒಳಗಣ್ಣಿನಿಂದ ಪೂರ್ವಾಗ್ರಹಕ್ಕೆ ಒಳಗಾಗದೆ ತನ್ನ ಸುತ್ತಲ ಜಗತ್ತನ್ನು ನೋಡಿ ವಾಸ್ತವವನ್ನು ತಿಳಿಯಬೇಕು. ಯಾವುದೇ ಭ್ರಮೆಗೆ ಒಳಗಾಗದೆ ನಿರುತ್ಸಾಹದ ಪೊರೆಯನ್ನು ಕಳಚಿ ಉತ್ಸಾಹದ ಕಣ್ಣಿನಿಂದ ಹೊರಗಿನ ಜಗತ್ತನ್ನು ನೋಡಿದಾಗ ನಮ್ಮನ್ನು ನಾವು ತಿಳಿಯಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು ಪ್ರೀತಿಸಲು ಕಾರಣ ಸಿಗುತ್ತದೆ. ನಮ್ಮನ್ನು ನಾವು ಕಾಳಜಿ ವಹಿಸಲು ಕಾರಣ ಸಿಗುತ್ತದೆ.
ಈ ಮೂರರ ನಂತರ ಕೊನೆಗೆ ನಮ್ಮನ್ನು ನಾವು ಅರ್ಥ ಮಾಡಿಕೊಂಡು ಕೊರಗಿನಿಂದ ಮುಕ್ತರಾಗಿ ಸಂತೃಪ್ತ ಜೀವನ ನಡೆಸಲು ಸಾಧ್ಯವಾಗುತ್ತದೆ. ಹಾಗಾಗಿ ನನ್ನೊಳಗಿರುವ ಸಾಮರ್ಥ್ಯ - ಪ್ರತಿಭೆ - ಧೈರ್ಯ- ವಿಶೇಷ ಗುಣಗಳ ಅರಿವು ಉಂಟಾದರೆ ಹನುಮಂತನಂತೆ ವಿಸ್ತಾರವಾಗಿ ಬೆಳೆದು ನಮ್ಮ ಗುರುತನ್ನು ಪರಿಚಯಿಸಲು ಸಾಧ್ಯವಾಗುತ್ತದೆ. ಬನ್ನಿ ನಮ್ಮೊಳಗೆ ನಾವು ಗಟ್ಟಿಗೊಳ್ಳುತ್ತಾ ಸಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?.
-ಗೋಪಾಲಕೃಷ್ಣ ನೇರಳಕಟ್ಟೆ, ಶಿಕ್ಷಕರು
ಚಿತ್ರ ಕೃಪೆ: ಇಂಟರ್ನೆಟ್ ತಾಣ